ನನ್ನಿಂದಾಗಿ ಸ್ಕೂಲ್ಗೊಂದಿವ್ಸ ರಜಾ..!!!!!

ನನ್ನಿಂದಾಗಿ ಸ್ಕೂಲ್ಗೊಂದಿವ್ಸ ರಜಾ..!!!!!

ಬರಹ

ಅಂದು ಭಾನುವಾರ.ನಾನೂ ಸಿದ್ದ,ಶಿವ,ರಂಗ್ದಾಮ,ಮೂರ್ತಿ,ಎಲ್ಲಾ ನಮ್ಮೂರಿನ ವಲಕಲ ಬಯಲಿನ ಹುಣಿಸೇಗಿಡಗಳ ಬಳಿ ಗುಳೂರ್ಕೆ ಆಟ ಆಡ್ತಾ ಇದ್ವಿ.ಸಿದ್ದ ಸಿಕ್ಕಿಹಾಕ್ಕೊಂಡಿದ್ದ.ಅವನು ನಮ್ಮನ್ನು ಪತ್ತೆ ಹಚ್ಚಿ ಔಟ್ ಮಾಡ್ಬೇಕಿತ್ತು.ನಾನು ಮೂಲೇಲಿದ್ದ ಮೋಟು ಮರದ ಮೇಲೆ ಕೂತಿದ್ದೆ.ಅಲ್ಲಿಗೆ ಮೇಕೆ ಮೇಯಿಸಲು ಬಂದಿದ್ದ ನಮ್ ಸ್ಕೂಲ್ ಜವಾನ ರಶೀದಣ್ಣ ನನ್ ಕಡೆ ನೋಡಿ"ನಾಳಿಕ್ ಇಸ್ಕೂಲಿಗ್.. ಬಾ ..ಐತೆ.. ಪಕೋಡಾ"ಅಂದ.
ಮೊದಲೇ ಸ್ವಲ್ಪ ಪೆಗ್ಗೆ ಮನೋಭಾವದ ನನಗೆ ಭಯ ಏನೂ ಆಗ್ದೆ ಇದ್ರೂ"ನಾನೇನ್ಮಾಡಿಲ್ಲ ಏಳು...,ಪಕೋಡಾ ತಿಂಬಕ್ಕೆ, ಅಂದೆ...ನೀನೇನೂ ಮಾಡಿಲ್ಲವಾ,ಬಾ ಹೊಗೇಟಾಕಿದ್ರೆ ,ನಾಳಿಕ್ ಗೊತ್ತಾಗ್ತೇತೆ," ಅಂದ ರಶೀದಣ್ಣ.ಆಗ ಸ್ವಲ್ಪ ಒಳಗೊಳಗೇ ಭಯ ಶುರುವಾಯ್ತು.ನಾನೇನ್ ಅಂತಾದ್ದು ಮಾಡಿದ್ದು,ಏನೂ ತಪ್ಪೇ ಮಾಡಿಲ್ಲ.ಮೊನ್ನೆಯೆಲ್ಲಾ ನಮ್ಮಮ್ಮ ಕೊಟ್ಟಿದ್ದ ಗಿಣ್ಣು ತಕಂಡು ಹೋಗಿ ಮೇಷ್ಟ್ರಿಗೆ ಕೊಟ್ತಿದ್ನಲ್ಲಾ,ಈವಯ್ಯುಂದು ಒಳ್ಳೇ ಕತೆ ಆತು,..ಅಂದ್ಕೊಳ್ಳೋದ್ರಲ್ಲಿ "ನಾಗು ಗುಳೂರ್ಕೆ"ಅಂದ ಸಿದ್ದ.
