ಪ್ರಖ್ಯಾತ ಅಂಕಣಕಾರರಾಗುವುದು ಹೇಗೆ?

ಪ್ರಖ್ಯಾತ ಅಂಕಣಕಾರರಾಗುವುದು ಹೇಗೆ?

ಬರಹ

ಈ ಹಿಂದೆ ನಾವು ಉತ್ತಮ ಕವಿಯಾಗಲು ನೀಡಿದ್ದ ಪಂಚ ಸೂತ್ರಗಳನ್ನು
ಬಳಸಿ ಅತ್ಯಂತ ಯಶಸ್ವಿ ಕವನಗಳನ್ನು ಗೀಚಿ ಕವಿಯಾದ ಅನೇಕರು ನಮ್ಮನ್ನು ಅಭಿನಂದಿಸಿದ
ಹಿನ್ನೆಲೆಯಲ್ಲಿ ಅಂದು ಶುರು ಮಾಡಿದ್ದ ಸಾಹಿತ್ಯ ಅಭಿಯಾನವನ್ನು ಮುಂದುವರೆಸಲು
ನಿರ್ಧರಿಸಿದ್ದೇವೆ.

ಈ ಮಾಲಿಕೆಯ ಎರಡನೆಯ ಆವೃತ್ತಿಯಲ್ಲಿ ನಾವು ಅತಿ ಸಾಮಾನ್ಯ ಬರಹಗಾರ ಕೂಡ ‘ಪ್ರಖ್ಯಾತ
ಅಂಕಣಕಾರನಾಗುವುದು ಹೇಗೆ?’ ಎಂದು ತಿಳಿಸಿಕೊಡುತ್ತೇವೆ. ಎಂದಿನಂತೆ ನಮ್ಮ ಸಲಹೆ
ಸೂಚನೆಗಳು ಅತ್ಯಂತ ಚುಟುಕಾಗಿಯೂ, ಸ್ಪುಟವಾಗಿಯೂ, ಪರಿಣಾಮಕಾರಿಯಾಗಿಯೂ
ಇರುತ್ತವೆಂಬುದನ್ನು ನೆನಪಿಸಬೇಕಿಲ್ಲ. ಹಾಗಾದರೆ, ಭಯ, ಭಕ್ತಿ, ಶ್ರದ್ಧೆಗಳಿಂದ ನಮ್ಮ
ಉಪದೇಶ ಕೇಳಲು ಸಿದ್ಧರಾಗಿ.

