ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?

ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?

ಸ್ನೇಹಿತರೆ,

ಕನ್ನಡ ಸಾಹಿತ್ಯದ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸಬೆಕಾದ ಕಾಲ ಇದು. ಹಾಗೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಮಕ್ಕಳ ಕಾಲಕ್ಕೆ ನಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಾಹಿತಿಗಳ ಜಾಗ, ವಸ್ತು ಸಂಗ್ರಹಾಲಯವಾಗುವುದೆಂದರೆ ಅತಿಶಯವಾಗುವುದಿಲ್ಲ. ಈಗಿನ ಜನಾಂಗದವರು ನಮ್ಮ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಬೇಕು. ಸಂಪದ ಮತ್ತು ಇತ್ತೀಚೆಗೆ ನಡೆದಂತಹ ವಿಕಿಪೀಡಿಯ ಸಮಾರಂಭಗಳು ಈ ಪ್ರಯತ್ನಕ್ಕೆ ವೇದಿಕೆಯಾಗಬಹುದು.  ದಯವಿಟ್ಟು ತಮ್ಮ ಅಮೂಲ್ಯವಾದ ಸಲಹೆಗಳನ್ನು ಈ ಬ್ಲಾಗ್ನಲ್ಲಿ ಮಂಡಿಸಬೇಕಾಗಿ ವಿನಂತಿ. 

ನಾನು ನೋಡಿದಂತೆ ಸುಮಾರು ಕನ್ನಡಿಗರ ಮನೆಗಳಲ್ಲಿ ಇಂಗ್ಲೀಶಿನ ಗೀಳು ಹತ್ತಿ, ಕನ್ನಡ ಪುಸ್ತಕಗಳನ್ನು ಓದುವುದೇ ಕಡಿಮೆ ಆಗುತ್ತಿದೆ.  ಹೀಗೆ ಹೇಳಿದ ಮಾತ್ರಕ್ಕೆ ಎಲ್ಲಾ ಕನ್ನಡಿಗರ ಮನೆಗಳಲ್ಲೂ ಹೀಗೇ ಇರುತ್ತೆ ಅಂತ ಅಲ್ಲ.  ನಾನು ನೋಡಿರುವ ಸುಮಾರು ಮನೆಗಳಲ್ಲಿ ಈ ಪರಿಸ್ಥಿತಿ ಉಂಟು.  ನಾವು ಮಾಡಬಹುದಾದ ಅಳಿಲು ಸೇವೆ ಏನೆಂದರೆ, ನಮ್ಮ ಸಾಹಿತಿಗಳ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ, ಅವರ ಜೀವನ ಚರಿತ್ರೆಯನ್ನು ಸಂಪದದಲ್ಲಿ ಪ್ರಕಟಿಸುವುದು ಮತ್ತು ಅವರ ಕೃತಿಗಳ ಬಗ್ಗೆ ಸಂಕ್ಷಿಪ್ತವಾಗಿ ಉಲ್ಲೇಖಿಸುವುದು. 

ಕೆಲವು ತಿಂಗಳ ಹಿಂದೆ ನಾನು 'ಬಳ್ಳಾರಿ ಬೀಚಿ' ಎಂದೇ ಪ್ರಸಿದ್ಧರಾಗಿರುವ ಪ್ರಾಣೇಶ್ ಅವರ ಒಂದು ಭಾಷಣವನ್ನು ಕೇಳುತ್ತಿದ್ದಾಗ ನನ್ನ ಸ್ನೇಹಿತರೊಬ್ಬರು 'ಏನು ನೀನು ಕೇಳುತ್ತಿರೋದು' ಅಂತ ಪ್ರಶ್ನೆ ಮಾಡಿದಾಗ ಪ್ರಾಣೇಶ್ ಮತ್ತು ಬೀಚಿಯವರ ಬಗ್ಗೆ ಹೇಳಿದೆ.  ತಕ್ಷಣ ಬಂದ ಮತ್ತೊಂದು ಪ್ಪ್ರಶ್ನೆಯಿಂದ ನನಗೆ ನಿಜವಾಗ್ಲೂ ಆಶ್ಚರ್ಯವಾಯಿತು. ನನ್ನ ಸ್ನೇಹಿತ ಕೇಳಿದ ಪ್ರಶ್ನೆ: ಬೀಚಿ ಅಂದ್ರೆ ಯಾರು?  ನನಗೆ ಭಾರಿ ಸಿಟ್ಟು ಬಂದ್ರೂ ಅದನ್ನ ತೋರಿಸ್ಕೊಳ್ಳದೆ ಬೀಚಿಯವರ ಬಗ್ಗೆ ಆತನಿಗೆ ಹೇಳಿದೆ. 

ಅವತ್ನಿಂದ ನಮ್ಮ ಜನರಲ್ಲಿ ನಮ್ಮ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸಬೇಕೆಂಬ ಹಂಬಲ ಶುರುವಾಗಿದೆ. ಈ ಒಂದು ಜವಾಬ್ದಾರಿ ನಮ್ಮದಾಗಿದೆ.  ಈಗ ನಾವು ಏನಾದ್ರೂ ಪ್ರಯತ್ನ ಮಾಡಿದ್ರೆ ಮಾತ್ರ ನಮ್ಮ ಮುಂದಿನ ಪೀಳಿಗೆಯವರಿಗೆ ನಮ್ಮ ಭಾಷೆ, ನಮ್ಮ ಸಾಹಿತ್ಯ ಮತ್ತು ನಮ್ಮ ಸಾಹಿತಿಗಳ ಕೃತಿಗಳ ಬಗ್ಗೆ ಅರಿವು ಮತ್ತು ಒಲವು ಮೂಡಿಸಲು ಸಾಧ್ಯ. 

ಇಂತಿ,

ರಮೇಶ್.

Rating
No votes yet

Comments