ಶ್ರೀ ಪುರಂದರ ದಾಸರ ಪದಗಳಲ್ಲಿ Wei-WU-Wei ಕಾನ್ಸೆಪ್ಟ್

ಶ್ರೀ ಪುರಂದರ ದಾಸರ ಪದಗಳಲ್ಲಿ Wei-WU-Wei ಕಾನ್ಸೆಪ್ಟ್

ಬರಹ

ಆಡದೇ ಮಾಡುವನು ರೂಢಿಯೊಳಗುತ್ತಮನು
ಆಡಿ ಮಾಡುವನು ಮಧ್ಯಮನು - ತಾನಾಡಿಯೂ
ಮಾಡದವನು ಅಧಮತಾ ಸರ್ವಜ್ಞ

ಸರ್ವಜ್ಞನ ಈ ವಿಚಾರವನ್ನು ಹೋಲುವಂತಹ ಒಂದು ಲೇಖನವನ್ನು ಕೆಲವು ವಾರಗಳ ಕೆಳಗೆ ಶ್ರೀವತ್ಸಜೋಶಿಯವರು ವಿಜಯಕರ್ನಾಟಕದ ತಮ್ಮ ಅಂಕಣಬರಹದಲ್ಲಿ ಬರೆದಿದ್ದರು. ಅದನ್ನು ಓದಿದ ತಕ್ಷಣವೇ ಈ ವಿಚಾರ ನನ್ನ ತಲೆಯಲ್ಲಿ ಹೊಳೆಯಿತಾದರೂ ಅದನ್ನು ಇಲ್ಲಿ ತಿಳಿಸಲು ಸಮಯ ಸಿಗದ ಕಾರಣ ನಾನು ಬರೆಯುವುದೂ ತಡವಾಯಿತು. ಜೊತೆಗೆ ಶ್ರೀವತ್ಸ
ಜೋಶಿಯವರನ್ನು ಅಭಿನಂದಿಸುವುದೂ ತಡವಾಯಿತು. ಓದಿ ಬಹಳ ದಿನಗಳಾಗಿರುವುದರಿಂದ ಸಂಪೂರ್ಣ ಲೇಖನ ನೆನಪಿನಲ್ಲಿ ಉಳಿಯದಿದ್ದರೂ ಅದರ ತಿರುಳು ಮಾತ್ರ ತಲೆಯಲ್ಲಿ ನಿಂತಿದೆ. ಅವರು ಈ ಲೋಕದ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿದ್ದಾರೆ. ಆಗುಂಪುಗಳು ಹೀಗಿವೆ, 'Act without acting', 'Act with acting' ಮತ್ತು 'No act but only acting'. ಇಲ್ಲಿ 'act' ಎಂಬ ಪದದ ಅರ್ಥ ನಟನೆ ಅಲ್ಲ. ಕ್ರಿಯೆ ಆಗಿದೆ.

