ಗಾಂಧಿ ಮೀಟರ್ರು‍

ಗಾಂಧಿ ಮೀಟರ್ರು‍

ಬರಹ

ನನಗೊಬ್ಬ ಸರ್ದಾರ್ಜಿ ಸ್ನೇಹಿತ ಇದ್ದಾನೆ. ಹರ್ಪ್ರೀತ್ ಅಂತ. ನಾಲ್ಕು ತಿಂಗಳ ಹಿಂದೆ ಅವನ ಮನೆಯವರು ಬನ್ನೇರುಘಟ್ಟದಾಚೆಯ ಗೊಟ್ಟಿಗೇರೆ ಎಂಬಲ್ಲಿ ಹೊಸ ಮನೆಯೊಂದರಲ್ಲಿ ವಾಸಿಸ ತೊಡಗಿದರು. ಅಂದಿನಿಂದ ದಿನ ಬೆಳಗಾದರೆ ಅವನದೊಂದೇ ಗೋಳು. ಆಟೋಗಳು ಅವನ ಮನೆಗೆ ಬರೊದಿಲ್ಲ ಅಂತ. ಹಾಗೂ ಹೀಗು ಕಾಡಿ ಬೇಡಿದ ನಂತರ ಬಂದವರು ಮನ ಬಂದಂತೆ ಬಾಡಿಗೆ ಕೇಳುತ್ತಾರೆ. ಜಯನಗರ ೯ನೆ ಬ್ಲಾಕಿಂದ ಅಲ್ಲಿಗೆ ಇಪ್ಪತ್ತೈದು ರೂಪಾಯಿ ಮೀಟರಿನಲ್ಲಿ ಆದರೂ ನೂರೈವತ್ತರ ಕೆಳಗೆ ಯಾರು ಬರಲ್ಲವಂತೆ. ಈ ಆಟೊ ಚಾಲಕರ ಸುಲಿಗೆಯಿಂದ ಬೇಸತ್ತ ಅವನು ಹೊಸ ಕಾರನ್ನು ಕಾದಿರಿಸಿಯೇ ಬಿಟ್ಟ. ಬಿಡಿ, ಈ ಕಥೆಗೂ ಅವನ ಕಾರಿಗೂ ಸಂಬಂಧವಿಲ್ಲ.

