ಮಕ್ಕಳನ್ನು ‘ಮಸಣ’ಕ್ಕಟ್ಟಲು ಹವಣಿಸಿದ ‘ಕಲ್ಯಾಣ’ ಮಂಟಪದವರು!

ಮಕ್ಕಳನ್ನು ‘ಮಸಣ’ಕ್ಕಟ್ಟಲು ಹವಣಿಸಿದ ‘ಕಲ್ಯಾಣ’ ಮಂಟಪದವರು!

ಬರಹ

ಮಗುವಿನ ಹವಳದಂತಹ ತುಟಿಗಳು. ಅಮೃತ ಸಮಾನ ತಾಯಿಯ ಸ್ತನಪಾನ ಮಾಡಲು ಹವಣಿಸುತ್ತಿರುವ ಕಂದಮ್ಮ. ಈ ಅದ್ಭುತ ಕ್ಷಣಗಳ ಮಧ್ಯೆ ಜಪಾನಿನಲ್ಲಿ ತಯಾರಾದ ಗಾಜಿನ ಬಾಟಲಿ. ದಕ್ಷಿಣ ಆಫ್ರಿಕಾದ ಕಾಡುಗಳ ರಬ್ಬರ್ ನಿಂದ ತಯಾರಿಸಲಾದ ನಿಪ್ಪಲ್. ಅದರಲ್ಲಿ ಡೆನ್ಮಾರ್ಕ್ ದೇಶದಿಂದ ಆಮದು ಮಾಡಕೊಳ್ಳಲಾದ ಹಾಲಿನ ಪುಡಿಯ ಪೇಯ. ಈ ಪೇಯವನ್ನು ಕುಡಿಸಲು ಆಯಾ ಅಥವಾ ಇನ್ನರೋ ತಿಂಗಳ ಪಗಾರ ಆಧಾರದಲ್ಲಿ ನೇಮಕ. ಇದು ಅಭಿವೃದ್ಧಿ. ಮುಂದುವರೆದಿದ್ದೇನೆ ಎಂಬ ಭ್ರಮೆಯಲ್ಲಿ ಮಾನವ ಬದುಕುವ ರೀತಿ. ಧನಕ್ಕಾಗಿ ಧರ್ಮವನ್ನು ಮರೆತ ಪ್ರಾಣಿಯ ಸ್ಥೂಲ ಪರಿಚಯವಿದು.

ಹೀಗೆಯೇ ಈ ವಿಷ ವರ್ತುಳದ ಪ್ರಭಾವ ಹಾಗು ಪರಿಣಾಮಗಳ ಕುರಿತು ನೂರಾರು ಜನ ಅವರ ಮಾತನ್ನು ತದೇಕ ಚಿತ್ತದಿಂದ ಆಲಿಸುತ್ತಿತ್ತು. ಇದ್ದಕ್ಕಿದ್ದಂತೆ ಗಂಟಲು ಕಟ್ಟಿತು. ಎರಡೂ ಕೈಗಳಿಂದ ಹಣೆ ಹಾಗು ಕೆನ್ನೆಯ ಬೆವರನ್ನು ಅವರು ಒರೆಸಿಕೊಂಡರು. ಕಣ್ಣೀರ ಹನಿಗಳು ತೊಟ್ಟಿಕ್ಕಿದವು. ಪಕ್ಕದಲ್ಲಿದ್ದವರ ಕ್ಷಮೆ ಕೇಳಿ ಒಂದು ಲೋಟ ನೀರು ಕುಡಿದರು. ತೀವ್ರ ಭಾವನಾತ್ಮಕವಾಗಿದ್ದಕ್ಕೆ ನೆರೆದವರ ಕ್ಷಮೆ ಕೇಳಿದರು. ಎಲ್ಲರ ಕಣ್ಣುಗಳು ಸಹ ಹನಿಗೂಡಿದ್ದವು. ಕ್ಷಣಕಾಲ ಅಲ್ಲಿ ನೀರವ ನಿಷ್ಯಬ್ದ.

ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಸರ್ವೋದಯ ಮಹಾಸಂಘದ ಗ್ರಾಮ ಚೇತನ ಸಭಾಂಗಣ. ಕೃಷಿ ಮಾಧ್ಯಮ ಕೇಂದ್ರದ ವಾರ್ಷಿಕ ಘಟಿಕೋತ್ಸವದಲ್ಲಿ ವಿಷಯ ಪ್ರವೇಶ ಭಾಷಣ ಮಾಡಿದ್ದ ಅಭ್ಯುದಯ ಪತ್ರಕರ್ತ, ಪರಿಸರ ವಿಜ್ಞಾನಿ ಬಕ್ಕೇಮನೆ ನಾಗೇಶ ಹೆಗಡೆ ಹೀಗೆ ಕೇಳುಗರನ್ನು ಒಂದು ಕ್ಷಣ ಚಿಂತಾಕ್ರಾಂತರನ್ನಾಗಿಸಿದ್ದರು.

ಕರ್ನಾಟಕದ ಒಂದು ಯಾವುದೋ ಮೂಲೆಯ ಹೋಬಳಿ. ಅಲ್ಲಿ ತೀವ್ರ ಬರಗಾಲ. ನೀರು-ಅನ್ನ-ಆಹಾರವಿಲ್ಲದೇ ಜನ-ದನ ಕಂಗೆಟ್ಟಿದ್ದಾರೆ. ಜೀವ ಜಂತುಗಳ ಅಸಡ್ಡೆಯ ಪ್ರತಿ ಪರಿಸರ ಸಿಟ್ಟಿಗೆದ್ದು ಹಟ ಸಾಧಿಸಿದಂತಿದೆ. ದಾರಿಗಾಣದೇ, ಉಪಾಯ ಹೊಳೆಯದೇ ಗ್ರಾಮಸ್ಥರೆಲ್ಲ ಸೇರಿ ಗ್ರಾಮ ದೈವದ ಎದುರು ಪೂಜೆ ಸಲ್ಲಿಸಿ, ವರುಣ ದೇವರನ್ನು ಪ್ರಾರ್ಥಿಸಿ, ಒಲಿಸಿಕೊಳ್ಳಲು ನಿರ್ಧರಿಸುತ್ತಾರೆ. ಪೂರ್ವ ನಿಗದಿಯಂತೆ ನೂರಾರು ರೈತರು, ರೈತ ಮಹಿಳೆಯರು ಗ್ರಾಮದ ದೈವದ ಎದುರು ಪ್ರಾರ್ಥಿಸಲು ಸನ್ನದ್ಧರಾಗಿತ್ತಾರೆ.

ಅವರಲ್ಲಿ ಓರ್ವ ಬಾಲಕ ಮಾತ್ರ ಛತ್ರಿ ಸಮೇತ ದೈವದ ಎದುರು ವರುಣ ದೇವರಿಗೆ ಪ್ರಾರ್ಥಿಸಲು ಆಗಮಿಸುತ್ತಾನೆ! ಇದು ಮಕ್ಕಳ ನಂಬಿಕೆ, ಶೃದ್ಧೆ ಹಾಗು ಅಚಲವಾದ ಕಪಟವಿಲ್ಲದ ವಿಶ್ವಾಸ ಅಂದ್ರು ನಾಗೇಶಜಿ. ಕಾರಣ ಅಲ್ಲಿಗೆ ಪ್ರಾರ್ಥಿಸಲು ಬಂದ ಹಿರಿಯರಿಗೆ ಶೃದ್ದೆಯಿಲ್ಲ ಸ್ವಹಿತಾಸಕ್ತಿ ಇತ್ತು; ಆದರೆ ಮಗುವಿಗೆ ಭಗವಂತನಲ್ಲಿ ಅಚಲವಾದ ನಿಂಬಿಕೆ ಇತ್ತು. ಹಾಗಾಗಿ ಭಗವಂತ ಈತನ ಒಳ್ಳೆ ಮನಸ್ಸಿಗೆ ಮೆಚ್ಚಿ ಮಳೆ ಬರಿಸುತ್ತಾನೆ. ಮಳೆ ಬಂದರೆ ಇವನೊಬ್ಬನೇ ತೋಯಿಸಿಕೊಳ್ಳದೇ ಬರಬಲ್ಲ!

