ಹಿಂದುಯಿಸಂ ಮತ್ತು ಸೆಕ್ಯುಲರಿಸಂ ಎಂಬ ವಾದಗ್ರಸ್ಥ ಪರಿಕಲ್ಪನೆ . . .

ಹಿಂದುಯಿಸಂ ಮತ್ತು ಸೆಕ್ಯುಲರಿಸಂ ಎಂಬ ವಾದಗ್ರಸ್ಥ ಪರಿಕಲ್ಪನೆ . . .

ಬರಹ

ಪ್ರಸ್ತುತ ಲೇಖನದಲ್ಲಿ ನಾನು ಒಬ್ಬ ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿ ನನ್ನ ಜ್ಞಾನದ ಮಿತಿಯಲ್ಲಿ ಭಾರತದ ಸಂದರ್ಭದಲಿನ್ಲ ಸೆಕ್ಯುಲರಿಸಂ ಕುರಿತಾದ ವಾದಗಳನ್ನು ಗುರುತಿಸಬಯಸುತ್ತೆನೆ. ಸೆಕ್ಯುರಿಸಂ ಎಂಬ ತಾತ್ವಿಕ ವಿಚಾರವನ್ನು ಕುರಿತು ಯೋಚಿಸುವಾಗ ಡಾ. ರಾಜಾರಾಮ ತೋಳ್ಪಾಡಿ ಮತ್ತು ವಿವೇಕ ಧಾರೇಶ್ವರ ಅವರೊಂದಿಗೆ ನಡೆಸಿದ ಚರ್ಚೆ ಈ ಲೇಖನವನ್ನು ಬಹಳವಾಗಿ ಪ್ರಭಾವಿಸಿದೆ.( ರಾಜಾರಾಮ ತೋಳ್ಪಾಡಿ ಅವರ ಲೇಖನವು ಸೇರಿದಂತೆ) ಒಟ್ಟಾರೆ ಈ ಲೇಖನದ ಉದ್ದೇಶ ಭಾರತದ ಸಂದರ್ಭದಲ್ಲಿ ಸೆಕ್ಯುಲರಿಸಂ ಕುರಿತಾದಂತಹ ಇತ್ತೀಚಿನ ವಾದಗಳು ಆ ಒಂದು ಪರಿಕಲ್ಪನೆಯ ತಾತ್ವಿಕತೆಯನ್ನೇ ಪ್ರಶ್ನಿಸುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿರುವುದರಿಂದ ಈ ಚರ್ಚೆಗಳು ಸೆಕ್ಯುಲರಿಸಂ ಕುರಿತಾದಂತಹ ಸಂಶೋಧನೆ, ಇದುವರೆಗೂ ನಿರ್ವಹಿಸಿದ ಹಾದಿಗಿಂತ ಭಿನ್ನವಾದಂತಹ ಒಳನೋಟಗಳನ್ನು ಆ ದಾರಿಯಲ್ಲಿ ತೆರೆಯಬಹುದು ಎಂಬ ನಂಬಿಕೆ ಈ ಲೇಖನದ ಮೂಲಾಧಾರ.

ಭಾರತದ ಸಮಾಜ ವಿಜ್ಞಾನಗಳ ಜ್ಞಾನ ಮೀಮಾಂಸೆಯಲ್ಲಿ ಸೆಕ್ಯುಲರಿಸಂಗೆ ಸಂಬಂಧಿಸಿದ ಚರ್ಚೆಗಳು ತಮ್ಮದೆ ಆದಂತಹ ಸ್ಥಾನವನ್ನು ಪಡೆದಿದೆ. ಹಲವಾರು ಚಿಂತಕರು ಭಾರತದಲ್ಲಿನ ಸೆಕ್ಯುಲರಿಸಂ ಕುರಿತಾದ ಈ ಚರ್ಚೆಗಳು ಸೆಕ್ಯುಲರಿಸಂ ಸಂಬಂಧಿಸಿದಂತಹ ಸಮಸ್ಯೆಗಳ ಜಟಿಲತೆಯನ್ನು ಗ್ರಹಿಸುವುದರಲ್ಲಿ ಗಮನಾರ್ಹವಾದ ಸಾಧನೆಗಳನ್ನು ಮಾಡಿವೆ ಎಂದು ಭಾವಿಸುತ್ತಾರೆ. ಒಮ್ಮೆ ಭಾರತದ ಸೆಕ್ಯುಲರಿಸಂನ ಚರ್ಚೆಗಳು ಕಂಡುಕೊಂಡಂತಹ ಹಾದಿಗಳನ್ನು ಒಳಹೊಕ್ಕು ನೋಡಿದಾಗ ದೇಶದ ಹೆಸರಾಂತ ಚಿಂತಕರುಗಳ ಕೊಡುಗೆ ಅಪಾರವಾಗಿರುವುದು ಕಾಣಬಹುದಾಗಿದೆ. ಅದರಲ್ಲಿಯೂ ಸೆಕ್ಯುಲರಿಸಂ ಕುರಿತಾದಂತೆ ಕೆಲಸ ಮಾಡುತ್ತಿರುವ ವಿದ್ವಾಂಸರ ಪ್ರಕಾರ ಆಶಿಸ್ ನಂದಿ ಟಿ.ಎನ್.ಮದನ್, ಪಾರ್ಥಚಟರ್ಜಿ, ರಾಜೀವ್ ಭಾರ್ಗವ್ ಮೊದಲಾದವರ ನಿರ್ಣಯಕ ನಡು ಪ್ರವೇಶದಿಂದಾಗಿ (ಸಂವಿಧಾನ ರಚನಾ ಸಂದರ್ಭದಲ್ಲಿ ಹಾಗೂ ೬೦ ರ ದಶಕದಲ್ಲಿ ಈ ಸೆಕ್ಯುಲರಿಸಂ ಚರ್ಚೆ ಕೇವಲ ಯಾವ ಮಾದರಿಯ ಸೆಕ್ಯುಲರಿಸಂ ಬೇಕು ಎಂದಾಗಿತ್ತಷ್ಟೆ, ಆದರೆ ನಂದಿಯಂತಹ ಚಿಂತಕರು ಯಾವ ಮಾದರಿಯ ಸೆಕ್ಯುಲರಿಸಂ ಅಗತ್ಯ ಎನ್ನುವುದಕ್ಕಿಂತ ಸೆಕ್ಯುಲರಿಸಂನ ಅಗತ್ಯತೆ ಇದೆಯೇ ಎಂಬ ತಾತ್ವಿಕ ಜಿಜ್ಞಾಸೆ ಪ್ರಾರಂಬಿಸಿದರು) ಸೆಕ್ಯುಲರಿಸಂ ಕುರಿತಾದ ಚರ್ಚೆಯ ಗುಣಮಟ್ಟವನ್ನು ವೃದ್ಧಿಸುವುದರೊಂದಿಗೆ ಆ ಚರ್ಚೆಗೆ ಒಂದು ಗಾಂಭಿರ್‍ಯವನ್ನು ತಂದಿದೆ ಎಂದು ಪ್ರತಿಪಾದಿಸಿದ್ದಾರೆ. ಅಂತೆಯೇ ಈ ಎಲ್ಲ ಚಿಂತಕರು ಒದಗಿಸಿದ ಒಳನೋಟಗಳು ಮತ್ತು ಕಾಣ್ಕೆಗಳು ಸೆಕ್ಯುಲರಿಸಂ ಕುರಿತಾದಂತೆ ಭಾರತೀಯ ದೃಷ್ಠಿಕೋನ ಒಂದನ್ನು ರೂಪಿಸುವಲ್ಲಿ ನಿರ್ಣಾಯಕವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ವಿದ್ವಾಂಸರ ನಡುವಿನ ಅಥವಾ ಸಂಶೋಧನಾ ಕೇಂದ್ರಗಳ ಎಲ್ಲೆಗಳನ್ನು ಮೀರಿ ಸೆಕ್ಯುಲರಿಸಂ ವಾಗ್ವಾದದ ಹೊಳಹುಗಳು ಭಾರತೀಯ ಜನ ಜೀವನದ ನಡೆ ನುಡಿಗಳಲ್ಲಿ ಅವರ ಮಾತುಕತೆಗಳಲ್ಲಿ ಪ್ರತಿಧ್ವನಿತಗೊಂಡಿಲ್ಲ ಎಂಬುದನ್ನು ಈ ಚಿಂತಕರು ಒಪ್ಪಿಕೊಳ್ಳುತ್ತಾ ಯಾಕೆ ಹೀಗೆ? ಯಾಕೆ ಸೆಕ್ಯುಲರ್ ಚಿಂತನೆ ಭಾರತದ ನಾಗರೀಕ ಸಮಾಜದ ಮೇಲೆ ಪ್ರಭಾವ ಬೀರಲು ಯಶಸ್ವಿಯಾಗಿಲ್ಲ? ಎಂಬ ಪ್ರಶ್ನೆಯನ್ನು ನಮ್ಮೆದುರಿಗೆ ಇಡುತ್ತಾರೆ. ಈ ಪ್ರಶ್ನೆಯನ್ನು ಅನುಸರಿಸಿ ನನ್ನ ವಾದಗಳನ್ನು ಮಂಡಿಸುವ ಮೊದಲು ಸೆಕ್ಯುಲರಿಸಂ ಕುರಿತಾದ ಚರ್ಚೆಯ ವಿಶೇಷ ಗಳಿಗೆಯಲ್ಲಿ ಚಿಂತಕರು ನೀಡಿರುವ ವಾಗ್ವಾದಗಳನ್ನು ಸಂಕ್ಷಿಪ್ತವಾಗಿ ಅರ್ಥಮಾಡಿಕೊಳ್ಳುವ
೧. ಪ್ರೊ.ಟಿ.ಎನ್.ಮದನ್ ಇವರು ತಮ್ಮ ಮಹತ್ವದ ಬರವಣಿಗೆಯಾದ Modern Myths and Locked Minds ಎನ್ನುವ ಪುಸ್ತಕದಲ್ಲಿ ಭಾರತದ ಸೆಕ್ಯುಲರಿಸಂನ ಸ್ವರೂಪ ಮತ್ತು ಸವಾಲುಗಳನ್ನು ಸವಿಸ್ತಾರವಾಗಿ ಚರ್ಚಿಸುತ್ತಾರೆ.
ಒಂದು ರಾಜಕೀಯ ತತ್ವಾವಾಗಿ ಸೆಕ್ಯುಲರಿಸಂನ ಮೂಲ ಪಾಶ್ಚಿಮಾತ್ಯ ಸಮಾಜಗಳ ವಿಕಾಸದ ಹಿನ್ನೆಲೆಯಲ್ಲಿ ಕಂಡುಕೊಳ್ಳಬಹುದಾದರೂ ಭಾರತೀಯ ಸೆಕ್ಯುಲರಿಸಂ ಅನ್ನುವುದೊಂದು ಇದೆ ಎಂದು ವಾದಿಸುವ ಮದನ್ ಭಾರತದ ಧಾರ್ಮಿಕ ಪರಂಪರೆಗಳು ಪ್ರತಿಪಾದಿಸುವ ಬಹುತ್ವದ ಕಲ್ಪನೆ ಭಾರತೀಯ ಸೆಕ್ಯುಲರಿಸಂನ ತಾತ್ವಿಕ ನೆಲೆಯಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ.
ನೆಹರೂ ನಾಯಕತ್ವದಲ್ಲಿ ಪ್ರತಿಪಾದಿತವಾದ ಸೆಕ್ಯುಲರಿಸಂ ಪಾಶ್ಚಿಮಾತ್ಯ ವೈಚಾರಿಕತೆಯ ಆಧಾರದಲ್ಲಿ ಆಧುನಿಕ ವಿಜ್ಞಾನದ ದ್ವಂದ್ವಾತ್ಮಕ ನೆಲೆಯಲ್ಲಿ ಮತ್ತು ಪ್ರೊಟಸ್ಟೆಂಟ್‌ಯಿಸಂನ ಧಾರ್ಮಿಕ ಗ್ರಹಿಕೆಗಳ ಹಿನ್ನೆಲೆಯಲ್ಲಿ ರೂಪಗೊಂಡಿದ್ದು ಪರಲೌಕಿಕ/ ಲೌಕಿಕ ಎನ್ನುವ ಪಾಶ್ಚಿಮಾತ್ಯ ಸಮಾಜದ ದ್ವಂದ್ವಾತ್ಮಕತೆಯನ್ನು ಬಲವಂತವಾಗಿ ಭಾರತೀಯ ಸಮಾಜದ ಮೇಲೆ ಹೇರುತ್ತದೆ. ಇವರ ಪ್ರಕಾರ ಆಧ್ಯಾತ್ಮಿಕ ಮತ್ತು ಐಹಿಕ ಎನ್ನುವ ವಿಂಗಡಣೆ ಭಾರತೀಯ ಧಾರ್ಮಿಕ ಚಿಂತನ ಕ್ರಮಕ್ಕೆ ತೀರ ವ್ಯತಿರಿಕ್ತವಾದುದು.
