ಕೇರಳದ ಸಂಸ್ಕೃತ ಶಾಲೆಯ ಕನ್ನಡ ಇ-ಪತ್ರಿಕೆ!

ಕೇರಳದ ಸಂಸ್ಕೃತ ಶಾಲೆಯ ಕನ್ನಡ ಇ-ಪತ್ರಿಕೆ!

ಬರಹ

 ನೈತಿಕ ಹ್ಯಾಕರುಗಳ ಸ್ಪರ್ಧೆಗೆ ನಿಟ್ಟೆಯಲ್ಲಿ ತರಬೇತಿ

ವಿಎಂವೇರ್ ಮತ್ತು ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾದವರ ಆಶ್ರಯದಲ್ಲಿ ರಾಜ್ಯಮಟ್ಟದ ನೈತಿಕ ಹ್ಯಾಕರುಗಳ ಸ್ಪರ್ಧೆ ನಡೆಯಲಿದ್ದು,ಅದಕ್ಕೆ ತರಬೇತಿಯು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ. ಮಾರ್ಚ್ ಒಂಭತ್ತರ ಸೋಮವಾರ ಒಂದು ದಿನದ ತರಬೇತಿ ನಡೆಯಲಿದ್ದು, ಕಂಪ್ಯೂಟರ್ ವರ್ಚುವಲೈಸೇಷನ್ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹ್ಯಾಕಿಂಗ್ ಬಗ್ಗೆ ಲಭ್ಯ ತಂತ್ರಾಂಶ ಮತ್ತು ತಂತ್ರಗಳ ಬಗ್ಗೆ ಅರಿವು ಮೂಡಿಸುವುದೇ ಕಾರ್ಯಕ್ರಮದ ಉದ್ದೇಶ. ಹ್ಯಾಕಿಂಗನ್ನು ನೈತಿಕ ಕಾರ್ಯಗಳಿಗೆ ಬಳಸಿಕೊಂಡಾಗ,ಅದು ಭಯೋತ್ಪಾದನಾ ಚಟುವಟಿಕೆ ನಿಯಂತ್ರಣ ಮತ್ತು ಪತ್ತೆ ಕಾರ್ಯದಲ್ಲೂ ಉಪಯೋಗಕ್ಕೆ ಬರುತ್ತದೆ.ಅಂತಿಮ ಸ್ಪರ್ಧೆಯು ಮಾರ್ಚ್ ಹದಿನೈದರಂದು ನಡೆಯಲಿದ್ದು,ಬೆಂಗಳೂರಿನ ಆಚಾರ್ಯ ತಾಂತ್ರಿಕ ಕಾಲೇಜಿನಲ್ಲಿ ನಡೆಸಲಾಗುವುದು.ಪ್ರತಿ ತಂಡವೂ ಒದಗಿಸಲಾದ ತಂತ್ರಾಂಶಗಳನ್ನು ಬಳಸಿಕೊಂಡು,ಕಂಪ್ಯೂಟರ್ ವ್ಯವಸ್ಥೆಯಲ್ಲಿನ ಐದು ಭದ್ರತಾ ಕೋರೆಗಳನ್ನು ಪತ್ತೆ ಮಾಡಬೇಕಾಗುತ್ತದೆ.ಈ ತರಬೇತಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತಾಂತ್ರಿಕ ವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
------------------------------------------------------------
ಕೇರಳದ ಸಂಸ್ಕೃತ ಶಾಲೆಯ ಕನ್ನಡ ಇ-ಪತ್ರಿಕೆ!mahajana
ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತ ಕಯ್ಯಾರ ಕಿಞ್ಞಣ್ಣ ರೈ,ಯಕ್ಷಗಾನ ಭೀಷ್ಮ ಶೇಣಿ ಗೋಪಾಲಕೃಷ್ಣ,ಕವಿ ವೆಂಕಟರಾಜ ಪುಣಿಂಚಿತ್ತಾಯ ಮುಂತಾದವರು ಕಲಿತ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯು ಇದೀಗ ಇ-ಪತ್ರಿಕೆ ಆರಂಭಿಸಿದೆ."ಮಹಾಜನ" ಇ-ಪತ್ರಿಕೆಯಲ್ಲಿ ಶಾಲಾಮಕ್ಕಳ ಬರಹ,ಚಿತ್ರಗಳನ್ನು ಪ್ರಕಟಿಸಲಾಗುತ್ತಿದೆ.ಶಾಲೆಯ ಅಧ್ಯಾಪಕ ರವಿಶಂಕರ್ ದೊಡ್ಡಮಾಣಿ ಅವರ ನೇತೃತ್ವ ಇ-ಪತ್ರಿಕೆಗಿದೆ.ಬ್ಲಾಗನ್ನು ಇ-ಪತ್ರಿಕೆಯಾಗಿಸಿದ ನವೀನ ಪ್ರಯೋಗ ಕೇರಳದ ಪತ್ರಿಕೆ,ಟಿವಿಗಳಿಂದ ಪ್ರಶಂಸೆ ಬಾಚಿಕೊಳ್ಳುತ್ತಿದೆ.
