ನೀರು-೨: “ಒಂದು ಅನಿವಾರ್ಯತೆ” ಯ ಮುಂದುವರಿದ ಭಾಗ : ನೀರಿನ ಲಭ್ಯತೆ ಮತ್ತು ಬಳಕೆ

ನೀರು-೨: “ಒಂದು ಅನಿವಾರ್ಯತೆ” ಯ ಮುಂದುವರಿದ ಭಾಗ : ನೀರಿನ ಲಭ್ಯತೆ ಮತ್ತು ಬಳಕೆ

ಬರಹ

ಎಸ್.ಕೆ.ನಟರಾಜ್, ಕಡಾಕೊಳ್ಳ

ಪ್ರಕೃತಿ ತನ್ನ ಪ್ರತಿಯೊಂದು ಸೃಷ್ಟಿಯಲ್ಲಿ ವಿಶಿಷ್ಟತೆ ಹಾಗು ಅಷ್ಟೇ ರಹಸ್ಯವನ್ನು ಕಾಪಾಡಿಕೊಂಡು ಬಂದಿದೆ. ನೀರು ಪ್ರತಿಯೊಂದು ಜೀವಕ್ಕೂ ಅತ್ಯವಶ್ಯಕ-ಅನಿವಾರ್ಯ. ಆದರೆ, ಸೃಷ್ಟಿಕ್ರೀಯೆಗೆ ಇದು ತಿಳಿದಿಲ್ಲವೇ..? ತಿಳಿದಿರದೆ ಹೇಗೆ ಸಾಧ್ಯ... ಅದಕ್ಕಾಗಿಯೇ ನೀರಿನ ದುರ್ಬಳಕೆಯಾಗದಂತೆ ವಿಶಿಷ್ಟ ರೀತಿಯಲ್ಲಿ ನೀರಿನ ಹಂಚಿಕೆಯನ್ನು ಅತಿ ವ್ಯವಸ್ಥಿತ ರೀತಿಯಲ್ಲಿ ರೂಪಿಸಿಯಾಗಿದೆ. ನೀರು ತಿಳಿದಿರುವಂತೆ ಭೂಮಿಯ ಲಭ್ಯತೆಯಲ್ಲಿ ಒಳಗೂ-ಹೊರಗೂ “ಅಸಮರ್ಪಕ“ ಎನ್ನಬಹುದಾದ ಪ್ರಮಾಣದಲ್ಲಿ ಶೇಖರಿಸಲ್ಪಟ್ಟಿದೆ ಜೊತೆಗೆ ಇದು ಸತತವಾಗಿ ಹಾಗು ತನ್ನ ನಿರಂತರ ಜೀವನ ಚಕ್ರದಲ್ಲಿ ಪ್ರವಹಿಸುತ್ತಿದೆ.
ನೀರಿನ ಮುಕ್ಕಾಲು ಪಾಲು ಸಾಗರ-ಸಮುದ್ರಗಳದು, ಇಲ್ಲೂ "ಪ್ರಕೃತಿ-ಪರಮ"ನ ಜಾಣತನ..!! ಸಾಗರನ ನೀರಿಗೆ ವಿಶಿಷ್ಟ ರುಚಿ ಕೊಟ್ಟು ಅದರ ಬಳಕೆದಾರರ ಸಾರ್ವಭೌವತ್ವವನ್ನು, ಆ ಸೃಷ್ಟಿ ಮೂಲಗಳ ಅಧಿಕಾರವನ್ನು ಕಾಪಾಡಿದೆ. ಇನ್ನು ಸಾಗರ-ಸಮುದ್ರಗಳನ್ನೂ ಬಿಟ್ಟು ನೆಲದ ಮೇಲೆ ನಿಂತು ನೋಡಿದಾಗಲೂ ನೀರಿನ ಪ್ರಮಾಣದಲ್ಲಿನ ಹಂಚಿಕೆ ಸ್ಥಳೀಯ ಪ್ರದೇಶದ ವಾತಾವರಣದ ಕಾರಣದಿಂದ, ಅಲ್ಲಿನ ಉಷ್ಣತೆಯಿಂದ ವೈಪರಿತ್ಯಗಳಿಂದ, ವಿಶಿಷ್ಟ ಆದ್ರತೆ ಗುಣದ ಪ್ರದೇಶಗಳಿಂದ ಒಟ್ಟು ಪ್ರಮಾಣ ಕಾಲು ಭಾಗದಷ್ಟು ಇರುವ ನೆಲದ ಮೇಲಿನ ನೀರು ಸಹ ಬೇರೆ ಬೇರೆ ಭಾಗಗಳಲ್ಲಿ ವಿವಿಧ ಪ್ರಮಾಣದಲ್ಲಿ ಹರಿದಾಡುತ್ತಿದೆ. ಆದರೆ, ಅದೇ ಹರಿವ ನೀರು ಹಲವು ಮಾತುಗಳನ್ನ ನಮಗೆ ತಿಳಿಸುತ್ತಲೇ ಇದೆ ಅಲ್ಲವೇ...
