ನಾ ಕಂಡ ಕವಿಮನೆ

ನಾ ಕಂಡ ಕವಿಮನೆ

ಬರಹ

ಕಳೆದ ವರ್ಷ ಮಲೆನಾಡಿನ ಆಸುಪಾಸಿನ ಸ್ಥಳಗಳಿಗೆ ಭೇಟಿ ನೀಡಿದಾಗ ನಮ್ಮ ನೋಡಲೇ ಬೇಕಾದ ಸ್ಥಳಗಳ ಲಿಸ್ಟ್ ನಲ್ಲಿ ಕವಿಶೈಲ ಮತ್ತೆ ಕವಿಮನೆ ಕೂಡ ಇತ್ತು. ಹಾಗೆಯೇ ಅಲ್ಲಿಗೆ ಹೋದೆವು ಕೂಡಾ, ಆಗ ಈ ಪಾಮರಳ ದೃಷ್ಟಿಯಲ್ಲಿ ಕಂಡ ಕವಿಮನೆಯನ್ನ ನಿಮ್ಮ ಜೊತೆಗೂ ಹಂಚಿಕೊಳ್ಳಬೇಕೆಂಬ ಇಚ್ಚೆ ಈ ಬರಹಕ್ಕೆ ಸ್ಫೂರ್ತಿ.

ಮೊದಲಿಗೆ ಹೋಗಿದ್ದು ಆನೆಗಳ ಆಡುಂಬೊಲವಾದ ಸಕ್ರೆಬೈಲಿಗೆ. ನೀರಿನಲ್ಲಿ ಉರುಳಾಡುತ್ತಾ, ಮಾಲೀಸು ಮಾಡಿಕೊಂಡು ಗಮ್ಮತ್ತು ಮಾಡುತ್ತಿದ್ದ ಆ ’ಹಿರಿ’ಜೀವಿಗಳ ಗಜಾಭಿಷೇಕ, ಅವುಗಳ ಶಿಸ್ತುಬದ್ಧನಡಾವಳಿ ಮತ್ತು ಆಟವನ್ನ ಕಣ್ ತನಿಯೆ ನೋಡಿ, ಮಂಡಗದ್ದೆಗೆ ಹೋದ್ವಿ. ಅಲ್ಲಿ ಪಕ್ಷಿಗಳು ಕಾಣಸಿಗದಿದ್ದರೂ ಅವುಗಳ ಕಲರವ ಕೇಳುತ್ತಿತ್ತು. ಬೆಂಗಳೂರಿನಲ್ಲಿ ವಾಹನಗಳ ಕರ್ಕಶ ಸದ್ದನ್ನೇ ಕೇಳಿ ದಣಿದಿದ್ದ ನಮ್ಮ ನಮ್ಮ ಕಿವಿಗಳಿಗೆ ಚಿಲಿಪಿಲಿ ಕೇಳಿಸಿ ಮಧುರಾನುಭೂತಿ ತರಿಸಿಕೊಂಡೆವು.

ಮುಂದೆ ದಾರಿಯಲ್ಲಿ ಸಿಕ್ಕ ಸುಂದರ ಸಿಮೆಂಟ್ ಕಲಾಕೃತಿಗಳ ಸಂಗ್ರಹಾಲಯವನ್ನ ನೋಡಿ ಕಾಡಿನ ಮಧ್ಯೆ ಬಿಸಿಲು ನೆರಳಿನಾಟದ ರಸ್ತೆಯಲ್ಲಿ ಸಾಗಿ ತಲುಪಿದ್ದು ನಮ್ಮ ಮುಂದಿನ ಗಮ್ಯವಾದ ಕವಿಶೈಲಕ್ಕೆ.

ಕವಿಮನೆಯ ಹೊರಗಡೆಯೇ ಇರುವ ಉಪಾಹಾರ ಗೃಹದಲ್ಲಿ ಚಹ ಕುಡಿದಾದ ಮೇಲೆ, ಊಟದ ಸಮಯ ಸನ್ನಿಹಿತವಾದ್ದರಿಂದ , “ಬೇಕಿದ್ದರೆ ಇಲ್ಲೇ ಊಟಕ್ಕೆ ಅಣಿಮಾಡುತ್ತೇವೆ ! ನಿಮಗೆ ಕೆಂಪಕ್ಕಿಯೋ ಬಿಳಿ ಅಕ್ಕಿಯೋ?” ಎಂದು ಕೇಳಿದ ಅವರಿಗೆ, “ಊಟ ಇಲ್ಲೇ ಮಾಡ್ತೇವೆ . ಬೆಂಗಳೂರಿನವರಾದರೂ ಮೂಲತಃ ಕರಾವಳಿಯವರಾದ ನಮಗೆ ಕೆಂಪಕ್ಕಿಯೇ ಆದೀತು” ಅಂತ ಹೇಳಿದೆವು.

