"ಸಾಂಗತ್ಯ" ವೆಂಬ ಆಸಕ್ತರ ಸಮೂಹ

"ಸಾಂಗತ್ಯ" ವೆಂಬ ಆಸಕ್ತರ ಸಮೂಹ

ಬರಹ

ಒಂದು ಖುಷಿಯನ್ನು ಹಂಚಿಕೊಳ್ಳಲು ಕಾರಣ ಬೇಕಿಲ್ಲ. ಖುಷಿಯಾಗಿದೆ, ಅದಕ್ಕೇ ಹಂಚಿಕೊಳ್ಳುತ್ತಿದ್ದೇನೆ ಎಂದರಷ್ಟೇ ಸಾಕು. ಹಾಗೆಯೇ "ಸಾಂಗತ್ಯ’ ಹೊಸದೊಂದು ಬ್ಲಾಗ್. ಇತ್ತೀಚೆಗಷ್ಟೇ ಆರಂಭವಾದದ್ದು.

ಒಂದಿಷ್ಟು ಆಸಕ್ತರು ಸೇರಿಕೊಂಡು ಕುಪ್ಪಳ್ಳಿಯಲ್ಲಿ ಎರಡು ದಿನಗಳ ಚಿತ್ರೋತ್ಸವ ನಡೆಸಿದರು. ಆ ಆಸಕ್ತರಲ್ಲಿ ನಾನೂ ಒಬ್ಬ. ಎರಡೂ ದಿನವಿಡೀ ಎಂಟು ಸಿನಿಮಾಗಳನ್ನು ನೋಡಿ ಅದರ ಬಗ್ಗೆಯೇ ಚರ್ಚಿಸಿದೆವು. ಉಪನ್ಯಾಸವಾಗಲೀ, ಭಾಷಣವಾಗಲೀ ಯಾವುದೂ ಇರಲಿಲ್ಲ. ಒಟ್ಟೂ ಸಂಭ್ರಮದಿಂದ ಸಿನಿಮಾ ನೋಡಿ ಅದನ್ನು ಚರ್ಚಿಸುವ ಮೂಲಕವೇ ಸಿನಿಮಾ ನೋಡುವ ಬಗೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಸಾಂಗತ್ಯದ್ದು.

ಸಿನಿತಜ್ಞ ಪರಮೇಶ್ ಗುರುಸ್ವಾಮಿಯವರು ಭಾಗವಹಿಸಿ ಮಾರ್ಗದರ್ಶನ ನೀಡಿದರು. ಸಿನಿಮಾ ಬಗ್ಗೆ ಬಹಳ ತಿಳಿದುಕೊಂಡಿರುವ ಎಲೆಮರೆಯ ಕಾಯಿ ಪರಮೇಶ್. ಸಿನಿಮಾ ನೋಡುವ ಬಗೆ, ತಾಂತ್ರಿಕ ಅಂಶಗಳ ಬಗ್ಗೆ ವಿವರ ಕೊಟ್ಟಿದ್ದು ನಮ್ಮ ದೃಷ್ಟಿಯನ್ನೇ ಬದಲಿಸಿತು.

ಹೀಗೇ ಚಿತ್ರೋತ್ಸವ ಮುಗಿಯುವ ಹಂತಕ್ಕೆ ಬಂದಾಗ, ಇಲ್ಲಿ ಅರ್ಥಮಾಡಿಕೊಂಡಿದ್ದು, ಕಲಿತದ್ದರ ಮುಂದುವರಿಕೆಗೆ ವೇದಿಕೆ ಬೇಕೆನಿಸಿ ಸುಮ್ಮನೆ ಆರಂಭಿಸಿದ್ದು ಈ ಬ್ಲಾಗ್. ಅದರೆ ಕೆಲವೇ ದಿನಗಳಲ್ಲಿ ಅದು ವಿಭಿನ್ನವಾಗಿ ಬೆಳೆಯುತ್ತಿದೆ. ಸಾಂಗತ್ಯದ ಬಳಗವೂ ದೊಡ್ಡದಾಗುತ್ತಿದೆ. ಸಿನಿಮಾಸಕ್ತರಿಗೆ ಒಂದು ಒಳ್ಳೆಯ ವೇದಿಕೆಯಾಗಿಯೂ ರೂಪುಗೊಳ್ಳುತ್ತಿದೆ.

