ದಾಹ

ದಾಹ

ಬರಹ

ಬೇಸಿಗೆ ಬಂತೆಂದರೆ ಬಯಲುಸೀಮೆಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ.ಎಲ್ಲಿ ನೋಡಿದರೂ,ಬಿರುಬಿಸಿಲಿನ ಝಳ.ದನಕರುಗಳ ಪಾಡಂತೂ ಹೇಳತೀರದು.ಅಂತರ್ಜಲ ಆಳಕ್ಕಿಳಿದ ಪರಿಣಾಮವಾಗಿ ತೆರೆದ ಬಾವಿಗಳು ಒಣಗಿನಿಂತಿವೆ.ವಿದ್ಯುತ್ ಅಭಾವದಿಂದಾಗಿ ಕೊಳವೆಬಾವಿಗಳ ನೀರೂ ಸಕಾಲಕ್ಕೆ ಅಲಭ್ಯ.
ಇಂತಹ ಸಮಯಗಳಲ್ಲಿ ನೀರಡಿಕೆಯನ್ನು ಹಿಂಗಿಸಿಕೊಳ್ಳಲು ಜನ ಜಾನುವಾರುಗಳು ಕೆರೆಗಳನ್ನು ಅವಲಂಬಿಸುವುದು ಸಾಮಾನ್ಯ.ಪಾರಂಪರಿಕ ಜಲಮೂಲವಾದ ತಲಪರಿಗೆಗಳು ಈ ಸಂಧಿಗ್ಢ ಸಮಯದಲ್ಲಿ ಬಯಲುಸೀಮೆಯ ಬಹುತೇಕ ಜನರ ದಾಹಕ್ಕೆ ಪರ್ಯಾಯವಾಗಿ ನೀರೊದಗಿಸುತ್ತಿದ್ದವು.ತಲಪರಿಗೆಯ ನೀರು ಎಳನೀರಿನ ರೀತಿ.ತಲಪರಿಗೆಯ ಕಣ್ಣು ಎಂದು ಕರೆಯುವ ಭಾಗದಿಂದ ನೀರು ಒಸರುತ್ತದೆ.ಈ ನೀರನ್ನು ಬೇಸಾಯಕ್ಕೆ ಕೂಡಾ ತುಮಕೂರು ಜಿಲ್ಲೆಯಲ್ಲಿ ಬಳಸುತ್ತಾರೆ.
ಇತ್ತೀಚೆಗೆ ತಲಪರಿಗೆಗಳು ಕೂಡ ನಿರ್ವಹಣೆಯ ಕೊರತೆಯಿಂದಾಗಿ ಸೊರಗುತ್ತಿವೆ.ಮಧುಗಿರಿಯ ಚೋಳೆನಹಳ್ಳಿಯ ತಲಪರಿಗೆ,ಕಾರಮರಡಿಯ ಸೀನೀರು ಹೊಳೆ ತಲಪರಿಗೆ,ಪುರವರದ ತಲಪರಿಗೆ,ಬಸವನಹಳ್ಳಿಯ ಜೋಡಿ ತಲಪರಿಗೆಗಳು,ಪಾವಗಡ ತಾಲ್ಲೂಕಿನ ವಿನೋಬನಗರ,ವದನಕಲ್,ಮುಂತಾದ ಕಡೆ ಈ ನೀರಸೆಲೆಗಳು ಇನ್ನೂ ಜೀವಂತವಾಗಿವೆ.

ಲೇಖನದಲ್ಲಿ ಬಳಸಿಕೊಂಡಿರುವ ಚಿತ್ರ ಮಧುಗಿರಿಯ ತಲಪರಿಗೆಯ ನೀರಿನ ಕಣ್ಣು.ದಾಹ ತೀರಿಸಿಕೊಳ್ಳಲು ಬಂದ ವೃದ್ದರೊಬ್ಬರು ಅಲ್ಲಿದಾಗ ಕ್ಲಿಕ್ಕಿಸಿದ್ದೆ.
ತಲಪರಿಗೆಗಳ ಬಗ್ಗೆ ಹೆಚ್ಹಿನ ಮಾಹಿತಿಗೆ ನನ್ನನ್ನಾಗಲೀ,ಮಲ್ಲಿಕಾರ್ಜುನ ಹೊಸಪಾಳ್ಯರನ್ನಾಗಲೀ ಸಂಪದದಲ್ಲಿಯೇ ಸಂಪರ್ಕಿಸಿ.