ಬಡವರ ನಿರ್ಮೂಲನೆಯೇ UPA ಗುರಿ: ನಿಧಾನಿ
(ಬೊಗಳೂರು ಜನಪರ ಬ್ಯುರೋದಿಂದ)
ಬೊಗಳೂರು, ಜೂ.6- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಬಗ್ಗೆ ಕೇಂದ್ರದಲ್ಲಿರುವ Unprecedented Price Agenda ಸರಕಾರ ಸ್ಪಷ್ಟನೆ ನೀಡಿದ್ದು, ಕೃಷಿ ಆಧಾರಿತ ರಾಷ್ಟ್ರವಾದ ಭಾರತದಲ್ಲಿ ಕೃಷಿ ಸಂಪನ್ಮೂಲ ರಕ್ಷಣೆಗೆ ಇದು ಪೂರಕ ಎಂದು ಸ್ಪಷ್ಟಪಡಿಸಿದೆಯಲ್ಲದೆ ಬಡವರ ನಿರ್ಮೂಲನೆಯೇ ಸರಕಾರದ ಗುರಿ ಎಂದು (ಜನಸಾಮಾನ್ಯರನ್ನು ಕಾಲಿನಿಂದ) ಒತ್ತಿ ಒತ್ತಿ ಹೇಳಿದೆ.
ನಾವು ಅಧಿಕಾರಕ್ಕೆ ಬಂದ ಎರಡು ವರ್ಷದೊಳಗೆ ಪೆಟ್ರೋಲಿಯಂ ಉತ್ಪನ್ನದ ಬೆಲೆಯನ್ನು ದಾಖಲೆ 7ನೇ ಬಾರಿ ಏರಿಸಿದ್ದೇವೆ ಎಂದು ಕೊಚ್ಚಿಕೊಂಡ ನಿಧಾನಿ ಮನಮೋಹಕ್ ಅವರು, ಇದರಿಂದ ಸರಕು ಸಾಗಾಟ ಬೆಲೆ ಏರಿಕೆಯೊಂದಿಗೆ ತರಕಾರಿ ಬೆಲೆಯೂ ಏರುತ್ತದೆ. ಮತ್ತೆ ರಿಕ್ಷಾ, ಟ್ಯಾಕ್ಸಿ, ಬಸ್ ಪ್ರಯಾಣದರ ಹೆಚ್ಚಳ ಅನಿವಾರ್ಯ. ಒಟ್ಟಿನಲ್ಲಿ ಜನಸಾಮಾನ್ಯರು ಬದುಕಲು ಬೇಕಾದ ಜೀವನಾವಶ್ಯಕ ವಸ್ತುಗಳನ್ನು ಆಕಾಶದೆತ್ತರಕ್ಕೆ ಯಾರಿಗೂ ಸಿಗದಷ್ಟು ಹಾರಿಸುವ ಸಾಧನೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದರಿಂದ ಈ ದೇಶದಲ್ಲಿ ಬಡವರೇ ಇನ್ನಿಲ್ಲದಂತೆ ಮಾಡುವ ನಮ್ಮ (ತುಳಿಯುವ) ಕಾರ್ಯಾಚರಣೆಗೆ ಆನೆ ಬಲ ಬಂದಂತಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಕೃಷಿ ಸಂಪನ್ಮೂಲ ಸುರಕ್ಷಿತ: ಪೆಟ್ರೋಲ್ ಬೆಲೆಯನ್ನು ಆಗಾಗ ಏರಿಸುತ್ತಲೇ ಇರುತ್ತೇವೆ, ತತ್ಪರಿಣಾಮವಾಗಿ ತರಕಾರಿ, ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರುತ್ತದೆ. ಏರಿದ ಬೆಲೆಯಿಂದಾಗಿ ಅದನ್ನು ಯಾರೂ ಖರೀದಿಸಲು ಅಸಾಧ್ಯ. ಹೀಗಿರುವಾಗ ದೇಶದ ಬೆಳೆಗಳು ಸಮೃದ್ಧವಾಗಿ ಕೃಷಿಕರ ಬಳಿಯಲ್ಲೇ ಸುರಕ್ಷಿತವಾಗಿ ಉಳಿಯುತ್ತವೆ. ಈ ರೀತಿ ಬೆಲೆ ಕೈಗೆಟುಕದಷ್ಟು ಎತ್ತರಕ್ಕೇರಿದರೆ ಯಾವ ನನ್ಮಗ ತಾನೇ ತರಕಾರಿ ತಿನ್ನುವ ದುಸ್ಸಾಹಸಕ್ಕಿಳಿಯುತ್ತಾನೆ? ಇದರಿಂದ ಕೃಷಿಯ ರಕ್ಷಣೆಯಾದಂತಾಗುವುದಿಲ್ಲವೇ? ಎಂದು ಪೆಟ್ರೋಲಿಯಂ ಸಚಿವ ಮುರಳಿ (ಅಯ್ಯೋ) ದೇವ್ರೇ ಪ್ರಶ್ನಿಸಿದ್ದಾರೆ.
