ಜಾತಿ ಪಂಗಡದ ಚೌಕಟ್ಟು

ಜಾತಿ ಪಂಗಡದ ಚೌಕಟ್ಟು

ಬರಹ

ಕುರಿ ಮೇಯಿಸುತ್ತ ಬಂದವನಿಗೆ, ರೋಡಿನ ಇಬ್ಬದಿ ಹಾಕಿಸಿರುವ ಗಿಡಗಳ ಬಗ್ಗೆ "ಹುಷಾರಪ್ಪ, ಅದನ್ನೂ ಮೇದು ಹೋದಾವು ಕುರಿಗಳು" ಎಂದರೆ ಅವನಿಗೆ ಅದರಲ್ಲಿ ಜಾತಿ ಕಾಣುತ್ತದೆ. ಮಹಡಿಯ ಮೇಲೆ ನಿಂತು ಕೂಗಿ ಹೇಳಿದವನ 'ಎದುರಿಗೆ ಕಾಣುವ' ಅಂತಸ್ತು ಕಾಣುತ್ತದೆ. ಆದರೆ ಆ ಗಿಡಗಳು ಎಲ್ಲರಿಗೂ ಎಷ್ಟು ಮುಖ್ಯ, ಅವು ತನ್ನದೂ ಸ್ವತ್ತು, ಅವುಗಳನ್ನು ಬೆಳೆಸುವುದು ತನ್ನದೂ ಜವಾಬ್ದಾರಿ ಎಂದು ಅನ್ನಿಸುವುದಿಲ್ಲ. ಜಾತಿ ಪಂಗಡದ ಚೌಕಟ್ಟು ಬಂದು ಕುಳಿತುಕೊಳ್ಳುವುದು ಹೀಗೆ. ಕೂಗಿ ಹೇಳುತ್ತಿರುವವನಿಗೆ ತಾನು ಬ್ರಾಹ್ಮಣನೋ, ಲಿಂಗಾಯತನೋ, ಅಥವ so called "ಮೇಲ್ಜಾತಿ"ಯವನೋ ಎಂದು ಅರಿವಾಗುವುದೂ ಕುರಿ ಮೇಯಿಸುವವ ಜಾತಿಯ ಹೆಸರು ಹಿಡಿದು ಏಕವಚನದಲ್ಲಿ ಗುರುಗುಟ್ಟಿ ಸಿಟ್ಟಿನಲ್ಲಿ ಹರಿಹಾಯ್ದು ಹೋದಮೇಲೇನೆ. ಆ ಕ್ಷಣದ ವಿವೇಚನೆಯಲ್ಲಿ ಅವರವರಿಗೆ "ರೋಡು ಸುತ್ತ ಮರಗಳು ಬೆಳೆಯಲೂ ಬಿಡೋದಿಲ್ವಲ್ಲ" ಎಂಬ ತನ್ನರಿವಿನ ಕಾಳಜಿ, "ಕುರಿ ಸರಕಾರದ ರೋಡಿನಲ್ಲಿ ಮೇಯಿಸಿದರೂ ಮಾತು" ಎಂಬುದೂ ತನ್ನರಿವಿನ ಚೌಕಟ್ಟಿನ ಕಾಳಜಿಯೇ.

ಅವರವರ ಅರಿವಿನ ಚೌಕಟ್ಟು, ಅವರವರು ಹಾಕಿಕೊಂಡ ಜಾತಿಯ ಚೌಕಟ್ಟು, ಅವರವರು ಬೆಳೆದು ಬಂದ ಪರಿಸರದಲ್ಲಿ ಜಾತಿ, ವರ್ಗ, ಪಂಗಡಗಳ ಪ್ರಭಾವ ಎಷ್ಟೆಷ್ಟು ಬೀರಿ ಏನೆಲ್ಲ ಬೇಸರ, ಅನಾಹುತಗಳಿಗೆ ಈಡು ಮಾಡಿತ್ತು - ಇದೆಲ್ಲದರ ಮೇಲೆ ಅವರವರ ಕಾಳಜಿ, ಮನಸ್ಸು, ಮುಕ್ತವಾಗಿ ಆಲೋಚಿಸುವ ಶಕ್ತಿ ಎಲ್ಲವೂ ರೂಪುಗೊಂಡಿರುತ್ತದೆ.

ಬೆಳೆಯುತ್ತಿರುವ ಮರಗಳು ಕುರಿ ಮೇಕೆಗಳ ಬಾಯಿಗೆ ಸಿಕ್ಕು ಬರಡಾದರೆ ಮತ್ತೆ ಚಿಗುರಾವು. ಆದರೆ ನಮ್ಮ ಸಮಾಜದ ಪರಿಸ್ಥಿತಿ ಜಾತಿ, ವರ್ಗ, ಪಂಗಡಗಳ ಸೂಕ್ಷ್ಮ ರೇಖೆಯೊಳಗೆ ಸಿಲುಕಿ ನಲುಗುವಾಗ ನಿಜವಾಗಲೂ ಗಂಭೀರವಾದ ವಿಷಯಗಳ ಕುರಿತು, ಭವಿಷ್ಯವನ್ನೇ ರೂಪಿಸಬಲ್ಲ ಗುರುತರ ವಿಷಯಗಳ ಕುರಿತು practical ಆಗಿ ಆಲೋಚಿಸಲು, ಅಥವ ಆಲೋಚಿಸಿದರೆ ಅದನ್ನು ಅನುಷ್ಟಾನಕ್ಕೆ ತರಲು ಅನುವು ಮಾಡಿಕೊಡುವುದೆ? ಒಂದೊಮ್ಮೆ ಮಾಡಿಕೊಟ್ಟರೆ ಅದನ್ನು ಇದು ಎಷ್ಟು ಕ್ಲಿಷ್ಟವಾಗಿಸೀತು? ಒಂದೊಮ್ಮೆ ಅನುವು ಮಾಡಿಕೊಡದಿದ್ದಲ್ಲಿ ಆತಂಕವಾದದ ಅಸ್ಥಿತ್ವವನ್ನೇ ಅಲ್ಲಗಳೆಯುತ್ತ ತನಗೇ ಕೊಳ್ಳಿ ಇಟ್ಟುಕೊಂಡ ಮತಾಂಧ ಪಾಕಿಸ್ತಾನದಂತೆ ನಮ್ಮ ಸಮಾಜವೂ ಕೊಳ್ಳಿ ಇಟ್ಟುಕೊಳ್ಳುವುದೇ? ಈ ಚೌಕಟ್ಟಿನಿಂದ ನಾವೆಲ್ಲರೂ ಆಚೆ ಬಂದು ನಮಗೆ ನಾವೇ ಇಟ್ಟುಕೊಳ್ಳಬಹುದಾದ ಕೊಳ್ಳಿಯಿಂದ ಆಚೆ ಬರಬಹುದೆ? ಬರಬಹುದಾದರೆ ಹೇಗೆ?