ಹೇ ನೀರೆ ನೀ ಹರಿದಾಡುವೆ,
ಹರಿದಲ್ಲೆಲ್ಲಾ ಹಸಿರ ಬಿಡುವೆ
ಹೆಸರಿಸಿದರೆ ಹಸಿರಿಗೂ ನೆನಪಿರದು, ನೀ ಕೊಟ್ಟ ಉಸಿರು
ನೀ ನಡೆದು ಹೋದಲ್ಲೆಲ್ಲಾ ಬಿಟ್ಟ "ಹಸಿ"ಯಿಂದಲೇ
ಹಲವು ಹಸಿವುಗಳು ದೂರ..
ಹಸನಾದ ಹೊಲವೂ ಹೆಸರಾಗುವುದೇ
ನೀನಿಟ್ಟ ಹೆಜ್ಜೆಯಿಂದಲ್ಲವೇ...
ಹಲವು ಮೂಲಗಳಿದ್ದರೂ, ಹರಿವಿಗೆ ನಿನ್ನದೇ ಲಯ..
ನಿನ್ನ ದಾರಿಗೆ ಯಾರೇ ಬಂದರೂ,
ಅಲ್ಲಿಯೂ ನಿನ್ನದೆ ತುಂತುರು.. ಪ್ರಳಯ ಒಳಗೊಂಚೂರು.
ಇಳಿದೇ ನಡೆದು, ಉರುಳಿದರೂ
ಗುರಿ ಮೀರಿದ ಗೆಲುವು,
ನಿನ್ನ ಈ ಗುಣದಿಂದಲೂ ಪಾಠ ಕಲಿಯದವರು ನಾವು.
ಹೌದು, ನಾವು ಎಂದೂ ನಮ್ಮತನವನ್ನು ಬಿಟ್ಟು ಮೇಲೆ ಬೆಳೆದವರಲ್ಲ. ಪ್ರಕೃತಿಯ ಸಾವಿರಾರು ಪಾಠಗಳ ನಿರ್ಲಕ್ಷಿಸಿಯೇ ಮುಂದೆ ಬಂದವರು. ಮಾನವನ (ನಾನು, ನೀವು, ನಾವೆಲ್ಲರೂ) ವಿಚಾರ ಮಾತ್ರ ತದ್ವಿರುಧ. ಎಲ್ಲರ ಮನಸ್ಸು ಸಮಾನ ಪಾಲು ಬೇಡುವುದರಿಂದ ಅನೇಕ ಅಭಾಸಗಳು ಸೃಷ್ಟಿಯಾಗುತ್ತಿವೆ. ಒಂದೊಂದಾಗಿ ಬರೋಣ. ಮೂಲತಃ ಮಾನವ ಎನ್ನುವ ಪ್ರಾಣಿಗೆ ಒಣ ಹಾಗು ಸೂರ್ಯನ ವಿಶಾಲ ಬೆಳಕಲ್ಲಿ ಜೀವಿಸುವ ಹಂಬಲದ ಜೊತೆ ಜೊತೆಗೆ ತನಗೆ ಬದುಕಲು ಬೇಕಾದ ಎಲ್ಲ ಸೌಕರ್ಯಗಳನ್ನು ತನ್ನ ಬಳಿ, ಬೇಕಾದಾಗ ಸಿಗಬೇಕೆಂಬ "ದೂರದೃಷ್ಟಿ" ಬೇರೆ.