ನರಕ ಶಿಕ್ಷೆಗೆ "ಅನುಭವ" ಅಗತ್ಯ: ಬೆಲೆ ಹೆಚ್ಚಳದಿಂದಾಗಿ ಜನ ಜೀವನ ನರಕ ಸದೃಶವಾಗುತ್ತದೆ. ಜನರು ಎಷ್ಟು ಚೆನ್ನಾಗಿ ನರಕಸದೃಶ ಜೀವನ ಅನುಸರಿಸುತ್ತಾರೆ ಎಂಬುದನ್ನು ನೋಡಲು ನಮಗೆ ತುಂಬಾ ಆಸೆಯಾಗಿದೆ. ಜನರಿಗೂ ಭೂಮಿಯಲ್ಲಿದ್ದುಕೊಂಡೇ ನರಕದಲ್ಲಿ ಯಾವ ರೀತಿಯೆಲ್ಲಾ ಶಿಕ್ಷೆ ಎದುರಿಸಬಹುದು ಎಂಬುದರ ಅನುಭವ ದೊರೆಯುತ್ತದೆ. ಮುಂದೆ ನರಕಕ್ಕೆ ಹೋದಾಗ ಈ Experience ಅವರಿಗೆ ತುಂಬಾ ಪ್ರಯೋಜನಕ್ಕೆ ಬರುತ್ತದೆ. ಅಲ್ಲಿ ಕೂಡ ಅನುಭವವಿದ್ದವರಿಗೆ ಪ್ರಾಶಸ್ತ್ಯವಿರುವುದರಿಂದ ಭಾರತದಿಂದ ಬಂದವರಿಗೆ ಮನ್ನಣೆ ದೊರೆಯುತ್ತದೆ ಎಂದು ನಿಧಾನಿ ಕಾರ್ಯಾಲಯವು ಸ್ಪಷ್ಟನೆಯಲ್ಲಿ ತಿಳಿಸಿದೆ.
ಇದಲ್ಲದೆ, ಈ ಜನ್ಮದಲ್ಲಿ ಮಾಡಿದ ಪಾಪಕರ್ಮಗಳಿಗೆ ಇಲ್ಲೇ ಶಿಕ್ಷೆ ಅನುಭವಿಸಿದರೆ, ನರಕಕ್ಕೆ ಹೋದ ಮೇಲೆ ಕುದಿಯುವ ಎಣ್ಣೆಯಲ್ಲಿ ತೇಲಾಡುವ ಶಿಕ್ಷೆಯಿಂದ ಕಡಿತ ದೊರೆಯಬಹುದು ಎನ್ನುವುದು ನಿಧಾನಿ ಕಾರ್ಯಾಲಯದ ವಿಶ್ವಾಸ.
ಬೆಲೆಗಳ ರಾಕೆಟ್: ಅಮೆರಿಕ, ರಷ್ಯಾ ಮುಂತಾದ ರಾಷ್ಟ್ರಗಳು ಮಂಗಳ ಗ್ರಹ, ಚಂದ್ರ ಮುಂತಾದ ಗ್ರಹಗಳಿಗೆ ರಾಕೆಟ್ ಹಾರಿಬಿಡುತ್ತಾರೆ. ಈ ನಿಟ್ಟಿನಲ್ಲಿ ನಮ್ಮದು ಬೆಲೆಯನ್ನಾದರೂ ಬಾಹ್ಯಾಕಾಶಕ್ಕೆ ಹಾರಿಬಿಡುವ ಸಣ್ಣ ಪ್ರಯತ್ನವಷ್ಟೆ ಎಂದು ಪ್ರಧಾನಿ ಕಾರ್ಯಾಲಯದ ಪರವಾಗಿ ಪತ್ರಿಕಾ ಹೇಳಿಕೆ ಪ್ರಕಟಿಸಿರುವ ಸಾನಿಯಾ ಗಾಂಧಿ ಕಾರ್ಯ ಲಯ ತಿಳಿಸಿದೆ.
Read http://BogaleRagale.blogspot.com