(ಆ) ಮರ

(ಆ) ಮರ

ಬರಹ

ಕುಹೂ ಕುಹೂ... ಕೋಗಿಲೆ
ಹಾಡಿನಲಿ ಮೈ ಮರೆತಿತ್ತು
ಚೈತ್ರ ಮಾಸದ ಗೆಲುವು
ತುಂಬಿ ತುಳುಕಾಡುತಿತ್ತು.

ಕೋಗಿಲೆಯ ಸ್ನೇಹದೊಳು
ನಳನಳಿಸಿ ನಗುತಿತ್ತು
ಅವರಿವರಿಗೆ, ನಡೆದಾಡುವವರಿಗೆ,
ನೆರಳ ಮರವಾಗಿತ್ತು;
ಮಡಿಲ ಮೇಲಿನ ಹುಳಕೆ,
ಬಲೆ ನೇಯ್ವ ಜೇಡಕ್ಕೆ,
ಎಲೆ ಮನೆಯ ಇರುವೆಗೆ,
ಹಾಡು ಇಹ ಮರೆಸುತಿತ್ತು.

ಕಾಲ ಉರುಳುತಲಿತ್ತು
ಶಿಶಿರ ಹೊರಳುತಲಿತ್ತು
ಎಲೆಗಳೆಲ್ಲವೂ ಉದುರಿ
ಮರವೋ, ಎಲುಬ ಹಂದರ
ನೋಡಿ ನಗುತಿರುವ ಚಂದಿರ;
ಜೊತೆಗೆ ಯಾರೂ ಇಲ್ಲ,
ಕನಸುಗಳೂ ಬಳಿಯಿಲ್ಲ,
ಹಾಡ ಕಲಿಸಿದ ಇಷ್ಟಕೋಗಿಲೆಯೂ ಇಲ್ಲ.

ಬಳಿ ಸುಳಿಯುವವರಿಲ್ಲ,
ಕಣ್ಣು ಹಾಯಿಸುವರಿಲ್ಲ,
ಉಳಿದ ಇರುವೆಯ ಗೂಡು,
ಅಳಿದ ಹುತ್ತದ ಜಾಡು,
ಗಗನದೆಡೆ ಕೈ ಚಾಚಿ
ಅಳುತಲಿದೆ ಮೈ ಚಾಚಿ,
ಬತ್ತಿಹುದು ಕಣ್ಣೀರ ಸೆಲೆ, ಉಳಿದಿಹುದು
ಜೇಡ ಹೊಸೆದಿರುವ ಬಲೆ.

ಬಸವಳಿದ ಮರವಂದು
ಸ್ನೇಹಿತನ ಕೂಗಿತ್ತು
ವಚನವೆಂದೋ
ಅವರಿಂದ ದೂರವಾಗಿತ್ತು;
"ಹಸಿರಾಗದಿದ್ದರೆ ನೀ
ಉಸಿರಾಗಲೊಲ್ಲೆ,
ಉಸಿರಿಲ್ಲದಿದ್ದರೆ ನಾ
ಎಂತು ಹಸಿರಾಗಬಲ್ಲೆ...?"

ಕುಹೂ ಕುಹೂ..... ಕೋಗಿಲೆ
ಹಾಡಿನಲಿ ಮೈ ಮರೆತಿತ್ತು:
ಹೊಸತೊಬ್ಬ ಸ್ನೆಹಿತನ
ಹೆ...ಗ...ಲ... ಮೇ...ಲಿ...ತ್ತು.....

- ‘ ಕೋಗಿಲೆಯ ಹಾಡಿನಿಂದ ಹಸಿರಾದ ಮರಕ್ಕೆ ಆ ಹಾಡೇ ಉಸಿರು. ‘ಕೋಗಿಲೆಯ’ ಗಾನಕ್ಕೆ ಮನಸೋತ ಮನಸೂ ಹಾಗೆ..... ಅಂತಹಾ ಮನಸುಗಳಲ್ಲೊಂದು..... ಹೀಗೂ ಕಾಣಬಹುದು.’