" ಕನ್ನಡ ಚಿತ್ರರಂಗದ ಕಾಯಿಲೆ ವಾಸಿಯಾಗಿರುವಾಗ ಡಬ್ಬಿಂಗ್ ಬೇಡವೆಂಬ ನೀತಿಯ ಔಷದಿ ಇನ್ನೂ ಏಕೆ?"

" ಕನ್ನಡ ಚಿತ್ರರಂಗದ ಕಾಯಿಲೆ ವಾಸಿಯಾಗಿರುವಾಗ ಡಬ್ಬಿಂಗ್ ಬೇಡವೆಂಬ ನೀತಿಯ ಔಷದಿ ಇನ್ನೂ ಏಕೆ?"

ಬರಹ

ಕನ್ನಡಿಗರ ಬದುಕಿನ ಜತೆ-ಜತೆಗೆ ಹಾಸುಹೊಕ್ಕಾಗಿರುವ ಕನ್ನಡ ಚಿತ್ರೋದ್ಯಮಕ್ಕೆ ಎಪ್ಪತ್ತೈದು ವರ್ಷ ತುಂಬಿದೆ . ಈ ಸಂಭ್ರಮಾಚರಣೆಗೆ ಕಾರಣರಾದ ಕನ್ನಡ ಚಲನಚಿತ್ರೋದ್ಯಮದ ಎಲ್ಲರಿಗೂ ಶುಭ ಹಾರೈಕೆಗಳು. ಸಿನಿಮಾ ಅತ್ಯಂತ ಪ್ರಭಾವಿ ಮಾಧ್ಯಮಗಳಲ್ಲಿ ಒಂದಾಗಿದ್ದು ನಾಡಿನ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವುದಷ್ಟೇ ಅಲ್ಲದೆ ರೂಪಿಸುವುದರಲ್ಲೂ ಪರಿಣಾಮಕಾರಿ. ಇಂತಹ ಪ್ರಭಾವಶಾಲಿ ಮಾಧ್ಯಮದಲ್ಲಿ ಹಿಡಿತ ಕಳೆದುಕೊಳ್ಳುವುದು ಒಂದು ಭಾಷಾ ಸಮುದಾಯಕ್ಕೆ ಆತ್ಮಘಾತುಕ. ೧೯೪೦-೧೯೬೦ ರ ನಡುವಿನಲ್ಲಿ ಕನ್ನಡ ಸಿನಿಮಾಗಳ ನಿರ್ಮಾಣವೇ ವಿರಳವಾಗಿತ್ತು. ಅಂದಿನ ಚಲನಚಿತ್ರ ನಿರ್ಮಾಣ ಸಂಸ್ಥೆಗಳೂ ಪರಭಾಷೆಯವರದೇ ಆಗಿದ್ದವು. ಆಗ ಪರಭಾಷೆಗಳಿಂದ ಕನ್ನಡಕ್ಕೆ ಚಿತ್ರಗಳು ಡಬ್ಬಿಂಗ್ (ಭಾಷಾಂತರ) ಆಗಿ ಬಿಡುಗಡೆಗೊಳ್ಳುತ್ತಿದ್ದವು. ಡಬ್ಬಿಂಗಿನ ಕಾರಣದಿಂದಾಗಿ ಕನ್ನಡ ಚಿತ್ರನಿರ್ಮಾಣ ಮತಷ್ಟು ವಿರಳಗೊಂಡು ಕನ್ನಡ ಕಲಾವಿದರು ಮತ್ತು ಕನ್ನಡ ಚಿತ್ರರಂಗ ಅಸ್ತಿತ್ವಕ್ಕಾಗಿ ಚಡಪಡಿಸುತ್ತಿದ್ದವು. ಅಂದು ಕನ್ನಡದ ಕಟ್ಟಾಳು ಅನಕೃ, ಮೇರುನಟ ರಾಜ್ ಕುಮಾರ್ ಮತ್ತು ಇತರ ಹಿರಿಯರ ಡಬ್ಬಿಂಗ್ ವಿರುದ್ಧದ ಚಳವಳಿಯ ಕಾರಣದಿಂದಾಗಿ ಕನ್ನಡ ಚಿತ್ರರಂಗ ಉತ್ಥಾನಗೊಂಡು ಈ ಪರಿಗೆ ಬೆಳೆದು ನಿಂತಿದೆ. ಆಗಿನ ಆ ಸನ್ನಿವೇಶದಲ್ಲಿ ಡಬ್ಬಿಂಗ್ ಬೇಡ ಎನ್ನುವ ನಿಲುವು ಸರಿಯಾದುದೇ ಆಗಿತ್ತು.