“ಮೊದಲು ಕವಿಮನೆ ನೋಡಿಬನ್ನಿ ಇಲ್ಲಿ ಊಟ ಮಾಡಿ ಆಮೇಲೆ ಕವಿಶೈಲ ಹತ್ತಬಹುದು” ಎಂದು ಅವರಿತ್ತ ಸಲಹೆಯಂತೆ ಪಕ್ಕದಲ್ಲೇ ಇದ್ದ ಕವಿಮನೆ ಕಡೆ ಹೊರಟೆವು.

ರಾಷ್ಟ್ರ ಕವಿ, ನಾಡೋಜ ಕುವೆಂಪು ಅವರ ಭವ್ಯವಾದ ನಾಲ್ಕಂಕಣದ ಟಿಪಿಕಲ್ ಮಲೆನಾಡಿನ ಕವಿಮನೆ, ಈಗ ಕುವೆಂಪು ಪ್ರತಿಷ್ಠಾನದ ನೇತೃತ್ವದಲ್ಲಿ ಜೀರ್ಣೋದ್ಧಾರಗೊಂಡು, ಸುತ್ತಲೂ ಹಸಿರು ಸಿರಿಯನ್ನು ತುಂಬಿಕೊಂಡು, ಉತ್ತಮ ಪ್ರವಾಸಿ ತಾಣ ಮತ್ತೆ ಆಸಕ್ತರಿಗೆ ಸಂದರ್ಶಿಸಲೇ ಬೇಕಾದ ಸ್ಥಳವಾಗಿ ಪರಿಣಮಿಸಿದೆ.

ಕವಿಮನೆ ಎದುರಾಗುತ್ತಿದ್ದಂತೆ ಕಲ್ಲಿನ ಮೇಲೆ ಕೆತ್ತಿಟ್ಟಿರುವ ಕುವೆಂಪು ಅವರ “ನನ್ನ ಮನೆ” ಪದ್ಯ ಕಾಣ ಸಿಗುತ್ತದೆ, ಮುಂದೆ ನಾವು ಕವಿ ಮನೆಯಲ್ಲಿ ಕಾಣಬಹುದಾದ ಪ್ರತಿಯೊಂದಕ್ಕೂ ಇದೊಂದು ಮುನ್ನುಡಿ ಎನ್ನಬಹುದು.

ಒಳಗೆ ಪ್ರವೇಶಿಸಿದಾಗಲಂತೂ, ಕವಿಯ ಚೇತನ ಇಲ್ಲೆಲ್ಲೋ ಸುಪ್ತವಾಗಿ ಅಡಗಿದೆ ಅನ್ನಿಸದೇ ಇರುವುದಿಲ್ಲ. ಕುವೆಂಪು ಒಂದೆಡೆ ಹೇಳಿದ್ದಾರಂತೆ “ ನಮ್ಮ ಮನೆಯನ್ನು ನಾವು ಸಹ್ಯಾದ್ರಿಯೊಡನೆ ಹೋರಾಡಿ ಪದೆದುಕೊಂಡಿದ್ದೇವೆ” ಅಂತ. ಅದಂತೂ ಅಕ್ಷರಶಃ ಸತ್ಯ. ಕವಿಮನೆ ಒಂದು ಚಿತ್ರವಾದರೆ ಹಿಂದಿರುವ ಸಹ್ಯಾದ್ರಿ ಅದರ Beautiful background ಅನ್ನಬಹುದು; ಅಥವಾ ಕವಿಮನೆ ಕಾಡಿನದ್ದೇ ಮುಂದುವರೆದ ಭಾಗ ಅಂತ ಕೂಡ ಅನ್ನಿಸದೇ ಇರದು.