ಈಗ ನಾನು ಅವಿತಿಟ್ಟುಕೊಳ್ಳುವವರನ್ನು ಕಂಡು ಹಿಡಿಬೇಕಾಗಿತ್ತು.ರಶೀದಣ್ಣನ ಮಾತು ಕೇಳಿದ್ದ ನನಗೆ ಆಟದ ಬಗ್ಗೆ ಆಸಕ್ತಿ ಅದಾಗಲೇ ಮಾಯ ಆಗಿತ್ತು.ನಿಧಾನಕ್ಕೆ ಅವ್ರೆಲ್ಲಾ ಬಚ್ಚಿಟ್ಟುಕೊಂಡ ಮೇಲೆ ಅಲ್ಲಿಂದ ಮೆತ್ತಗೆ ತಪ್ಪಿಸಿಕೊಂಡೆ.(ಆಟದಲ್ಲಿ ಭಂಡ ಆಡುವುದು ನನ್ನ ಹುಟ್ಟು ಗುಣ.ಹಾಗಾಗಿಯೇ ನನ್ನನ್ನು ಭಂಡನನ್ಮಗ ಅಂತಾನೇ ಹುಡುಗ್ರೆಲ್ಲಾ ಕರೀತಿದ್ರು)
ವಡ್ಗೇರಮ್ಮನ ಕಟ್ಟೆ ಬಳಿ ಬರೋ ಹೊತ್ತಿಗೆ, ರಶೀದಣ್ಣ ಹೊಗೇಟು ಅಂದಿದ್ದರ ಗೂಡಾರ್ಥ ಗೊತ್ತಾಯ್ತು.ಮೆಲ್ಲಗೆ ನಿನ್ನೆ ನಡೆದಿದ್ದ ಘಟನೆಯನ್ನು ನೆನಪಿಸಿಕೊಂಡೆ .ಪ್ರತಿ ಶನಿವಾರ ನಮ್ಮೂರ ಸಂತೆ.ಸಂತೆಯಲ್ಲಿ ಬೀಡಿ ಪ್ರಚಾರಕ್ಕೆ ಶಿರಾದಿಂದ ಸಾಬರು ಯಾವಾಗಲೂ ಬರ್ತಿದ್ರು.ಹಿಂದಿನ ಶನಿವಾರ ಇಸ್ಕೂಲ್ ಮುಗಿಸ್ಕಂಡು ಬರೋವಾಗ ಶಂಕರ್ ಬೀಡಿ ಪ್ರಚಾರ ನಡೀತಿತ್ತು.ನಾನೂ ಅಲ್ಲೇನಿಂತಿದ್ದೆ. ಮೈಕ್ ಸೆಟ್ ಜೊತೆ ಕುಣಿತಿದ್ದವಳು ಜನರ ಕಡೆ ಪುಗ್ಸಟ್ಟೆ ಬೀಡಿ ಎಸೀತಿದ್ಲು.ನಾನಿದ್ದ ಕಡೆ ಮೂರು ಬೀಡಿ ಬಿದ್ವು.ಮೆತ್ತಗೆ ತಕಂಡು ಜೇಬಿನಲ್ಲಿ ಯಾರ್ಗೂ ಗೊತ್ತಾಗದ ಹಾಗೆ ಇಳಿಸಿದ್ದೆ.ಅದೇ ದಿನ ಸಾಯಂಕಾಲ ದಿಂಪರಕಲ್ಲು ಬಳಿ ಟವ್ವಮ್ಮನ ಕಲ್ಗುಡ್ಡೆ ಮಗ್ಗುಲಾಗೆ ನಾನೂ ಮತ್ತೆ ನಮ್ಮ ಭಾವ ಮೂರ್ತಿ ಇಬ್ಬರೂ ದಂ ಎಳೆದ್ವಿ.
ನಂ ಮೇಷ್ಟು ಹೊಲಕ್ಕೆ ಅದೇ ದಾರೀಲಿ ಹೋಗ್ಬೇಕಾಗಿತ್ತು.ಎಲ್ಲೋ ನಾವ್ ಬೀಡಿ ಸೇದದುನ್ನ ಮೇಷ್ಟೇ ನೋಡವ್ರೆ.ಅಂತಾ..ಭಾರೀ ಭಯ ಸುತ್ಕಂಡು ಜೀವಾನೇ ಹೋದಂಗಾಯ್ತು.ಮನೇಗೆ ಬಂದವ್ನೇ ವಾಡೆ ಮಗ್ಗುಲಾಗೆ ಬೆಕ್ಕು ಕೂಕಂಡಂಗೆ ಕೂಕಂಡೆ.ಸ್ವಲ್ಪ ಸಮಯದ ಬಳಿಕ ನಮ್ಮತ್ತೆ "ಯಾಕೋ... ಗೂಬೆ ...ಕೂಕಂಡಂಗೆ..ಅಲ್ ಕುಕ್ಕರ್ಸಿದ್ದೀಯಾ” ಅಂದಾಗಲೇ ನಾನು ಮತ್ತೆ ಇಹಲೋಕಕ್ಕೆ ಮರಳಿದ್ದು.
ನನ್ ಬಾದೆ..ನನ್ಗಾಗಿದ್ರೆ ..ಇವ್ರಿಗೇನು..ಅಂದ್ಕೊಂಡು ಅಲ್ಲಿಂದ ಎದ್ದೆ.ಬೆಳಿಗ್ಗೆ ಸ್ಕೂಲ್ಗೆ ಯಾವ ಮುಖ ಇಟ್ಕಂಡು ಓಗ್ಲಿ.ಮೊದ್ಲೇ ರಶೀದಣ್ನ ಬ್ಯಾರೆ ಭಯ ಇಕ್ಕವ್ನೆ.ಯಾಕಾದ್ರೂ ಬೆಳಕಾಗ್ತೇತೋ ...ಯಾರನ್ನ ...ಸತ್ತು ..ನಾಳಿಕ್ಕೊಂದು ದಿನ ರಜಾ ಸಿಕ್ಕಿದ್ರೆ ಸಾಕಮ್ಮಾ..ಅಂತ ತಾಡಿ ನಾಗಮ್ಮನ್ನೂ ಜ್ನಾಪಿಸ್ಕಂಡೆ.