ಮದನ್‌ರವರ ಪ್ರಮುಖ ವಾದ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನೆಹರೂ ಮುಖೇನ ಕಾಂಗ್ರೇಸ್‌ನಿಂದ ಮುಂದಿಡಲ್ಪಟ್ಟ ಸೆಕ್ಯುಲರಿಸಂ ಎಂಬ ವಾದಗ್ರಸ್ತ ವಿಚಾರಧಾರೆ ಭಾರತದ ಧಾರ್ಮಿಕ ಪರಂಪರೆಗಳನ್ನಾಗಲಿ, ಸಾಂಸ್ಕೃತಿಕ ಹಿನ್ನೆಲೆಗಳನ್ನಾಗಲಿ,ಸಮುದಾಯಗಳ ಅನನ್ಯತೆಗಳನ್ನಾಗಲಿ, ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ ಹೀಗೆ ಭಾರತೀಯ ಸಾಮಾಜಿಕ ಸಂದರ್ಭಕ್ಕೆ ಒಗ್ಗದ ವಿಚಾರಧಾರೆಯನ್ನು ಬಲವಂತವಾಗಿ ಸಮುದಾಯಗಳ ಮೇಲೆ ಹೇರಿರುವ ರಾಜ್ಯದ ಈ ನಡವಳಿಕೆ ಮಾರಕ ದುಷ್ಟರಿಣಾಮಗಳಿಗೆ ಹಾದಿ ಮಾಡಿಕೊಟ್ಟಿದೆ.
ಧಾರ್ಮಿಕತೆ ಮತ್ತು ಲೌಕಿಕತೆಗಳ ಪ್ರತ್ಯೇಕತೆಯ ನೆಲೆಯಲ್ಲಿ ರೂಪಿಸಲ್ಪಟ್ಟ ಪಾಶ್ಚಿಮಾತ್ಯ ಸೆಕ್ಯುಲರಿಸಂನ ತಾತ್ವಿಕ ಗ್ರಹಿಕೆಗಳನ್ನು ದಾಟಿ ಭಾರತದ ಧಾರ್ಮಿಕ ಪರಂಪರೆಗಳ ಚರಿತ್ರೆ ಹಾಗೂ ಅವು ಉತ್ಪಾದಿಸಿದ ನೈತಿಕ ಸಾಮಾಜಿಕ ಮೌಲ್ಯಗಳ ಆಧಾರದಲ್ಲಿ ಭಾರತೀಯ ಸೆಕ್ಯುಲರ್ ದೃಷ್ಠಕೋನವೊಂದು ರೂಪುಗೊಳ್ಳಬೇಕೆಂದು ಮದನ್ ಅಭಿಪ್ರಾಯ ಪಡುತ್ತಾರೆ ಮತ್ತು ಪಶ್ಚಿಮ ಜನ್ಯವಾದ ಸೆಕ್ಯುಲರಿಸಂ ಎಂಬ ವಿಚಾರಧಾರೆಗೆ ಭಾರತೀಯ ಅರ್ಥವಂತಿಕೆಯನ್ನು ಒದಗಿಸಲು ಸಾಧ್ಯವಿದೆ ಎಂದು ಭಾವಿಸುತ್ತಾರೆ. ಈ ದೃಷ್ಠಿಕೋನಕ್ಕೆ ಭಾರತೀಯ ಧಾರ್ಮಿಕ ಪರಂಪರೆಗಳು ನೆಲೆಯಾಗಬೇಕು.
೨. ಆಧುನಿಕ ವಿಜ್ಞಾನ ಜ್ಞಾನ ಪರ್ವದ ವೈಚಾರಿಕತೆ ಹಾಗೂ ರಾಷ್ಟ್ರದ ನಿರ್ಮಾಣ ಕ್ರಿಯೆಗಳನ್ನೊಳಗೊಂಡ ಆಧುನೀಕರಣದ (Modernism) ಪ್ರಕ್ರಿಯೆ ಸಾಂಪ್ರದಾಯಿಕ ನೆಲೆಗಳಿಂದ ಜನ ಸಮುದಾಯವನ್ನು ಬೇರ್ಪಡಿಸಿ ಅವುಗಳ ಆತ್ಮಸ್ಥೈರ್ಯವನ್ನು ನಷ್ಟಗೊಳಿಸಿವೆ. ಅಲ್ಲದೆ ಈ ಆಧುನೀಕರಣ ನೆಲೆಯಲ್ಲಿ ರೂಪಿತಗೊಂಡ ಹೊಸ ಬದುಕು ಸಮುದಾಯಗಳನ್ನು ಒಂದು ಹತಾಶ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಭಾರತದ ಜನ ಜೀವನ ಈ ಒಂದು ಸ್ಥಿತಿಗೆ ಸೆಕ್ಯುಲರಿಸಂ ಎಂಬ ಒಂದು ವಿದ್ಯಮಾನ ತೋರಿಸಿಕೊಟ್ಟ ಆಧುನಿಕ ವಿಜ್ಞಾನ ಪ್ರಣೀತ ಸಾಮಾಜಿಕ ನಿಲುವು ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದೆ ಎಂದು ಪ್ರಮುಖ ಚಿಂತಕರಾದ ಆಶಿಸ್ ನಂದಿ ವಾದಿಸುತ್ತಾರೆ.
ವಸಾಹತು ಕಾಲದಲ್ಲಿ ಬ್ರಿಟೀಷರು ತಮ್ಮ ಸ್ವ ಘೋಷಿತ ನಾಗರಿಕ ಮೇಲ್ತೆನದಲ್ಲಿ ಭಾರತೀಯ ಸಮುದಾಯಗಳನ್ನು ನಾಗರೀಕಗೊಳಿಸುವ ಶ್ವೇತವರ್ಣಿಯನ (white man burden theory) ಹೊರೆ ನಿರ್ವಹಿಸಿದಂತೆಯೇ ವಸಾಹತು ನಂತರದ ಭಾರತದಲ್ಲಿ ಈ ಸೆಕ್ಯುಲರ್ ಬುದ್ಧಿ ಜೀವಿಗಳು ಮುಂದುವರೆಯುವ ಭಾರತೀಯರನ್ನು ಮುಂದೆ ತರುವ ಮೇಲುಸ್ತುವಾರಿಕೆಯನ್ನು ಸ್ವಯಂ ಘೋಷಿತವಾಗಿ ನಿರ್ವಹಿಸಿದ್ದಾರೆ ಎನ್ನುವ ನಂದಿ ಸೆಕ್ಯುಲರಿಸಂ ಎಂಬುದು ಭಾರತದ ಮಧ್ಯಮ ವರ್ಗ ಒಪ್ಪಿಕೊಂಡ ನಿಲುವಾಗಿದೆ ಎನ್ನುತ್ತಾರೆ.