ಮಲೆನಾಡ ಮಧ್ಯದಲ್ಲಿ, ಮಲೆನಾಡಿನ ಶ್ರೀಮಂತ, ತುಂಬಿದ ಮನೆಗಳ ಪರಂಪರೆ, ತಣ್ಣಗೆ ಹೊಳೆಯುವ ಕೆಂಪು ನೆಲ, ಸುಂದರವಾದ ಕೆತ್ತನೆ ಹೊಂದಿರುವ ಮರದ ಹೊಸ/ ಹಳೇ ಕಂಬಗಳು, ಪ್ರಶಾಂತ ವಾತಾವರಣ, ಕುವೆಂಪು ಬಳಸಿದ ವಸ್ತುಗಳ ಸಂಗ್ರಹ, ಅವರು ದೈವಾಧೀನರಾದ ಸಮಯಕ್ಕೆ ನಿಲ್ಲಿಸಿರುವ ಗಡಿಯಾರ, ಛಾಯಾಚಿತ್ರಗಳು, ಪುಟ್ಟಪ್ಪನವರ ಕೈಬರಹ, ಅವರು ಕುಳಿತು ಬರೆಯುತ್ತಿದ್ದ ಸ್ಠಳ, ಅವರನ್ನರಸಿ ಬಂದ ಪ್ರಶಸ್ತಿಗಳು, ಅವರ ಯಾವತ್ತೂ ಕೃತಿಗಳು, ಒಂದೋ ಎರಡೋ…. ನೋಡುತ್ತಾ ಹೋದರೆ ಕವಿಮನೆ ಮುಗಿಯುವುದೇ ಇಲ್ಲ ಹಾಗೇ ನಮ್ಮ ಮನಸ್ಸೂ ದಣಿಯುವುದಿಲ್ಲ.

ಮನೆಯ ಒಳಗೆ ಓಡಾಡಿದಾಗಲಂತೂ, ಕುವೆಂಪು ಅಲ್ಲಿ ಹೇಗೆ ಇದ್ದಿರಬಹುದು ಅನ್ನೋ ಕಲ್ಪನೆಯ ಚಿತ್ರ ಕಣ್ಮುಂದೆ ಕಟ್ಟುತ್ತದೆ. ಕುವೆಂಪು ಅವರ ಫ್ಯಾಮಿಲಿ ಫೋಟೋ, ಅವರ ಮಕ್ಕಳ ಫೋಟೋಗಳನ್ನ ನೋಡಿದಾಗ ನನ್ನ ನೆನಪಿಗೆ ಬಂದಿದ್ದು, ಶ್ರೀ. ವೈಯೆನ್ಕೆ ಅವರ ಮಾತು…. “ ”

ಬಹುಶಃ ಎಂಟನೇ ತರಗತಿಯ ಪಠ್ಯದಲ್ಲಿ ಓದಿದ ಕುವೆಂಪು ಅವರ ಲೇಖನ “ಅಜ್ಜಯ್ಯನ ಅಭ್ಯಂಜನ”, ನಮ್ಮ ಅಧ್ಯಾಪಕಿ ಅಭಿಮಾನದಿಂದ ಕುವೆಂಪು ಬಗ್ಗೆ ಬರೆದ ಪದ್ಯ ಇವೆಲ್ಲದರ ನೆನಪು ಒಂದೇ ಸಮನೆ ಕಾಡಿದೆವು. ಸಂಗಡಿಗರೂ ಕೂಡ ನಾನು ಅಂದುಕೊಂಡಿದ್ದಕ್ಕಿಂತಾ ಹೆಚ್ಚು ಖುಷಿ ಪಟ್ಟರು.

ಪ್ರತಿಯೊಂದರ ವಿವರಣೆಯನ್ನೂ ನೀಟಾಗಿ ಕೊಟ್ಟ ಗೈಡ್ ಆಂಜನಪ್ಪ, ಶುಭ್ರವಾಗಿ, ಸ್ವಚ್ಚವಾಗಿ ಮನೆ ನೋಡಿಕೊಳ್ಳುತ್ತಿರುವ ಕುವೆಂಪು ಪ್ರತಿಷ್ಠಾನ ನಿಜಕ್ಕೂ ಅಭಿನಂದನಾರ್ಹರು. ಕನ್ನ ಡದ ಇತರ ಕವಿಗಳ/ ಸಾಹಿತಿಗಳ ಮನೆಗಳಿಗೂ ಇಂಥದ್ದೇ ಮೌಲ್ಯ ಸಿಕ್ಕಿ, ಅವನ್ನೂ ಜನವೀಕ್ಷಣೆಗೆ ಇಟ್ಟರೆ,ಕನ್ನಡ ಸಾರಸ್ವತ ಲೋಕದ ಅರಿವು/ ಪರಿಚಯ ಮುಂದಿನ ಪೀಳಿಗೆಗೇ ಏಕೆ ಈಗಿನ ತಲೆಮಾರಿಗೂ ಆಗಬಹುದು ಅನ್ನೋದ್ರಲ್ಲಿ ಸಂದೇಹವೇ ಇಲ್ಲ.