ದಿನಾ ಬೆಳಿಗ್ಗೆ ಅವನ ಹಂದಿನ ದಿನದ ಹರ-ಸಾಹಸ ಕೇಳಿ ಅಭ್ಯಾಸವಾದ ನನಗೆ, ಹೋದ ಗುರುವಾರ ಆಶ್ಚರ್ಯ ಕಾದಿತ್ತು. ಆದದ್ದು ಇಷ್ಡೆ. ಎಂದಿನಂತೆ ಆತ ಜಯನಗರದಲ್ಲಿ ಮೀನಾಕ್ಷಿ ದೇವಸ್ಥಾನಕ್ಕೆಂದು ಆಟೊ ಹತ್ತಿದ. ಈಗಾಗಲೆ ಅವನಿಗೆ ಸಾಕಷ್ಟು ಅನುಭವ ಇತ್ತು - ಗೊಟ್ಟಿಗೇರೆ ಎಂದು ಹೇಳಿದರೆ ಯಾರು ಬರೊಲ್ಲ ಅಂತ. ಹೀಗೆ ಎರಡೆರದು ಆಟೊ ಹಿಡಿಯುವುದು ಅವನ modus operandi ಆಗಿತ್ತು. ಇನ್ನೊಂದು ವಿಷಯ - ಆಟೊ ಹತ್ತಿದ ಕೂಡಲೇ ಅವನು ನೋಡುವುದು ಅದು ಹತ್ತು ರೂಪಾಯಿ ಆಟೊವೇ ಅಥವಾ ಹನ್ನೆರಡು ರೂಪಾಯಿ ಮೀಟರ್ರಿ‍ರುವ ಆಟೊವೇ ಅಂತ. ನಂತರ ಪ್ರತಿ ನಿಮಿಷಕ್ಕೊಮ್ಮೆ ಮೀಟರ್ರಿ‍ನ ಕಡೆಗೆ ಕಣ್ಣು ಹಾಯಿಸುವುದು. ಹಾಗೆ ಮಾಡದಿದ್ದರೆ ಆರಾಮಾಗಿ, ಹತ್ತಿಪ್ಪತ್ತು ರೂಪಾಯಿ ಮೋಸ ಹೋಗುವುದು ಖಂಡಿತ. ಅವತ್ತು ಕೂಡ ಅವನು ಅದನ್ನೇ ಮಾಡತೊಡಗಿದ. ತನ್ನ ಮನಸ್ಸಿನಲ್ಲೆ ಆಟೋ ಚಾಲಕನ್ನು ಮೀಟರು ಮಿತಿಮೀರಿ ಓಡುತ್ತಿದೆ ಅಂತ ಹೇಗೆ ಬಯ್ಯಿಯುವುದು ಅಂತ ಯೋಚಿಸಲು ಶುರುಮಾಡಿದ. ನಾಲ್ಕೈದು ಕಿಲೋಮೀಟರಿನ ನಂತರವೂ ಈ ಆಟೊ ಮೀಟರ್ರು‍ ಚಾಚೂ ತಪ್ಪದೆ ಓಡುತ್ತಿದೆ... ಅವನಿಗೆ ಬಹಳ ಆಶ್ಚರ್ಯ ವಾಯಿತು. ಮೀಟರ್ರನ್ನು ತಿದ್ದದ ಚಾಲಕರಿದ್ದಾರೆ ಎಂದು ನಂಬುವುದೆ ಕಷ್ಟವಾಗಿತ್ತು ಅವನಿಗೆ. ಇಂತವನೊಬ್ಬ ಸಿಕ್ಕನಲ್ಲಾ ಎಂದು ಹರ್ಪ್ರೀತ್ ಹೆಚ್.ಎಸ್.ಬಿ.ಸಿ ಎದುರು ಬಂದೊಡನೆಯೇ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾದ. "ಮೀನಾಕ್ಷಿ ದೇವಸ್ಥಾನದಿಂದ ಮುಂದೆ ಗೊಟ್ಟಿಗೇರೆಗೆ ಬರ್ತೀರಾ?" ಅಂತ ತನಗೆ ಗೊತ್ತಿದಷ್ಟು ಅರೆ ಬರೆ ಕನ್ನಡದಲ್ಲೆ ಕೇಳಿದ. ಚಾಲಕ ಸ್ವಲ್ಪ ಯೋಚಿಸಿ "ಮೀಟರನ್ನು ನೋಡಿ. ಇಲ್ಲಿಂದ ಎಷ್ಟಾಗುತ್ತೊ ಅಷ್ಟಕ್ಕೆ ಒಂದೂವರೆ ಕೊಡಿ" ಅಂತ ಕೇಳಿದನಂತೆ. ಹರ್ಪ್ರೀತನಿಗೆ ತನ್ನ ಕಿವಿಯನ್ನು ತಾನೆ ನಂಬಲಾಗಲಿಲ್ಲ. ಒಂದೂವರೆ ಪಟ್ಟು ಕೊಡುವುದು ಸಮಂಜಸವೇ ಎಂದು ತಿಳಿದು "OK" ಹೇಳಿ ಒಪ್ಪಿಕೊಂಡ. ಇಷ್ಡುಹೊತ್ತಿಗೆ ಅವನಿಗೆ ಆ ಆಟೊ ಮೀಟರ್ರಿ‍ನ ಮೇಲೆ ಸಾಕಷ್ಟು ನಂಬಿಕೆ ಬಂದಿದ್ದರಂದ ಗಳಿಗೆಗೊಮ್ಮೆ ಮೀಟರ್ರನ್ನು ನೋಡುವುದೂ ಬಿಟ್ಟ.

ಇಷ್ಟರಲ್ಲಿ ಒಂದು ಟ್ರಾಫಿಕ್ ಸಿಗ್ನಲಿನಲ್ಲಿ ಪಕ್ಕದ ಆಟೊದ ಚಾಲಕನು ಈ ಚಾಲಕನೊಂದಿಗೆ ಮಾತು ಬೆಳಸಿದನಂತೆ. ಸಿಗ್ನಲ್ಲು ಹಸಿರಾಗುವಮುಂಚೆ ಅವರ ಮಾತಿನಲ್ಲಿ "ಗಾಂಧಿ ಮೀಟರ್ರು‍‍" ಮಾತ್ರ ಇವನಿಗೆ ಅರ್ಥ ಆಗಿದ್ದು. ಸ್ವಲ್ಪ ಮುಂದೆ ಹೋದ ಮೇಲೆ, ಕುತೂಹಲಕ್ಕಾಗಿ ನೀವು ಆ ಚಾಲಕನೊಂದಿಗೆ ಏನು ಮಾತಾಡಿದಿರಿ ಅಂತ ಕೇಳಿದ. ಸರ್ವ ಭಾಷಾ ಪ್ರೇಮಿಯೂ ಪಾರಂಗತನೂ ಆದ ಆ ಚಾಲಕ ಹರ್ಪ್ರೀತ್ ಗೆ ತಿಳಿಯುವಂತೆ ಹಿಂದಿಯಲ್ಲೇ ವಿವರಿಸಿದ.