ನಮ್ ಸ್ಕೂಲ್ ನಲ್ಲಿ ತಪ್ ಮಾಡಿದ್ರೆ ಪ್ರಾರ್ಥನೆ ಟೈಮ್ನಾಗೆ ಬಡೀತಿದ್ದಿದ್ದು ರೂಡಿ.ಎಲ್ಲಾರೆದ್ರಲ್ಲೂ ಸರ್ಯಾಗಿ ನವ್ ಕೇರ್ತಿದ್ರು.ಅದಕ್ಕೇ ಪ್ರೇಯರ್ ಆದ ಮ್ಯಾಲೆ ಹೋಗೋಣ ಅಂತ ಅವತ್ತು ಲೇಟಾಗಿ ಹೋದೆ.ಅವಾಗ್ಲೇ ಪಾಟ ಶುರುವಾಗಿತ್ತು.ನಾನು ಬೀಡಿ ಸೇದಿದ್ದುನ್ನ ನೋಡಿದ್ದ ಸಿದ್ರಾಮಯ್ಯ ಮೇಷ್ಟ್ರೇ ಆರನೇ ಕ್ಲಾಸ್ ನಲ್ಲಿದ್ರು.ಅಲ್ಲಿಗೆ ನನ್ ತಿಥಿ ಮುಗೀತು ಅಂದ್ಕೊಂಡು ..ಅಲ್ಲೇ ನಿಂತ್ಕಂಡೆ...ಅರ್ಧ ಗಂಟೆ ಆದ್ರೂ ಒಳಿಕ್ಕೆ ಕರೀಲಿಲ್ಲ..ನಾನಂದ್ಕಂಡಂಗೆ ಯಾರೂ ದೊಡ್ದೋರು ಸಾಯ್ಲಿಲ್ಲ..ಏನ್ಮಾಡೋದು ...ಉಪಾಯ ಹೊಳೆಯಲು ಬಹಳ ಸಮಯವೇನೂ ಬೇಕಾಗಲಿಲ್ಲ..
ಇದ್ದಕ್ಕಿದ್ದಂತೆ ಏನೋ ನೆನಪಾದಂತೆ ಹೆಡ್ಮೇಷ್ಟ್ರ ರೂಮ್ ಮುಂದೆ ರಶೀದಣ್ಣ ಇಟ್ಟಿದ್ದ ಕಬ್ಬಿಣದ ಸಲಾಕೆ ತಗಂಡು ಲಾಂಗ್ ಬೆಲ್ ಬಡಿದೇ ಬಿಟ್ಟೆ.!!!ಸ್ಕೂಲ್ ನಲ್ಲಿದ್ದ ಎಲ್ಲಾ ಹುಡುಗ್ರೂ ಒಂದೇ ಸಾರಿ "ಕೇಕಲೆ..ಬುಡ್ಡಣ್ಣ..”ಅಂತಾ ಎಲ್ಲಾ ರೂಮುಗಳಿಂದ ಈಚೆ ಓಡಿಬಿಟ್ರು...ರಷೀದಣ್ಣ ,ಎಲ್ಲಾ ಮೇಷ್ಟ್ರುಗಳು,...ಬರ್ರೋ.. ಸ್ಕೂಲ್ ಐತೆ..ಇವ್ನಾವೋನೊ ಒಳ್ಳೇ ಕೆಲ್ಸಾ ಮಾಡಿದ್ನಲ್ಲಪ್ಪಾ..ಅಂತಾ ಬೊಬ್ಬೆ ಹೊಡುದ್ರೂ ಯಾರೂ ನಿಲ್ಲಲೇ ಇಲ್ಲ...ನನ್ನೊಬ್ಬನ್ನ ಬಿಟ್ಟು...!!.ಈಗ ಎಷ್ಟಾದ್ರೂ ಬಡೀಲಿ...ಬಿಡು.. ಹುಡ್ಗೇರು ಯಾರೂ ನೋಡಲ್ವಲ್ಲಾ.. ಅಂತ ಅಲ್ಲೇ ನಿಂತ್ಕಂಡೆ.

ನನ್ನಿಂದಾಗಿ ಎಲ್ಲಾರ್ಗೂ ಒಂದು ದಿನ ರಜಾ ಏನೋ ಸಿಕ್ತು...ನನಗೆ ಮಾತ್ರ ಏಟುಗಳ ಪ್ರತಿಪಲವಾಗಿ ವಾರ ರಜೆ ಸಿಕ್ಕಿತ್ತು..