ನ್ಯಾಯ ಬೇಕು....

ನ್ಯಾಯ ಬೇಕು....

ಬರಹ

ಅಂತೂ, ನಾವು ನಾಲ್ಕು ಮಂದಿ ಶಾಲೆ ಗ್ರೌಂಡ್‍ನಲ್ಲಿ ಸೇರಿದ್ವಿ. ಎಲ್ಲರಿಗೂ ನ್ಯಾಯ ಬೇಕಾಗಿತ್ತು. “ಸರಿ ಹಂಗಾದ್ರ!! ನ್ಯಾಯಕ್ಕಾಗಿ ಹೋರಾಡೂಣು!!” ಅಂದೆ. ಎಲ್ಲಾರೂ “ಹೂಂ” ಅಂದ್ರು. “ಸರಿ ಹಂಗಾದ್ರ, ಎಲ್ಲಾರೂ ನಾಳೆ ಸಾಲೀ ಪ್ರಾರ್ಥನಾ ಟೈಮ್‍ಗೆ ರೆಡಿ ಇರ್ರಿ”, ಅಂತ ಹೇಳಿ ನಾ ಅಲ್ಲಿಂದ ಹೊರನಡಿದೆ. ಎಲ್ಲಾರೂ “ನಾಳೆ ಸಾಲಿಯೊಳಗ ಕ್ರಾಂತಿ ಮಾಡ್ತೀವಿ” ಅಂತ ಎದಿ ಉಬ್ಬಿಸಿಕೊಂಡು ಮನಿಗೆ ಹೋದ್ರು.

ಅಂದ ಹಾಗೆ, ನಿಮಗೆಲ್ಲ ಬ್ಯಾಗ್ರೌಂಡ್ ಬೇಕಲ್ವಾ? ಆವಾಗ ನಾನು ೯ನೇ ಇಯತ್ತೆ. ವಯಸ್ಸು ಮಂಗನದು. ಇಡೀ ವ್ಯವಸ್ಥೆಯ ಬಗ್ಗೆ ಯಾವಾಗಲೂ ತಿರಸ್ಕಾರದ ಮನೋಭಾವ ಇದ್ದಂಥಾ ಸಮಯ. “ಯಾಕ ಜನಾ ಇಷ್ಟು ಸ್ವಾರ್ಥಿಗಳಾಗಿರ್ತಾರೆ? ಯಾಕ ಒಬ್ಬರ ಮೇಲೆ ಇನ್ನೊಬ್ಬರು ಹ್ಯಾಂವ ಸಾಧಿಸ್ತಾರ?”. ಅಂತೆಲ್ಲ ವಿಚಾರ ಮಾಡಿ ಉತ್ತರ ಸಿಗದೆ ಸುಮ್ಮನಾಗ್ತಿದ್ದ ಟೈಮ್ ಅದು. ಹಾಗೇನೆ, ಯಾರಾದ್ರೂ ಇನ್ನೊಬ್ಬರಿಗೆ ಮೋಸಾ ಮಾಡ್ಯಾರೆ ಅಂತ ಗೊತ್ತಾದ್ರ, ಅವರಿಗೆ ಸರಿಯಾಗಿ ಬುದ್ದಿ ಕಲಿಸಲು ಶತಾಯ ಗತಾಯ ಪ್ರಯತ್ನ ಪಡುತ್ತಿದ್ದ ಸಮಯ ಕೂಡ.