ಬೆಳೆ ನಾಶವಾಗುತ್ತದೆ ಎಂದೋ, ಬೇಟೆಯ ಹಪಾಹಪಿಯಿಂದಲೋ, ಅಮೂಲ್ಯ ಚರ್ಮ, ನಖ, ಕೊಂಬುಗಳಿಗಾಗ್ಯೋ ಜನ ಕಾಡಿನ ಪ್ರಾಣಿ-ಪಕ್ಷಿಗಳಿಗೆ ವಿಷ ಲೇಪಿತ ಆಹಾರ ಇಟ್ಟು ಕೊಲ್ಲಲು ಮೊದಲು ಮಾಡಿದ ಸಾಕಷ್ಟು ಪ್ರಕರಣಗಳನ್ನು ನಾವು ನೋಡಿದ್ದೇವೆ. ತಾನೇ ಅವುಗಳ ವಾಸ ಸ್ಥಳಗಳನ್ನು ಹಾಳುಗೆಡವಿದ್ದರೂ, ಅವುಗಳ ಬದುಕುವ ಹಕ್ಕನ್ನು ಕಸಿದಿದ್ದರೂ ಶಿಕ್ಷೆ ಆ ಮೂಕ ಪ್ರಾಣಿಗಳಿಗೆ! ಕಾರಣ ಭೂಮಿಯ ಮೇಲೆ ಜಾಣ ಹಾಗು ವಿಚಾರವಂತ ಪ್ರಾಣಿ ಮನುಷ್ಯ ಮಾತ್ರ. ಜೊತೆಗೆ ಇಡೀ ಪ್ರಪಂಚದ ಎಲ್ಲ ನಿಸರ್ಗ ಸಂಪತ್ತೂ ತನ್ನ ಆಸೆ, ಆಕಾಂಕ್ಷೆ ಹಾಗು ಇಚ್ಛೆಗಳನ್ನು ತಣಿಸಲೋಸುಗ ಇರುವುದು ಎಂದು ತಿಳಿದವ!

ಸರಿ. ಯಾವ ಪ್ರಾಣಿ- ಪಕ್ಷಿಯೂ ತನ್ನ ಮರಿಗಳನ್ನು ಆಯ ತಪ್ಪಿಯೂ ಘಾಸಿಗೊಳಿಸಲಾರವು. ಎಂತಹ ಕಠಿಣ ಸಂದರ್ಭದಲ್ಲಿಯೂ ಕೊಲ್ಲಲಾರವು. ತಮ್ಮ ಜೀವ ಒತ್ತೆ ಇಟ್ಟಾದರೂ ತಮ್ಮ ಮರಿ, ಮೊಟ್ಟೆಗಳನ್ನು ಅವು ರಕ್ಷಿಸಿಕೊಳ್ಳುತ್ತವೆ. ಕೊನೆಗೆ ಅಸಹಾಯಕ ಪರಿಸ್ಥಿತಿ ಎದುರಾದಾಗ ನಮ್ಮಂತಹ ಮಾನವರ ಸಹಾಯವನ್ನಾದರೂ ಕೂಗಿ ಅಂಗಲಾಚಿ ಬೇಡುತ್ತವೆ. ಆದರೆ ಮನುಷ್ಯ..ಧನಕ್ಕಾಗಿ ತನ್ನ ಧರ್ಮವನ್ನೂ ಮಾರಿಬಿಡಬಲ್ಲ. ನಿನ್ನೆ ನಮ್ಮ ಸಾಂಸ್ಕೃತಿಕ ರಾಜಧಾನಿಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯೊಂದು ನಡೆಯಿತು. ಭಾನುವಾರ ಎಲ್ಲ ಪತ್ರಿಕೆಗಳೂ ಇದನ್ನು ಪ್ರಾಧಾನ್ಯತೆಯ ಮೇರೆಗೆ ಸುದ್ದಿ ರೂಪದಲ್ಲಿ ಪ್ರಕಟಿಸಿ ಉಪಕರಿಸಿದವು. ಸುದ್ದಿಯ ವಿಷಯ ‘ರಸ್ತೆಯ ಬದಿಯಲ್ಲಿ ಬಿದ್ದಿದ್ದ ಚಾಕೋಲೇಟ್ ತಿಂದು ೪ ಮಕ್ಕಳು ತೀವ್ರ ಅಸ್ವಸ್ಥವಾಗಿದ್ದವು’. ಇಬ್ಬರು ಮಕ್ಕಳ ಪರಿಸ್ಥಿತಿಯಂತೂ ಮಾರಣಾಂತಿಕವಾಗಿ ಪರಿಣಮಿಸಿತ್ತು. ಸುದೈವವಶಾತ್ ಸಕಾಲಿಕವಾಗಿ ಪ್ರಥಮ ಚಿಕಿತ್ಸೆ ದೊರಕಿದ್ದರಿಂದ ಎಲ್ಲ ಮಕ್ಕಳೂ ಪ್ರಾಣಾಪಾಯದಿಂದ ಪಾರಾಗಿ ಬದುಕುಳಿದವು.

