ಅಂತರ್ಜಾಲ ಅಥವಾ ಅಂತರಜಾಲ?

ಅಂತರ್ಜಾಲ ಅಥವಾ ಅಂತರಜಾಲ?

ಬರಹ

ಅಂತರ್ಜಾಲ ಅಥವಾ ಅಂತರಜಾಲ?blog
internet ಎನ್ನುವ ಪದಕ್ಕೆ ನಾವು ಕನ್ನಡದಲ್ಲಿ ಅಂತರ್ಜಾಲ ಎಂದು ಪ್ರಯೋಗಿಸುವುದು ಸರಿಯೇ? ಈ ಪ್ರಶ್ನೆ ಎತ್ತಿದವರು ತಂತ್ರಾಂಶ ಪ್ರವೀಣ ಟಿ ಜಿ ಶ್ರೀನಿಧಿ.intercity, inter caste  ಇಲ್ಲೆಲ್ಲಾ, inter ಎನ್ನುವುದಕ್ಕೆ ಅಂತರ ಎನ್ನುವ ಪದ ಬಳಕೆಯಾಗಿ ಅಂತರ ಕಾಲೇಜು, ಅಂತರಜಾತಿ ಪದಗಳ ಬಳಕೆಯಾಗುತ್ತಿದೆ. internet ಎನ್ನುವುದು ಕಂಪ್ಯೂಟರ್ ಜಾಲಗಳ ನಡುವಣ ಜಾಲ. ಹಾಗಾಗಿ ಇದು ಅಂತರಜಾಲ-ಅಂತರ್ಜಾಲ ಅಲ್ಲ ಎನ್ನುವುದು ಅವರ ವಾದ. ಇನೋರ್ವ ತಂತ್ರಜ್ಞ ಡಾ.ಪವನಜ ಇವರ ವಾದಕ್ಕೆ ಧ್ವನಿಗೂಡಿಸಿ, ಅಂತರಜಾಲ ಸರಿಯಾದ ಬಳಕೆ,ವೆಬ್‌ಸೈಟಿಗೆ ಅಂತರಜಾಲ ತಾಣ ಅಥವ ಸಂಕ್ಷಿಪ್ತವಾಗಿ ಜಾಲತಾಣ ಎಂದು ಪ್ರತಿಕ್ರಿಯಿಸಿದ್ದಾರೆ.ಅಂತರ್ಜಾಲ ಪದ ವ್ಯಾಪಕವಾಗಿ ಬಳಕೆಯಾಗುತ್ತಿರುವಾಗ, ಈಗ ಪದದಲ್ಲಿ ಬದಲಾವಣೆ ಮಾಡುವುದು ಉಚಿತವೇ ನೀವೇನು ಹೇಳುತ್ತೀರಿ?http://e-jnana.blogspot.com ಶ್ರೀನಿಧಿಯವರ ಬ್ಲಾಗು- ಈಗ ಅದು ಮೂರನೇಯ ವರ್ಷ ದಾಟಿದೆ.
-------------------------------------------------------------
ಮುಕ್ತ ತಂತ್ರಾಂಶಕ್ಕೆ ಬೆಂಬಲಿಸಲಿರುವ ಬಿಜೆಪಿ    
ಬಿಜೆಪಿಯು ಮಾಹಿತಿ ತಂತ್ರಜ್ಞಾನದ ಬಗೆಗಿನ ತನ್ನ ದೃಷ್ಟಿಕೋನವನ್ನು ಸ್ಪಷ್ಟಪಡಿಸಲು ನಲುವತ್ತು ಪುಟಗಳ ಪುಸ್ತಿಕೆಯನ್ನು ಪ್ರಕಟಿಸಿದೆ.ಪಕ್ಷವು ತಾನು ಮುಕ್ತ ತಂತ್ರಾಂಶದ ಪರವಾಗಿರುವುದರ ಸೂಚನೆ ನೀಡಿದೆ.ಕಂಪೆನಿಗಳು ಅಭಿವೃದ್ಧಿ ಪಡಿಸಿದ ತಂತ್ರಾಂಶಗಳನ್ನು ಬಳಸುವುದು ಹೆಚ್ಚಿನ ವೆಚ್ಚ ಮತ್ತು ಕಂಪೆನಿಗಳ ಮೇಲೆ ಅಧಿಕ ಅವಲಂಬನೆಯನ್ನು ಉಂಟು ಮಾಡುತ್ತದಾದ್ದರಿಂದ ಇದು ಸ್ವಾಗತಾರ್ಹ ನಿಲುವೇ ಆಗಿದೆ. ಕರ್ನಾಟಕ ಸರಕಾರವು ಸರಕಾರದ ಗಣಕೀಕರಣ ಕಾರ್ಯದಲ್ಲಿ ಮೈಕ್ರೋಸಾಫ್ಟ್ ಕಂಪೆನಿಯ ಜತೆ ಒಪ್ಪಂದ ಮಾಡಿ ಟೀಕೆಗೊಳಗಾಗಿತ್ತು.ಚುನಾವಣೆಯಲ್ಲಿ ಹೊಸ ಮಾಧ್ಯಮವನ್ನು ಸಮರ್ಥವಾಗಿ ಬಲಸ್ಲು ಅನುವು ಮಾಡುವಂತೆ,ಬಿಜೆಪಿಯ ಅಂತರ್ಜಾಲ ಜಾಲತಾಣವನ್ನೂ ನವೀಕರಿಸಲಾಗಿದೆ.
