ಮುಂಬೈಯಲ್ಲಿ ಮತ್ತೆ ಮಹಾಮಳೆ? ಶಿವಪಾರ್ವತಿಯರ ಸೋಲು !

ಮುಂಬೈಯಲ್ಲಿ ಮತ್ತೆ ಮಹಾಮಳೆ? ಶಿವಪಾರ್ವತಿಯರ ಸೋಲು !

ಟೀವಿಯಲ್ಲಿ ಮಹಾಭಾರತ ಧಾರಾವಾಹಿಯೊಂದಿಗೆ 'ಮಹಾ' ಶಬ್ದ ಹೆಚ್ಚು ಚಲಾವಣೆಗೆ ಬಂದಿತು . ಮಹಾಚುನಾವಣೆ ....ಇತ್ಯಾದಿ. ಹೋದ ವರುಷದ ಮುಂಬೈ ಮತ್ತು ಬೆಂಗಳೂರಿನ ಮಳೆಯ ಹಾವಳಿ ನಂತರ 'ಮಹಾಮಳೆ' ಶಬ್ದವೂ ಸೃಷ್ಟಿಯಾಯಿತು.
ಮುಂಬೈಗೆ ನಿನ್ನೆ ಮಾನ್ಸೂನು ಆಗಮಿಸಿತು . ರಾತ್ರಿ ಬಹಳ ಮಳೆ ಆಯಿತು, ಮಧ್ಯಾಹ್ನ ಕೂಡ ಆಯಿತು. ಮೊಬೈಲುಗಳಲ್ಲಿ ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬಹಳ ಮಳೆಯಾಗಲಿದೆ ಎಂಬ ಎಚ್ಚರಿಕೆ ಸಂದೇಶಗಳು ಹರಿದಾಡಿದವು. ನಾನು ಕಚೇರಿಯಿಂದ ಹೆಂಡತಿಗೆ ಫೋನ್ ಮಾಡಿ ಕೇಳಿದೆ ಏನು ಸುದ್ದಿ ? ಎಂದು . ಟೀವಿಯಲ್ಲಿ ಸತತ ವಾರ್ತೆಯ ವಾಹಿನಿಗಳಿಂದ ಏನಾದರೂ ಸುದ್ದಿ ಸಿಗುವದೇನೋ ಎಂದು .
ಅವಳು ಹೇಳಿದಳು ' ಹೌದು ; ಹೋದ ವರುಷದ ಹಾಗೆಯೇ ಈ ಸಲವೂ ಮಳೆಯಾಗುವದು'
'ಯಾರು ಹೇಳಿದರು ? ಯಾವ ಚಾನೆಲ್‍ನಲ್ಲಿ? '
' ಟೀವಿಯಲ್ಲಿ ಅಲ್ರೀ? ಕೆಲಸದವಳು ಹೇಳಿದಳು. - ಹಾಂ ಹಾಂ ಭಾಭೀಜಿ , ಐಸಾ ಹಿ ಹೋನೆವಾಲಾ ಹೈ- ಅಂತ '
' ಅವಳಿಗೆ ಯಾರು ಹೇಳಿದರಂತೆ? '
' ಅವಳಿರೋ ಜೋಪಡಪಟ್ಟಿಯಲ್ಲಿ ಎಲ್ಲರೂ ಹೇಳುತ್ತಿದ್ದಾರಂತೆ'

ನೋಡಿದಿರಾ ? ಬಹುಶ: ಅವರಿಗೇ ಹೆಚ್ಚಿಗೆ ಗೊತ್ತೋ ಏನೋ? ನಮ್ಮ ಹವಾಮಾನ ಇಲಾಖೆಯವರಿಗಿಂತ? ಅವರಿಗೆ ನೆಲಕ್ಕೆ ಕಿವಿ ಇರುತ್ತೇನೋ ?

ಇವತ್ತೇ ಮುಂಜಾನೆ ಒಂದು ಜನಪದ ಕಥೆ ಓದಿದೆ. ( ಮುಂಬೈಯಲ್ಲಿರುವ ಭಾರತೀಯ ಸಾಹಿತ್ಯ ಅಕಾಡೆಮಿಯಲ್ಲಿ ಮೊನ್ನೆ ಖರೀದಿ ಮಾಡಿದ ಕನ್ನಡ ಪುಸ್ತಕಗಳಲ್ಲಿ ಒಂದಾದ ' ಉತ್ತರ ಕರ್ನಾಟಕದ ಜನಪದ ಕಥೆಗಳು' ಪುಸ್ತಕದಲ್ಲಿ) ಕತೆಯ ಹೆಸರು - ಶಿವಪಾರ್ವತಿಯರ ಸೋಲು .