ಅಂಕಣ ಬರಹವೆಂಬುದು ಯಾವ ಸಾಹಿತ್ಯ ಪ್ರಕಾರ ಎಂದು ತಲೆ ಕೆಡಿಸಿಕೊಂಡು ‘ಕೇಶ’ವನ
ಕೃಪೆಯಿಂದ ಉಳಿದುಕೊಂಡಿರುವ ನಾಲ್ಕೈದು ಕೇಶ ಕುಡಿಗಳನ್ನು ಉದುರಿಸುವ ಅಗತ್ಯವಿಲ್ಲ.
ಬೇರೆಲ್ಲ ಸಾಹಿತ್ಯ ಪ್ರಕಾರಗಳ ಹಾಗೆ ಇದು ತನ್ನ ಹುಟ್ಟನ್ನು ಅತ್ಯಂತ ಶಕ್ತಿಯುತವಾದ
ಗುಟ್ಟನ್ನಾಗಿ ಉಳಿಸಿ ಸಂಶೋಧಕರು, ಪಂಡಿತರಿಗೆ ಹೆಮ್ಮೆ ತರುವ ಸರಕಾಗಿಲ್ಲ. ಅಂಕಣ ಬರಹ
ಹುಟ್ಟಿದ್ದು ವೃತ್ತ ಪತ್ರಿಕೆಗಳೆಂಬ ಕುಲ ಹುಟ್ಟಿದ ನಂತರ. ಮೊದ ಮೊದಲು ವೃತ್ತ
ಪತ್ರಿಕೆಯೆಂಬ ಬಹುದೊಡ್ಡ ಪಾರ್ಕಿಂಗ್ ಲಾಟನ್ನು ಸುದ್ದಿಗಳೆಲ್ಲಾ ಆಕ್ರಮಿಸಿದ ನಂತರ
ಅನಾಥವಾಗಿ, ಬೇವಾರ್ಸಿಯಾಗಿ ಉಳಿದಿರುತ್ತಿದ್ದ ಜಾಗವನ್ನು ಈ ‘ಅಂಕಣ ಬರಹ’ಕ್ಕೆ
ಬಿಟ್ಟುಕೊಡಲಾಗುತ್ತಿತ್ತು. ಅಷ್ಟಕ್ಕೇ ಚಿಗುರಿಕೊಂಡ ಈ ಅಂಕಣ ಬರಹಗಾರರ ಗಣ ಪ್ರತಿ
ಪತ್ರಿಕೆಯಲ್ಲಿ ತನ್ನ ಪಾಲನ್ನು ಭದ್ರ ಮಾಡುವ ಕೆಲಸ ಮಾಡಲು ಶುರು ಮಾಡಿತು. ಈಗ ಅಂಕಣ
ಬರಹಗಳಿಲ್ಲದ ಪತ್ರಿಕೆಯನ್ನು ನೋಡಿದರೆ ಕುಂಕುಮವಿಲ್ಲದ ಹೆಣ್ಣಿನ ಹಣೆ ನೋಡಿದ
ಹಾಗಾಗುತ್ತೆ(ಈ ವಾಕ್ಯದಲ್ಲಿ ಸ್ತ್ರೀ ವಾದ, ಕೋಮುವಾದ, ಕಾಮವಾದಗಳನ್ನು ಹುಡುಕುವ
ಉದ್ಧಟತನ ತೋರಿದವರನ್ನು ಉಗ್ರವಾಗಿ ಶಿಕ್ಷಿಸಲಾಗುವುದು!).

ಇದಿಷ್ಟು ಅಂಕಣ ಬರಹದ ಇತಿಹಾಸ. ಇನ್ನು ಪ್ರಖ್ಯಾತ ಅಂಕಣ ಕಾರನಾಗುವುದಕ್ಕೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಗಮನ ಹರಿಸೋಣ.