----------------------------------------------------------------
ಗೂಗಲ್ ನೋಟಿಸ್ ಬೋರ್ಡ್
ಗೂಗಲ್ ತನ್ನ ಹೊಸ ಸೇವೆಯಲ್ಲಿ "ಸೂಚನಾ ಫಲಕ"ವನ್ನು ಆರಂಭಿಸಿದೆ.ಇದನ್ನು ಬಳಸಲು ತಂತ್ರಾಂಶವನ್ನು ಇಳಿಸಿಕೊಂಡು ಫೈರ್‌ಪಾಕ್ಸ್ ಬ್ರೌಸರಿನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಅಂತರ್ಜಾಲದ ಸಮುದಾಯಗಳಿಗೆ ಈ ಸೂಚನಾ ಫಲಕಗಳು ಹೆಚ್ಚು ಪ್ರಯೋಜನಕಾರಿ ಆಗಬಲ್ಲುವು.ಇದರಲ್ಲಿ ಸದಸ್ಯರು ನೋಟಿಸ್ ಬೋರ್ಡಿನಲ್ಲಿ ಸಂದೇಶಗಳನ್ನು ಪ್ರಕಟಿಸಲು ಬರುತ್ತದೆ. ಲಿಪಿ,ಧ್ವನಿ,ಚಿತ್ರ ಇವನ್ನು ಬಳಸಿ ಸಂದೇಶ ಪ್ರಕಟಿಸಬಹುದು.ಅಂತರ್ಜಾಲ ಸಂಪರ್ಕವು ಸತತವಾಗಿ ಲಭ್ಯವಿರದಿದ್ದರೂ ಸೂಚನಾಫಲಕವನ್ನು ಬಳಸಲಾಗುವಂತೆ ಇದು ಕೆಲಸ ಮಾಡುತ್ತದೆ.ಸಂಪರ್ಕ ಇದ್ದಾಗ ಇಳಿಸಿಕೊಂಡ ಸಂದೇಶಗಳು ಸೂಚನಾ ಫಲಕದಲ್ಲಿ ಉಳಿದು,ಸಂಪರ್ಕ ಮತ್ತೆ ಬಂದಾಗ ಉಳಿದ ಭಾಗಗಳನ್ನು ಇಳಿಸಿಕೊಳ್ಳುವ ಹಾಗೆ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ.ಮಾರಾಟ ಖರೀದಿ ಸೂಚನೆಗಳಿಗೂ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.
-------------------------------------------------------------
ನಿಮ್ಮ ಆಸಕ್ತಿ ನೋಡಿ ಜಾಹೀರಾತು!