ಪಾಶ್ಚಿಮಾತ್ಯ ವಿಜ್ಞಾನ ವೈಚಾರಿಕತೆ ಮತ್ತು ರಾಷ್ಟ್ರೀಯತೆಯ ತಾತ್ವಿಕ ಹಿನ್ನೆಲೆಯಲ್ಲಿ ರೂಪಗೊಂಡ ಸೆಕ್ಯುಲರಿಸಂ ಹೇಗೆ ಭಾರತೀಯ ಜನ ಜೀವನಕ್ಕೆ ಪರಕೀಯವಾದುದೆಂದು ತೋರಿಸಿಕೊಡುವ ನಂದಿ ಭಾರತದಲ್ಲಿ ಪರಂಪರಾಗತವಾಗಿ ರೂಢಿಸಿ ಬಂದ ಸಹಿಷ್ಣುತೆ ಮತ್ತು ಸಹನೆಯ ಆಧಾರದ ಮೇಲೆ ಜೀವನ ಕ್ರಮವನ್ನು ಪಾಶ್ಚಾತ್ಯ ಸೆಕ್ಯುಲರಿಸಂಗೆ ಪರ್ಯಾಯವಾಗಿ ಮುಂದಿಡುತ್ತಾರೆ.
೩. ಭಾರತದ ಸೆಕ್ಯುಲರಿಸಂ ತಾತ್ವಿಕತೆಯನ್ನು ತೀಕ್ಷ್ಣವಾದ ವಿಮರ್ಶೆಗೆ ಒಳಪಡಿಸಿದ ಚಿಂತಕರಲ್ಲಿ ಪ್ರಮುಖವಾದವರು ಪಾರ್ಥಚಟರ್ಜಿ ಅವರು ತಮ್ಮ ಸೆಕ್ಯುಲರಿಸಂ ಅಂಡ್ ಟಾಲಾರೆನ್ಸ್ ಎನ್ನುವ ಬರಹದಲ್ಲಿ ಭಾರತದಲ್ಲಿ ಸೆಕ್ಯುಲರಿಸಂ ತಾತ್ವಿಕತೆಯ ಲೋಪದೋಷಗಳನ್ನು ಎತ್ತಿಹಿಡಿಯುತ್ತಾರೆ. ಇವರ ಪ್ರಕಾರ ಸೆಕ್ಯುಲರಿಸಂನ ತಾತ್ವಿಕತೆಯ ಗ್ರಹಿಕೆಯ ರಾಜ್ಯದ ಕಲ್ಪನೆಗೂ ಭಾರತದ ಸಂವಿಧಾನಿಕ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪ್ರಮುಖ ಅಂಶವಾದ Affirmative action ಪರಿಕಲ್ಪನೆಗೂ ಒಂದು ಬಗೆಹರಿಸಲಾಗದ ತಕರಾರು ಇದೆ ಎಂದು ಹೇಳುವ ಚಟರ್ಜಿ ಸೆಕ್ಯುಲರಿಸಂನ ತಾತ್ವಿಕ ನೆಲೆಯಲ್ಲಿ ಅಸ್ತಿತ್ವಕ್ಕೆ ಬರುವ ರಾಜ್ಯ ಮೂಲತಹ ತಟಸ್ಥ ಸ್ವಭಾವದ್ದು. ಇದು ಸಮಾನತೆಯ ಮನೋಭಾವದಿಂದ ಯಾವುದು ಕಾರಣಕ್ಕೂ ಯಾವುದು ಗುಂಪಿಗೂ ವಿಶೇಷ ಮಾನ್ಯತೆ ನೀಡದೆ ವ್ಯವಹರಿಸುತ್ತದೆ. ಈ ಸೆಕ್ಯುಲರ್ ರಾಜ್ಯದ ಕಲ್ಪನೆಗೆ ವ್ಯತ್ತಿರಿಕ್ತವಾಗಿ ಭಾರತದ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆ ಒಂದು ಸಕ್ರಿಯವಾದ ಜನತೆಗೆ ಸಾಮಾಜಿಕ ನ್ಯಾಯವನ್ನು ಪೂರೈಸುವ ಒಂದು ಜವಾಬ್ದಾರಿಯುತ ರಾಜ್ಯದ ಕಲ್ಪನೆಯನ್ನು ಹೊಂದಿದೆ.
ಭಾರತದ ಸಂವಿಧಾನಿಕ ರಾಜ್ಯ ಪರಿಕಲ್ಪನೆ ಸೆಕ್ಯುಲರಿಸಂನ ಪ್ರತಿಪಾದಿಸುವ ನಿಲಿಪ್ತ ಮತ್ತು ನಿರಪೇಕ್ಷ ರಾಜ್ಯಗಳಿಗೆ ಸಂಪೂರ್ಣ ವಿರುದ್ಧವಾಗಿದ್ದು ಭಾರತದ ರಾಜ್ಯ ತನ್ನ ಸಕ್ರಿಯ ಸಾರ್ವಜನಿಕ ನಡು ಪ್ರವೇಶ ಜೊತೆಗೆ ಧರ್ಮ ನಿರಪೇಕ್ಷತೆಯ ಆಧಾರದ ಸೆಕ್ಯುಲರ್ ದೃಷ್ಠಿಕೋನವನ್ನು ಏಕಕಾಲದಲ್ಲಿ ಹೇಗೆ ನಿರ್ವಹಿಸಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ.
