ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೩

ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೩

ಅವಿನಾಶ್ ಮುಖ ಮುಚ್ಚಿ ಕುಳಿತಿದ್ದ. ಅಳುತ್ತಿದ್ದನೋ ಗೊತ್ತಾಗಲಿಲ್ಲ. ಅವನ ಪಾಡಿಗೆ ಅವನನ್ನು ಬಿಟ್ಟು ಅಡುಗೆ ಮನೆಗೆ ನಡೆದೆ. ಪ್ರಳಯವೇ ಆಗಿದ್ದರೂ ಈ ಹೊಟ್ಟೆಗೆ ಹಸಿವಾಗುತ್ತಲ್ಲ ಅಂತಾ ನನ್ನನ್ನು ನಾನೇ ಬೈದುಕೊಂಡೆ. ಇನ್ನೊಂದು ಜೀವ ನನ್ನಲ್ಲಿ ಬೆಳೆಯುತ್ತಿದೆ ಎಂಬ ನೆನಪಾಯಿತು. ಅದಕ್ಕಾದರೂ ಊಟ ಮಾಡಬೇಕಲ್ಲ ಅನಿಸಿತು. ಫ್ರಿಡ್ಜ್ ನಲ್ಲಿದ್ದ ಬ್ರೆಡ್, ಜಾಮ್ ತೆಗೆದು ಅವಿನಾಶ್ ನಿಗೂ ಹಾಕಿಕೊಟ್ಟೆ, ನಾನು ತಿಂದೆ. ಅವಿನಾಶ್ ತಿನ್ನಲಿಲ್ಲ. ಹುಚ್ಚು ಹಿಡಿದವನಂತೆ ಮಂಕು ಬಡಿದು ಕುಳಿತಿದ್ದ. ಅವನ ಅವಸ್ಥೆಯನ್ನು ನೋಡಿ ಕನಿಕರವಾಯಿತು. ತಬ್ಬಿಕೊಂಡು ಅವನ ಕೆದರಿಕೊಂಡಿದ್ದ ತಲೆಗೂದಲನ್ನು ಸರಿಮಾಡುವ ಬಯಕೆ ಉಕ್ಕಿತು. ಆದರೆ ಮರುಕ್ಷಣವೇ ಅವನ ಮೇಲೆ ಕೋಪ ಉಂಟಾಯಿತು. ನನ್ನಲ್ಲೇನು ಕೊರತೆ ಕಂಡ ಇವನು, ಕೈ ಹಿಡಿದ ಹೆಂಡತಿಗೆ ಹೀಗೆ ಮಾಡಬಹುದೇ? ಐಶ್ವರ್ಯಳನ್ನು ಬಯಸುವಾಗ ನನ್ನ ನೆನಪಾಗಲಿಲ್ಲವೇ ಇವನಿಗೆ. ಮನಸ್ಸಿನಲ್ಲಿ ಜ್ವಾಲಮುಖಿ ಕುದಿಯುತ್ತಿದ್ದರೂ, ಅವಿನಾಶ್ ನ ಸ್ಥಿತಿ ನೋಡಿ ಸಮಾಧಾನದ ಮಾತುಗಳನ್ನಾಡಿದೆ. ಮರುದಿನದ ಚೆಕಪ್ ಗಾಗಿ ವೈದ್ಯರ ಬಳಿ ಅಪಾಯಿಟ್ ಮೆಂಟ್ ಕೇಳಿದೆ. ಅಣ್ಣ ಅತ್ತಿಗೆಗೆ ಏನನ್ನೂ ಹೇಳಲಿಲ್ಲ. ನನ್ನ ಸಂಸಾರದ ಗುಟ್ಟನ್ನು ನಾನೇ ತಾನೇ ಕಾಪಾಡಿಕೊಳ್ಳಬೇಕು.