ಹಾಂ.. ಅಂದಹಂಗ, ನಾ ಎಲ್ಲಿದ್ದೆ??? ಅದ.. ನಾ ೧೦ನೇ ತರಗತಿಯೊಳಗ ಓದತಿದ್ದೆ. ನಮ್ಮದು ಹಳ್ಳಿ ಹೈಸ್ಕೂಲು. ಒಬ್ಬೊಬ್ಬ ಮಾಸ್ತರೂ ಎರಡೆರಡು ವಿಷಯ ಕಲಿಸುತ್ತಿದ್ರು. ಕೆಲವೊಂದು ವಿಷಯಗಳಿಗೆ ಮೇಷ್ಟೇ ಇರ್ತಿರಲಿಲ್ಲ. ಇಂಥಾ ಸಮಯದಲ್ಲಿ, ಒಬ್ಬ ಬಿ.ಎಸ್‍ಸಿ ಮುಗಿಸಿದವರು, ತಾನು ಜೀವಶಾಸ್ತ್ರ ಹೇಳಿಕೊಡ್ತೀನಿ ಅಂತ ನಮ್ಮ ಶಾಲೆಗೆ ಬಂದ್ರು. ನಮ್ಮ ಗುರುಗಳೆಲ್ಲನೂ ಅವರನ್ನ ತುಂಬು ಹೃದಯದಿಂದ ತಮ್ಮ ಗುಂಪಿಗೆ ಸೇರಿಸಿಕೊಂಡ್ರು. ಅದರ ಅವಶ್ಯಕತೆಯೂ ಅವರಿಗಿತ್ತು ಅನ್ನಿ. ಮುಂದೆ ೬ ತಿಂಗಳು ನಮ್ಮ ಜೀವಶಾಸ್ತ್ರದ ಪಾಠಗಳು ಚನ್ನಾಗಿಯೇ ನಡಿದವು. ಎಂದೋ ಒಮ್ಮೆ ಶಾಲೆಯ ಮುಖ ನೋಡುತ್ತಿದ್ದ ನಮ್ಮಂಥವರೂ ತಪ್ಪಿಸದೇ ಪಾಠಗಳಿಗೆ ಹಾಜರಾಗತೊಡಗಿದ್ವಿ.

ಎಷ್ಟು ದಿನ ಇದೆಲ್ಲ ನಡೀತದ ಹೇಳಿ? ಒಳ್ಳೆಯದೇನೋ ಆಗ್ತಾಯಿದೆ ಅಂತ ಖುಶಿಪಡಬೇಕಾದ ಜನಾನೇ ಅದನ್ನ ಹಾಳುಮಾಡಿ ಖುಶಿಪಡ್ತಾರೆ. ಇಲ್ಲೂ ಅದೇ ಆಯ್ತು. ಜೀವಶಾಸ್ತ್ರದ ಮೇಷ್ಟ್ರ ಮೇಲೆ ಎಲ್ಲರಿಗೋ ಎಲ್ಲಿಲ್ಲದ ಮತ್ಸರ ಪ್ರಾರಂಭವಾಯ್ತು. ಅವರ ಮೇಲೆ ಇಲ್ಲದ ಸಲ್ಲದ ಆರೋಪಗಳೂ ಪ್ರಾರಂಭವಾದವು. ರಾಜಕೀಯ ಸಾರ್‍!!! ಜನ ರಾಜಕೀಯ ಮಾಡ್ತಾರೆ. ಅಂತೂ, ಆ ಜೀವಶಾಸ್ತ್ರದ ಮೇಷ್ಟ್ರನ್ನು ಕೆಲಸದಿಂದ ತೆಗೆದು ಹಾಕಿದ್ರು.

ನನಗೆ ಇದೆಲ್ಲ ದೊಡ್ಡ ಷಡ್ಯಂತ್ರವಾಗಿ ಕಂಡಿತು. ಆ ಮೇಷ್ಟ್ರಿಗೆ ಅನ್ಯಾಯವಾಗಿದೆ ಅನ್ನಿಸ್ತು. “ಅವರಿಗೆ ನ್ಯಾಯ ಕೊಡಿಸಬೇಕು, ಅದಕ್ಕಾಗಿ ಏನು ಬೇಕಾದ್ರೂ ಮಾಡಲಿಕ್ಕೆ ಸಿದ್ಧ” ಎಂಬ ಪ್ರಬಲ ನಿರ್ಧಾರದೊಂದಿಗೆ ನಾನು ನನ್ನ ಕೆಲ ಮಿತ್ರರೊಂದಿಗೆ ನಾನು ಈ ವಿಷಯ ಚರ್ಚಿಸಿದೆ. ನಾನು ಹೇಳಿದ್ದೆ ತಡ, ಅವರೂ ರೆಡಿ. ಸಂಜೆ ಶಾಲೆಯ ಗ್ರೌಂಡಿನಲ್ಲಿ ಸೇರುವುದು ಅಂತ ನಿರ್ಧಾರವೋ ಆಯ್ತು. ಸಂಜೆ ಎಲ್ಲರೂ ಶಾಲೆಯ ಮೈದಾನದಲ್ಲಿ ಸೇರಿದ್ವಿ. ಮೇಲೇ ಹೇಳಿದಂತೆ ನಿರ್ಧರಿಸಿ, ನ್ಯಾಯವನ್ನ ಕೇಳೋದು ಅಂದುಕೊಂಡ್ವಿ.