ಇಷ್ಟಾಗಿದ್ದರೆ ಎಲ್ಲವೂ ಸರಿ ಇರುತಿತ್ತೆನೂ, ಮುಂದೆ ಬೇಡಿಕೆಗಳ ಪಟ್ಟಿ ನೀರಿನ ಬಳಕೆಯ ವಿವಿಧ ಪ್ರಮಾಣಗಳನ್ನು ಪಡೆಯುತ್ತಾ ಬಂದಿದೆ. ಗೃಹಮೂಲಗಳ ಬಳಕೆಯ ಜೊತೆಗೆ, ಜೀವಸೃಷ್ಟಿಯ ಪ್ರಕ್ರೀಯೇಗಳಲ್ಲಿ, ಕೃಷಿ ಬಳಕೆಗಾಗಿ, ಕಸಬುದಾರಿಕೆಗಾಗಿ, ಕೊನೆಗೆ ಕೈಗಾರಿಕೆಗಳಿಗಾಗಿ ಅತ್ಯಂತ ಆಗಾಧ ಪ್ರಮಾಣದ ನೀರು ಬಳಕೆಯಾಗುತ್ತಿರುವುದು ನಮ್ಮ ಇಂದಿನ ಕಳವಳಗಳಿಗೆ ಕಾರಣ.
ಪ್ರತಿನಿತ್ಯ, ಒಬ್ಬ ಸಾಮನ್ಯನ ನೀರಿನ ಬಳಕೆಯ ಪಟ್ಟಿ ಮಾಡಿದರೆ ದಿನೊಂದಕ್ಕೆ ಸರಾಸರಿ ಬಳಕೆಯ ಕ್ರಮ ಹೀಗೆ ಸಾಗುತ್ತದೆ; ಎದ್ದು ಹಲ್ಲುಜ್ಜುವುದುರಿಂದ (೨-೩ ಲೀಟರ್), ನಿತ್ಯಕರ್ಮ (೫ ಲೀಟರ್), ಸ್ನಾನಕ್ಕೆ (೧೫-೨೦ ಲೀಟರ್), ಅಡುಗೆಗೆ (೨ ಲೀಟರ್), ಕುಡಿಯಲು (೨-೬ ಲೀಟರ್), ಪಾತ್ರೆ ತೊಳೆಯಲು (೫ ಲೀಟರ್), ಬಟ್ಟೆ ತೊಳೆಯಲು (೧೦-೨೦ ಲೀಟರ್) ಇತರ ಮನೆಕೆಲಸಗಳಿಗೆ (೧೦ ಲೀಟರ್), ಕೈತೋಟ, ಕುಂಡದಲ್ಲಿನ ಗಿಡ-ಮರ ಬೆಳೆಸುವ ಹವ್ಯಾಸಕ್ಕೆ (೧೦ ಲೀಟರ್), ಇದಲ್ಲದೆ, ವಾಹನಗಳ ತೊಳೆಯಲು, ಈಜುಕೊಳ ತುಂಬಿಸಲು ಹೀಗೆ ಎಲ್ಲರೂ ಅಲ್ಲದ್ದಿದ್ದರೂ ಕೆಲವರ ಹವ್ಯಾಸಗಳ ಸರಾಸರಿ ಮಾಡಿದಾಗ ೧೦ ರಿಂದ ೫೦ ಲೀಟರ್ ಗಳಷ್ಟು ನೀರು ನಮಗೆ ಅರಿವಿಲ್ಲದೆ ಬಳಕೆಯಾಗಿ, ಬೇಡದ ವಸ್ತುವಾಗಿ ಮೂರಿಗಳಲ್ಲಿ ತನ್ನ ಮೂತಿ ತೂರಿಸಿ ದಿನವೊಂದಕ್ಕೆ ಜೀವನ ಚಕ್ರವನ್ನು ಕ್ರಮಿಸುತ್ತಿದೆ.