ಕವಿಮನೆ ನೋಡಿ ಮನ ತುಂಬಿಸಿಕೊಂಡು, ಹೊರಗೆ ಊಟಕ್ಕೆ ಬಂದೆವು. ಅಚ್ಚ ಮಲೆನಾಡಿನ ಊಟ ಹಸಿದಿದ್ದರಿಂದ ಅನ್ನಿಸಿದ್ದಲ್ಲ, ನಿಜಕ್ಕೂ ಚೆನ್ನಾಗಿತ್ತು, ತಿಳಿ (ಹುಳಿ) ಮಜ್ಜಿಗೆಯಂತೂ ಅಮೃತ ಸಮಾನ.

ಊಟದ ನಂತರ ಕವಿಶೈಲವನ್ನ ಕಾಲ್ನಡಿಗೆಯಲ್ಲಿ ಹತ್ತೋದೋ ಅಥವಾ ಕಾರಿನಲ್ಲಿ ಹೋಗೋದೋ ಅಂತ ಚರ್ಚೆಯಾಗಿ, ’ಬಹುಜನರ ಅಪೇಕ್ಷೆಯ ಮೇರೆಗೆ’ ಬೆಟ್ಟ ಹತ್ತಲಾರಂಭಿಸಿದೆವು. ಕಲ್ಲನ್ನೇ ಕಡಿದು ಮೆಟ್ಟಿಲು ಮಾಡಿದ್ದರೆ, ಜೊತೆಗೆ ಅಲ್ಲಲ್ಲಿ ದೊಡ್ಡ ಕಲ್ಲಿನ ಮಂಟಪಗಳೂ ಇವೆ, ಮೇಲೆ ತಲುಪೋ ಅಷ್ಟರಲ್ಲಿ ಏದುಸಿರು ಬಂದರೂ, ಹತ್ತಿ ಹೋಗುವುದೆಂದು ನಿರ್ಧರಿಸಿದವರಲ್ಲಿ ನಾನೂ ಒಬ್ಬಳಾದ್ದರಿಂದ, ಬೇರೆಯವರ ಕೆಂಗಣ್ಣು ಎದುರಿಸಬೇಕೂಂತ ಗೊತ್ತಾಗಿ ಸುಮ್ಮನೇ ಒಂದು ಕಡೆ ಕುಳಿತೆ.

ಕವಿಶೈಲ ಎಂಬೋದು ಮಲೆನಾಡಿನ ನೈಸರ್ಗಿಕ ಅದ್ಭುತಗಳಲ್ಲಿ ಒಂದು ಕುವೆಂಪು ಅವರ ಬಹುತೇಕ ಎಲ್ಲಾ ಕೃತಿಗಳಲ್ಲೂ ಬರುವ ನಿಸರ್ಗದ ವರ್ಣನೆ ಮತ್ತು ಮಲೆನಾಡಿನ ಜೊತೆಗೇ ಹಾಸು ಹೊಕ್ಕಾಗಿರುವ ಅವರ ಅನುಭವಗಳ ಸ್ಫೂರ್ತಿ ಇದು ಅನ್ನಬಹುದು. ಕುವೆಂಪು ಸಮಾಧಿ ಮತ್ತು ಕುವೆಂಪು ತಮ್ಮ ಸ್ನೇಹಿತರಾದ ಬಿ.ಎಂ.ಶ್ರೀ ಹಾಗೂ ತ.ಸು.ವೆಂಕಣ್ಣಯ್ಯ ಇವರ ಜೊತೆ ಕವಿಶೈಲಕ್ಕೆ ಹೋದಾಗ, ಸುಮಾರು ೧೯೩೬ರಲ್ಲಿ ಬಂಡೆಯ ಮೇಲೆ ಕೆತ್ತಿರುವ ಅವರ ಹೆಸರುಗಳನ್ನು ಈಗಲೂ ಕುವೆಂಪು ಪ್ರತಿಷ್ಠಾನ ಸ್ಮಾರಕದಂತೆ ಸಂರಕ್ಷಿಸುತ್ತಿದೆ. ಬೆಟ್ಟದ ಮೇಲಿಂದ ಕಾಣಸಿಗುವ ಪ್ರಕೃತಿ ಸೌಂದರ್ಯ ಎಂಥವರ ಮನಸ್ಸನ್ನೂ ಸೂರೆಗೊಳ್ಳುತ್ತದೆ, ಕವಿಯಾಗಿ ಮಾಡುತ್ತದೆ ಅಂದರೆ ಉತ್ಪ್ರೇಕ್ಷೆ ಅಲ್ಲ! ಕವಿಶೈಲದ ಬಗ್ಗೆ ಕುವೆಂಪು ಬರೆದಿರುವ ಸಾಲುಗಳನ್ನೂ ಕೂಡ ಅಲ್ಲಿ ಕೆತ್ತಿಡಲಾಗಿದೆ, ಅವರೇ ಹೇಳಿದಂತೆ ಮಾತಿಗಿಂತ ಮೌನವನ್ನೇ ಅಲ್ಲಿ ಪ್ರಕೃತಿ ಮಾತೆಯ ಮಡಿಲಿನಲ್ಲಿ ಹೆಚ್ಚು ಆಸ್ವಾದಿಸಬಹುದು.