ಸ್ಲಂಡಾಗ್ ಮಿಲಿನಿಯೇರ್ ಕುರಿತು ಅತ್ಯುತ್ತಮ ಚರ್ಚೆ ನಡೆಸಿದ ಬ್ಲಾಗ್ ನಲ್ಲಿ ೧೩ ಮಂದಿ ವಿಭಿನ್ನ ನೆಲೆಗಳಲ್ಲಿ ಸಿನಿಮಾವನ್ನು ವಿಶ್ಲೇಷಿಸಿದರು. ನಂತರ ಮಧುರ್ ಭಂಡಾರ್ಕರ್ ಬಗ್ಗೆ ಉತ್ಸವ ನಡೆದಿದೆ. ಮಧುರ್ ಭಂಡಾರ್ಕರ್ ಆಧುನಿಕ ಸಂದರ್ಭದ ತಲ್ಲಣಗಳನ್ನು, ಸಂಗತಿಗಳನ್ನು ಕಥಾವಸ್ತುವನ್ನಾಗಿಸಿಕೊಂಡು ಚಿತ್ರ ಮಾಡುವಾತ. ಒಬ್ಬ ಒಳ್ಳೆಯ ನಿರ್ದೇಶಕ. ಈ ಹಿನ್ನೆಲೆಯಲ್ಲಿ ಅವನ ಸಿನಿಮಾಗಳನ್ನು ಕುರಿತು ಚರ್ಚಿಸುತ್ತಲೇ ಅವನ ಪರಿಕಲ್ಪನೆ, ಸಾಮರ್ಥ್ಯ ಎಲ್ಲವನ್ನೂ ಚರ್ಚಿಸುವುದು ಉತ್ಸವದ ಉದ್ದೇಶ. ಅದೀಗ ಅಂತ್ಯದ ಹಂತಕ್ಕೆ ಬಂದಿದೆ.

ಈಗ ಕನ್ನಡ ಚಿತ್ರೋತ್ಸವಕ್ಕೆ ಸಜ್ಜಾಗುತ್ತಿದೆ. ಯಾರ ಬಗ್ಗೆ ಆರಂಭಿಸುವುದು ? ಪುಟ್ಟಣ್ಣ ಕಣಗಾಲ್, ಶಂಕರನಾಗ್, ತೇಜಸ್ವಿಯವರ ಕಥೆಗಳ ಸಿನಿಮಾ...ಹೀಗೆ ಯಾವ ಜಾಡು ಹಿಡಿದು ಗಿರಿಯನ್ನು ಮುಟ್ಟುವುದು ಎಂಬ ಜಿಜ್ಞಾಸೆ ಅದರಲ್ಲೀಗ ಆರಂಭವಾಗಿದೆ.

ನನಗೆ ಬಹಳ ಅನ್ನಿಸುವ ಸಂಗತಿಯೆಂದರೆ ಒಂದು. ಸಿನಿಮಾ ನಿಜವಾಗಲೂ ನಮಗೆ ಹೊಸ ಮಾಧ್ಯಮ. ಅದನ್ನು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಈಗದ್ದು. ಕಾರಣವಿಷ್ಟೇ. ನಮ್ಮ ಮುಂದಿನ ತಲೆಮಾರಿಗೆ ಅತ್ಯಂತ ದೊಡ್ಡ ಮನರಂಜನಾ ಮಾಧ್ಯಮವಾಗಿ ಕೈಗೆಟುಕುವಂಥದ್ದು. 1990 ರಲ್ಲಿ ಟಿವಿಯಲ್ಲಿ ಒಂದು ಕನ್ನಡ ಸಿನಿಮಾ ಕಾಣಲು ಆರು ತಿಂಗಳು ಕಾಯಬೇಕಿತ್ತು. ದಿಲ್ಲಿಯವರ ಕೃಪೆಯಿಂದ ಬಂದರೆ ಬಂದೀತು. ಇಂದು ಹಾಗಿಲ್ಲ. ಉಪಗ್ರಹ ವಾಹಿನಿ ಮನೆಯೊಳಗೆ ಬಂದು ಕುಳಿತಿದೆ.