ಆದರೆ, ನನಗೆ ಈ ಸುದ್ದಿಯ ಹಿಂದಿನ ಸತ್ಯಾಸತ್ಯತೆಯ ಬಗ್ಗೆ ಅನುಮಾನವಿತ್ತು. ಯಾವುದೋ ಕಾಣದ ಕೈಗಳ ಕೈವಾಡವಿರುವುದಾಗಿ ವಾಸನೆ ಹೊಡೆಯುತ್ತಿತ್ತು. ಸುದ್ದಿಗಾಗಿ ಸದಾ ಜಾಗೃತ ವಿರುವ ಸುದ್ದಿ ನಾಸಿಕ ನಿಜಕ್ಕೂ ನನ್ನನ್ನು ಸತ್ಯದ ಬಾಗಿಲಿಗೆ ತಂದು ನಿಲ್ಲಿಸಿತ್ತು. ಮನೆಯಲ್ಲಿ ಪಾಲಕರು, ಶಾಲೆಗಳಲ್ಲಿ ಶಿಕ್ಷಕರು ನಿತ್ಯ ರಸ್ತೆ ಬದಿಗೆ ಬಿದ್ದ ಯಾವುದೇ ವಸ್ತು ಅಥವಾ ತಿಂಡಿಯನ್ನು ಮುಟ್ಟದಂತೆ ಎಚ್ಚರಿಸುವುದನ್ನುನಿತ್ಯ ನಾವು ಕಾಣುತ್ತೇವೆ. ಆದರೂ ಮಕ್ಕಳು ಅದು ಹೇಗೆ ಇಷ್ಟು ಸುಲಭವಾಗಿ ವಿಷಕ್ಕೆ ತುತ್ತಾದವು? ಯಾರೋ ಪರಿಚಯಸ್ಥರೇ ಕೆಟ್ಟ ಉದ್ದೇಶದಿಂದ ಮಾಡಿರಬಹುದಾದ ಕೆಲಸವಿದು ಎಂದು ನನ್ನ ಮನಸ್ಸು ಹೇಳಿತು.

ಧಾರವಾಡದ ಮರಾಠಾ ಗಲ್ಲಿಯಲ್ಲಿ ಛತ್ರಪತಿ ಛಾಯಾ ಕಲ್ಯಾಣ ಮಂಟಪವಿದೆ. ಮಕ್ಕಳ ಆಡುವ ಆಟದ ಮೈದಾನದಲ್ಲಿ ಇದು ನಿರ್ಮಾಣಗೊಂಡಿದೆ ಎಂದು ನಾನು ವಿಶೇಷವಾಗಿ ಇಲ್ಲಿ ಉಲ್ಲೇಖಿಸಬೇಕಿಲ್ಲ. ನಿತ್ಯ ಈ ಕಲ್ಯಾಣ ಮಂಟಪದ ಆವರಣದಲ್ಲಿ ಆಡುತ್ತ ತಲೆ ಚಿಟ್ ಹಿಡಿಸುತ್ತಿದ್ದವು ಮಕ್ಕಳು. ಮಂಟಪದ ಮಾಲೀಕರಿಗೆ ಹಾಗು ಮ್ಯಾನೇಜರ್ ಅವರಿಗೆ ಈ ಮಕ್ಕಳನ್ನು ಅಲ್ಲಿಂದ ಓಡಿಸೋದೇ ನಿತ್ಯದ ಹರಸಾಹಸದ ಕೆಲಸವಾಗಿ ಪರಿಣಮಿಸಿತ್ತು. ಕೊನೆಗೆ ಅವರು ಕಂಡುಕೊಂಡ ದಾರಿ ಯಾವುದು ಗೊತ್ತೇ? ಇಲಿ-ಹೆಗ್ಗಣಗಳ ಉಪಟಳದಿಂದ ತಪ್ಪಿಸಿಕೊಳ್ಳಲು ನಾವು ಮಿರ್ಚಿ-ಭಜಿಯಲ್ಲಿ ವಿಷ ಇಟ್ಟಂತೆ, ಅಷ್ಟೇ ಸಹಜವಾಗಿ ಮಕ್ಕಳಿಗೆ ಇಷ್ಟವಾಗುವ ಚಾಕೋಲೇಟ್ ನಲ್ಲಿ ವಿಷ ಬೆರೆಸಿ ಇಟ್ಟರು! ಸುದರ್ಶನ ಸೂರ್ಯವಂಶಿ, ಪ್ರಕಾಶ ಕಚರೆ, ರೋಹಿತ್ ಶ್ರೀವಾಸ್ತವ್ ಹಾಗು ಸಚಿನ್ ಸೂರ್ಯವಂಶಿ ಚಾಕೋಲೇಟ್ ತಿಂದು ಅಸ್ವಸ್ಥರಾದ ಮಕ್ಕಳು.

