ಟಾಟಾ ಸ್ಕೈ: ನೀವು ಕನ್ನಡಿಗರೇ? ಹಾಗಿದ್ರೆ ಇನ್ನೊಂದು ಗಂಟೆ ಕಾಯಿರಿ.. ಮತ್ತೊಂದು ಗಂಟೆ ಕಾಯಿರಿ!!

ಟಾಟಾ ಸ್ಕೈ: ನೀವು ಕನ್ನಡಿಗರೇ? ಹಾಗಿದ್ರೆ ಇನ್ನೊಂದು ಗಂಟೆ ಕಾಯಿರಿ.. ಮತ್ತೊಂದು ಗಂಟೆ ಕಾಯಿರಿ!!

ಇತ್ತೀಚಿಗೆ ನೀವು ಗಮನಿಸಿರಬಹುದು ಕರ್ನಾಟಕದಲ್ಲಿ DTH ಸೇವೆ ಒದಗಿಸಲು ಟಾಟಾ ಸ್ಕೈ, ಡಿಶ್ ಟಿ ವಿ, ಬಿಗ್ ಟಿ ವಿ ಮತ್ತು ಏರ್ ಟೆಲ್ ನ೦ತಹ ಕ೦ಪನಿಗಳೆಲ್ಲ ಕಣಕ್ಕಿಳಿದಿವೆ. ಈ ಪಟ್ಟಿಯಲ್ಲಿ ಕನ್ನಡದ ಗ್ರಾಹಕನನ್ನು ಬೇರೆ ಭಾಷೆಯಲ್ಲೇ ಮಾತಾಡಿಸಬೇಕು ಅನ್ನೋ ಬಲವಾದ ನ೦ಬಿಕೆ ಇಟ್ಟುಕೊ೦ಡಿರೋ ಇನ್ನೊ೦ದು ಕ೦ಪನಿ ಟಾಟಾ ಸ್ಕೈ. ಇವರಿ೦ದ ಕನ್ನಡದ ಗ್ರಾಹಕನಿಗೆ ಉಂಟಾಗಿರುವ ಕಷ್ಟಗಳ ಪಟ್ಟಿ ಮಾಡಿದ್ದೇನೆ ನೋಡಿ...

೧. ಕಸ್ಟಮರ್ ಕೇರ್ ನಲ್ಲಿ "ಕನ್ನಡದ ಅಧಿಕಾರಿಗಳು" ಯಾವಾಗಲೂ ಬಿಸಿ.
"ಸರ್. ಕನ್ನಡ ಆಫೀಸರ್ಸ್ ಆರ್ ಬಿಸಿ. ಯು ಕ್ಯಾನ್ ಟಾಕ್ ಟು ಮಿ ಇನ್ ಇಂಗ್ಲಿಷ್, ಹಿಂದಿ ಆರ್ ತೆಲುಗು" - ಎ೦ಬುದು ಕಾದಿಟ್ಟ ಉತ್ತರ.
ಕನ್ನಡದ ಅಧಿಕಾರಿಗಳನ್ನು ನೇಮಿಸಿಕೊ೦ಡರೆ ಉತ್ತಮ ಗ್ರಾಹಕ ಸೇವೆ ಒದಗಿಸಬಹುದು ಎಂಬುದು ಕಂಪನಿಗೆ ಯಾಕೋ ಹೊಳೆದಂತಿಲ್ಲ.

೨. ಟಾಟಾ ಸ್ಕೈ ಕೈಪಿಡಿಗಳಲ್ಲಿ ಕನ್ನಡ ಬೇಡವ೦ತೆ.
- ಕೆಲವು ಸಾಮಾನ್ಯ ಮಾಹಿತಿಗಳನ್ನು ಕನ್ನಡದಲ್ಲಿ ನೀಡುವುದರಿಂದ, ಗ್ರಾಹಕರು ಚಿಕ್ಕ-ಪುಟ್ಟ ಮಾಹಿತಿಗಾಗಿ ಕಂಪನಿಯನ್ನು ಸಂಪರ್ಕಿಸುವುದು ತಪ್ಪುತ್ತದೆ. ಲಕ್ಷಾಂತರ ಗ್ರಾಹಕರಿಗೆ ಸೂಕ್ತ ಮಾಹಿತಿ ತಲುಪಿಸಲು ಸುಲಭವಾದ scalable ಮಾರ್ಗ ಇದು ಎಂದು ಕಂಪನಿ ಇನ್ನೂ ಕಂಡುಕೊಂಡಿಲ್ಲ.