ನಂತರದಲ್ಲಿ ನಮ್ಮ ನಾಡಿನಲ್ಲಿ ಚಿತ್ರನಿರ್ಮಾಣದ ಸಕಲ ಸವಲತ್ತುಗಳು, ತಂತ್ರಜ್ಞಾನ, ಪ್ರತಿಭಾವಂತ ಕಲಾವಿದರ ತಂಡ ಎಲ್ಲವೂ ಬೆಳೆದು, ಪೌರಾಣಿಕ-ಐತಿಹಾಸಿಕ-ಸಾಮಾಜಿಕ-ಶೌರ್ಯ-ವೀರಾವೇಶದ-ಕ್ರೌರ್ಯದ ಪರಾಕಾಷ್ಠೆಯ-ಅಮರ ಪ್ರೇಮ ಕಾವ್ಯಗಳನ್ನು ಬಿಂಬಿಸಿದ-ಹೊಟ್ಟೆ ಹುಣ್ಣಾಗುವಂತೆ ನಗಿಸಿದ-ಮೈ ನವಿರೇಳಿಸಿ, ಸೀಟಿನ ತುತ್ತತುದಿಯಲ್ಲಿ ಕೂರುವಂತೆ ಮಾದಿದ್ದ ಸಾಹಸಮಯ ಥ್ರಿಲ್ಲರ್ ಗಳು ಹಾಗು ನಾಡು-ನುಡಿಯ ಬಗ್ಗೆ ಅರಿವು ಗೌರವ ಮೂಡಿಸಿದ, ಹೀಗೆ ನೂರಾರು ಚಿತ್ರಗಳು ಎಲ್ಲರ ನರನಾಡಿಗಳಲ್ಲಿ ಕಿಚ್ಚೆಬ್ಬಿಸಿ, ಆಶ್ಚರ್ಯಚಕಿತರನ್ನಾಗಿಸಿ, ಹುಬ್ಬೇರಿಸಿ ಪುಳಕಿತರಾನ್ನಗುವಂತೆ ಮಾಡಿತ್ತು. ಹೀಗೆ ಇದು ಮುಂದುವರೆದು ಕನ್ನಡ ಚಿತ್ರರಂಗ ಈಗ ಗಟ್ಟಿಯಾಗಿ ನೆಲೆಯೂರಿ ಎಪ್ಪತ್ತೈದನೆ ವರ್ಷದ ಸಂಭ್ರಮಾಚರಣೆ ಮುಗಿಸಿ ನೂರರತ್ತ ಮುನ್ನುಗ್ಗುತ್ತಿದೆ!

ಇಂದು ಜಾಗತೀಕರಣದ ಪರಿಣಾಮವಾಗಿ ವಲಸೆಯೂ ಹೆಚ್ಚಿದೆ. ಪರಭಾಷಾ ಚಿತ್ರಗಳು ಇಲ್ಲಿ ಬಿಡುಗಡೆಗೊಳ್ಳುವುದಷ್ಟೇ ಅಲ್ಲದೆ ಯಶಸ್ವಿಯೂ ಆಗುತ್ತಿವೆ. ಮಾದರಿ ವ್ಯವಸ್ಥೆಯಲ್ಲಿ ಕನ್ನಡ ನಾಡಿನಲ್ಲಿ ಕನ್ನಡದ ಕಥೆ ಹೊಂದಿರುವ, ಕನ್ನಡಿಗ ಸಂಸ್ಕೃತಿಯನ್ನು ಬಿಂಬಿಸುವ, ಕನ್ನಡಿಗರಿಂದ ತಯಾರಾದ ಕನ್ನಡ ಚಿತ್ರಗಳು ಮಾತ್ರ ಬಿಡುಗಡೆಯಗಬೇಕು. ಆದರೆ ಇಂದಿನ ವ್ಯವಸ್ಥೆಯಲ್ಲಿ ಇದು ಸಾಧ್ಯವೇ ಎಂಬುದು ಚಿಂತೆ! ಜತೆಗೆ ನಮ್ಮಲ್ಲಿ ಪರಭಾಷಾ ಚಿತ್ರಗಳು ಪ್ರದರ್ಶನಗೊಳ್ಳುವುದನ್ನು ತಡೆಯುವುದು ದುಸ್ಸಾಧ್ಯ. ಹಾಗಾಗಿ ಪರಭಾಷಾ ಚಿತ್ರಗಳು ಡಬ್ಬಿಂಗ್ ಆಗಿ ಇಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗುವುದು ಕನ್ನಡದ ಉಳಿವಿಗೆ ಪೂರಕ. ಆಗ ಮೂಲ ಚಿತ್ರ ಇಲ್ಲಿ ಬರುವುದು ಕ್ರಮೇಣ ನಿಲುಗಡೆಯಾಗಬಹುದು. ಅಂದರೆ ಇಲ್ಲಿನ ಪರಭಾಷಿಕರೂ ಕೂಡಾ, ತಮ್ಮ ನೆಚ್ಚಿನ ನಟರ ಚಿತ್ರ ನೋಡಲು ಕನ್ನಡ ಕಲಿಯಲೇ ಬೇಕಾಗುತ್ತದೆ. ಆಂಗ್ಲ ಭಾಷೆಯ ಅನೇಕ ಅತ್ಯುತ್ತಮ ಚಿತ್ರಗಳನ್ನು ( ಉದಾ: ಜುರಾಸಿಕ್ ಪಾರ್ಕ್, ಹ್ಯಾರಿ ಪಾಟರ್) ನಮ್ಮದೇ ಭಾಷೆಯಲ್ಲಿ ನೋಡುವ ಅವಕಾಶ ನಮಗೆ ದೊರೆತಂತಾಗುತ್ತದೆ. ಡಬ್ಬಿಂಗಿನಿಂದಾಗಿ ಕನ್ನಡ ನಾಡಿನಲ್ಲಿ ನೆಲೆಸಿರುವ ಅನ್ಯಭಾಷಿಕರು ಮನರಂಜನೆಯ ಸಲುವಾಗಿ ಕನ್ನಡ ಕಲಿಯಲೇ ಬೇಕಾದ ಅನಿವಾರ್ಯತೆಗೆ ಸಹ ಒಳಗಾಗುತ್ತಾರೆ.

