ಕಾನೂನು ಉಲ್ಲಂಘಿಸಲು ಕಾನೂನು ಪದವಿ

ಕಾನೂನು ಉಲ್ಲಂಘಿಸಲು ಕಾನೂನು ಪದವಿ

(ಬೊಗಳೂರು ಸಂದರ್ಶನ ಬ್ಯುರೋದಿಂದ)
ಬೊಗಳೂರು, ಜೂ.3- ಕಾನೂನನ್ನು ಉಲ್ಲಂಘಿಸಿಯೇ ಜನ್ಮ ತಾಳಿದ್ದ ಮತ್ತು ಕಾನೂನು ಉಲ್ಲಂಘನೆಗಾಗಿಯೇ ಈ ಲೋಕದಲ್ಲಿ ಅವತಾರವೆತ್ತಿದ ಬಿಹಾರದ ಸಂಸದ ಶಹಾಬುದ್ದೀನ್ ಕಾನೂನು ಪದವಿ "ಗಿಟ್ಟಿಸಿ"ಕೊಂಡ ಹಿನ್ನೆಲೆಯಲ್ಲಿ ಆತನನ್ನು ಬೊಗಳೆ ರಗಳೆಗಾಗಿ ಮಾತನಾಡಿಸಲಾಯಿತು.

ಬನ್ನಿ ಬನ್ನಿ, ಬೊಗಳೆ ಪಂಡಿತರೆ, ನನ್ನಿಂದೇನಾದರೂ ಕಾನೂನು ಉಲ್ಲಂಘನೆಯಾಗಬೇಕೆ ಎಂದು ಆತ್ಮೀಯತೆಯಿಂದಲೇ ಕೆಕ್ಕರಿಸಿ ನೋಡಿದರು ಶಹಾಬುದ್ದೀನ್.

ಕತ್ತಿ, ಮಚ್ಚು, ಪಿಸ್ತೂಲು ಸಂಸ್ಕೃತಿಯಲ್ಲಿ ಇಷ್ಟೊಂದು ಬ್ಯುಸಿಯಾಗಿರುವಾಗಲೂ ನೀವು ಹುಟ್ಟಿನಿಂದ ವಿರೋಧಿಸುತ್ತಿರುವ ಕಾನೂನಿನಲ್ಲೇ ಡಿಗ್ರಿ ತೆಗೆದುಕೊಂಡಿರಲ್ಲಾ, ನಾಚಿಕೆ ಎನಿಸುವುದಿಲ್ಲವೇ? ಎಂಬ ಮೊದಲ ಪ್ರಶ್ನೆಗೆ ತತ್ತರಿಸುತ್ತಾ ಶಹಾಬುದ್ದೀನ್, "ನಮ್ಮದೇನಿಲ್ಲಾ... ಎಲ್ಲಾ ನನ್ನ ಪರವಾಗಿ ಪರೀಕ್ಷೆ ಎದುರಿಸಿದ ಮಹಮ್ಮದ್ ಫಿರೋಜ್‌ನ ದಯೆ-ಕೃಪೆ" ಎಂದರು.

ನಾನ್ಯಾಕೆ ಪರೀಕ್ಷೆ ಬರೆಯುವ ತ್ರಾಸ ತೆಗೆದುಕೊಳ್ಳಲಿ, ಪರೀಕ್ಷೆಯೇ ನನ್ನನ್ನು ಬರೆಯುತ್ತದೆ ಎಂದು ಸ್ಪಷ್ಟಪಡಿಸಿದ ಶಹಾಬುದ್ದೀನ್ ಮಹಾಶಯ, ಕಾನೂನು ಪರೀಕ್ಷೆಯನ್ನೇ ಆಯ್ದುಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಭಯಾನಕವಾಗಿ ಮೂಗಿನ ಹೊಳ್ಳೆಗಳನ್ನು ಅರಳಿಸುತ್ತಾ, "ಮತ್ತೆ... ಕಾನೂನು ಉಲ್ಲಂಘಿಸುವುದು ಹೇಗೆಂಬುದು ನಮ್ಮಂತಹ ಯುವ ನಾಯಕರಿಗೆ ಗೊತ್ತಾಗುವುದು ಬೇಡ್ವೆ? ಸರಕಾರ ಅಥವಾ ಪೊಲೀಸರು ಚಾಪೆ ಕೆಳಗೆ ತೂರಿದರೆ ನಾವು ರಂಗೋಲಿ ಕೆಳಗೆ ತೂರುವುದು ಬೇಡವೆ? ಕಾನೂನಿನ ಹುಳುಕುಗಳನ್ನು ಅರಿಯುವುದಕ್ಕಾಗಿಯೇ ನಾನದನ್ನು ಆರಿಸಿಕೊಂಡೆ" ಎಂದು ತತ್ತರಿಸಿದರು.

ಸೂ.:
ಸಂದರ್ಶನದ ಪೂರ್ಣ ಪಾಠ: http://bogaleragale.blogspot.com ನಲ್ಲಿದೆ.

Rating
No votes yet