-----------------------------------------------------------------------
ಭುವಿಯ ಹುಡುಕಾಟಕ್ಕೆ ಕೆಪ್ಲರ್ kepler
ನಾಸಾವಿದೀಗ ಒಂದು ಲಕ್ಷ ನಕ್ಷತ್ರಗಳ ಕಡೆ ತನ್ನ ದೂರದರ್ಶಕ ಕೆಪ್ಲರ್ ಮೂಲಕ  ವರ್ಷಗಟ್ಟಲೆ ಕಾಲ ಕಣ್ಣಿರಿಸಲು ಬಯಸಿದೆ.ಭೂಮಿಯಂತಹ ಗ್ರಹ ಯಾವುದಾದರೂ ಇದೆಯೇ ಎನುವುದನ್ನು ಪತ್ತೆ ಮಾಡುವುದೇ ಉದ್ದೇಶ.ಫ್ಲೊರಿಡಾದ ಕೇಪ್ ಕೆನವರಲ್ ಬಾಹ್ಯಾಕಾಶ ಕೇಂದ್ರದಿಂದ ಡೆಲ್ಟಾ ರಾಕೆಟ್ ಮೂಲಕ ಇದರ ಉಡ್ಡಯನವಾಗಿದೆ.ನಕ್ಷತ್ರದ ಬೆಳಕಿನಲ್ಲಾಗುವ ಇಳಿತವನ್ನು ದಾಖಲಿಸಿಕೊಳ್ಳುವ ಮೂಲಕ ಅದರ ಮುಂದೆ ಗ್ರಹವು ಹಾದುಹೋಗುವುದನ್ನು ತಿಳಿದುಕೊಳ್ಳುವ ತಂತ್ರವನ್ನು ಇಲ್ಲಿ ಬಳಸಲಾಗುತ್ತದೆ.ಗ್ರಹ ಪತ್ತೆಯಾದ ಬಳಿಕ ಅದರ ದೂರ,ಗಾತ್ರ ಮತ್ತು ಪಥ ಇತ್ಯಾದಿಗಳನ್ನು ಅಂದಾಜು ಮಾಡಲಾಗುತ್ತದೆ.
--------------------------------------------------------------------------
ಹೆಸರಿನಲ್ಲೇನಿದೆ?name
ಹೆಸರಿಗೆ ಐದು ದಶಲಕ್ಷ ಡಾಲರುಗಳು ಎಂದರೆ ನಂಬುತ್ತೀರಾ?ಅಂತರ್ಜಾಲ ತಾಣಗಳಿಗೆ ಅತ್ಯಂತ ಬಳಕೆಯಲ್ಲಿರುವ ಶಬ್ದಗಳ ಹೆಸರನ್ನು ಬಳಸಿ,ಸುಲಭವಾಗಿ ಜನಪ್ರಿಯವಾಗ ಬಹುದು.ಹೀಗಾಗಿ toys,wine,business ಮುಂತಾದ ಪದಗಳನ್ನು ಪಡೆಯಲು ಮೇಲಾಟ ನಡೆಯುತ್ತದೆ.ಇಂತಹ ಪದಗಳನ್ನು ನೊಂದಾಯಿಸಿದವರಿಂದ ಹೆಸರು ಖರೀದಿಸಲು ಉದ್ಯಮದ ಮಂದಿ ಮುಗಿಬೀಳುತ್ತಾರೆ.ಆಟಿಕೆಯನ್ನು ಮಾರುವ ಅಂತರ್ಜಾಲ ತಾಣವೊಂದು toys ಹೆಸರಿಗೆ ಐದು ದಶಲಕ್ಷ ಡಾಲರು ದುಡ್ಡು ಖರ್ಚು ಮಾಡಬೇಕಾಯಿತು!
----------------------------------------------------------------------------
ವಿಂಡೋಸ್7ರಲ್ಲೇನು ಹೊಸತು?