ಬೆಳಿಗ್ಗೆ ಯಾವಾಗ ಆಗುವುದೋ, ಏನಾಗುವುದೋ ಎಂಬ ಆತಂಕದಿಂದ ನಿದ್ದೆ ಹತ್ತಿರ ಸುಳಿಯಲಿಲ್ಲ. ಅತ್ತು, ಅತ್ತು ಕಣ್ಣಲ್ಲಿ ನೀರು ಬತ್ತಿ ಹೋಗಿತ್ತು. ಬೆಳಿಗ್ಗೆ ೧೦ಗಂಟೆಗೆ ದೂರದ ಖಾಸಗಿ ನರ್ಸಿಂಗ್ ಹೋಂಗೆ ಹೊರಟೆವು. ವೈದ್ಯರು ನಮ್ಮ ಕಥೆಯನ್ನು ಸಹಾನುಭೂತಿಯಿಂದ ಕೇಳಿದರು. ಇಬ್ಬರ ಟೆಸ್ಟ್ ಕೂಡ ಮಾಡಬೇಕೆಂದು ತಿಳಿಸಿದರು. ಅಕಸ್ಮಾತ್ ಈಗ ರಿಪೋರ್ಟ್ ನೆಗಟಿವ್ ಬಂದರೂ, ಆರು ತಿಂಗಳಾದ ಮೇಲೆ ಇನ್ನೊಮ್ಮೆ ಮಾಡಿಸಬೇಕೆಂದು, ಆಗಲೂ ನೆಗೆಟಿವ್ ಬಂದರೆ ನಂತರ ನಿಶ್ಚಿಂತೆಯಾಗಿರಬಹುದೆಂದು ತಿಳಿಸಿದರು. ಸರಿ ದೇವರ ಮೇಲೆ ಭಾರ ಹಾಕಿ ಟೆಸ್ಟ್ ಮಾಡಿಸಿದೆವು. ರಿಪೋರ್ಟ್ ನೋಡಿದ ಕೂಡಲೇ ಎದೆ ಧಸಕ್ಕೆಂದಿತ್ತು. ಇಬ್ಬರದೂ HIV + ಆಗಿತ್ತು. ನಿಂತಿದ್ದ ನೆಲವೇ ಕುಸಿದಿದ್ದರೂ, ಎದೆ ಡವಡವ ಎನ್ನುತ್ತಿದ್ದರೂ ಸಮಾಧಾನ ಮಾಡಿಕೊಂಡೆ. ಇನ್ನೂ ಬದುಕಿನಲ್ಲಿ ಆಶಾಕಿರಣವಿದೆಯೇ? ಗೊತ್ತಿಲ್ಲ. ವೈದ್ಯರನ್ನು ಕೇಳಿದೆ ’ಹೊಟ್ಟೆಯಲ್ಲಿದ್ದ ಮಗುವಿನ ಗತಿಯೇನು? ತೆಗೆಸಿಬಿಡುವುದೇ?" ವೈದ್ಯರು ಸಮಾಧಾನದಿಂದ ತಿಳಿಸಿ ಹೇಳಿದರು "ಈಗ ಹೊಟ್ಟೆಯಲ್ಲಿರುವ ಮಗುವಿಗೆ ಬರದಂತೆ ಔಷಧಗಳು ಬಂದಿವೆ. ನಿಮ್ಮ ಮಗುವಿಗೆ ಬರದಂತೆ ಕಾಪಾಡಿಕೊಳ್ಳಬಹುದು". ಸ್ವಲ್ಪ ಸಮಾಧಾನವಾಯಿತು. ಅಲ್ಲಿಂದ ವಾಪಾಸ್ಸು ಬಂದೆವು

