"ನೀಲಿಹಲ್ಲು"

"ನೀಲಿಹಲ್ಲು"

ಬರಹ

ಏನಿದು ಈ ನೀಲಿಹಲ್ಲು ಎಂದು ಆಶ್ಚರ್ಯವಾಗುತ್ತಿರಬಹುದಲ್ಲವೇ??

ಹಲ್ಲು ಎಂದರೆ ಎಲ್ಲರಿಗೂ ತಕ್ಷಣ ಹೊಳೆಯುವುದು ಫಳಫಳನೆ ಹೊಳೆಯುವ ಹಲ್ಲು, ಬೆಳ್ಳಗಿರುವ ಹಲ್ಲು. ಆದರೆ ಕೆಲವರಿಗೆ ಸ್ವಲ್ಪ ಹಳದಿಯಾಗಿರುತ್ತದೆ. ಆ ಬಿಳಿ, ಹಳದಿ ಹಲ್ಲುಗಳ ವಿಚಾರ ಬಿಡಿ (ನಾನೆಲ್ಲಿ ಹಿಡಿದುಕೊಂಡಿದ್ದೇನೆ ಬಿಡುವುದಕ್ಕೆ ಅಂತ ಕೇಳಬೇಡಿ ಮತ್ತೆ).

ನಮ್ಮ ಕಚೇರಿಯಲ್ಲಿ ನನ್ನ ಸಹುದ್ಯೋಗಿಯೊಬ್ಬರು ನನ್ನ ಬಳಿಬಂದು ನನಗೆ ನೀಲಿಹಲ್ಲು ಬೇಕಿದೆ, ಸಿಗತ್ತ ಅಂದರು. ಅದಕ್ಕೆ ನಾನು ನೀಲಿಹಲ್ಲ ಎಂದು ಆಶ್ಚರ್ಯಪಟ್ಟು, ನನ್ನ ಬಳಿಯಂತು ಇಲ್ಲ. ಅಂಗಡಿಯಲ್ಲು ದೊರೆಯುವುದಿಲ್ಲ ಅನ್ಸತ್ತೆ. ಎಲ್ಲಿ ತಯಾರಿ ಮಾಡುತ್ತಾರೋ ನನಗೆ ಗೊತ್ತಿಲ್ಲ. ಒಂದು ಕೆಲಸ ಮಾಡಿ, ನೀವು ನೇರ ದಂತವೈದ್ಯರ ಬಳಿ ಹೋಗಿ ವಿಚಾರಿಸಿ ಎಂದು ವ್ಯಂಗ್ಯವಾಗಲ್ಲದಿದ್ದರೂ ಸ್ವಲ್ಪ ತಮಾಷೆಯಾಗೇ ಉತ್ತರಿಸಿದೆ.

ನನ್ನ ಸಹುದ್ಯೋಗಿಯ ಬಗ್ಗೆ ಸ್ವಲ್ಪ ವಿವರಣೆ ಅಥವಾ ಪರಿಚಯ:

"ಅವರು ಅಪ್ಪಟ ಕನ್ನಡಿಗರು. ಕಚೇರಿಯಲ್ಲು ಎಲ್ಲರ ಹತ್ತಿರ ಕನ್ನಡದಲ್ಲೇ ಮಾತನಾಡೋದು. Technical discussions ಕೂಡ ಕನ್ನಡದಲ್ಲೇ ಮಾಡ್ತಾರೆ. ಯಾರಾದರೂ visitors ಬಂದರೆ ನಮ್ಮ ಕಚೇರಿಗೆ ಅಥವಾ clients ಬಳಿ ಹೋದರೆ ಮಾತ್ರ ಅವರು ಆಂಗ್ಲ ಭಾಷೆ (ಅನಿವಾರ್ಯ ಅನ್ನಿಸಿದಾಗ) ಬಳಸುತ್ತಾರೆ. ಅಕಸ್ಮಾತ್ ಆ visitors ಅಥವಾ clients ಕನ್ನಡದವರು, ಕನ್ನಡ ಬರತ್ತೆ ಅಂತ ಗೊತ್ತಾದ್ರೆ ಅವರ ಹತ್ತಿರ ಕೂಡ ಕನ್ನಡದಲ್ಲೆ ವ್ಯವಹರಿಸುತ್ತಾರೆ (ಹೆಮ್ಮೆ ಪಡಬೇಕು). ಅವರು ಕನ್ನಡದವರೋ ಅಲ್ವೋ ಅಂತ ತಿಳಿದುಕೊಳ್ಳಬೇಕಲ್ಲ, ಅದಕ್ಕೂ ಉಪಾಯ ಹೂಡಿ ತಿಳಿದುಕೊಳ್ಳುತ್ತಾರೆ. ನಂತರ ನನ್ನ ಬಳಿ ಬಂದು ಹೇಳುತ್ತಾರೆ - "ರೀ ಅವರು ಕನ್ನಡದವರು" ಅಂತ. ಇನ್ನು ಕೆಲವರು (ಮಹಾನುಭಾವರು) ಕನ್ನಡ ಬಂದರು ಆಂಗ್ಲದಲ್ಲಿ ಮಾತನಾಡುತ್ತಿರುತ್ತಾರೆ. ಅಂತ ಮಹಾನುಭಾವರ ಬಾಯಿಂದ ಕನ್ನಡ ಹೇಗೆ ಬರಿಸಿಬೇಕು? ಅಂತು ಕನ್ನಡ ಮಾತಾಡುವಂತೆ ಮಾಡೀಯೇಬಿಡುತ್ತಾರೆ".