'Act without acting' ಎಂದರೆ ಯಾವುದೇ ತೋರಿಕೆ ಇಲ್ಲದೇ ಶುದ್ದವಾದ ಮನಸ್ಸಿನಿಂದ ಕೆಲಸ ಮಾಡುವುದು ಮತ್ತು ಸಾಧಿಸುವುದು. ಎರಡನೆಯದು 'Act with acting'. ಈಗುಂಪಿನವರು ಕೆಲಸವೇನೋ ಮಾಡುತ್ತಾರೆ. ಆದರೆ ಬೇರೆಯವರು ಅದನ್ನು ಗಮನಿಸಬೇಕೆಂಬ ಉದ್ದೇಶವುಳ್ಳವರು. ತಮ್ಮ ಕೆಲಸಗಳ ಬಗ್ಗೆ ಮತ್ತು ಸಾಧನೆಗಳ ಬಗ್ಗೆ ಯಾವ ಮಾರ್ಗದಲ್ಲಿಯಾದರೂ ಇತರರಿಗೆ ತಿಳಿಯಪಡಿಸುತ್ತಾರೆ. ಇನ್ನು ಮೂರನೆಯ ಪಂಗಡದವರು. ಕ್ರಿಯೆಯಲ್ಲಿ ಏನೂ ಇಲ್ಲದಿದ್ದರೂ ತಾವೇನೋ ಮಹಾಸಾಧಿಸಿದವರಂತೆ ತೋರಿಕೆ ಆಟವಾಡುವವರು. ಶ್ರಿವತ್ಸ ಜೋಶಿಯವರ ಈ ಹೇಳಿಕೆಗಳನ್ನು ಹೋಲುವ ಅನೇಕ ರಚನೆಗಳು ನಮ್ಮ ದಾಸ ಸಾಹಿತ್ಯದಲ್ಲಿವೆ. ಅವುಗಳಲ್ಲಿ ಪುರಂದರ ದಾಸರ ಕೃತಿಗಳಿಂದ ಮೂರು ರೀತಿಯ ಜನರ ಬಣ್ಣನೆಗೆ ಉದಾಹರಿಸಬೇಕೆಂಬ ಆಸೆಯಿಂದ ಈ ಲೇಖನ ಹುಟ್ಟು ಪಡೆಯಿತು.

ಮೊದಲನೆಯ ಗುಂಪಿನವರು ಸರ್ವಜ್ಞನ ಆಡದೇ ಮಾಡುವ ರೂಢಿಯೊಳಗುತ್ತಮರ ಗುಂಪನ್ನು ಸೇರುತ್ತಾರೆ. ತಮ್ಮ ಅನುಭವಗಳಿಂದ ಕಲಿತ ಪಾಠದಿಂದ ಜೀವನವನ್ನು ಉತ್ತಮ ಮಾರ್ಗದಲ್ಲಿ ನಡೆಸಿ ಮೋಕ್ಷ ಸಾಧನೆಗೈಯುವ ಸಜ್ಜನರ ಬಗ್ಗೆ ಪುರಂದರ ದಾಸರು ಹೀಗೆ ಹೇಳುತ್ತಾರೆ.

ಅನುಭವದಡಿಗೆಯ ಮಾಡಿ - ಅದ
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ||ಪ||

ತನುವೆಂಬ ಭಾಂಡವ ತೊಳೆದು - ಕೆಟ್ಟ
ಮನದ ಚಂಚಲವೆಂಬ ಮುಸುರೆಯ ಕಳೆದು|
ಘನವಾಗಿ ಮನೆ ಬಳಿದು - ಅಲ್ಲಿ
ಮಿನುಗುವ ತ್ರಿಗುಣದ ಒಲೆಗುಂಟ ನಡೆದು ||೧||

ವಿರಕ್ತಿಯೆಂಬುವ ಮಡಿಯುಟ್ಟು -ಪೂರ್ಣ
ಭಕ್ತಿಯೆಂ ನೀರನ್ನೆಸರಿಟ್ಟು|
ಅರಿವೆಂಬ ಬೆಂಕಿಯ ಕೊಟ್ಟು -ಮಾಯಾ
ಮದವೆಂಬ ಕಾಷ್ಟವ ಮುದದಿಂದ ಸುಟ್ಟು ||೨||

ಕರುಣೆಯೆಂಬೋ ಸಾಮಗ್ರಿ ಹೂಡಿ
ಮೋಕ್ಷಪರಿಕರಿವಾದಂಥ ಪಾಕವ ಮಾಡಿ
ಗುರುಶರಣರು ಸವಿದಾಡಿ - ನಮ್ಮ
ಪುರಂದರ ವಿಠಲನ ಕೊಂಡಾಡಿ ||೩||