೩. ಅರ್ಜಿ ಇ೦ಗ್ಲೀಷ್ ನಲ್ಲೇ ತು೦ಬಿರಿ.
- ಪಾರದರ್ಶಿಕತೆಯು ರಿಟೈಲ್ ವ್ಯವಹಾರದಲ್ಲಿನ ಒಂದು ಮಹತ್ವದ ಅಂಶ. ಇ೦ಗ್ಲೀಷಿನಲ್ಲಿ ಅರ್ಜಿ ಎಂಬುದು "ಪಾರದರ್ಶಿಕತೆಗೆ ಒಂದು ಅಡಚಣೆ" ಎಂಬುದು ಕಂಪನಿ ಅವರ ತಲೆಗೆ ಹೊಕ್ಕಿಲ್ಲ. ಇಂಗ್ಲಿಷ್ ಬಲ್ಲವರಿಗೆ ಮಾತ್ರ ನಮ್ಮ ಸೇವೆ ಎಂಬ ಧೋರಣೆ ಸರಿಯಲ್ಲ ಎ೦ಬುದು ಇವರು ಅರಿತಿಲ್ಲ.

೪. ಸಾಮಾನ್ಯ ತೊಂದರೆಗಳು ಹಾಗು ಅವನ್ನು ಸರಿಪಡಿಸುವ ರೀತಿ ಬಗ್ಗೆ ಇರುವ "ಸಹಾಯ ಪುಸ್ತಕ" ಕನ್ನಡದಲ್ಲಿಲ್ಲ.
- ಸಣ್ಣ ತೊಂದರೆಗಳಿಗೆ ಕಸ್ಟಮರ್ ಕೇರ್ ಗೆ ಕರೆ ಮಾಡಬೇಕು ಎಂದರೆ, ಗ್ರಾಹಕ ಮತ್ತು ಕಂಪನಿ ಇಬ್ಬರ ಸಮಯ ಮತ್ತು ಹಣ ವ್ಯರ್ಥ. ಈ ತೊ೦ದರೆಗಳನ್ನು ಪದೇ ಪದೇ ತಿಳಿಸಿ ಹೇಳಿದರೂ ಬೋರ್ಕಲ್ಲ ಮೇಲೆ ಮಳೆ ಸುರಿದ೦ತೆ ಅನ್ನೋ ಸರ್ವಜ್ಞನ ಗಾದೆ ಮಾತ್ರ ಸುಳ್ಳಾಗಲಿಲ್ಲ...

ಈ ತೊಂದರೆಗಳ ಪಟ್ಟಿಯನ್ನು ನಾವು (ನಾನು ಮತ್ತು ನನ್ನ ಕೆಲವು ಸ್ನೇಹಿತರು) ಈಮೇಲ್ ಮೂಲಕ ಟಾಟಾ ಸ್ಕೈ ಕಂಪನಿಯ ಮುಂದಿಟ್ಟೆವು. ನಮ್ಮ ವಾದವನ್ನು ಅರ್ಥ ಮಾಡಿಕೊಂಡ ಕಂಪನಿ, ಕನ್ನಡದಲ್ಲಿ ಗ್ರಾಹಕ ಸೇವೆ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ ಎ೦ದು ಭರವಸೆ ನೀಡುತ್ತಿದ್ದಾರೆ. ಇದು ಸಾಧ್ಯವಾದದ್ದು ನಾವು ಕನ್ನಡದಲ್ಲಿ ಸೇವೆಯನ್ನು ಆಗ್ರಹಿಸಿದಾಗ ಮಾತ್ರ ಮತ್ತು ಇದರಿ೦ದ ಬಹಳಷ್ಟು ಬದಲಾವಣೆ ಸಾಧ್ಯ, ಅವುಗಳಲ್ಲಿ ಮುಖ್ಯವಾದದ್ದು..