ಇಂದು ಡಬ್ಬಿಂಗಿನಿಂದಾಗಿ ಕನ್ನಡ ಸಂಸ್ಕೃತಿ ಹಾಳಾದಿತು ಎಂಬ ಕಾರಣ ನೀಡುತ್ತಾ ಪರಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಬೇಡ ಎನ್ನುವ ಮಾತುಗಳ ಕನ್ನಡ ಚಿತ್ರರಂಗದ ವಲಯದಿಂದ ಕೇಳಿಬರುತ್ತಿದೆ. ಆದರೆ ಕನ್ನಡ ಚಿತ್ರರಂಗದೊಡನೆ ಸಂಬಂಧವಿರಿಸಿಕೊಂಡಿರುವವರು ಮಾಡುತ್ತಿರುವುದಾದರೂ ಏನನ್ನು ಎಂದು ನಾವು ಪ್ರಶ್ನಿಸಿಕೊಳ್ಳಬೇಕಿದೆ? ಫ್ರೇಮ್ ಟು ಫ್ರೇಮ್ ಪರಭಾಷ ಚಿತ್ರಗಳ ರಿಮೇಕ್ ಅಲ್ಲವೆ?. ಕನ್ನಡ ನಾಡಿನದ್ದಲ್ಲದ ಸಂಸ್ಕೃತಿಯನ್ನು ವಿವೇಚನೆಯಿಲ್ಲದೆ ಯಥಾವತ್ತಾಗಿ ರಿಮೇಕಿಸುತ್ತಿರುವುದು ಸಂಸ್ಕೃತಿಗೆ ವಿಪತ್ಕಾರಿಯಲ್ಲವೇ? ಮತ್ತೊಂದು ನಾಚಿಕೆಗೇಡಿನ ಸಂಗತಿಯೆಂದರೆ ಕನ್ನಡ ಚಿತ್ರರಂಗವನ್ನು ಪೋಷಿಸಬೇಕಾದ ಇವರಲ್ಲಿ ಕೆಲವರು ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ವಿತರಕರುಗಳು, ಇಲ್ಲಿ ಕನ್ನಡೇತರ ಚಿತ್ರಗಳ ಪ್ರದರ್ಶನಕ್ಕೆ ಅನುವಾಗುವುದರ ಬದಲು ಇವರುಗಳು ನಮ್ಮ ಕನ್ನಡ ಚಿತ್ರಗಳನ್ನು ಇತರ ರಾಜ್ಯಗಳಲ್ಲಿ ಹೇಗೆ ವ್ಯಾಪಾರ/ಪ್ರದರ್ಶನ ಮಾಡಬಹುದು ಎಂಬುದರ ಬಗೆಗೆ ಯೋಚಿಸಿದಲ್ಲಿ ಒಳಿತಲ್ಲವೆ? ಜತೆಗೆ ಇಲ್ಲಿನ ಚಿತ್ರಮಂದಿರಗಳ ಒಡೆಯರೂ ಆಗಿರುವ ಕೆಲವರು, ಮೊದಲಿಗೆ ತಮ್ಮ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರ ಪ್ರದರ್ಶಿಸುವುದರ ಬದಲು ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡುವ ಬಗ್ಗೆ ಕಾರ್ಯಗತರಾಗಬೇಕಿದೆ. ನಾವು ಕನ್ನಡದ ಕಥೆಗಳನ್ನು ಹುಡುಕುವಲ್ಲಿನ ಸೋಮಾರಿತನ, ನಮ್ಮದೇ ತಂತ್ರಜ್ಞರೆಡಗಿನ ಅಸಡ್ಡೆ, ಇತರ ಭಾಷಿಕ ಕಲಾವಿದರನ್ನು ಪೋಷಿಸುವ ಉದಾತ್ತತೆ, ಕನ್ನಡತನದೆಡೆಗಿನ ನಿರಭಿಮಾನ ತೊರೆಯಬೇಕಿದೆ.

