ಬಸವಳಿದ ಬಸವ

ಬಸವಳಿದ ಬಸವ

ಬರಹ

ಪಾರಂಪರಿಕ ವೃತ್ತಿಗಳಲ್ಲಿ ಬಸವನನ್ನು ಆಡಿಸುವ ವೃತ್ತಿಯು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ನಮ್ಮ ಚಿಕ್ಕಂದಿನ ದಿನಗಳಲ್ಲಿ ಊರೂರು ಸುತ್ತಿಕೊಂಡು ಬರುತ್ತಿದ್ದ ಗಂಗೆದ್ದಲೋರ(ತೆಲುಗಿನಲ್ಲಿ ಎತ್ತುಗಳನ್ನು ಎದ್ದುಲು ಎಂದು ಹೇಳುತ್ತಾರೆ) ಬಸವಣ್ಣಗಳನ್ನು ನೋಡುವುದೇ ನಮಗೆ ಖುಶಿ.
ಸಾಮಾನ್ಯವಾಗಿ ಬಸವನಿಗೆ ಆಯ್ಕೆ ಮಾಡುವ ದನಗಳು ಮೂರು ರೀತಿಯವಾಗಿರುತ್ತವೆ. ಚಿತ್ರದುರ್ಗ,ತುಮಕೂರು,ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಗಳ ಕೆಲವು ದೇವಸ್ಥಾನಗಳಲ್ಲಿ ಉತ್ತಮ ಹಳ್ಳಿಕಾರ್ ಜಾತಿಯ ಗಂಡು ಹೋರಿಗಳನ್ನು ದೇವರ ಹೆಸರಿನಲ್ಲಿ ಅದೇ ದೇವಸ್ಠಾನಗಳಲ್ಲಿ ಸಾಕಿಕೊಂಡಿರುತ್ತಾರೆ.ಇದನ್ನು ದೇವರ ಬಸವನೆಂದು ವಿಶೇಷವಾಗಿ ಪೂಜಿಸುತ್ತಾರೆ.ಬಿಡುವಿನ ವೇಳೆ ಮತ್ತು ಸುಗ್ಗಿಯ ಸಮಯದಲ್ಲಿ ಈ ಬಸವಗಳನ್ನು ಆಯಾ ದೇವಸ್ಠಾನಕ್ಕೆ ಸೇರಿದ ಬುಡಕಟ್ಟಿನ ಮನೆಗಳಿಗೆ ಕರೆದುಕೊಂಡು ಹೋಗಿ ವಂತಿಕೆಯನ್ನು ವಸೂಲಿ ಮಾಡುತ್ತಾರೆ.ಬಂದ ಹಣವನ್ನು ದೇವರ ಹೆಸರಿನಲ್ಲಿ ಯಾವುದಾದರೂ ದೇವತಾ ಕಾರ್ಯಕ್ಕೆ ಉಪಯೋಗಿಸುವ ಪರಿಪಾಟ ಬಳಕೆಯಲ್ಲಿದೆ.
ಗಂಗೆದ್ದಲೋರು ಎನ್ನುವ ಬಸವನನ್ನು ಆಡಿಸುವ ಪಂಗಡವೊಂದು ರಾಯಲಸೀಮೆಯ ಅನೇಕ ಹಳ್ಲಿಗಳಲ್ಲಿ ಕಂಡುಬರುತ್ತದೆ.ಸಾಮಾನ್ಯವಾಗಿ ಇವರ ಬಳಿ ಇರುವ ಹಸು ಮತ್ತು ಎತ್ತುಗಳಿಗೆ ಯಾವುದಾದರೊಂದು ವಿಶೇಷತೆ ಇರುತ್ತದೆ.ಉದಾಹರಣೆಗೆ ಬಾಲದ ಬಳಿ ಹೊಸರೀತಿಯ ಚುಕ್ಕೆ.ದೇಹದಲ್ಲಿ ಬೇರೊಂದು ಕಾಲು,ಹೀಗೆ....ಇವರು ಹೊಟ್ಟೆಪಾಡಿಗಾಗಿ ಈವೃತ್ತಿಯನ್ನು ಬಹಳ ಹಿಂದಿನಿಂದಲೂ ಅವಲಂಬಿಸಿಕೊಂಡು ಬಂದಿದ್ದಾರೆ.ಇವರೂ ಕೂಡಾ ಸುಗ್ಗಿಯ ಸಮಯ,ಬಿಡುವಿನ ದಿನಗಳಲ್ಲಿ ಹಳ್ಳಿಗಳಿಗೆ ಬರುತ್ತಾರೆ. ಬೆಳಗಿನಿಂದ ಸಂಜೆಯ ತನಕ,ಯಾವುದಾರೊಂದು ಅರಳೀಕಟ್ಟೆಯೋ,ದೇವಾಲಯದ ಬಳಿ ಬಸವನನ್ನು ಆಡಿಸುತ್ತಾರೆ.ಸೀತಾರಾಮರ ಕಲ್ಯಾಣ ಇವರ ಜನಪ್ರಿಯ ಆಟಗಳಲ್ಲಿ ಒಂದು.ಇವರು ಅದ್ಭುತವಾಗಿ ವಾದ್ಯಗಳನ್ನು ನುಡಿಸುತ್ತಾರೆ.ಬಡವರ ಮದುವೆಗಳಿಗೆ ಇವರ ವಾದ್ಯಗಳಿಗೆ ಬಹಳ ಬೇಡಿಕೆ.ಬೆಲೆಯೂ ಕಮ್ಮಿ.
ಊರುಗಳಲ್ಲಿ ದೇವರ ಹೆಸರಿನಲ್ಲಿ ಹರಕೆಯ ರೀತಿಯಲ್ಲಿ ಬಿಡುವ ಬಸವಗಳು ಮೂರನೆಯ ಬಗೆ,
. ಸಾಮಾನ್ಯವಾಗಿ ಇವುಗಳಿಗೆ ಮೂಗು ದಾರವಾಗಲೀ ಬೇರೆ ಯಾವುದೇ ಲಂಗು ಲಗಾಮುಗಳಿರುವುದಿಲ್ಲ.ಹಾಗಾಗಿ ಇವುಗಳನ್ನು ಬೀದಿಬಸವ ಎಂದು ಕರೆಯುತ್ತಾರೆ.ಇವು ಬೀಡಾಡಿ ದನಗಳಂತೆ ಯಾವ ಹೊಲಕ್ಕೆ ಬೇಕಾದರೂ ನುಗ್ಗಿ ಮೇಯುವಷ್ಟು ಸಲಿಗೆಯನ್ನು ಹೊಂದಿರುತ್ತವೆ.
ಬಹಳಷ್ಟು ಸಲ ಇವು ಅಪಾಯಕಾರಿಯಾಗಿಯೂ ವರ್ತಿಸುತ್ತವೆ.
ಬಸವನನ್ನು ಆಡಿಸುವವರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ.ಅವನತಿಯ ಅಂಚಿನತ್ತ ಸರಿಯುತ್ತಿರುವ ಕುಲಕಸುಬುಗಳಲ್ಲಿ ಇದು ಒಂದಾಗುತ್ತಿದೆ.ಉದ್ಯೋಗವನ್ನರಸಿ ಊರೂರಿಗೆ ವಲಸೆ ಹೋಗುತ್ತಿರುವ ಇಂದಿನ ದಿನಗಳಲ್ಲಿ ಪಾರಂಪರಿಕ ಕಸುಬುಗಳು ಮರೆಯಾಗುತ್ತಿರುವುದು ವಿಶಾದನೀಯ ಸಂಗತಿ.