ಇಂಟರ್ನೆಟ್ ಎಕ್ಸ್‌ಪ್ಲೋರರ್ ವಿಂಡೋಸ್ ಕಾರ್ಯನಿರ್ವಹಣಾ ತಂತ್ರಾಂಶದ ಜತೆಗೆ ಬರುವ ಬ್ರೌಸರ್ ತಂತ್ರಾಂಶ.ಆದರೆ ಅಂತರ್ಜಾಲ ಜಾಲಾಟಕ್ಕೆ ಇದನ್ನು ಬಳಸಿದರೆ,ಭದ್ರತೆಗೆ ಚ್ಯುತಿ ಬರುತ್ತದೆ ಎನ್ನುವುದನ್ನು ಕಂಪೆನಿಯೇ ಒಪ್ಪಿರುವ ಹಿನ್ನೆಲೆಯಲ್ಲಿ ವಿಂಡೋಸ್ ಓಎಸ್ ಬಳಸುವವರೂ ಮೊಜಿಲ್ಲಾ ಬಳಗದ ಮುಕ್ತ ತಂತ್ರಾಂಶಗಳನ್ನೇ ಬ್ರೌಸರ್ ಆಗಿ ಬಳಸುತ್ತಾರೆ.ಇದಕ್ಕೆ ಮೈಕ್ರೋಸಾಫ್ಟ್ ಕೂಡಾ ಹಸಿರು ಸಂಕೇತ ತೋರಿದೆ. ಹೊಸ ಓಎಸ್ ತಂತ್ರಾಂಶದಲ್ಲಿ ಅನುಸ್ಥಾಪನೆಯ ವೇಳೆಯೇ ಇಂಟರ್ನೆಟ್ ಎಕ್ಸ್‌ಪ್ಲೋರರನ್ನು ನಿಷ್ಕ್ರಿಯಗೊಳಿಸಿ,ಅದರ ಸುಳಿವೇ ಇಲ್ಲದ ಹಾಗೆ ಮಾಡಲು ಬರುತ್ತದೆ. ಇದೇ ರೀತಿ ವಿಂಡೋಸ್ ಮೀಡಿಯಾ ಪ್ಲೇಯರ್ ತಂತ್ರಾಂಶವನ್ನೂ     "ಆಫ್" ಮಾಡಲು ಬರುತ್ತದೆ.
---------------------------------------------------------------------------
ಬರಲಿದೆ ತ್ರೀಜಿ ಕಾರ್ ರೇಡಿಯೋ!
ಜರ್ಮನಿಯ ಹ್ಯಾನೋವರ್‌ನಲ್ಲಿ ವಾರ್ಷಿಕವಾಗಿ ನಡೆಯುವ ತಂತ್ರಜ್ಞಾನ ಪ್ರದರ್ಶನ ಸದ್ಯ ಪ್ರಗತಿಯಲ್ಲಿದೆ.ಇದರಲ್ಲಿ ಯಂತ್ರಾಂಶ ಮತ್ತು ತಂತ್ರಾಂಶಗಳಲ್ಲಿ ಆಗಲಿರುವ ಬೆಳವಣಿಗೆಗಳ ಬಗ್ಗೆ ಮುನ್ಸೂಚನೆ ಸಿಗುತ್ತದೆ.ತ್ರೀಜಿ ಮೊಬೈಲ್ ಮೂಲಕ ಅಂತರ್ಜಾಲ ಸಂಪರ್ಕ ಪಡೆದು,ಅಂತರ್ಜಾಲದಲ್ಲಿ ಲಭ್ಯವಿರುವ ಮೂವತ್ತೈದು ಸಾವಿರ ರೇಡಿಯೋ ಕೇಂದ್ರಗಳನ್ನು ಯಾವುದೇ ಎಗ್ಗಿಲ್ಲದೆ ಪಡೆಯುವ ಸೌಕರ್ಯ ಪಡೆಯುವ ತಾಂತ್ರಿಕತೆಯನ್ನಲ್ಲಿ ಪ್ರದರ್ಶಿಸಲಾಗಿದೆ.ಕೈಯಲ್ಲಿ ಹಿಡಿದ ಲೇಸರ್ ಸ್ಕ್ಯಾನರ್ ಮೂಲಕ ವಸ್ತುಗಳ ತ್ರೀಡಿ ಚಿತ್ರಗಳನ್ನು ಪಡೆದು,ಕಂಪ್ಯೂಟರ್ ಗೇಂಸ್‌ಗಳಲ್ಲಿ ಹೆಚ್ಚಿನ ಮನರಂಜನೆ ಪಡೆಯುವ ಸಾಧ್ಯತೆಯನ್ನೂ ಪ್ರದರ್ಶಿಸಲಾಗಿದೆ.ರಾಜಕಾರಣಿಗಳ ಪಟಾಲಂ ಸಾಗುವಾಗ ಒಂದು ಕಾರನ್ನು ನೂರಾರು ಕಾರುಗಳು ಹಿಂಬಾಲಿಸುವುದನ್ನು ನೋಡಿದ್ದೀರಲ್ಲಾ? ಎದುರಿನ ವಾಹನವೊಂದರಲ್ಲೇ ಚಾಲಕನನ್ನು ಬಳಸಿಕೊಂಡು,ಉಳಿದವು ಅದನ್ನು ಹಿಂಬಾಲಿಸುವಂತೆ ಮಾಡಿದರೆ? ಅದನ್ನು ಸಾಧ್ಯ ಮಾಡುವ ತಂತ್ರಜ್ಞಾನವನ್ನೂ ಸಿಬಿಟ್ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ.


udayavani

ashokworld

*ಅಶೋಕ್‌ಕುಮಾರ್ ಎ