"ಆ ಆಟೊದವನು ನಿಮ್ಮನ್ನು ಎಲ್ಲಿ ಹತ್ತಿಸಿಕೊಂಡೆ ಅಂತ ಕೇಳಿದ. 'ಜಯನಗರದಿಂದ, ಗೊಟ್ಟಿಗೇರೆಗೆ ಹೋಗ್ತಾ ಇದ್ದೀನಿ' ಅಂತ ಹೇಳಿದೆ. ನನ್ನ ಮೀಟರನ್ನು ನೋಡಿ 'ಏನು ಇಷ್ಟೆ ಆಗಿದೆ, ನನ್ನ ಆಟೊ ದಲ್ಲಿ ಕಳಿಸಿ ಕೊಡು, ಇಲ್ಲಿಂದ ಕೂಡ ಅರವತ್ತು ರೂಪಾಯಿ ಮಾಡ್ತೀನಿ' ಅಂದ. 'ನಂದು ಗಾಂಧಿ ಮೀಟರ್ರು‍, ನಾನು ಹಾಗೆ ಮೋಸ ಮಾಡಲ್ಲ. ಇವರನ್ನು ಬಿಟ್ಟುಕೊಡಲ್ಲ' ಅಂತ ಹೇಳಿದೆ". ಚಾಲಕನ ಈ ವಿವರಣೆ ಕೇಳಿ ಹರ್ಪ್ರೀತ್ ಗೆ ಏನು ಹೇಳಬೇಕೋ ತೋಚಲಿಲ್ಲ. ಆಟೊ ಚಾಲಕರೆಂದರೆ ಕೆಂಡಕಾರುತ್ತಿದ್ದ ಇವನು, ಈ ಚಾಲಕನ್ನು ಕಂಡು ಹೆಮ್ಮೆ ಪಟ್ಟನು.