ರಾತ್ರಿಯೆಲ್ಲ “ನಾಳೆ ಏನು ಮಾಡೋದು?” ಅಂತ ವಿಚಾರ ಮಾಡಿದ್ವಿ. ರಾತ್ರಿ ೩ ಗಂಟೆಯವರೆಗೂ ಕೂತು ಬ್ಯಾನರ್ ಬರೆದ್ವಿ. “ನ್ಯಾಯ ಬೇಕು..”, “ಶಿಕ್ಷಣದಲ್ಲಿ ರಾಜಕೀಯ ಬೇಡ..”, “ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕದಿರಿ..” ಇತ್ಯಾದಿ ಬೊರ್ಡ‍ಗಳನ್ನ ಬರೆದು ಮುಗಿಸಿ, ಶಾಲೆಯ ಹಿಂಬದಿಯಲ್ಲಿ ಮುಚ್ಚಿಟ್ವಿ. ಅದ ಸಮಯಕ್ಕ ಸರಿಯಾಗಿ ನಮ್ಮ ಮೇಷ್ಟ್ರೋಬ್ರು ಅಲ್ಲಿಗೆ ಬಂದ್ರು. ಅವರಿಗೆ, ನಮ್ಮ ಈ ಬಂಡಾಯದ ಬಗ್ಗೆ ಎಲ್ಲಿಂದಲೋ ಸುಳಿವು ಸಿಕ್ಕಿತ್ತು ಅನ್ನಿಸ್ತದೆ. ಇಲ್ಲಾಂದ್ರೆ ಅವರ್ಯಾಕೆ ಬೆಳಿಗ್ಗೆ ೩ ಗಂಟೆಗೆ ಶಾಲೆಯ ಹತ್ರ ಬರ್ತಾರೆ ಹೇಳಿ. ಎಲ್ಲಿ, ನಾವು ಸಿಕ್ಕಿ ಹಾಕಿಕೊಳ್ತೀವೋ ಎಂಬ ಭಯ ನಮಗೆ ಪ್ರಾರಮ್ಭವಾಗಿತ್ತು. ಅವರು ನನ್ನ ಹತ್ತಿರ ಬಂದವರೆ, - “ಕುಲಕರ್ಣಿ, ಎನಾದ್ರೂ ಕ್ರಾಂತಿ ಮಾಡ್ತೀನಿ ಅಂದುಕೊಂಡಿದ್ರ, ಅದನ್ನ ಮರತಬಿಡು. ನಿಮ್ಮ ಭವಿಷ್ಯ ನಮ್ಮ ಕೈಯಾಗ ಅದ ಅನ್ನೂದನ್ನ ಮರಿಬ್ಯಾಡ್ರಿ!! ಇನ್ನೇನು, ನಾಳೆಯಿಂದ ಪರೀಕ್ಷೆಗೆ ಫಾರ್ಮ್ ತುಂಬಬೇಕು…” ಅಂತಹೇಳಿ, ನನ್ನ ಒಂದು ಸಲ ದುರುಗೊಟ್ಟಿ ನೋಡಿ, ಅಲ್ಲಿಂದ ಹೋರಟು ಹೋದ್ರು. ಒಂದು ಕ್ಷಣದಲ್ಲೇ, ನನಗೆ, ಮತ್ತು ನನ್ನ ಜೊತೆ ಬಂದ ಇನ್ನೊಬ್ಬರಿಗೆ ಬೆವೆರಿಳಿಯಿತಿ. ಅದ್ರೆ, ಅವರು ಹೋದ ಐದು ನಿಮಷದಲ್ಲೆ, ಮತ್ತೆ ನಾನವರಿಗೆ ಹೇಳಿದೆ, “ಏ, ಇವೆಲ್ಲ ಇರೋವೇ. ಅವರು ನಮ್ಮನ್ನ ಹೆದ್ರಿಸಲಿಕ್ಕೆ ಹಿಂಗ ಮಾಡ್ಲಿಕತ್ತಾರ. ನಾವು ಮಾತ್ರ ಹೆದ್ರೋದು ಬ್ಯಾಡ..”.

