ಮಾಘೇ ಮೇಘೇ ಗತಂ ವಯಃ

ಮಾಘೇ ಮೇಘೇ ಗತಂ ವಯಃ

ಮಾನ್ಸೂನು ಕೇರಳಕ್ಕೆ ಆಗಮಿಸಿದೆ . ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇಲ್ಲಿ ಮುಂಬೈಯಲ್ಲಿ ಮಾನ್ಸೂನಿನ ಮುನ್ಸೂಚನೆಯಾಗಿ ಇವತ್ತು ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣವಿದೆ. ಯಥಾ ಪ್ರಕಾರ ಇರುವ ಧಗೆಯೂ ಹೆಚ್ಚಾಗಿದೆ. ಟೀವಿಯಲ್ಲಿ ಸಂಗೀತದ ಚ್ಯಾನೆಲ್ಲುಗಳೆಲ್ಲವೂ ಮೋಡ, ಮಳೆ, ಗಾಳಿಯ ಹಾಡುಗಳನ್ನು ಹೊರತೆಗೆದಿವೆ. ನಾನೂ ಕೂಡ ಕಾಳಿದಾಸನ ಮೇಘದೂತವನ್ನು ಹೊರತೆಗೆದೆ. ನೂರಿಪ್ಪತ್ತು ಪದ್ಯಗಳು ಇಲ್ಲಿವೆ . ಕಛೇರಿಗೆ ಬರುವ ದಾರಿಯಲ್ಲಿ ಓದತೊಡಗಿದೆ. ಸುಮಾರು ೧೦ ಪದ್ಯ ; ಮೂಲ ; ಭಾವಾನುವಾದ; ವಿವರಣೆ ಓದಲಿಕ್ಕೆ ಸಾಧ್ಯವಾಯಿತು. ಅಲ್ಲಿ ಈ ವಾಕ್ಯವೂ ಸಿಕ್ಕಿತು. "ಮಾಘೇ ಮೇಘೇ ಗತಂ ವಯಃ" . ಅಂದರೆ ಮಾಘ ಕವಿಯ ಕಾವ್ಯ ಮತ್ತು ಮೇಘದೂತ ಕಾವ್ಯ ಓದುವದರಲ್ಲಿ ನನ್ನ ಆಯುಷ್ಯವನ್ನು ಕಳೆದೆ ಎಂದರ್ಥ.ಇದು ಸಾರ್ಥಕ್ಯದ , ತೃಪ್ತಿಯ ಮಾತು.
ನಿನ್ನೆ ನಮ್ಮ ಮೇಲಧಿಕಾರಿ ' ಈಗ ಏನು ಮಾಡ್ತ ಇದ್ದೀರಿ?' ಅಂತ ಕೇಳಿದರು. ' ಮೇಘದೂತ ಓದ್ತಾ ಇದ್ದೀನಿ' ಅಂತ ಹೇಳಿದರೆ ಹೇಗಿರುತ್ತದೆ ? ( ಪ್ರಸಿದ್ಧ ಹಾಸ್ಯ ಸಾಹಿತಿ ಕೇ.ಫ ಅವರ ' ಶೌರಿ ಬಂದ' ದಲ್ಲಿ ಶೌರಿಯನ್ನು ಪರಿಚಯಿಸುವದು ಹೀಗೆ . ನಿರೂಪಕನಿಗೆ ಡಾಕ್ಟರ್ ಗೆಳೆಯನಲ್ಲಿ ಕಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ ಶೌರಿಯ ಪರಿಚಯ ಇದೆ. ಗೆಳೆಯ ವಿದೇಶಕ್ಕೆ ಹೋಗಿರುವದರಿಂದ ಶೌರಿ ಕೆಲಸ ಕಳೆದುಕೊಂಡಿದ್ದಾನೆ. ಕೆಲ ದಿನಗಳ ನಂತರ ದಾರಿಯಲ್ಲಿ ನಿರೂಪಕರಿಗೆ ಶೌರಿಯ ಭೆಟ್ಟಿಯಾಗುತ್ತದೆ. 'ಈಗ ಏನು ಮಾಡ್ತಿದ್ದೀಯಾಪ್ಪ ?' ಎಂದು ಕೇಳುತ್ತಾರೆ. ಆಗ ಶೌರಿ ಏನು ಹೇಳುತ್ತಾನೆ ಗೊತ್ತೆ? ....
....
....
' ವಾರ್ ಅಂಡ್ ಪೀಸ್ ಮುಗಿಸಿದ್ದೇನೆ. ಸಾರ್ , ಈಗ ಅನ್ನಾ ಕರೀನ ಓದ್ತಿದ್ದೇನೆ' ಅಂತಾನೆ! ' ಅಲ್ಲಪ್ಪ , ಹೊಟ್ಟೆಗೆ ಏನು ಮಾದ್ತಿದ್ದೀಯಾ ?' ಅಂತ ನಿರೂಪಕರು ಕೇಳಬೇಕಾಗುತ್ತದೆ. )

Rating
No votes yet