ಕಥೆ ಸಂಕ್ಷೇಪದಲ್ಲಿ ಹೀಗಿದೆ . ಒಬ್ಬ ಕುರುಬ ಒಂದು ಹಳ್ಳದ ದಂಡೆಯಲ್ಲಿ ಕುರಿಗಳಿಗೆ ವಸತಿಯನ್ನೇರ್ಪಡಿಸ ತೊಡಗುತ್ತಾನೆ.ಅಲ್ಲಿ ಶಿವಪಾರ್ವತಿ ಬಂದು " ಇಲ್ಲೇಕೆ? ಮಳೆ ಆಗಿಬಿಟ್ಟರೆ ಹಳ್ಳಕೊಳ್ಳ ತುಂಬಿ ಬರುವದಿಲ್ಲವೇ? " ಎಂದು ಕೇಳುತ್ತಾರೆ .
"ಮಳೆ ಹೋಯಿತು ತನ್ನ ನಾಡಿಗೆ ಮೂರು ತಿಂಗಳು" ಕುರುಬ ಬೀರ ಹೇಳುವ.
ಶಿವಪಾರ್ವತಿಯರು ಅಲ್ಲಿಂದ ವರುಣನ ಹತ್ತಿರ ಹೋಗಿ 'ಈಗಲೇ ಮಳೆರಾಯನನ್ನು ಕಳಿಸಿಕೊಡು ' ಎಂದರೆ ' ಮಳೆರಾಯನನ್ನು ಬೇರೆ ನಾಡಿಗೆ ಕಳಿಸಿದ್ದೇನೆ , ಅವನು ಬರುವದು ಮೂರು ತಿಂಗಳ ಬಳಿಕ ' ಎನ್ನುವ.ಶಿವಪಾರ್ವತಿಯರ ಮುಖಗಳು ಬಾಡಿ ಕೈಲಾಸಕ್ಕೆ ವಾಪಸು ಹೋದರು.
ಕುರುಬ , ಕುರಿ ಹಾಯಾಗಿ ಅಲ್ಲಿ ಮೂರು ತಿಂಗಳು ಕಳೆದರು.
ಆಗ ಶಿವಪಾರ್ವತಿಯರು ಮತ್ತೆ ಅಲ್ಲಿ ಬಂದರು. ಬೀರ ತನ್ನ ವಸತಿಯನ್ನು ಕೀಳುತ್ತಿದ್ದಾನೆ. ಶಿವಪಾರ್ವತಿಯರು ಅವನನ್ನು ಏಕೆಂದು ಕೇಳುತ್ತಾರೆ.
'ಮಳೆರಾಯ ಬರುವನಲ್ಲವೇ ನಮ್ಮ ನಾಡಿಗೆ ಈಗ?' ಬೀರನ ಮರುನುಡಿ.
ಶಿವಪಾರ್ವತಿಯರು 'ಬೀರನಿಗೆ ಎಷ್ಟು ಸೊಕ್ಕು ? ಮಳೆ ಬರುವದೆಂದು ಏತರ ಮೇಲಿಂದ ಖಚಿತವಾಗಿ ಹೇಳುತ್ತಾನೆ?' ಎಂದು ಅಂದುಕೊಂಡು ವರುಣನ ಬಳಿಗೆ ಹೋಗಿ ಹೇಳುತ್ತಾರೆ. ' ಮಳೆರಾಯನನ್ನು ಮರಳಿ ಕರೆಸು'
ವರುಣ ಬಿನ್ನಯಿಸಿದನು -' ಆ ಹೊತ್ತು ನೀವು ಹೇಳಿದಂತೆ ಅವನನ್ನು ಇವತ್ತೇ ಅತ್ತ ಕಡೆ ಕಳಿಸಿದ್ದೇನೆ. ಮೋಡಗಳು ಮುಂದೆ ಮುಂದೆ , ಸಿಡಿಲು, ಮಿಂಚುಗಳು ಹಿಂದೆ ಹಿಂದೆ ಹೋಗಿವೆ. ನನ್ನ ಕೈಯಲ್ಲಿ ಏನಿದೆ? ಕೊಟ್ಟ ಹುಕುಮು ಅವರ ಕೈಯಲ್ಲಿದೆ. '
ಆ ಮಾತು ಕೇಳಿ ಶಿವಪಾರ್ವತಿಯರು ಅಂದುಕೊಂಡರು - ನಾವಿಂದು ಕುರುಬನಿಗೆ ಸೋತೆವು'

Rating
No votes yet

Comments