ಹೀಗೆ ಒಂದು ಸಣ್ಣ ಪ್ರಯಾಣದಲ್ಲಿ ನೀರು ಹಲವಾರು ಮಾಲಿನ್ಯಕಾರಕ ವಸ್ತುಗಳನ್ನ ತನ್ನಲ್ಲಿ ಅರಗಿಸಿ, ಕರಗಿಸಿಕೊಂಡಿರುತ್ತದೆ; ದಿನದ ಕೊನೆಯಲ್ಲಿ ಮೊರಿಯಲ್ಲಿನ ನೀರನ್ನು ಕೇಳಿದಾಗ-ನೋಡಿದಾಗ ಅದಾಗಲೇ ಬ್ಯಾಕ್ಟಿರಿಯಾ, ವೈರಸ್ ಗಳಂತಹ ಸೂಕ್ಷ್ಮ ಜೀವಿಗೆ ಆಶ್ರಯ ನೀಡಿರುತ್ತವೆ. ಬಳಸಿದ ಅಡುಗೆ ಪದಾರ್ಥಗಳು, ತೊಳೆದ ಮುಸುರೆಯ ತ್ಯಾಜ್ಯ ಉಳಿದ ತರಕಾರಿಗಳು ಇವಕ್ಕೆ ಮೂಲ. ಇನ್ನು ಬಳಸಿದ ಟೂಥ್ ಪೇಷ್ಟ್, ಉಜ್ಜಿದ ಸೂಪು, ಉಪಯೋಗಿಸಿದ ಬಟ್ಟೆ ಪೌಡರ್ ಇವೆಲ್ಲ ಲೋಹ -ಮೂಲದ ನಿರವಯವ ರಾಸಾಯನಿಕಗಳ ಮಾಲಿನ್ಯಕ್ಕೆ, ನೀರಿನ ಗಡುಸುತನಕ್ಕೆ, ಕ್ಷಾರಯುಕ್ತ ನಿರುಪಯೋಗಿ ನೀರಿನ ಉತ್ಪತ್ತಿಗೆ ನಮ್ಮ ನಿತ್ಯದ ದಿನಚರಿಯೇ ತನ್ನ ಕೊಡುಗೆ ನೀಡುತ್ತವೆ. ಮತ್ತೆ ನೆಲ ಒರೆಸಿದೆ, ಕಾರು-ದ್ವಿಚಕ್ರವಾಹನಗಳ ತೊಳೆಯುವಿಕೆಯಿಂದ, ಗೃಹೋಪಯೋಗಿ ಎಲೆಕ್ಟ್ರಿಕ್ ಸಾಧನಗಳ ನಿರ್ವಹಣೆಗಾಗಿ ಉಪಯೋಗಿಸುವ ವಿವಿಧ ದ್ರವರೂಪದ ಮಾಧ್ಯಮಗಳ ಮಿಳಿತದಿಂದ ನೀರು ಸಾವಯವ ರಸಾಯನಿಕ ಮೂಲಗಳ ಮಾಲಿನ್ಯದ ಉಡುಗೆ ತೊಡುತ್ತದೆ. ದಿನನಿತ್ಯ ಹೆಸರಿಸಬಹುದಾದವೆಂದರೆ ಫಿನೈಲ್ ನಂತಹ ನೆಲ ಒರೆಸುವ, ಗ್ಲಾಸ್ ಕ್ಲೀನರ್, ಲುಬ್ರಿಕೆಂಟ್, ಹಾಗು ವಿವಿಧ ಉಪಯೋಗಿಸಿದ ಅಡುಗೆಯ, ಇಂಧನವಾಗಿ ಉಪಯೋಗಿಸಿದ ಬಳಸಿ ಬಿಸಾಕಿದ ಎಣ್ಣೆಗಳನ್ನೂ, ನಾವು ನಮಗರಿವಿಲ್ಲದೆ ನೀರಿಗೆ ಹರಿಬಿಡುತ್ತೇವೆ. ಇವೆಲ್ಲ ಅರ್ಗನಿಕ್ ಪೋಲ್ಲುಶನ್ ಗೆ ದಾರಿ.
ಆದರೆ, ಇಷ್ಟೆಲ್ಲಾ ಆಗುತ್ತದೆಂದು ನಾವು ನೀರನ್ನು ಪ್ರತಿನಿತ್ಯ ಉಪಯೋಗಿಸಲು ಬಿಡಲಾಗದು. ಬಿಟ್ಟರೆ ನಾವು ಜೀವನ ಮಾಡಲೂ ಆಗದು.