ಕನ್ನಡ ನಾಡು ಮತ್ತು ಜನಾಂಗದ ಅಳಿವು ಉಳಿವುಗಳು ಕನ್ನಡ ಭಾಷೆಯ ಅಳಿವು ಉಳಿವಿನ ಮೇಲೆ ತೀರ್ಮಾನವಾಗುತ್ತದೆ. ಇಂದು ಕನ್ನಡ ಉಳಿಯ ಬೇಕಾದರೆ ಕನ್ನಡವಲ್ಲದ ಮತ್ಯಾವ ಮನರಂಜನಾ ಮಾಧ್ಯಮಕ್ಕೂ ನಮ್ಮಲ್ಲಿ ಅವಕಾಶ ಇರಬಾರದು. ಆ ದೃಷ್ಟಿಯಿಂದ ಡಬ್ಬಿಂಗ್ ಇಂದು ಮತ್ತೆ ಅನಿವಾರ್ಯವಾಗಿದೆ. ಕನ್ನಡ ಭಾಷೆ ಉಳಿದರೆ ಮಾತ್ರವೇ ಕನ್ನಡಿಗ ಉಳಿದಾನು ಮತ್ತು ಕನ್ನಡ ಚಿತ್ರರಂಗ ಉಳಿದೀತು ಅಲ್ಲವೇ? ಬಹುಷಃ ಅನಕೃ ಇಂದು ಇದ್ದಿದ್ರೆ, ಕನ್ನಡ ಚಿತ್ರರಂಗ ಗಟ್ಟಿಯಾಗಿ ಕಾಲೂರಿರುವುದು ಕಂಡು, " ಕನ್ನಡ ಚಿತ್ರರಂಗದ ಕಾಯಿಲೆ ಈಗ ವಾಸಿಯಾಗಿರುವಾಗ ಡಬ್ಬಿಂಗ್ ಬೇಡವೆಂಬ ನೀತಿಯ ಔಷದಿ ಇನ್ನೂ ಏಕೆ?" ಕನ್ನಡದ ಉದ್ಧಾರಕ್ಕಾಗಿ ಹೊಸ ತಂತ್ರ ರೂಪಿಸಲು ಇಂದು ಡಬ್ಬಿಂಗ್ ಅವಶ್ಯಕತೆಯಿರುವುದನ್ನು ಖಂಡಿತಾ ಸಾರಿ ಹೇಳುತ್ತಿದ್ದರು! ಡಬ್ಬಿಂಗ್ ವಿರೋಧಿಸುತ್ತಿರುವವರು ಈ ಬಗ್ಗೆ ಚಿಂತಿಸಿ ಕನ್ನಡದ ಉಳಿವಿಗೆ ಪೂರಕವಾಗುವಂತ ಹೇಳಿಕೆಗಳನ್ನು ನೀಡಿ - ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವಂತವರಾಗಲಿ.

ಕನ್ನಡ ಚಿತ್ರರಂಗ ಇನ್ನೂ ಹೆಚ್ಚು ಹೆಚ್ಚು ಕ್ರೀಯಾಶೀಲತೆಯಿಂದ ಬೆಳಗಲಿ. ನೂರು, ಸಾವಿರ ವರ್ಷಗಳವರೆಗೆ ಪಯಣ ಅವಿರತವಾಗಿ ಸಾಗಿ ಪ್ರಪಂಚದಲ್ಲೆಲ್ಲ ಮನೆಮಾತಾಗಲಿ! ಕನ್ನಡ ಚಿತ್ರರಂಗದ ಉತ್ಥಾನಾಕ್ಕೆ ಅಹರ್ನಿಶಿ ದುಡಿದ - ದುಡಿಯುತ್ತಿರುವ ಸಮಸ್ತರಿಗೂ ನಮನಗಳು