೪. ಭಾರತದ ಸೆಕ್ಯುಲರಿಸಂ ಕುರಿತಾದ ಚಿಂತನೆಯಲ್ಲಿ ರಾಜೀವ್ ಭಾರ್ಗವ್ ಪ್ರಮುಖವಾದ ಒಬ್ಬ ಚಿಂತಕರಾಗಿ ಹೊರ ಹೊಮ್ಮುತ್ತಾರೆ. ಅವರ ಪ್ರಕಟಿಸಿರುವ ಸೆಕ್ಯುಲರಿಸಂ ಅಂಡ್ ಇಟ್ಸ್ ಕ್ರಿಟಿಕ್ಸ್ ಎನ್ನುವ ಪ್ರಬಂಧ ಸೆಕ್ಯುಲರಿಸಂ ಕುರಿತಾದ ವಾದಕ್ಕೆ ಒಂದು ಹೊಸ ರೀತಿಯ ಹೊಳಪು ಒದಗಿಸುತ್ತದೆ. ರಾಜೀವ್ ಭಾರ್ಗವ್ ರವರ ಪ್ರಕಾರ ಸೆಕ್ಯುಲರಿಸಂ ಕುರಿತಾದ ನಮ್ಮ ಬಹುತೇಕ ಚರ್ಚೆಗಳ ಚರ್ಚ್-ಸ್ಟೇಟ್ ಮಾಡೆಲ್ ಸೆಕ್ಯುಲರಿಸಂಗೆ ಪ್ರತಿಕ್ರಿಯೆಯಾಗಿ ಬಂದದ್ದು ಈ ಚರ್ಚ್-ಸ್ಟೇಟ್ ಮಾದರಿಯ ಸೆಕ್ಯುಲರಿಸಂ ಧರ್ಮ ಮತ್ತು ರಾಜಕಾರಣಗಳ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುತ್ತದೆ. ಇವರ ಪ್ರಕಾರ ಚಚ್/ರಾಜ್ಯ ಮಾದರಿಯಿಂದ ಮೂಡಿಬರುವ ಸೆಕ್ಯುಲರಿಸಂನ ಚಿಂತನಾಧಾರೆ ಭಾರತದಂತಹ ಬಹು ಸಂಸ್ಕೃತಿಯ ಸಮಾಜಕ್ಕೆ ಒಗ್ಗುವುದಿಲ್ಲ ಎಂದು ಹೇಳುವ ಭಾರ್ಗವ್ ಯುರೋಪಿನ ಸಮಾಜಗಳಲ್ಲಿ ಧಾರ್ಮಿಕ ತಿಕ್ಕಾಟಗಳ ಸಂದರ್ಭದಲ್ಲಿ ರೂಪ ಪಡೆದ ಇನ್ನೊಂದು ಮಾದರಿ ಭಾರತೀಯ ಬಹುಧಾರ್ಮಿಕ ಸಂದರ್ಭಕ್ಕೆ ಸೂಕ್ತವಾಗಬಹುದೆಂದು ಪ್ರತಿಪಾದಿಸಿದ್ದಾರೆ. ಇದೇ ಅಲ್ಲದೆ Substantive Secularism (ಸ್ವಾತಿಕ ಸೆಕ್ಯುಲರಿಸಂ) ಪ್ರೊಸಿಜರ್ ಸೆಕ್ಯುಲರಿಸಂ (ವೈದಾನಿಕ ಸೆಕ್ಯುಲರಿಸಂ) ಎಂಬ ಎರಡು ರೀತಿಯ ಸಕ್ಯುಲರಿಸಂ ಗಳನ್ನು ವಿವರಿಸಿದ್ದಾರೆ.
ಒಟ್ಟಾರೆಯಾಗಿ ಮೇಲಿನ ವಾದಗಳು ಪರಸ್ಪರ ಭಿನ್ನತೆಗಳಿಂದ ಕೂಡಿದ್ದರು ಅಂತಿಮವಾಗಿ ಅವು ಸೇರುವುದು ರಿಲಿಜಿಯಸ್ಸಾಗಿ ತಟಸ್ಥವಾಗಿರುವ ಒಂದು ಪ್ರಭುತ್ವದ ಚೌಕಟ್ಟಿನಲ್ಲಿ ಮಾತ್ರ ಈ ಹಿನ್ನೆಲೆಯಲ್ಲಿ ಗಮನಿಸಿದರೆ ಸಮಕಾಲೀನ ಸಹಿಷ್ಣುತೆಯ (Tolerance) ಸಿದ್ಧಾಂತಗಳ ಮುಖ್ಯ ತತ್ವವೊಂದರ ಸುತ್ತ ಈ ಚರ್ಚೆಗಳು ಸುತ್ತುತ್ತಿವೆ. ಅದು ಯಾವುವೆಂದರೆ ಶಾಂತಿಯುತವಾದ ಬಹುತ್ವ ಸಮಾಜಕ್ಕೆ ಪ್ರಭುತ್ವದ ತಾಟಸ್ಥ್ಯ ಅಗತ್ಯ. ಈ ಎಲ್ಲಾ ಚಿಂತಕರು ಎನನ್ನು ವಿರೋಧಿಸುತ್ತಿದ್ದಾರೆಯೋ ಅದನ್ನೆ ಪೊಷಿಸುತ್ತಿರುವಂತೆ ಕಾಣುತ್ತಿದೆ. ಅಂದರೆ ಭಾರತದಲ್ಲಿ ರಿಲಿಜನ್ ಇದೆ ಎಂಬ ಆಧಾರದ ಮೇಲೆ ಇವರ ವಾದಗಳು ನೆಲೆ ಕಂಡುಕೊಂಡಿವೆ ಪಾಶ್ಛಾತ್ಯ ಮಾದರಿಯ ಸೆಕ್ಯುಲರಿಸಂ ಭಾರತಕ್ಕೆ ಪರಕೀಯವಾದುದು ನಮ್ಮ ಪೂರ್ವಕಾಲದಲ್ಲಿನ ಸೆಕ್ಯುಲರ್ ಮೌಲ್ಯಗಳನ್ನು ಪುನರುಸ್ಥಾಪಿಸ ಬಯಸುವ ಇವರು ಅದಕ್ಕೆ ಭಾರತದ ಪರಂಪರೆಯ ಅಡಿಪಾಯ ಮಾಡಬಯಸುತ್ತಾರೆ. ಮತ್ತು ಈ ಅಂಶ ಅವರನ್ನು ಭಾರತ ಒಂದು ರಿಲಿಜಿಯನ್ ಹೊಂದಿದೆ ಎಂಬ ಗ್ರಹಿಕೆಯಿಂದ ಹೊರಡುತ್ತದೆ.
ಹಾಗಾದರೆ ಸೆಕ್ಯುಲರಿಸಂಗೆ ಇರುವ ಪ್ರಮುಖವಾದ ತೊಡಕುಗಳೇನು? ಏಕೆ ಅದು ವಿದ್ವಾಂಸರುಗಳಿಂದ ಹಿಡಿದು ಜನಸಮುದಾಯಗಳ ಮನದ ಧ್ವನಿಯಾಗಿ ಉಳಿದಿಲ್ಲ ಎಂಬುದು ಪ್ರಮುಖ ಪ್ರಶ್ನೆಯಾಗಿ ಕಾಡುತ್ತದೆ. ಈ ಒಂದು ಹಿನ್ನೆಲೆಯಲ್ಲಿ ಪ್ರೊ. ಬಾಲಗಂಗಾಧರ ಮತ್ತು ಜೆಕಬ್ ರವರು ತುಂಬಾ ಸ್ವವಿಸ್ತಾರವಾಗಿ ಚರ್ಚಿಸಿದ್ದಾರೆ. ಅವರ ಪ್ರಕಾರ ಸೆಕ್ಯುಲರಿಸಂನ ತಾತ್ವಿಕತೆಯನ್ನೆ ಪ್ರಶ್ನಿಸಬೇಕಾಗುತ್ತದೆ.