ಈಗ ನಾವು ಆ ಮಾಧ್ಯಮದ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತಾ ಹೊಸ ತಲೆಮಾರಿಗೆ ಪರಿಚಯಿಸುತ್ತಾ ಹೋದರೆ ಅವರೂ ಆ ಮಾಧ್ಯಮವನ್ನು ಹೆಚ್ಚು ಅರ್ಥಪೂರ್ಣಗೊಳಿಸಿಕೊಂಡಾರು ಎಂಬ ನಂಬಿಕೆ ನನ್ನದು. ಈ ದಿಸೆಯಿಂದಲೇ ಕನ್ನಡದಲ್ಲಿ ಜಗತ್ತಿನ ಚೆಂದದ ಸಿನಿಮಾಗಳ ಕುರಿತ ಮಾಹಿತಿ ನೀಡುವ, ಅನಿಸಿಕೆಯನ್ನು ಹಂಚಿಕೊಳ್ಳುವ (ಕೆಲವು ಬ್ಲಾಗಿಗರು ಅವರವರ ಬ್ಲಾಗುಗಳಲ್ಲಿ ಒಳ್ಳೆ ಸಿನಿಮಾಗಳ ಬಗ್ಗೆ ಬರೆದುಕೊಳ್ಳುವವರಿದ್ದಾರೆ) ಬ್ಲಾಗುಗಳಿಲ್ಲ. ಆ ದಿಸೆಯಲ್ಲಿ ಆರಂಭವಾದ ಸಾಂಗತ್ಯ ಕಂಡರೆ ಒಂದಿಷ್ಟು ಖುಷಿ, ಅದರ ಬೆಳವಣಿಗೆ ಕಂಡರೆ ಮತ್ತಷ್ಟು ಖುಷಿ. ಬೇರೆ ಬೇರೆ ವಿಭಾಗಗಳ ಮೂಲಕ ಕನ್ನಡದಲ್ಲಿನ ಜಗತ್ತಿನ ಚಿತ್ರಗಳ ಮಾಹಿತಿಕೋಶವಾಗಲು ಹೊರಟಿರುವ ಸಾಂಗತ್ಯದ ಗುಂಪಿನಲ್ಲಿ ನಾನೂ ಒಬ್ಬ ಎನ್ನುವುದಕ್ಕೆ ನಿಜಕ್ಕೂ ಖುಷಿ.

ಮತ್ತೊಂದು ಸಂತಸದ ಸಂಗತಿ. ಸಾಂಗತ್ಯ ಇಂಗ್ಲಿಷ್ ನಲ್ಲಿ ಬರೆಯುವವರಿಗೂ ಅವಕಾಶ ನೀಡಲೆಂದು ಇಂಗ್ಲಿಷ್ ಬ್ಲಾಗ್ ನ್ನು ಆರಂಭಿಸಿದೆ. ಅದಕ್ಕೀಗ ಕಸುವು ತುಂಬುವ ಕೆಲಸವನ್ನು ಆಸಕ್ತರೆಲ್ಲರೂ ಮಾಡಬೇಕು. ಹಾಗಾಗಿ ಒಮ್ಮೆ ಅಲ್ಲಿಗೆ ಭೇಟಿಕೊಡಿ(www.saangatya.wordpress.com)ಬೆಂಬಲಿಸಿ, ಸಮೂಹಕ್ಕೆ ಸೇರಿ. ಗೆಳೆಯರಿಗೆ ಹೇಳಿ.