ಮುಖ್ಯ ರಸ್ತೆಯಿಂದ ತಿರುಗಿದ ನಂತರ ವಾಹನ ದಟ್ಟಣೆಯೂ ಕಡಿಮೆಯಾಯಿತು, ಚಳಿಯೂ ಜಾಸ್ತಿಯಾಯಿತು. ಚಾಲಕನೂ ತನ್ನ ಜೀವನದ ಆದರ್ಶಗಳನ್ನು ಹರ್ಪ್ರೀತ್ ಹತ್ತಿರ ಹೇಳ ತೊಡಗಿದ. "ನಮ್ಮದಲ್ಲದ ದುಡ್ಡು ನಮ್ಮ ಕೈಯಲಿ ನಿಲ್ಲೋಲ್ಲ ಸಾರ್. ಮೀಟರ್ರಿ‍ನಲ್ಲಿ ಕೀಟಲೆ ಮಾಡಿದರೆ ಇವತ್ತಲ್ಲಾ ನಾಳೆ ದೆವರು ಶಿಕ್ಷೆ ಕೊಡುತ್ತಾನೆ. ಒಮ್ಮೆ ಮೀಟರ್ ಪೋಲಿಸಿನ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ, ಐದು ಸಾವಿರದೊರೆಗೂ ದಂಡ ನೀಡಬೇಕಾಗುತ್ತದೆ. ನೋಡಿ, ಗಾಂಧಿ ಮೀಟರ್ರಿ‍ಂದ ಓಡಿಸಿದರೆ, ನಮಗೆ ಭಯ ಇರೊದಿಲ್ಲ". ಹರ್ಪ್ರೀತನಿಗಂತೂ ಈ ಚಾಲಕನ ಮೇಲಿನ ಅಭಿಮಾನ ಹೆಚ್ಚಾಗುತಿತ್ತು. ಚಳಿ ಹೆಚ್ಚಾಗಿದ್ದರಿಂದ, ತಾನೊಂದು ಸಿಗರೇಟು ಎಳೆಯಬಹುದೆ? ಅಂತ ಚಾಲಕ ಕೇಳಿದ. ನೀವೂ ತಗೊಳ್ಳಿ ಅಂತ ಒಂದು ಸಿಗರೇಟು ಇವನಿಗೂ ಕೊಟ್ಟನಂತೆ. ಕಟ್ಟಾ ಸರ್ದಾರಾದ ಇವನು, "ನನು ಸರ್ದಾರಾದ್ದರಿಂದ ಸಿಗರೇಟು ಮುಟ್ಟುವಂತಿಲ್ಲ. ನೀವು ಮುಂದುವರಿಸಿ" ಎಂದು ತನ್ನ ಒಪ್ಪಿಗೆ ಕೊಟ್ಟ. ಇದರಿಂದ ಬೆಜಾರಾದ ಚಾಲಕ ಹತ್ತಿರದ ಕಾಕಾ ಅಂಗಡಿ ಎದಿರು ಗಾಡಿ ನಿಲ್ಲಿಸಿ, ಒಂದು ಬಾಳೆ ಹಣ್ಣು ತಂದು ಹರ್ಪ್ರೀತಿಗೆ ಕೊಟ್ಟನಂತೆ. 'ನಾನೆನಾದರು ಕನಸು ಕಾಣುತ್ತಿದ್ದೇನೆಯೆ?' ಎಂಬುವಷ್ಟು ಆಶ್ಚರ್ಯ ಅವನಿಗೆ. ಇದಕ್ಕೂ ಚಾಲಕನ ಮತ್ತೊಂದು ಆದರ್ಶವೇ ಕಾರಣ. ತಾನು ಏನನ್ನಾದರು ಸೆವಿಸುತ್ತಿರುವಾಗ ಎದಿರು ಇರುವವರಿಗೂ ಕೊಟ್ಟು ತಿನ್ನದಿದ್ದರೆ ಪಾಪ ಬರುತ್ತದೆ ಎಂಬುದು ಅವನ ನಂಬಿಕೆ ಅಂತೆ. [ಮೊದಲು ಕೊಟ್ಟಿದ್ದು ಸಿಗರೇಟು ಎಂಬುದನ್ನು ಸ್ವಲ್ಪ ಕಾಲ ಮರೆಯೋಣ]

ಅಂತೂ ಇಂತು ಕಡೆಗೆ ಹರ್ಪ್ರೀತ್ ನ ಮನೆ ತಲುಪಿದಾಗ, ಮೀಟರ್ರನ್ನು ನೋಡಿ ಮೊದಲೇ ಹೇಳಿದ್ದಷ್ಟೇ (ಎಲ್ಲಾ ಸೇರಿ ೬೫ ರೂಪಾಯಿ) ಕೇಳಿದನಂತೆ ಆ ಚಾಲಕ. ಎಷ್ಟೇ ಸೌಜನ್ಯದಿಂದ ಇದ್ದರೂ ಕಡೆಗೆ ಮನೆ ಹತ್ತಿರ ಬಂದ ಮೇಲೆ ಒಂದು ಹತ್ತು ರೂಪಾಯಿ ಹೆಚ್ಚು ಕೇಳುವುದೋ, ಅಥವಾ ಚಿಲ್ಲರೆ ಇಲ್ಲ ಎಂದು ಮಿಕ್ಕ ಹಣ ಕೊಡದೆ ಇರುವುದೋ, ಅಥವಾ ಮತ್ತಾವುದಾದರು ತಕರಾರು ಎತ್ತುವುದು ಆಟೊಚಾಲಕರ ರೂಢಿಯಂತೆ. ಈ ಚಾಲಕ ಹಾಗೂ ಮಾಡಲಿಲ್ಲ. ಸಂತೋಷಗೊಂಡ ಹರ್ಪ್ರೀತ್ ಪೂರ್ತಿ ನೂರು ರೂಪಾಯಿ ಕೊಟ್ಟು ಬೆಂಗಳೂರಿನಲ್ಲಿ ಇಂಥ ಚಾಲಕರೂ ಇದ್ದಾರೆ ಅಂತ ತೋರಿಸಿದ ಅವನಿಗೆ ಧನ್ಯವಾದ ಹೇಳಿದನಂತೆ.

ಪ್ರಶಾಂತ ಕೋಟ