ಇನ್ನು ಎರಡನೆಯ ಗುಂಪಿನವರು ತಾವು ಮಾಡುವ ಕೆಲಸ ಎಷ್ಟು ಶ್ರೇಷ್ಠವೆಂಬುದನ್ನು ಹೇಳಿ ತೋರಿಸುತ್ತಾರೆ. ಇವರು ಸರ್ವಜ್ಞನ 'ಆಡಿಮಾಡುವ' ಮಧ್ಯಮ ವರ್ಗದವರು. ಪುರಂದರ ದಾಸರು ಹೀಗೆ ಮಾಡುವ ಭಕ್ತರು ತಾವು ಮಾಡುವುದನ್ನೆಲ್ಲಾ ಹೇಳುವಂತೆ ರಚಿಸಿರುವ ಈ ಉಗಾಭೋಗವನ್ನು ನೋಡಿ,

ನಿನ್ನನೇ ಪಾಡುವೆ, ನಿನ್ನನೇ ಪೊಗಳುವೆ|
ನಿನ್ನನೇ ಬೇಡಿ ಬೇಸರಿಸುವೆ|
ನಿನ್ನ ಕಾಲನು ಪಿಡಿವೆ, ನಿನ್ನ ಹಾರೈಸುವೆ|
ನಿನ್ನ ತೊಂಡರಿಗೆ ಕೈಕೊಡುವೆ|
ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ|
ಘನ್ನ ಪುರಂದರ ವಿಠಲ ದೇವರ ದೇವ||

ಇನ್ನು ಮೂರನೇ ಗುಂಪಿನವರ (ಅಧಮರು) ಬಗ್ಗೆ ಹೀಗಿದೆ ವರ್ಣನೆ!

ಉದರ ವೈರಾಗ್ಯವಿದು - ನಮ್ಮ
ಪದುಮನಾಭನಲ್ಲಿ
ಲೇಶ ಭಕುತಿಯಿಲ್ಲ||ಪ||

ಉದಯ ಕಾಲದೊಳೆದ್ದು
ಗಡಗಡ ನಡುಗುತ
ನದಿಯಲಿ ಮಿಂದೆವೆಂದು ಹಿಗ್ಗುತಲಿ
ಮದ ಮತ್ಸರ್ಯ ಕ್ರೋಧ
ಒಳಗೆ ತುಂಬಿಟ್ಟುಕೊಂಡು
ಬದಿಯಲಿದ್ದವರಿಗಾಶ್ಚರ್ಯವ ತೋರುವುದು ||೧||

ಕಂಚುಗಾರನ ಬಿಡಾರದಂದದಿ
ಕಂಚು ಹಿತ್ತಾಳೆ ಪ್ರತಿಮೆಗಳನೆರಹಿ
ಮಿಂಚಬೇಕೆಂದು ಬಲು ಜ್ಯೋತಿಗಳ ಹಚ್ಚಿ
ವಂಚನೆಯಿಂದಲಿ ಪೂಜೆಯ ಮಾಡುವುದು ||೨||

ಕರದಲಿ ಜಪಮಣಿ ಬಾಯಲಿ ಮಂತ್ರವು
ಅರಿವೆ ಮುಸುಕು ಮೋರೆಗೆ ಹಾಕಿ
ಪರಸತಿಯರ ಗುಣ ಮನದಲಿ ಸ್ಮರಿಸುತ
ಪರಮ ವೈರಾಗ್ಯಶಾಲಿಯೆಂದೆನಿಸುವುದು ||೩||

ಹೀಗೆ ಶ್ರೀವತ್ಸ ಜೋಶಿಯವರು ಪುರಂದರ ದಾಸರ ಹಾಗೆ ಜನರ ಕ್ರಿಯೆಗಳ ಬಗ್ಗೆ ಅಂದವಾಗಿ ವಿಶ್ಲೇಷಿಸಿದ್ದಾರೆ.
ಜನರು ಪರಸ್ಪರ ತೋರಿಸುವ ಪ್ರೀತಿಯ ಬಗ್ಗೆಯೂ ಹೀಗೆಯೇ ಎಣಿಸಬಹುದೇನೋ ಅಲ್ಲವೇ?