ಮುಂಜಾನೆ ೧೦ ಗಂಟೆಗೆ ಪ್ರಾರ್ಥನೆ. ನಾವು ೯:೩೦ಕ್ಕೇ ಶಾಲೆಯಲ್ಲಿದ್ದೆವು. ಬರೀ ಹುಡುಗರಿದ್ರೆ, ಹೊಡೆದು ಓಡಿಸಬಹುದು ಅಂತ, ನಾಲ್ಕಾರು ಹುಡುಗಿಯರನ್ನೂ ಜೊತೆ ಸೇರೆಸಿಕೊಂಡೆವು. “೧೦ ಗಂಟೆಯ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ, ನಾವು ಯಾರೂ ಒಳಗೆ ಹೋಗಬಾರದು, ಎಲ್ಲರೂ, ಸತ್ಯಾಗ್ರಹಕ್ಕೆ ಕೋರಬೇಕು” ಎಂದೆಲ್ಲ ನಮ್ಮ ಸಹಪಾಠಿಗಳನ್ನು ಒಲಿಸಲು ಪ್ರಯತ್ನಿಸಿದೆವು.

ಪ್ರಾರ್ಥನೆ ಮುಗಿಯಿತು. ಒಂದೊಂದೇ ತರಗತಿಯ ಹುಡುಗರೂ, ಇರುವೆಗಳಂತೆ ಒಬ್ಬರ ಹಿಂದೆ ಒಬ್ಬರು ತರಗತಿಯ ಒಳನಡೆದರು. ನಮಗೆಲ್ಲ, ನಾವು ಮಾಡಿದ ಪ್ರಯತ್ನ, ವ್ಯರ್ಥವಾಗುತ್ತಿದ್ದದ್ದನ್ನು ಕಂಡು, ಹೊಟ್ಟೆ ಉರಿಯಿತು. ನಾವು ಮೋವರು ಮಿತ್ರರು, ಮತ್ತು ನಾಲ್ಕಾರು ಹುಡುಗಿಯರು, “ಬೇಕೇ ಬೇಕು, ನ್ಯಾಯ ಬೇಕು”, “ನಮ್ಮ ಗುರುಗಳಿಗೆ ನ್ಯಾಯ ಕೊಡಿ”… ಹೀಗೆ ಇನ್ನೂ ಏನೇನೋ ಕೂಗತೊಡಗಿದೆವು. ಎಲ್ಲಿಯೋ ಬಚ್ಚಿಟ್ಟಿದ್ದ ಬ್ಯಾನರ್‍ಗಳೂ ನಮ್ಮ ಕೈಗೆ ಬಂದವು.