೧. ಕರ್ನಾಟಕದಲ್ಲಿ ಕೊನೆಗೂ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗುವ೦ತಾಗುತ್ತದೆ.
೨. ಕಂಪನಿಯ ಕಸ್ಟಮರ್ ಕೇರ್ ಗಳಲ್ಲಿ, ಅರ್ಜಿಗಳನ್ನು ಪರಿಷ್ಕರಿಸಲು ಕನ್ನಡ ಬಲ್ಲ ಅಧಿಕಾರಿಯನ್ನೇ ನೇಮಕ ಮಾಡಿಕೊಳ್ಳುತ್ತಾರೆ.
೩. ಕನ್ನಡದ ಕೈಪಿಡಿಗಳನ್ನು ಮಾಡಲು, ಕನ್ನಡ ಪ್ರಿಂಟಿಂಗ್ ಪ್ರೆಸ್ ನವರಿಗೆ ಬಿಸಿನೆಸ್ ಆಗುತ್ತದೆ.

ಹೀಗೆ ಕನ್ನಡಿಗರಿಗೆ ಕನ್ನಡದಿಂದಲೇ ಕೆಲಸ ಸಿಗುತ್ತದೆ ಮತ್ತು ಕನ್ನಡ ನಿಜವಾಗಿಯೂ ಒ೦ದು ಅನ್ನ ಕೊಡುವ ಭಾಷೆಯಾಗಿ ಬೆಳೆಯುತ್ತದೆ. ನಮ್ಮೂರಿಗೆ ಬ೦ದು ನಮ್ಮ ಜೊತೆ ಸಾವಿರಾರು ಕೋಟಿಗಳ ವ್ಯವಹಾರ ನಡೆಸುವ ಉದ್ದಿಮೆದಾರರಿಗೆ ಕನ್ನಡದಲ್ಲಿ ಗ್ರಾಹಕ ಸೇವೆ ನೀಡುವುದು ಕಷ್ಟವಲ್ಲ, ಆದರೆ ಜಾಗೃತ ಕನ್ನಡದ ಗ್ರಾಹಕರು ಯಾವಾಗ ಎಚ್ಚೆತ್ತುಕೊಳ್ಳುತ್ತಾನೆ ಮತ್ತು ಅವನು ನಿರ್ಭಯನಾಗಿ ಕನ್ನಡದಲ್ಲಿ ಎ೦ದು ಸೇವೆಯನ್ನು ಪಡೆದುಕೊಳ್ಳುತ್ತಾನೆ ಅನ್ನೋದು ಕಾದು ನೋಡಬೇಕಾಗಿದೆ.

ಇನ್ನು ಮುಂದೆ ಟಾಟ್ ಸ್ಕೈ ಅವರಿಂದ ನಮ್ಮಲ್ಲಿ ಯಾರಾದ್ರು ಸೇವೆ ಪಡೆಯುವಾಗ, ಈ ರೀತಿ ಸೇವೆಯಲ್ಲಿ ಮತ್ತು ಅವರ ಪದಾರ್ಥಗಳಲ್ಲಿ ಕನ್ನಡದ content ಗೆ ಬೇಡಿಕೆ ಇಡೋಣ.
ಫೋನ್ ಮಾಡುವಾಗ ಕೂಡ ಕನ್ನಡದಲ್ಲೇ ವ್ಯವಹರಿಸಲು ಆಗ್ರಹಿಸೋಣ.
ಟಾಟಾ ಸ್ಕೈ ಅವರನ್ನು ಈ ಮೇಲ್ ಮೂಲಕ ಸಂಪರ್ಕಿಸಲು: nodalofficerkarnataka@tatasky.com

Rating
No votes yet

Comments