ಈಗ ನೀಲಿಹಲ್ಲಿನ ವಿಚಾರ: ಹೀಗೆ ಕಚೇರಿಯಲ್ಲಿ ಯಾವುದೋ PCB ಬೋರ್ಡಿನ ಒಂದು ಫೋಟೋ ತೆಗೆಯಬೇಕಿತ್ತು. ತೆಗೆದು client ಗೆ ಕಳುಹಿಸಬೇಕಿತ್ತು. ತಕ್ಷಣಕ್ಕೆ ಹೇಗೆ ತೆಗೆಯೋದು. client ನಮ್ಮ ಕಚೇರಿಗೆ ಬಂದಿದ್ದರು. PCB ಬೋರ್ಡಿನ ಫೋಟೋ ತುರ್ತಾಗಿ ಬೇಕಿತ್ತು. ಮೊಬೈಲ್ ನಿಂದ ಫೋಟೋ ತೆಗೆದು ಅದನ್ನು ನಿಮಗೆ ಈಗಲೇ ಕಳುಹಿಸುತ್ತೇನೆ ಅಂತ ಹೇಳಿ CEO ರೂಮಿನಿಂದ ಹೊರಬಂದಿದ್ದರು. ಸರಿ, ಎಲ್ಲರ ಬಳಿ ನಿಮ್ಮ ಮೊಬೈಲ್ ನಲ್ಲಿ ಕ್ಯಾಮೆರಾ ಇದೆಯಾ, ಇದ್ದರೆ ಎಷ್ಟು megapixel ಅಂತ ವಿಚಾರಿಸುತ್ತಿದ್ದರು. ಇದ್ದರೆ, ಕೊಡಿ ಫೋಟೋ ತೆಗೆದು ಅದನ್ನು "bluetooth" ಮುಖೇನ ಕಳುಹಿಸಬೇಕು ಅಂತ ಹೇಳಿದ್ದರೆ ಎಲ್ಲರಿಗೂ ಅರ್ಥವಾಗಿರುತ್ತಿತ್ತು. ಆದರೆ, ಅವರು ನೀಲಿಹಲ್ಲಿನ ಮುಖೇನ ಆ ಫೋಟೋ ಕಳುಹಿಸಬೇಕು ಅಂತ ಹೇಳುತ್ತ ಬಂದರು. ಸ್ವಲ್ಪ ಮಂದಿ ಗೊಂದಲಗೊಂಡು ನಮ್ಮ ಬಳಿ ನೀಲಿಹಲ್ಲು ಇಲ್ಲ, ಬಿಳಿಹಲ್ಲು ಇಲ್ಲ ಅಂದರು. ಹೀಗೆ ನನ್ನ ಬಳಿ ಬಂದರು. ರೀ, ನಿಮ್ಮ ಹತ್ತಿರ ಇರೋದು "ಭಾವಚಿತ್ರ ತೆಗೆಯುವ ಸಂಚಾರಿದೂರವಾಣಿ" ಅಲ್ವ. ಅದರಲ್ಲಿ ನೀಲಿಹಲ್ಲು ಇರಬೇಕಲ್ಲ. ಇದ್ದರೆ, ಕೊಡಿ ಎಂದರು. ಸ್ವಲ್ಪ ಯೋಚಿಸಿ ನಾನು "ಭಾವಚಿತ್ರ ತೆಗೆಯುವ ಸಂಚಾರಿದೂರವಾಣಿ" ಅಂದರೆ camera mobile ಇರಬಹುದು, ನೀಲಿಹಲ್ಲು ಎಂದರೆ ಏನು?? ಕೊನೆಗೆ ಅವರೇ ಹೇಳಿದರು. ರೀ ನೀಲಿಹಲ್ಲು ಅಂದರೆ:
ನೀಲಿ - blue
ಹಲ್ಲು - tooth

ಆಂಗ್ಲ bluetooth ಅನ್ನು ಕನ್ನಡಕ್ಕೆ ಅನುವಾದ ಮಾಡಿ "ನೀಲಿಹಲ್ಲು" ಎಂದರ್ಥ ಅಲ್ಲವೇ ಎಂದರು

ಕೊನಗೆ ನಾನು, ಅಬ್ಬ! ಎಷ್ಟೊಂದು ಗೊಂದಲ ಮಾಡಿಬಿಟ್ರಿ ನೀವು. ಅದನ್ನೇ bluetooth ಅಂತ ಹೇಳೋದಲ್ವ ಅಂತ ಹೇಳಿ ನನ್ನ ಮೊಬೈಲ್ ಅವರಿಗೆ ಕೊಟ್ಟೆ.

ಅಯ್ಯೋ ಅಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಕನ್ನಡದ ನೀಲಿಹಲ್ಲಿನ ಪದವನ್ನು ಅರ್ಥಮಾಡಿಕೊಳ್ಳದೇ ಹೋದೆನೆಲ್ಲ ಎಂದು ಯೋಚಿಸಿ ಸುಮ್ಮನಾದೆ.