ಅಂತರ್ಜಾಲ ಪುಟಗಳಲ್ಲಿ ಬರುವ ಜಾಹೀರಾತು,ನಿಮ್ಮ ಆಸಕ್ತಿಯನ್ನು ಕೆರಳಿಸುವಂತಿರದಿದ್ದರೆ,ನೀವದನ್ನು ಕ್ಲಿಕ್ಕಿಸುವ ಗೋಜಿಗೇ ಹೋಗುವುದಿಲ್ಲ. ಇದರಿಂದ ಜಾಹೀರಾತುದಾರರಿಗೆ ತಾವು ಮಾಡಿದ ಖರ್ಚಿಗೆ ಪ್ರತಿಫಲ ಸಿಗದು.ಇದನ್ನು ತಪ್ಪಿಸಲು ಗೂಗಲ್ ಹೊಸ ನಮೂನೆ ಜಾಹೀರಾತು ಪ್ರಕಟಿಸಲು ಯೋಜಿಸಿದೆ.ಇದರ ಪ್ರಕಾರ ಬಳಕೆದಾರನು ಯಾವ ನಮೂನೆಯ ಅಂತರ್ಜಾಲ ತಾಣಗಳಿಗೆ ಭೇಟಿ ನೀಡುತ್ತಾನೆ ಎನ್ನುವುದನ್ನು ನೋಡಿಕೊಂಡು,ಆತನ ಅಸಕ್ತಿಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾಹೀರಾತು ಪ್ರಕಟಿಸಿ, ಜಾಹೀರಾತು ಆತನ ಗಮನ ಸೆಳೆಯುವಂತೆ ಮಾಡುವುದು ಗೂಗಲ್ ಉಪಾಯ.ಈ ನಮೂನೆ ಬಳಕೆದಾರನ ಆಸಕ್ತಿಯ ಮೇಲೆ ಗೂಢಚರ್ಯೆ ಮಾಡುವುದು ಆತನ ಖಾಸಗೀತನದ ವಿರುದ್ಧ ಎನಿಸಲೂ ಬಹುದು. ಅದಕ್ಕಾಗಿ ಗೂಗಲ್, ಬಳಕೆದಾರ ಬಯಸಿದರೆ ಮಾತ್ರ ಈ ನಮೂನೆ ಜಾಹೀರಾತು ಲಭ್ಯವಾಗಿಸುತ್ತದೆ. ಬಳಕೆದಾರ ಬೇಕಾದರೆ, ಈ ಸೇವೆ ಪಡೆದು ಬೇಡವಾದಾಗ ಬಂದ್ ಮಾಡಲೂ ಬಹುದು.
-----------------------------------------------------------
ಡಬ್ಲ್ಯೂಡಬ್ಲ್ಯೂಡಬ್ಲ್ಯೂಗೀಗ ಇಪ್ಪತ್ತು ವರ್ಷ
ಜಗದಗಲ ಹಬ್ಬಿದ ಕಂಪ್ಯೂಟರ್ ಜಾಲವೀಗ ಎರಡು ದಶಕಗಳಷ್ಟು ಹಳೆಯದು. ಯುರೋಪಿನ  ಕೆಲವು ಕಣ ಭೌತಶಾಸ್ತ್ರ ಪ್ರಯೋಗಾಲಯಗಳನ್ನು ಬೆಸೆಯಲು, ಆ ಮೂಲಕ ವಿಜ್ಞಾನಿಗಳ ನಡುವೆ ಸಂಪರ್ಕ ಏರ್ಪಡಿಸಲೋಸುಗ ಜಾಲವನ್ನು ರಚಿಸಲಾಯಿತು. ಟಿಮ್ ಬರ್ನಸ್ ಲೀ ಮತ್ತವರ ಸಹೋದ್ಯೋಗಿ ರಾಬರ್ಟ್ ಅವರು ತಮ್ಮ ಯೋಜನೆಯನ್ನು ನನಸಾಗಿಸಲು ಎಚ್ ಟಿ ಎಂ ಎಲ್ ಭಾಷೆಯನ್ನು ಅಭಿವೃದ್ಧಿ ಪಡಿಸಿದರು.ಮೊದಲ ಬ್ರೌಸರ್ ತಂತ್ರಾಂಶವೂ ತೊಂಬತ್ತರ ದಶಕದಲ್ಲಿ ಬಂತು. ಟಿಮ್ ಬಾರ್ನಸ್ ಲೀ ಪ್ರಕಾರ ಇನ್ನು ಮುಂದೆ ಅಂತರ್ಜಾಲವನ್ನು ಜನರು ಮೊಬೈಲ್ ಸಾಧನದ ಮೂಲಕವೆ ಹೆಚ್ಚಾಗಿ ಜಾಲಾಡುವುದು ಖಂಡಿತ.ಜನರ ಆಸಕ್ತಿಯ ಮೇಲೆ ಕಣ್ಣಿಟ್ಟು,ಅದರಿಂದ ಲಾಭ ಪಡೆಯುವ ಪ್ರವೃತ್ತಿಯ ಬಗ್ಗೆ ಜನರು ಎಚ್ಚರಿಕೆಯಿಂದಿರುವ ಅಗತ್ಯದ ಬಗ್ಗೆ ಬರ್ನಸ್ ಲೀ ಜನರ ಗಮನ ಸೆಳೆದಿದ್ದಾರೆ.


ಉದಯವಾಣಿ

ಅಶೋಕ್ ವರ್ಲ್ಡ್

*ಅಶೋಕ್‌ಕುಮಾರ್ ಎ