೧. ನಂಬರ್ ಮ್ಯಾಟರ್ಸ್

ಅಂಕಣಕಾರನೊಬ್ಬನ  ಯಶಸ್ಸು ನಿರ್ಧಾರವಾಗುವುದು ಒಂದೇ ಅಂಶದಿಂದ. ಆತನ ಅಂಕಣವನ್ನು
ಎಷ್ಟು ಮಂದಿ ಓದುತ್ತಾರೆ? ಮುದ್ರಕ, ಮಾಲೀಕ, ಸಂಪಾದಕ ಹಾಗೂ ಅಂಕಣಕಾರ- ಇಷ್ಟು ಮಂದಿ
ಓದುವ ಪ್ರಶಸ್ತಿ ವಿಜೇತ ಬರಹಕ್ಕಿಂತ ಅತಿ ಹೆಚ್ಚು ಮಂದಿ ಓದುವ ಕಳಪೆ ಅಂಕಣ ಯಶಸ್ಸಿನ
ಮಾಪಕದಲ್ಲಿ ಹೆಚ್ಚು ಅಂಕ ಗಳಿಸುತ್ತದೆ. ಹೀಗಾಗಿ ಅಂಕಣಕಾರನ ಯಶಸ್ಸು ಆತನ ಓದುಗರ
ಸಂಖ್ಯೆಯ ಮೇಲೆ- ಅರ್ಥಾತ್ ಪತ್ರಿಕೆಯ ಓದುಗರ ಸಂಖ್ಯೆಯ ಮೇಲೆ ನಿರ್ಭರವಾಗಿರುತ್ತದೆ.
ಹೀಗಾಗಿ ಮೊದಲು ಅತ್ಯಧಿಕ ಪ್ರಸಾರ ಹೊಂದಿರುವ ಪತ್ರಿಕೆ ಯಾವುದು ಎಂಬುದನ್ನು
ತಿಳಿದುಕೊಳ್ಳಿ. ಅನಂತರ ಆ ಪತ್ರಿಕೆಯ ಸಂಪಾದಕರ ಹೆಂಡತಿಯ ತವರು ಮನೆಯ ದಿಕ್ಕು,
ಸಂಪಾದಕರ ಕಾರು ಚಾಲಕನ ಮನೆಯ ಓಣಿ, ಸಂಪಾದಕರ ಪೆನ್ನಿನ ಶಾಯಿ ಸರಬರಾಜು ಮಾಡುವವನ
ವಿಳಾಸ, ಅವರ ಬಟ್ಟೆಗೆ ಇಸ್ತ್ರಿ ತಿಕ್ಕುವವನ ವಿವರ, ಸಂಪಾದಕರು ಅಡ್ಡ ಬೀಳುವ ಮಠಗಳು,
ಸೆಲ್ಯೂಟು ಹೊಡೆಯುವ ಮಂತ್ರಿ ಮಹೋದಯರ ಬಗ್ಗೆ ಮಾಹಿತಿ ಸಂಗ್ರಹಿಸಿ. ಅಂಕಣಕ್ಕೆ ಬೇಕಾದ
ವಿಷಯ ಸಂಗ್ರಹದಲ್ಲಿ ನ್ಯೂನ್ಯತೆಯಿದ್ದರೂ ಈ ಮುಂಚೆ ತಿಳಿಸಿದ ವಿವರಗಳ ಸಂಗ್ರಹದಲ್ಲಿ
ಚಿಕ್ಕ ಲೋಪವೂ ಆಗಬಾರದು. ಸಂಗ್ರಹವಾದ ಮಾಹಿತಿಯ ಆಧಾರದ ಮೇಲೆ ಯಾರ ಕಾಲುಗಳಿಗೆ ಎಷ್ಟು
ನಿಮಿಷ ಮಸಾಜ್ ಮಾಡಬೇಕು, ಯಾರ ಅಂಗೈಗೆ ಎಷ್ಟು ಶಾಖ ಕೊಡಬೇಕು ಎಂಬುದನ್ನು
ತೀರ್ಮಾನಿಸಬೇಕು. ಆ ಮೂಲಕ ಅಂಕಣಕಾರನ ಸ್ಥಾನಮಾನವನ್ನು ಸಂಪಾದಿಸಿಕೊಳ್ಳಬೇಕು. ಎಲೆಯ
ಮರೆಯ ಕಾಯಿಯಾಗಿ ಉಳಿಯುವುದು ನಿಮ್ಮ ಆದರ್ಶವಾದರೆ ಈ ಸಲಹೆಯನ್ನು ಕಸದ ಬುಟ್ಟಿಗೆ ಹಾಕಿ.

೨. ನಿರಂತರತೆಯೇ ತಾಯಿ ತಂದೆ

ಒಮ್ಮೆ ನೀವು ಅಂಕಣಕಾರನ ಸ್ಥಾನಮಾನವನ್ನು ಪಡೆದ ಮೇಲೆ ಅತ್ಯಂತ ತುರ್ತಿನಲ್ಲಿ
ರೂಢಿಸಿಕೊಳ್ಳಬೇಕಾದ ಗುಣವೆಂದರೆ ನಿರಂತರತೆ. ನಿರಂತರವಾಗಿಲ್ಲದ ಗಂಗಾಜಲಕ್ಕಿಂತ
ನಿರಂತರವಾದ, ಅಡೆತಡೆಯಿಲ್ಲದ ಕೊಚ್ಚೆ ನೀರು ನಮ್ಮ ಪತ್ರಿಕೆಗಳಿಗೆ ಅತಿ ಮುಖ್ಯ. ಹೀಗಾಗಿ
ಕವಿಗಳ ಹಾಗೆ ಲಹರಿ ಬಂದಾಗ ಬರೆಯುವ, ಸ್ಪೂರ್ತಿಗಾಗಿ, ಪ್ರೇರಣೆಗಾಗಿ ಬೀದಿ ಸುತ್ತುವ
ಹಾಗಿಲ್ಲ. ನಿಂತ ಭಂಗಿಯಲ್ಲೇ ಟಿಕೆಟ್ ವಿವರಗಳನ್ನು ಗೀಚಿಕೊಳ್ಳುವ ಬಸ್ ಕಂಡಕ್ಟರನ ಹಾಗೆ
ಬರೆದು ಬಿಸಾಕುವ ತಾಕತ್ತು ಮೊದಲು ರೂಢಿಸಿಕೊಳ್ಳಬೇಕು.

೩. ಗಾಳಿ ಬಂದಾಗ ತೂರಿಕೋ

ವಾರಕ್ಕೊಂದು ಅಂಕಣ ಬರೆಯುವುದಕ್ಕೆ ಈ ದಿಶೆಯಲ್ಲಿ ಅನೇಕ ಅಡ್ಡಿ ಆತಂಕಗಳು
ಎದುರಾಗುತ್ತವೆ. ಉದಾಹರಣೆಗೆ,  ಅಧ್ಯಯನದ ಕೊರತೆ, ಸತ್ಯಾಸತ್ಯತೆಯ ಪರಿಶೀಲನೆ, ತಥ್ಯಗಳ
ತುಲನೆ, ಪೂರ್ವಾಗ್ರಹದಿಂದ ಮುಕ್ತವಾದ ವಿಶ್ಲೇಷಣೆ ಮುಂತಾದವು. ಇವುಗಳ ಬಗ್ಗೆ ತಲೆ
ಕೆಡಿಸಿಕೊಳ್ಳುತ್ತಾ ಕೂತರೆ ಪ್ರಖ್ಯಾತ ಅಂಕಣಕಾರನಾಗುವುದಕ್ಕೆ ಸಾಧ್ಯವಿಲ್ಲ. ‘ತಾನು
ಬರೆಯುವುದೆಲ್ಲ ಸತ್ಯ, ತಾನು ಬರೆದದ್ದು ಮಾತ್ರ ಸತ್ಯ’ ಎಂಬ ಸರಳವಾದ ನಂಬಿಕೆಯನ್ನು
ಅಂಕಣಕಾರನಾದವನು ತನ್ನ ಹೃದಯದಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಿಸಿಟ್ಟುಕೊಳ್ಳಬೇಕು.
ಒಂದು ವಿಷಯದ ಬಗ್ಗೆ ಅವರಿವರ ವಾದಗಳನ್ನೆಲ್ಲ ಕೇಳಿ ಸತ್ಯ ಯಾವುದು, ಸುಳ್ಳು ಯಾವುದು
ಎಂದು ಪತ್ತೆ ಹಚ್ಚಿ, ಸ್ವತಂತ್ರವಾಗಿ ಅಧ್ಯಯನ ಮಾಡಿ ಅಭಿಪ್ರಾಯ ರೂಪಿಸಿಕೊಂಡು ಒಂದು
ಅಂಕಣ ಬರೆಯುವಷ್ಟರಲ್ಲಿ ತಿಂಗಳು ಕಳೆದುಹೋಗಿರುತ್ತದೆ!
ಹೀಗಾಗಿ ಅಂಕಣಕಾರನಾದವನು ಸದಾ ಸಮಾಜಮುಖಿಯಾಗಿರಬೇಕು. ಬಹುಸಂಖ್ಯಾತರ ನಾಡಿಮಿಡಿತದ
ತಿಳಿವನ್ನು ಹೊಂದಿರಬೇಕು. ತಾನು ಬರೆದದ್ದು ಸತ್ಯವೋ, ಪೂರ್ವಾಗ್ರಹದಿಂದ
ಮುಕ್ತವಾದದ್ದೋ, ರಚನಾತ್ಮಕವಾದದ್ದೋ ಎಂದು ಆಲೋಚಿಸುವುದರಲ್ಲಿ ಸಮಯ ಕಳೆಯದೆ ಜನ
ಸಾಮಾನ್ಯರು ಆ ವಿಷಯದ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎಂಬುದನ್ನು ಗ್ರಹಿಸಬೇಕು.