ಇದನ್ನ ನಮ್ಮ ಗುರುವರ್ಗ ಮತ್ತು ಶಾಲೆಯ ಆಡಳಿತ ಮಂಡಳಿ ಅಪೇಕ್ಶಿಸಿರಲಿಲ್ಲ. ಅವರಿಗೆ ಒಂದು ಕ್ಷಣ ಏನೂ ತೋಚಲಿಲ್ಲ. ಆದ್ರೆ, ಹತ್ತೇ ನಿಮಿಷದಲ್ಲಿ, ಅವರು ನಮ್ಮ ಬಳಿಗೆ ಬಂದು, “ನಿಮ್ಮ ಜೊತೆ ಆಮೇಲೆ ಮಾತಾಡ್ತೀವಿ. ಈಗ, ಕ್ಲಾಸ್‍ಗೆ ನಡೀರಿ..”. ಅಂದರು. ನಮಗೆ, ಅವರ ಜೊತೆ ವೈರ ಕಟ್ಟಿಕೊಳ್ಳೋದು ಬೇಕಿರಲಿಲ್ಲ. “ಸರಿ ಹಂಗಂದ್ರ, ನಮಗ ನ್ಯಾಯ ಸಿಗೋದಾದ್ರ, ನಾವು ಒಳಗ ಹೋಗ್ತೀವಿ.” ಅಂತ ಒಳನಡಿದ್ವಿ. ಅಷ್ಟರಲ್ಲೇ, ನಮ್ಮೋರಿನ ಪೇಪರ್ ಏಜಂಟು, ನಮ್ಮ ಬ್ಯಾನರ್‍ಗಳ ಫೋಟೋ ತಕ್ಕೊಂಡಿದ್ದ.

ನಾವು ತರಗತಿಗೆ ಹೋದಮೇಲೆ, ನಮ್ಮ ಗುರುವೃಂದ ಅವರ ರೂಮ್‍ನಲ್ಲಿ ಸೇರಿದ್ರು. ”ಸರಿಯಿನ್ನು… ಇವತ್ತು ನಮ್ಮ ಕ್ಲಾಸ್ ನಡಿಯುವದಿಲ್ಲ”, ಅಂದುಕೊಂಡು ನಾನು ಮನೆ ಸೇರಿದೆ. ಅತ್ತ ನಾನು ಹೋದ ಸ್ವಲ್ಪ ಹೊತ್ತಿನಲ್ಲೇ, ನನ್ನ ಜೊತೆಯಿದ್ದ ಇನ್ನಿಬ್ಬರು ಹುಡುಗರಿಗೆ ಬೆತ್ತದ ಪೂಜೆಯಾಯ್ತು. ಅವರ ಕೈ, ಕಾಲು, ಪೃಷ್ಟ ಬಾವು ಬರುವಂತೆ ಹೊಡೆದಿದ್ದರು.

ಮರುದಿನ ನಾನು ಶಾಲೆಗೆ ಹೋದಾಗ, “ನಮಗೆಲ್ಲ ಪರೀಕ್ಷೆಯ ಫಾರ್ಮ್ ತುಂಬಲು ಬಿಡುವುದಿಲ್ಲ” ಎಂಬ ಸುದ್ದಿ ಇಡೀ ಶಾಲೆಯ ತುಂಬ ಹರಡಿತ್ತು. ನನಗೆ ಭಯ ಪ್ರಾರಂಭವಾಯ್ತು. ನನ್ನ ಜೊತೆ ಇದ್ದ ಇಬ್ಬರು, ಅವರ ತಂದೆಯನ್ನು ಕರೆದುಕೊಂಡು ಬಂದು ಕ್ಷಮೆ ಕೇಳಿ ಪಾರಾದರು. ಆದರೆ ನಮ್ಮದೋ ಅಲ್ಲಿ ಅತಿ ಗೌರವಿಸಲ್ಪಡುತ್ತಿರುವ ಕುಟುಂಬಗಳಲ್ಲಿ ಒಂದು. ಅದಕ್ಕೆ ನನಗೆ ಹೊಡೆತಗಳೂ ಬೀಳಲಿಲ್ಲ. ಆದ್ರೆ ನನ್ನ ತಂದೆಯನ್ನು ಕರೆದುಕೊಂಡುಬರಬೇಕು, ಇಲ್ಲದಿದ್ದರೆ, ಪರೀಕ್ಷೆಯ ಫಾರ್ಮ್ ತುಂಬಲು ಬಿಡುವುದಿಲ್ಲ ಎಂದು ಹೇಳಿದ್ರು. “ಛೇ.. ನನ್ನ ಅಪ್ಪನನ್ನ ಎಂಥ ಇಕ್ಕಟ್ಟಿನಲ್ಲಿ ಸಿಕ್ಕಿಸಿದೆನಲ್ಲ” ಎಂಬ ಬೇಜಾರಿನೊಂದಿಗೇ, ಅಪ್ಪನಿಗೆ ಈ ವಿಷಯ ತಿಳಿಸಿದೆ. ಅವರು ಇದೆಲ್ಲ ಇದ್ದದ್ದೇ ಎನ್ನುವವರ ಥರ ಶಾಲೆಗೆ ಬಂದರು. ಅಲ್ಲಿ, ನನ್ನ ಗುರುಗಳ ನಿಂದನೆಯನ್ನೋ ತಡೆದುಕೊಂಡರು.