ಅವಿನಾಶನಿಗೆ ನನ್ನನ್ನು ನೋಡುವ ಧೈರ್ಯವಿರಲೇ ಇಲ್ಲ. ಈಗೇನು ಮಾಡುವುದು? ಅಣ್ಣನಿಗೆ ಹೇಳಿ, ವಿಷಯವನ್ನು ದೊಡ್ಡದು ಮಾಡಲಿಷ್ಟವಿರಲಿಲ್ಲ. ಅವಿನಾಶ್ ನ ತಂದೆ ತಾಯಿ ತೀರಿ ಹೋಗಿ, ಅವನಿಗೂ ಅವನ ಇತರ ಕುಟುಂಬದವರೊಡನೆ ಅಷ್ಟಾಗಿ ಬಳಕೆಯಿರಲಿಲ್ಲ. ಅವಿನಾಶ್ ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಬೇಕಿತ್ತು. ಅವನೇನು ಮಾಡಿಕೊಳ್ಳುವನೋ ಎಂಬ ಭಯ. ಅಲ್ಪ ಸ್ವಲ್ಪ ಈ ಕಾಯಿಲೆಯ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದಿತ್ತು. ನನ್ನೆಲ್ಲಾ ಬುದ್ಧಿಯನ್ನು ಖರ್ಚು ಮಾಡಿ ಅವಿನಾಶನಿಗೆ ತಿಳಿ ಹೇಳಲೆತ್ನಿಸಿದೆ. ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಇನ್ನೊಮ್ಮೆ ತೋರಿಸುವ, ನೆಗೆಟೀವ್ ಬರಬಹುದೆಂಬ ಹುಸಿ ಪ್ರಯತ್ನವನ್ನು ಮಾಡಿದೆ. ನನ್ನೆಲ್ಲ ಮಾತುಗಳನ್ನು ಕೇಳಿದ ಅವಿನಾಶ್ ಭೋರೆಂದು ಅತ್ತ. ’ನಾ ನಿನಗೆ ಅನ್ಯಾಯ ಮಾಡಿದೆ’ ಎಂದ. ’ನಿನಗಾಗಿಯಾದರೂ ನಾ ಬದುಕುತ್ತೇನೆ’ ಎಂದ. ಸ್ವಲ್ಪ ಆತ್ಮ ವಿಶ್ವಾಸ ಮೂಡಿತು.

ನನ್ನ ಬದುಕಿನ ಇನ್ನೊಂದು ಮಜಲು ಶುರುವಾಯಿತು. ಎಲ್ಲ ಆಸ್ಪತ್ರೆಗಳನ್ನು ಸುತ್ತಿ ಬಂದೆ. ಈ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಲು ಮುಂದಾದೆ. ನನ್ನ ಮಗುವಿನ ಭವಿಷ್ಯಕ್ಕಾಗಿಯಾದರೂ ನಾವಿಬ್ಬರೂ ಉಳಿಯಬೇಕಿತ್ತು. ನೆಟ್ ನಲ್ಲಿ, ಈ ರೋಗಕ್ಕೆ ತುತ್ತಾದವರ ಕಥೆಗಳನ್ನು, ಪರಿಹಾರಗಳನ್ನು ಓದಿ ಅದನ್ನೆಲ್ಲಾ ನಾನು ಮನೆಯಲ್ಲಿ ಮಾಡಲು ಮುಂದಾದೆ. ಮುಖ್ಯವಾಗಿ ಇನ್ನಾವುದೇ ಕಾಯಿಲೆಗಳು ಬರದಂತೆ ನಾವಿಬ್ಬರೂ ಜಾಗರೂಕರಾಗಿರಬೇಕಿತ್ತು. ಬೆಂಗಳೂರಿನಲ್ಲಿ ಈ ಕಾಯಿಲೆಗೆ ತುತ್ತಾದವರಿಗೆಂದೇ ಇದ್ದ ಕರುಣಾಶ್ರಯಕ್ಕೂ ಹೋಗಿ ಬಂದೆವು. ಅವರೊಂದಿಗೆ ಬೆರೆತೆವು. ನಮ್ಮಂತೆಯೇ ಇನ್ನೂ ಕೆಲವರಾದರೂ ಇರುವರಲ್ಲಾ ಅನಿಸಿ ಸಮಾಧಾನವಾಯಿತು, ಮರುಕ್ಷಣವೇ ಆ ಯೋಚನೆ ಬಂದಿದ್ದಕ್ಕೆ ನನ್ನ ಬಗ್ಗೆ ನನಗೆ ಅಸಹ್ಯವೆನಿಸಿತು. ನೋವಿನಲ್ಲೂ ಮನುಷ್ಯ ಜೊತೆ ಬೇಡುತ್ತಾನಲ್ಲಾ ಅನಿಸಿತು. ನೋವಿನ ಸಂಗತಿಯೆಂದರೆ ಏನೂ ತಪ್ಪೇ ಮಾಡದಿದ್ದ ಮುಗ್ಧ ಮಕ್ಕಳು ಅಲ್ಲಿ ನರಳುತ್ತಿದ್ದದ್ದು. ಪಾಪ ಆ ಹಸುಳೆಗಳ ತಪ್ಪೇನು ಇತ್ತು?