ತತ್ವಗಳ (History of idea) ಇತಿಹಾಸ ಸೆಕ್ಯುಲರಿಸಂ ಎಂಬುದು ಕ್ರೀಶ್ಚಿಯನ್ ತತ್ವವಾಗಿರುವುದನ್ನು ನಿರೂಪಿಸುತ್ತದೆ. ಆದಾಗ್ಯೂ ಏಕೆ ಭಾರತೀಯ ಬುದ್ಧಿಜೀವಿಗಳು, ರಾಜ್ಯ ಮತ್ತು ನಾಗರೀಕರು ಅದನ್ನು ಒಳಗೊಳ್ಳ ಬಯಸುತ್ತಾರೆ. ನಮಗೆ ಇಂದು ರಿಲಿಜಿಯನ್ ಮತ್ತು ರಾಜಕೀಯವನ್ನು ನಿರ್ಧಿಷ್ಟವಾಗಿ ಬೇರ್ಪಡಿಸುವ ಯಾವುದೇ ಸಮರ್ಥ ವೈಜ್ಞಾನಿಕ ಸೈದ್ಧಾಂತಿಕ ಚೌಕಟ್ಟು ಇಲ್ಲವಾಗಿz. ಅಲ್ಲದೆ ನಮಗೆ ಯಾವ ಅಂಶಗಳು ಹಿಂದೂ ಆಚರಣೆಗಳನ್ನು ರಿಲಿಜಿಯನ್ನಾಗಿ ನಿರೂಪಿಸುತ್ತವೆ ಎಂಬುದಕ್ಕೊ ಸಹ ಯಾವುದೇ ಆಧಾರಗಳಿಲ್ಲ. ರಿಲಿಜಿಯನ್ ಕುರಿತಾದ ಕೆಲಸಕ್ಕೆ ಬಾರದ ವ್ಯಾಖ್ಯಾನಗಳು ರಿಲಿಜಿಯನ್ ಎಂಬ ವಿದ್ಯಮಾನವನ್ನು ಕುರಿತಂತೆ ನಮಗೆ ಏನನ್ನು ತಿಳಿಸುವುದಿಲ್ಲ. ಆದರೂ ನಾವು ಇಂದಿಗೂ ಕೂಗುತ್ತಿರುವುದು ರಿಲಿಜಿಯನ್ ರಾಜಕೀಯದಿಂದ ಪ್ರತ್ಯೇಕಿಸಬೇಕು ಮತ್ತು ರಾಜ್ಯವನ್ನು ಸೆಕ್ಯುಲರ್‌ಮಯಗೊಳಿಸಬೇಕು. ಮೇಲಿನ ಪ್ರಶ್ನೆಗಳಿಗೆ ಉತ್ತರಿಸದೆ ಸೆಕ್ಯುಲರ್‌ವಾದಿಗಳು ಮುಂದುರವರೆಯುವಂತಿಲ್ಲ. ನಿಜವಾದ ಅಪಾಯವಿರುವುದು ಸೆಕ್ಯುಲರಿಸಂ ಕುರಿತಾದ ವಿಮರ್ಶೆ ಭಾರತವನ್ನು ಒಂದು ಹಿಂದೂ ರಿಲಿಜಿಯಸ್ ರಾಜ್ಯವನ್ನಾಗಿ ಮಾಡಲು ಬೇಕಾದ ಸಮರ್ಥನೆಯನ್ನು ಒದಗಿಸುತ್ತದೆ ಎಂಬುದು. ನನ್ನ ವಾದದ ಪೂರ್ಣ ಪಾಠ ಇದು ಮಾತ್ರವಲ್ಲ ಇದಕ್ಕಿಂತ ಮುಂದುವರೆದು ನನ್ನ ಸಲಹೆ ಎಂದರೆ ರಿಲಿಜಿಯಸ್ ಮತ್ತು ಸೆಕ್ಯುಲರ್ ನಡುವಣ ಪರಿಕಲ್ಪನಾ ವಿಭಿನ್ನತೆಗಳು ಮತ್ತು ರಾಜ್ಯವನ್ನು ಸೆಕ್ಯುಲರ್‌ಮಯಗೋಳಿಸುವುದು ಭಾರತೀಯ ಸಮಾಜವನ್ನು ಅರ್ಥಮಾಡಿಕೊಳ್ಳಲು ನಮಗೆ ಯಾವುದೇ ರೀತಿಯಲ್ಲಿ ಸಹಕರಿಸುವುದಿಲ್ಲ. ಅಲ್ಲದೆ ಸೆಕ್ಯುಲರಿಸಂ ಎಂಬ ಮಾದರಿ ಎರಡು ಸಮುದಾಯಗಳ ನಡುವಿನ ಉದ್ವೇಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ.
ಭಾರತೀಯರಾದ ನಾವು ಒಂದು ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಾವು, ಮುಸ್ಲಿಂ ಮತ್ತು ಬ್ರಿಟೀಷ್ ಎರಡೂ ವಸಾಹತುಶಾಹಿಗಳ ಫಲಗಳಾಗಿದ್ದೇವೆ. ಇಸ್ಲಾಂ ವಸಾಹತುಶಾಹಿಯು ನಮ್ಮ ಸಂಸ್ಕೃತಿಯ ದಾಟುಸುವಿಕೆಗೆ (ಪೀಳಿಗೆಯಿಂದ ಪೀಳಿಗೆಗೆ) ತೊಂದರೆ ಪಡಿಸಿದ್ದರೆ, ಇದರ ಪರಿಣಾಮವಾಗಿ ಬ್ರಿಟೀಷ್ ವಸಾಹತುಶಾಹಿಯು ಇನ್ನೂ ಮುಂದಕ್ಕೆ ಹೋಗಿ ಲೋಕವನ್ನು ಗ್ರಹಿಸಲು ಹೊಸರೀತಿಯ ಚೌಕಟ್ಟನ್ನು ಪರಿಚಯಿಸಿತು. ಅದಕ್ಕಿಂತ ಹೆಚ್ಚಾಗಿ ನಮ್ಮ ಲೋಕಾನುಭವವನ್ನು ಹೊಸ ವಿಧಾನದಲ್ಲಿ ಮಾತನಾಡುವುದನ್ನೂ ಸಹ ಪರಿಚಯಿಸಿತು. ಈ ಚೌಕಟ್ಟು ನಮ್ಮ ಕುರಿತು ಹೊಸ ಹೊಸ ವಿಚಾರಗಳನ್ನು ತಿಳಿಸಿತು: ಅವುಗಳೆಂದರೆ ನಾವು ಹಿಂದುಳಿದವರು, ಪುರಾತನದವರು, ಅಂಧಶ್ರದ್ದೆಯಲ್ಲಿ ಮುಳುಗಿರುವವರು ಮತ್ತು ಪ್ರಾಚೀನ ಸಾಮಾಜಿಕ ರಚನೆಗಳನ್ನು ಹೊಂದಿದವರು ಎಂಬಿತ್ಯಾದಿ ಸಂಗತಿಗಳನ್ನು ನಮಗೆ ತಿಳಿಸಿದವು. ಬ್ರಿಟೀಷರು ಈ ರಚನೆಗಳ ಸ್ವರೂಪವಗಳನ್ನೂ ಸಹ ಭೋಧಿಸಿದರು.
