ಇಂದು ನನ್ನ ಅಪ್ಪಯ್ಯನಿದ್ದಿರಬೇಕಿತ್ತು!

ಇಂದು ನನ್ನ ಅಪ್ಪಯ್ಯನಿದ್ದಿರಬೇಕಿತ್ತು!

ಅಂದು ನನ್ನ ತಲೆಯ ಮೇಲಿದ್ದವು ದಪ್ಪನೇ ಕೂದಲುಗಳು
ಕತ್ತರಿಸಲು ತಡ ಮಾಡಿದರೆ ಸಿಕ್ತಿತ್ತು ಅಪ್ಪಯ್ಯನ ಬೈಗಳು

ವಿಚಿತ್ರ ಕ್ರಾಪುಗಳ ಹುಚ್ಚಿತ್ತು ಆಗ ಹುಡುಗನಾಗಿದ್ದ ನನಗೆ
ಹಣೆಯ ಮೇಲೆ ಕೂದಲ ಕಂಡರೆ ಕೋಪ ನನ್ನಪ್ಪಯ್ಯನಿಗೆ

ಎಣ್ಣೆ ಕಾಣದ ನಾರು ಕೂದಲು ಉದ್ದುದ್ದ ತಲೆಯ ಹಿಂದೆ
ಇದ್ದೆಲ್ಲಾ ಸಮಯ ವ್ಯಯವಾಗುತ್ತಿತ್ತು ಕನ್ನಡಿಯ ಮುಂದೆ

ಹೇಳಿದ್ದನ್ನು ಕೇಳದೇ ಇರುವುದರಲ್ಲಿ ಇತ್ತು ಆಗ ಗಮ್ಮತ್ತು
ಮುಂದೆ ನನ್ನ ತಲೆ ಹೀಗಾಗುತ್ತೆಂದು ಯಾರಿಗೆ ಗೊತ್ತಿತ್ತು

ಇಂದು ಕ್ರಾಪು ಮಾಡುವುದಕೆ ತಲೆಯ ಮೇಲೆ ಕೂದಲಿಲ್ಲ
ನನ್ನ ಗದರುವುದಕೆ ಜೊತೆಗೀಗ ನನ್ನ ಅಪ್ಪಯ್ಯನೂ ಇಲ್ಲ

ಹೋದ ಕೂದಲಿಗೆ ಇಲ್ಲ ಮರುಕ ಅಪ್ಪಯ್ಯನಿದ್ದಿರಬೇಕಿತ್ತು
ನನ್ನೆಲ್ಲಾ ಬರಹಗಳ ಓದಿ ಈ ಮಗನ ವಿಮರ್ಶಿಸಬೇಕಿತ್ತು

ಅವರಾಡಿದ ಮಾತುಗಳ ಕೇಳದೇ ಸತಾಯಿಸಿದ್ದೆ ನಾನಾಗ
ತಪ್ಪು ಒಪ್ಪುಗಳ ಅರಿವು ಮಾಡಿಸುವವರೇ ಇಲ್ಲ ನನಗೀಗ

ಕೂದಲ ಹಿಂತಿರುಗಿಸಲಾಗದಿದ್ದರೆ ಚಿಂತಿಲ್ಲ ದೇವರೆ ನನಗೆ
ಅಪ್ಪಯ್ಯನ ಮರಳಿಸಿದೆಯಾದರೆ ಸಹಸ್ರ ನಮನಗಳು ನಿನಗೆ
********************************

Rating
No votes yet

Comments