ಕರುಣಾಶ್ರಯಕ್ಕೆ ಹೋಗಿ ಬಂದ ಮೇಲೆ ಸ್ವಲ್ಪ ಆತಂಕ ಕಡಿಮೆಯಾಗಿತ್ತು. ಅಲ್ಲಿನ ನಿರ್ವಾಹಕಿ ಈ ಕಾಯಿಲೆಗೆ ಔಷಧವಿನ್ನೂ ಕಂಡುಹಿಡಿಯುವ ಹಂತದಲ್ಲಿದೆಯೆಂದೂ, ಆರೋಗ್ಯವನ್ನು ಉತ್ತಮ ಮಟ್ಟದಲ್ಲಿ ಕಾಪಾಡಿಕೊಂಡರೆ ಅದು aids ಗೆ ತಿರುಗದಂತೆ ನೋಡಿಕೊಳ್ಳಬಹುದೆಂದು ಹೇಳಿದಳು. ಎಷ್ಟೋ ಜನರು ೧೦ -೧೫ ವರ್ಷಗಳಿಂದ HIV + ಆಗಿದ್ದರೂ ಇನ್ನೂ ಆರೋಗ್ಯವಾಗಿಯೇ ಇದ್ದಾರೆಂದು ತಿಳಿಸಿದಳು. ಇದು ಕೂಡಾ ಮಧುಮೇಹ, ರಕ್ತದೊತ್ತಡದಂತೆಯೇ, ಒಮ್ಮೆ ಬಂದರೆ ಪೂರ್ತಿಯಾಗಿ ನಿವಾರಿಸಲು ಸಾಧ್ಯವಿಲ್ಲ. ಬರದಂತೆ ನೋಡಿಕೊಳ್ಳಬಹುದೇ ವಿನಃ, ಬಂದ ಮೇಲೆ ಏನೂ ಮಾಡಲಾಗುವುದಿಲ್ಲ ಎಂದೆಲ್ಲಾ ಹೇಳಿದಳು. ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಹಲವಾರು ಸೊಪ್ಪುಗಳ ಕಷಾಯದ ಬಗೆ, ಆಹಾರದಲ್ಲಿ ಪಥ್ಯ, ಮುಂತಾದವುಗಳ ಬಗ್ಗೆ ತಿಳಿಸಿದಳು. ನನಗಾಗಲೇ ೬ ತಿಂಗಳಾಗಿತ್ತು. ಅಣ್ಣ ಅತ್ತಿಗೆಗೆ ಈಗ ನಮ್ಮಿಬ್ಬರ ಕಾಯಿಲೆ ಬಗ್ಗೆ ಗೊತ್ತಾಗಿತ್ತು. ಅವರು ಅಪವಾದಕ್ಕೆ ಹೆದರಿ ನಮ್ಮನ್ನು ದೂರ ಇಟ್ಟರು. ಸುತ್ತಮುತ್ತ ಜನ ನಮ್ಮನ್ನು ಅಸ್ಪ್ರಶ್ಯರಂತೆ ಕಾಣಹತ್ತಿದರು. ಈ ಕಾಯಿಲೆಯಿಂದಾಗಿ ಅವಿನಾಶ್ ಕೆಲಸವನ್ನು ಕೂಡಾ ಕಳೆದುಕೊಂಡ. ಇದ್ದ ಅಲ್ಪ ಸ್ವಲ್ಪ ಉಳಿತಾಯದಲ್ಲಿ ನಮ್ಮ ಜೀವನ ನಡೆಯುತ್ತಿತ್ತು. ಮುಂದೇನು ಗತಿ? ಎಂಬ ಭಯವಿದ್ದರೂ, ಗರ್ಭದಲ್ಲಿದ್ದ ಕಂದನ ಒದೆತ, ನಲಿದಾಟ, ಈ ನೋವೆಲ್ಲವನ್ನೂ ಮರೆಸುವಂತೆ ಮಾಡುತ್ತಿತ್ತು.

ಮುಂದುವರಿಯುವುದು ...........................

Rating
No votes yet

Comments