ಬೆಂಗಳೂರಿನಲ್ಲಿ ಇಷ್ಟು ಶುದ್ಧ ಗಾಳಿ ಸಿಗಲ್ಲ ಅನ್ನಿಸಿ, ಸಿಕ್ಕಷ್ಟೂ ಆಮ್ಲಜನಕವನ್ನು ಹೀರಿಕೊಂಡಾದ ನಂತರ ಒಲ್ಲದ ಮನಸ್ಸಿನಿಂದ ಹೊರಟು ಕೆಳಗೆ ಬರಲಾರಂಭಿಸಿದೆವು. ಹುಟ್ಟಿದಾಗಿನಿಂದ ನೋಡದೇ ಇರುವಷ್ಟು ಮರ-ಗಿಡಗಳನ್ನ ಮಗಳು ಈ ಪ್ರವಾಸದಲ್ಲಿ ನೋಡಿರಬಹುದೆಂದು ನಾವು ಅಂದುಕೊಳ್ಳುತ್ತಿದ್ದರೆ, ಸಕ್ರೆಬೈಲಿನ ಆನೆಗಳು, ಮಂಡಗದ್ದೆಯ ಹಕ್ಕಿಗಳ ಕಲರವಗಳನ್ನು ನೆನಪಿಸಿಕೊಂಡು, ಕುವೆಂಪು ಅವರ ದೊಡ್ಡ ಮನೆ, ಅದರ ಸುತ್ತ ಮುತ್ತ ಇರುವ ಪಾರ್ಕ್ (ಅವಳ ಪ್ರಕಾರ) ಹಿಂದೊಮ್ಮೆ ಅಲ್ಲಿ ಮನೆ ತುಂಬಾ ಇದ್ದ ಜನ ಅಲ್ಲಿ ಎಷ್ಟು ಆಡಿರಬಹುದು ಎಂದುಕೊಂಡು ಮಗಳು ಹಿಗ್ಗುತ್ತಿದ್ದಳು.. ಆಗಲೇ ಅನ್ನಿಸಿಬಿಟ್ಟಿತ್ತು ಪ್ರವಾಸ ಸಾರ್ಥಕ ಆಯ್ತೆಂದು :-)

ಸುಮಾರು ಹೊತ್ತಿನಿಂದ ನಮ್ಮನ್ನೇ ಹಿಂಬಾಲಿಸುತ್ತಿದ್ದ ನಾಯಿಯೊಂದು ನಮ್ಮ ಜಾಡನ್ನ ತಿಳಿದು ಆಗಲೇ ಕೆಳಗೆ ತಲುಪಿತ್ತು. ಮತ್ತದೇ ಉಪಾಹಾರ ಮಂದಿರಕ್ಕೆ ಹೋಗಿ, ಚಾ ಕುಡಿದು ಮುಂದೆ ಸಂದರ್ಶಿಸಬೇಕಾದ ಸ್ಥಳಗಳ ಬಗ್ಗೆ ಮಾಹಿತಿ ಕಲೆಹಾಕಲಾರಂಭಿಸಿದೆವು.

ಮಲೆನಾಡಿನಲ್ಲಿ ತಮ್ಮ ಅಚ್ಚುಮೆಚ್ಚಿನ ಆ ಬೆಟ್ಟಕ್ಕೆ ಕವಿಶೈಲ ಎಂದು ನಾಮಕರಣ ಮಾಡಿದ ರಾಷ್ಟ್ರಕವಿಗೆ, ಅವರ ಭವ್ಯ-ದಿವ್ಯ ಮನೆಗೆ ವಿದಾಯ ಹೇಳಿ ಅಲ್ಲಿಂದ ಹೊರಟೆವು.