ಈ ಬೋಧನೆ ನಮಗೆ ಲಭ್ಯವಾಗಿದು ವಸಾಹತುಶಾಹಿ ಪ್ರಯೋಜಿತ ಶಿಕ್ಷಣ ವ್ಯವಸ್ಥೆಯಿಂದ ಯುರೋಪಿನ ಜ್ಞಾನ ಪರ್ವದ ಪ್ರಭಾವಳಿಯ ಭಾಗವಾಗಿ ಜಗತ್ತನ್ನು ವೈಚಾರಿಕವಾಗಿ ಅಧ್ಯಯನ ಮಾಡಬೇಕು ಎಂಬ ವಾದಗಳು ಅರ್ಥಪಡೆದುಕೊಂಡವು. ಪಾಶ್ಚಿಮಾತ್ಯ ವಸಾಹತುಶಾಹಿ ಪ್ರತಿಪಾದಿತ ಶಿಕ್ಷಣವು ಭಾರತಕ್ಕೆ ಒಂದು ಭವ್ಯವಾದ ಗತ ಇತ್ತೆಂದು ಕಾಲಾ ನಂತರ ಅದು ಪುರೋಹಿತಶಾಹಿತ್ವದ ಕಾರಣದಿಂದಾಗಿ ನಶಿಸಿತೆಂದು ಅದನ್ನು ಮತ್ತೆ ಪಾಶ್ಚಿಮಾತ್ಯ ಆಧುನಿಕ, ವೈಜ್ಞಾನಿಕ ಮೌಲ್ಯಗಳ ವಿಚಾರಧಾರೆಯ ಭಾಗವಾಗಿ ಮರುಸ್ಥಾಪಿಸಬೇಕೆಂಬ ವಾದವನ್ನು ಅತ್ಯಂತ ವ್ಯವಸ್ಥಿತವಾಗಿ ಮುಂದಿಟ್ಟರು. ಕಲೋನಿಯಲ್ ವಸಾಹತುಶಾಹಿ ಶಿಕ್ಷಣದ ಮೊದಲ ಭಾಗ ನಾವು ಎಷ್ಟು ಹಿಂದುಳಿದ್ದೇವೆ ಅದಕ್ಕೆ ಕಾರಣವೇನೆಂದು ತಿಳಿಸಿದರೆ ಎರಡನೇಯ ಭಾಗ ಅದು ಆ ಸಮಸ್ಯೆಗಳಿಂದ ಹೊರಬರಲು ಮತ್ತು ಅರ್ಥಮಾಡಿಕೊಳ್ಳಲು ಆಧುನೀಕತೆಯ ಹೆಸರಿನಲ್ಲಿ ಒಂದು ಚೌಕಟ್ಟನ್ನು ಒದಗಿಸಿತು. ಇದು ಸ್ಥಳೀಯವಾದಂತಹ ಆಚರಣೆಗಳು ಕಥೆಗಳು ಸಂಪ್ರದಾಯ ಮತ್ತು ಸಂಸ್ಕೃತಿಗಳ ಬದಲಿಗೆ (ಮೂಢನಂಬಿಕೆಗಳೆಂಬ ಕಾರಣಕ್ಕೆ) ಪಾಶ್ಚಿಮಾತ್ಯ ನಾಗರೀಕತೆಯ ಕಾನೂನು ಮತ್ತು ನಿಯಮಗಳ ವೈಚಾರಿಕಥೆಯ ಹೆಸರಿನಲ್ಲಿ ಅರ್ಥಪಡೆದುಕೊಂಡವು. ಪಾಶ್ಚಾತ್ಯರು ಪ್ರಜ್ಞಾಪೂರ್ವಕವಾಗಿ ಇದನ್ನು ಮಾಡಿದ್ದಾರೆ ಎಂದು ಅವರು (ಬಾಲು) ಹೇಳುವುದಿಲ್ಲ. ಯುರೋಪಿನವರು ಬಂದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಭಾರತೀಯ ಸಮಾಜದ ಸ್ವರೂಪವನ್ನು ಹಾಗೆ ಗುರುತಿಸದೆ ಅನ್ಯ ಮಾರ್ಗವೇ ಅವರಿಗಿರಲಿಲ್ಲ ಎನ್ನುವುದು ಅವರ ವಾದ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಸೆಕ್ಯುಲರ್ ಎಂಬ ತತ್ವ ರಿಲಿಜಿಯಸ್ ಥಿಯಾಲಜಿಯ ಒಂದು ಭಾಗವಾಗಿ ಇರುವುದು ಸ್ಪಸ್ಟವಾಗುತ್ತದೆ.
ಜೆಕಬ್ ರವರು ಪ್ರತಿಪಾದಿಸುವಂತೆ ಸೆಕ್ಯುಲರ್ ರಾಜ್ಯ ಮತ್ತು ಭಾರತದ ಸಮಾಜದ ಕುರಿತಾಗಿನ ವಿವರಣೆಗಳು ಪ್ರೊಟೆಸ್ಟೆಂಟ್ ಮೂಲದಿಂದ ಹುಟ್ಟಿದವು ಅನುವುದಕ್ಕಿಂತ ಹಿಂದೂಯಿಸಂ, ಜಾತಿವ್ಯವಸ್ಥೆ ಮತ್ತು ಸೆಕ್ಯುಲರ್‌ರಾಜ್ಯಗಳೆಂಬ ಪರಿಕಲ್ಪನೆಗಳು ಕ್ರಿಶ್ಚಿಯನ್ ಥಿಯಾಲಜಿಯ ಪೂರ್ವಗ್ರಹದ ಹಿನ್ನೆಲೆಯಿಂದ ಹೆಚ್ಚು ಪ್ರಭಾವಿಸಲ್ಪಟ್ಟವುಗಳಾಗಿವೆ. ಅಂದರೆ ಈ ಪ್ರಸ್ತುತ ಸೆಕ್ಯುಲರಿಸಂ, ಹಿಂದೂಯಿಸಂ ಮತ್ತು ಜಾತಿ ವ್ಯವಸ್ಥೆ ಕುರಿತಾದ ಸಿದ್ಧಾಂತಗಳು ಥಿಯಾಲಜಿಯ ಚೌಕಟ್ಟಿನಲ್ಲಿ ವಿವರಿಸಲ್ಪಟ್ಟಿವೆ. ಉದಾಹರಣೆಗೆ ನೋಡುವುದಾದರೆ ಚಿ)ಭಾರತೀಯ ಸಮಾಜವನ್ನು ರಿಲಿಜಿಯಸ್ ಮತ್ತು ಸೆಕ್ಯುಲರ್‌ಗಳಾಗಿ ವಿಭಾಗಿಸುವುದರ ಮೂಲಕ ಅರ್ಥಮಾಡಿಕೊಳ್ಳಲು ಸಾಧ್ಯವೇ? b) ಇಲ್ಲಿ Belief ಎಂದರೆ ರಾಜಕೀಯ ಕಾರಣಗಳಿಗೆ ಧರ್ಮವನ್ನು ಬಳಸುವುದು ತಪ್ಪು, ಛಿ) ಬ್ರಾಹ್ಮಣ ಪುರೋಹಿತರು ಜಾತಿ ವ್ಯವಸ್ಥೆಯ ಮೂಲಕ ರಿಲಿಜಿಯಸ್ ಕಾನೂನುಗಳನ್ನು ಭಾರತ ಸಮಾಜದ ಮೇಲೆ ಹೇರಿದರು. ಎಂಬಿತ್ಯಾದಿ ನಂಬಿಕೆಗಳು ಪ್ರೊಟೆಸ್ಟೆಂಟ್ ಥಿಯಾಲಜಿಕಲ್ ಚೌಕಟ್ಟಿನಲ್ಲಿ ರೂಪ ಪಡೆದಿವೆ ಎಂದು ತೋರಿಸಲು ಇಂದು ಸಾಧ್ಯವಿದೆ. ಈ ಒಂದು ಹಾದಿಯಲ್ಲಿ ರಿಲಿಜಿಯನ್ ಮತ್ತು ಸೆಕ್ಯುಲರ್‌ಗಳನ್ನು ಪ್ರತ್ಯೇಕಗೋಳಿಸುವಂತಹ ಒಂದು ವೈಜ್ಞಾನಿಕ ಸೈದ್ಧಾಂತಿಕ ಚೌಕಟ್ಟು ನಮಗಿಲ್ಲ ಒಂದು ವೇಳೆ ನಾವು ಇವೆರಡನ್ನು ಭಿನ್ನವೆಂದು ಗ್ರಹಿಸಿದರೆ ಕ್ರಿಶ್ಚಿಯನ್ ಥಿಯಾಲಜಿಯ ಹಿನ್ನೆಲೆಯಲ್ಲಿ ಮಾತ್ರ ನಮಗೆ ಅವುಗಳನ್ನು ಅರ್ಥಮಾಡಿಕೊಳ್ಳುವ ಸಾಧ್ಯ.
ಕಳೆದ ೧೬ ಶತಮಾನಗಳು ಅದಕ್ಕಿಂತ ಹಿಂದಿನಿಂದ ಈ ಒಂದು ಚೌಕಟ್ಟು ಥಿಯಾಲಜಿಯಾ ಸಹಾಯದಿಂದ ರಿಲಿಜಿಯಸ್ ಮತ್ತು ಪೊಲಟಿಕಲ್‌ಗಳನ್ನು ವಿಭಾಗಿಸಿ ಇಡೀ ಪಾಶ್ಚತ್ಯ ರಾಜಕೀಯ ಚಿಂತನೆಯನ್ನು ಸೆಕ್ಯುಲರ್‌ಮಯವಾದ ನಿಲುವಾಗಿ ಪ್ರಭಾವಿಸಿದೆ. ಈ ಒಂದು ಥಿಯಾಲಜಿಯ ಭಾಷೆ ಇಂದು ಪಾಶ್ಚತ್ಯರ ಸಾಮಾನ್ಯ ಗ್ರಹಿಕೆಯ ಭಾಷೆಯಾಗಿ ಬಳಕೆಯಲ್ಲಿದೆ. ಪಾಶ್ಚತ್ಯ ಬುದ್ಧಿ ಜೀವಿಗಳು ಮತ್ತು ಪಾಶ್ಚತ್ಯ ಶಿಕ್ಷಣದಿಂದ ತರಬೇತಿ ಪಡೆದ ಬೇರೆ ಸಂಸ್ಕೃತಿಯ ಬುದ್ಧಿಜೀವಿಗಳು ಇದೇ ಥಿಯಾಲಜಿಯ ಭಾಷೆಯನ್ನು ವೈಚಾರಿಕತೆ ಮತ್ತು ವೈಜ್ಞಾನಿಕ ವಿಚಾರಗಳಂತೆ ಸರಾಗವಾಗಿ ವಿವರಿಸಬಲ್ಲವರಾಗುತ್ತಾರೆ. ಸೆಕ್ಯುಲರ್ ಎಂಬ ಪದಗುಚ್ಚವೇ (category) ಥಿಯಾಲಜಿಯ ಭಾಷೆಯಾಗಿರುವುರಿಂದ ರಾಜಕೀಯವನ್ನು ರಿಲಿಜಿಯಸ್‌ನಿಂದ ಬೇರ್ಪಡಿಸಬೇಕೆಂಬ ವಾದವೇ ರಿಲಿಜಿಯನ್ ಅಸ್ತಿತ್ವವನ್ನು ಬಯಸುತ್ತದೆ.. ಹಾಗಾದರೆ ವಸಾಹತುಶಾಹಿಗೆ ಒಳಗಾದ ಭಾರತದ ಬುದ್ಧಿಜೀವಿಗಳು ಬಳಸುತ್ತಿರುವ ಸೆಕ್ಯುಲರ್ ಎಂಬ ವಾದ ಗ್ರಸ್ತ ತಾತ್ವಿಕ ನಿಲುವು ಪಾಶ್ಚತ್ಯ ಥಿಯಾಲಜಿ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ನಿರೂಪಣೆಗೊಂಡಿದ್ದು ಭಾರತದ ಸಂದರ್ಭಕ್ಕೆ ಅಗತ್ಯವಿಲ್ಲದಾಗಿದೆ.
ಇದಕ್ಕಿರುವ ಪರಿಹಾರವೆಂದರೆ ಸಮಾಜ ವಿಜ್ಞಾನಗಳಲ್ಲಿರುವ ಥಿಯಾಲಜಿ ಪ್ರೇರಿತ ಪದಗುಚ್ಚಗಳ ಐತಿಹಾಸಿಕ ಒಳಗೊಳ್ಳುವಿಕೆಯನ್ನು ಸಂಶೋಧಿಸಿದಾಗ ಒಂದು ಅರ್ಥವಾಗಬಹುದಾದ ವಿವರಣೆಯನ್ನು ನೀಡಬಹುದಾಗಿದೆ. ಅಂದರೆ ಭಾರತದ ಸಮಾಜವನ್ನು ಕುರಿತಾದಂತೆ ಇದುವರೆಗಿನ ನೋಟಕ್ಕೆ ಬೇರೆಯದೆ ವೈಜ್ಞಾನಿಕ ದೃಷ್ಠಿಕೋನ ಅಥವಾ ಸೈದ್ಧಾಂತಿಕ ಚೌಕಟ್ಟು ಬೇಕಾಗುತ್ತದೆ.