ಪಟಾಕಿ ಸಿಡಿಸಿದ್ದಕ್ಕೆ ಪಾತಕಿ ಪಟ್ಟವೇ?!

ಪಟಾಕಿ ಸಿಡಿಸಿದ್ದಕ್ಕೆ ಪಾತಕಿ ಪಟ್ಟವೇ?!

(ಬೊಗಳೂರು ಪರದೇಸಿ ಬ್ಯುರೋದಿಂದ)
ಬೊಗಳೂರು, ಜೂ.6- ಭಾರತದಲ್ಲಿ ಸಣ್ಣ ಪುಟ್ಟ ಅಪರಾಧಗಳನ್ನು ಮಾಡುತ್ತಾ, ಒಂದೆರಡು ಇರುವೆ, ನಾಯಿಮರಿ, ಬೆಕ್ಕಿನ ಮರಿಗಳನ್ನಷ್ಟೇ ಕೊಂದಿದ್ದ ದಾವೂದ್ ಇಬ್ರಾಹಿಂನನ್ನು ಅಮೆರಿಕವು ಪಾತಕಿ ಎಂದು ಘೋಷಿಸಿರುವುದು ವಿಶೇಷವಾಗಿ ಪಾತಕಿಸ್ತಾನದ ಹುಬ್ಬೇರಿಸಿದೆ.

ಭಾರತದಲ್ಲಿ ಒಂದೆರಡು ನೊಣಗಳನ್ನು ಕೊಂದು, ಮುಖಕ್ಕೆ ಹಾಕುವ ಬಿಳಿ ಪುಡಿ (ಅದಕ್ಕೆ ಹೆರಾಯ್ನ್, ಚರಸ್ ಇತ್ಯಾದಿ ಹಣೆಪಟ್ಟಿ), ಒಂದೆರಡು ಆಟಿಕೆ ಎ.ಕೆ.-47 ಬಂದೂಕುಗಳು ಇತ್ಯಾದಿಗಳನ್ನು ಸಾಗಿಸುತ್ತಿದ್ದರೂ ಕಸ್ಟಮ್ಸ್ ಅಧಿಕಾರಿಗಳು ಅದನ್ನು ಕಂಡೂ ಕಾಣದಂತೆ ಮುಖ ತಿರುಗಿಸಿ, ಎಲ್ಲವೂ ರವಾನೆಯಾದ ಬಳಿಕ ಆತನನ್ನು "ಕಳ್ಳ ಸಾಗಾಟಗಾರ" ಅಂತ ಘೋಷಿಸಿ ದಾವೂದ್‌ಗೆ ಅನ್ಯಾಯ ಎಸಗಿದ್ದಾರೆ ಎನ್ನುವುದು ಪಾತಕಿಸ್ತಾನದ ವಾದ.

ಮುಂಬಯಿಯಲ್ಲಿ ಆತ ಸಣ್ಣಪುಟ್ಟ ನೆಲಗುಮ್ಮದಂತಹ ಬೆಳ್ಳುಳ್ಳಿ ಪಟಾಕಿ ಸಿಡಿಸಿ ದೀಪಾವಳಿ ಅಚರಿಸಿದ ಎಂದ ತಕ್ಷಣ ಭಾರತೀಯರು ಸರಣಿ ಬಾಂಬ್ ಸ್ಫೋಟ ಎಂದು ಕೂಗಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಾಗ್ಗೆ ಪಟಾಕಿ ಸಿಡಿಸುತ್ತಾ ವಿಶಿಷ್ಟವಾದ ಹೋಮ ಆಚರಿಸುತ್ತಿದ್ದ ಅಲ್ ಖೈದಾ ಸೌಮ್ಯಗಾಮಿಗಳ ಪಡೆಗೂ ಆತನ ಪರಮ ಬೆಂಬಲವಿದೆ ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತಿದೆ. ಈ ಹೋಮವನ್ನೇ ಭಾರತವು ಮಾರಣ ಹೋಮ ಅಂತ ಹೆಸರಿಟ್ಟು ಬೊಬ್ಬಿಡುತ್ತಿದೆ ಎಂದು ದೂರಿರುವ ಪಾಕಿಸ್ತಾನದ ಪರಮಪಾತಕಿ ಸಾಮಾನ್ಯ (ಜನರಲ್) ವ್ಯಕ್ತಿಯು ಈಗ ಅಮೆರಿಕದ ವಿರುದ್ಧ ಜೋರಾಗಿ ಮನಬಂದಂತೆ ಬೊಬ್ಬಿರಿಯುವುದಾಗಿ ಘರ್ಜಿಸಿದ್ದಾನೆ. ಇಲ್ಲದಿದ್ದಲ್ಲಿ ಡಸ್ಟ್ ಬಿನ್ ಲಾಡೆನ್ ತನ್ನನ್ನು ಸುಮ್ಮನೆ ಬಿಡಲಾರನೆಂಬುದು ಆತನ ಆತಂಕ.

ದಾವೂದ್ ಪಾತಕಿಸ್ತಾನದಲ್ಲಿ ಸಣ್ಣ ಸಣ್ಣ ಕೆಲವು ಗುಡಿಸಲುಗಳಲ್ಲಿ ವಾಸಿಸುತ್ತಿದ್ದರೂ, ಆತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ, ಪಾಕಿಸ್ತಾನವು ಅವನಿಗೆ ರಾಜಾಶ್ರಯ ನೀಡಿದೆ ಎಂದು ಭಾರತ-ಅಮೆರಿಕಗಳು ಗುಲ್ಲೆಬ್ಬಿಸುತ್ತಿವೆ ಎಂದು ದೂರಿರುವ "ಪರವಾಗಿಲ್ಲ ರಫ್ ಮೀಸೆ" ಅವರು, ಇಷ್ಟು ಬೇಗನೆ ದಾವೂದ್‌ನನ್ನು ಪರಮ ಪಾತಕಿ ಎಂದು ಹೆಸರಿರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಪಾತಕಿ ಹಣೆಪಟ್ಟಿ ಅಂಟಿಸುವ ಮೊದಲು ನಮ್ಮಲ್ಲಿ ಒಂದು ಮಾತು ಕೇಳಬಹುದಿತ್ತು. ಇದರಿಂದ ಅಮೆರಿಕ ಮತ್ತು ಭಾರತದ ವಿರುದ್ಧ ದಾವೂದ್‌ ತನ್ನೆಲ್ಲಾ ಘನಕಾರ್ಯಗಳನ್ನು ಪೂರ್ಣವಾಗಿ ಸಿದ್ಧ ಮಾಡಿಟ್ಟುಕೊಳ್ಳಲು ಸಹಾಯವಾಗುತ್ತಿತ್ತಲ್ಲ ಎಂಬುದು "ಪರವಾಗಿಲ್ಲ ರಫ್ ಮೀಸೆ"ಯ ಆಕ್ಷೇಪ. ಅಲ್ಲದೆ, ದಾವೂದ್ ಕೂಡ ಒಂದಿಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬಹುದಿತ್ತಲ್ಲ ಅನ್ನೋದು ಆಕ್ಷೇಪ.

ಪೂರ್ಣ ವರದಿ: bogaleragale.blogspot.com ನಲ್ಲಿದೆ.

Rating
No votes yet

Comments