ಅಲ್ಲಿಯೇ ಆಡುತ್ತಿದ್ದ ಮಕ್ಕಳು ದೊಡ್ಡವರ ಈ ಯಾವ ಹೊಲಸು ಬುದ್ದಿಯ ಅರಿವಿರದೇ ಪ್ರಾಂಜಲ ಮನಸ್ಸಿನಿಂದ ಚಾಕೋಲೇಟ್ ಎತ್ತಿ ಬಾಯಿಗೆ ಇಟ್ಟವು. ತಿಂದ ಅರ್ಧ ಗಂಟೆಯಲ್ಲಿಯೇ ಮಕ್ಕಳೆಲ್ಲ ತೀವ್ರ ಅಸ್ವಸ್ಥಗೊಂಡವು. ಆದರೆ `108 ICU ON WHEELS' ಆರೋಗ್ಯ ರಕ್ಷಾಕವಚ ಆಂಬುಲನ್ಸ್ ಸಕಾಲಿಕವಾಗಿ ಆಗಮಿಸಿ ಮಕ್ಕಳನ್ನು ಸಮೀಪದ ಡಾ.ಎಸ್.ಆರ್.ರಾಮನಗೌಡರ್ ಆಸ್ಪತೆಗೆ ಸಾಗಿಸಿತು. ೨೪ ಗಂಟೆಗಳ ನಿರಂತರ ಚಿಕಿತ್ಸೆಯ ನಂತರ ಮಕ್ಕಳು ಈಗ ಉಸಿರಾಡುವ ಸ್ಥಿತಿಗೆ ಬಂದಿವೆ.

ಸ್ಥಳೀಯ ಮುಖಂಡರು ವಿಷಯ ಅರಿತು, ಈಗ ಕಲ್ಯಾಣ ಮಂಟಪದ ಮುಖ್ಯಸ್ಥರನ್ನು ಕರೆಯಿಸಿ ಕೇವಲ ಛೀಮಾರಿ ಹಾಕಿ, ವೈದ್ಯಕೀಯ ಖರ್ಚು ಕೊಡುವಂತೆ ತಾಕೀತು ಮಾಡಿದ್ದಾರೆ. ಯಾವುದೇ ಪ್ರಕರಣವನ್ನು ಪೊಲೀಸರು ಇಲ್ಲಿಯವರೆಗೆ ದಾಖಲಿಸಿ ಕೊಂಡಿಲ್ಲ!

ಕೂಸಿದ್ದ ಮನಿಗೆ ಬೀಸಣಿಕೆ ಯಾತಕ?
ಕೂಸು ಕಂದವ್ವ ಒಳ, ಹೊರಗ
ಆಡಿದರ ತಣ್ಣನೆ ಗಾಳಿ ಬೀಸಿತೋ..//

ಕವಿಯೊಬ್ಬ ಹೀಗೆ ಮಗುವಿನ ಬಗ್ಗೆ ಬರೆದ ಸಾಲು ನನಗೆ ನೆನಪಾದವು. ಧನಕ್ಕಾಗಿ ಪಿಶಾಚಿಯಾಗಬಲ್ಲ ಮಾನವ ಧರ್ಮವನ್ನು ಮರೆತು ತನ್ನ ಕರುಳ ಕುಡಿಗೂ ವಿಷ ಉಣಿಸಲು ನಿಂತ..ಮೊನ್ನೆ ಚೆನ್ನೈನಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಒಬ್ಬ ತನ್ನ ೬ ದಿನದ ಹೆಣ್ಣು ಹಸುಗೂಸನ್ನು ಬಾವಿಗೆ ಎಸೆದು ಕ್ಷುಲ್ಲಕ ಕಾರಣ ಮುಂದು ಮಾಡಿದನ್ನು ತಾವು ಮಾಧ್ಯಮಗಳಲ್ಲಿ ಓದಿರಬಹುದು..ಅದರ ಮುಂದು ವರೆದ ಭಾಗವಾಗಿ ಈ ಘಟನೆ.

ಎಲ್ಲಿಗೆ ಬಂತು ನೋಡಿ ನಮ್ಮ ಬದುಕು. ನಾವೂ ಮನುಷ್ಯರಾ?