ಗಾಳಿ ಬರುತ್ತಿರುವ ದಿಕ್ಕನ್ನು ಕಂಡುಕೊಂಡು ಅಲ್ಲಿ ತೂರಿಕೊಂಡು ಬಿಡಬೇಕು. ಭಯೋತ್ಪಾದಕ
ದಾಳಿಯಾದೊಡನೆ ಅದಕ್ಕೆ ಸಂಬಂಧಿಸಿದ, ಸಂಬಂಧಿಸಿರದ ರಾಜಕಾರಣಿಗಳನ್ನು ಉಗಿಯಬೇಕು,
ಸೈನ್ಯವನ್ನು ಹೊಗಳಿ ಅಟ್ಟಕ್ಕೇರಿಸಬೇಕು. ಕ್ರಿಕೆಟ್ ಪಂದ್ಯದಲ್ಲಿ ನಮ್ಮ ತಂಡ
ವಿಜಯಿಯಾದರೆ ನಮ್ಮನ್ನು ಗೆಲ್ಲುವವರು ಯಾರಿದ್ದಾರೆ ಎಂದು ಜಗತ್ತಿಗೇ ಸವಾಲು ಎಸೆಯಬೇಕು.
ಸತತವಾಗಿ ಸೋಲಲು ಶುರುವಾದರೆ ಒಬ್ಬೊಬ್ಬ ಆಟಗಾರನ ಇತಿಹಾಸವನ್ನೂ ಕೆದಕಿ, ಅವರ
ಹಣದಾಸೆಯನ್ನು, ಸ್ವಾರ್ಥವನ್ನು ಜರೆದು ಉಗಿದು ಉಪ್ಪಿನಕಾಯಿ ಹಾಕಬೇಕು. ಅಲ್ಪಸಂಖ್ಯಾತರ
ಮೇಲೆ ದಾಳಿ ನಡೆದರೆ, ಮಾರಣ ಹೋಮವೇ ಕಣ್ಣೆದುರು ನಡೆದರೂ ಅದು ಬಹುಸಂಖ್ಯಾತರ ಮೇಲಿನ
ನಿರಂತರ ದೌರ್ಜನ್ಯಕ್ಕೆ ಸಣ್ಣ ಪ್ರತಿಕ್ರಿಯೆ ಎನ್ನಬೇಕು, ಸ್ಯೂಡೋ ಸೆಕ್ಯುಲರ್
ಮಾಧ್ಯಮಗಳ ಹುಯಿಲು ಅನ್ನಬೇಕು. ಇಡೀ ಜಗತ್ತಿನ ನೈತಿಕ ಅಧಃಪತನಕ್ಕೆ, ಹಣದ
ವ್ಯಾಮೋಹಕ್ಕೆ, ಗೋವಾದ ಬೀಚಿನಲ್ಲಿ ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳಿಗೆ
ಬೆಂಗಳೂರಿನ ಐಟಿ ಬಿಟಿ ಮಂದಿಯೇ ಕಾರಣ ಅನ್ನಬೇಕು.
ಈ ಮಾದರಿಗಳನ್ನು ಅನುಸರಿಸಿದರೆ ಎರಡು ಲಾಭಗಳಿವೆ. ಬಹುಸಂಖ್ಯಾತರ ಭಾವನೆಗೆ
ಅಂಕಣಕಾರನಾದವ ಸಹಾನುಕಂಪ ತೋರಿದಂತಾಗುತ್ತದೆ. ಎರಡನೆಯದು ಎಂಥದ್ದೇ ಸಂಕಷ್ಟ ಬಂದರೂ,
ಯಾವುದೇ ಟೀಕೆಗಳು ಬಂದರೂ ತಾನು ಜನ ಸಾಮಾನ್ಯರ ಎದೆಯ ಅನಿಸಿಕೆಗೆ ಧ್ವನಿ ಕೊಟ್ಟೆನಷ್ಟೇ
ಎಂದು ಡೈಲಾಗ್ ಹೊಡೆದು ತಪ್ಪಿಸಿಕೊಳ್ಳಬಹುದು.

(ಇನ್ನೂ ಉಂಟು)