ಇವೆಲ್ಲ ಗಂಬೀರತೆಯ ವಿಷಯ ಪ್ರಸ್ತುತತೆಗೆ ಪೀಠಿಕೆಗಳಷ್ಟೇ. ಮೊದಲೇ ಹೇಳಿದಂತೆ ಅನಿವಾರ್ಯತೆಯ ದೃಷ್ಟಿಯಿಂದಲೇ ನೀರಿನ ಮೂಲಗಳ ಸುರಕ್ಷತತೆ ಕಡೆಗೆ ಇಲ್ಲಿ ಪ್ರಸ್ತಾಪ. ಈ ಮಾಲಿನ್ಯ ಮೂಲಗಳು ಅದರ ಮೇಲಿನ ವಿವರಗಳನ್ನು ಇನ್ನೊದು ಭಾಗವಾಗೆ ಮುಂದೆ ನೋಡೋಣ. ಬಳಕೆಯ ಜೊತೆಗಿನ ನೀರಿನ ಜೀವನ ಚಕ್ರದ ಪಯಣ, ಅದರ ವಿವಿಧ ರೂಪಗಳನ್ನು ಮುಂದುವರೆಸುವ. ಈ ಸಣ್ಣ ಪ್ರಮಾಣದ ನೀರಿನ ಉಪಯೋಗದಿಂದ ಮುಂದುವೆರೆಸಿದಾಗ ತಕ್ಷಣ ನೆನಪಾಗುವುದು ಕೃಷಿ ಮೂಲಗಳಿಗಾಗಿನ ನೀರಿನ ಉಪಯೋಗ ಇಲ್ಲವೇ ಕೈಗಾರಿಕೆಗಳಿಗಾಗಿ ಉಪಯೋಗಿಸಿದ ಆಗಾಧ ಪ್ರಮಾಣದ, ಸದಾ ಕಣ್ಣಿಗೆ ಕಪ್ಪು ಬಣ್ಣದಲ್ಲಿಯೇ ಸಹಜವಾಗಿ ನೆನಪಿಗೆ ಬರುವ ವಿಷಯುಕ್ತ ಮಲಿನ ನೀರು. ಇವೆಲ್ಲವುಗಳಷ್ಟೇ ಮುಖ್ಯ ಪ್ರಮಾಣದಲ್ಲಿ ನೀರನ್ನು ಉಪಯೋಗಿಸಲ್ಪಡುವ ಬಳಕೆಯ ದಾರಿಗಳನ್ನು ನಾವು ನಿಜವಾಗಿಯೂ ನೆನಪಿಸಿಕೊಳ್ಳುವದಿಲ್ಲ. ಅವೇ ಸಣ್ಣ ಪ್ರಮಾಣದಲ್ಲಿ ಸ್ಥಾಪಿತವಾಗಿರುವ ಗೃಹ ಕೈಗಾರಿಕೆಗಳು, ಕೈಕೆಲಸಗಳು, ಹೋಟೆಲ್ ಗಳು, ಗ್ಯಾರೇಜ್, ನೇಯ್ಗೆ-ಡೈಯಿಂಗ್, ನಂತಹ ಸಾವಿರಾರು ಗುಡಿಕೈಗಾರಿಕೆಗಳು, ಒಂದೊಂದನ್ನು ನೋಡಿದಾಗ ಸಣ್ಣ ಪ್ರಮಾಣದಲ್ಲಿ ಎನಿಸಿದರೂ ಅಪಾರ ಪ್ರಮಾಣದ ನೀರನ್ನು ಉಪಯೋಗಿಸುತ್ತಿವೆ. ಲೆಕ್ಕವಿಡಲು ಕಠಿಣವೆನಿಸುವಷ್ಟು ಸಂಖ್ಯೆಯಲ್ಲಿ ಹರಡಿರುವ ಈ ಕೈಗಾರಿಕೆಗಳ ಪಟ್ಟಿ ಹಾಗು ನೀರಿನ ಉಪಯೋಗದ ಸಾಧ್ಯತೆಗಳ ಹಂತಗಳನ್ನು ಒಂದೊಂದಾಗಿ ಇನ್ನು ಮುಂದೆ ನೋಡೋಣ.
ಮತ್ತೆ ಸಿಗೋಣ.. ನಿಮ್ಮ ಎಸ್.ಕೆ.ನಟರಾಜ್, ಕಡಾಕೊಳ್ಳ