ನನಗೆ ನನ್ನ ಪಾಪಪ್ರಜ್ಞೆ ಕಾಡಲಾರಂಭಿಸಿತು. ಎಂದೂ ಅಪವಾದಕ್ಕೊಳಗಾಗದ ನನ್ನ ಅಪ್ಪ, ಎಲ್ಲರೂ ಗೌರವಿಸುವ ಅವರು, ನನ್ನಿಂದಾಗಿ ನಿಂದನೆಗೊಳಗಾಗಬೇಕಾಯ್ತಲ್ಲ ಎಂದು. ಎರಡು ದಿನ ಯೋಚಿಸಿದೆ. ಈ ವರ್ಷ ಪರೀಕ್ಶೆ ತೆಗೆದುಕೊಳ್ಳೂವದು ಬೇಡ ಎಂದು ನಿರ್ಧರಿಸಿದೆ. ಈ ನಿರ್ಧಾರಕ್ಕೆ ಬರಲು ಇನ್ನೂ ಕೆಲವು ಚಿಕ್ಕಪುಟ್ಟ ಕಾರಣಗಲೂ ಇದ್ದವು. ಮನೆಯಲ್ಲಿ ಇದನ್ನೂ ಹೇಳಿದೆ. ಅಪ್ಪ “ಸರಿ. ಆದ್ರೆ, ಇನ್ನೊಮ್ಮೆ ಸರಿಯಾಗಿ ವಿಚಾರ (ಯೊಚನೆ) ಮಾಡು” ಎಂದರು. ನಾನು, “ಆಗಲೇ ಎಲ್ಲ ವಿಚಾರ ಮಾಡೀನಿ”. ಅಂದೆ. ಆ ವರ್ಷ ಪರೀಕ್ಷೆಗಳು ಮುಗಿದು ಹೋದವು (ನಾನಿಲ್ಲದೆ ).

ಇತ್ತ, ಯಾವ ಜೀವಶಾಸ್ತ್ರದ ಗುರುಗಳಿಗೋಸ್ಕರ ಈ ಸ್ಟ್ರೈಕ್ ಮಾಡಿದ್ದೆವೋ, ಅವರು ನಾವ್ಯಾರೋ ಎನ್ನುವಂತೆ ಸುಮ್ಮನಾದ್ರು. ಅವರು, ಮತ್ತೆ ಶಾಲೆ ಸೇರಿದ್ರು; ಮತ್ತೆ ಮೇಷ್ಟ್ರಾದ್ರು. ನಾನು ಶಾಲೆ ಬಿಟ್ಟೆ……

ಇದೆಲ್ಲ ಮುಗಿದು ಹತ್ತು ಹನ್ನೆರೆಡು ವರ್ಷಗಳಾಗಿವೆ. ಈಗ ನಾನು, ನನ್ನ ಹೊಟ್ಟೆ ಬಟ್ಟೆಗೆ ಕಡಿಮೆಇಲ್ಲದ ಉದೋಗದಲ್ಲಿಯೂ ಇದ್ದೇನೆ. ಆದ್ರೆ, ಈಗ್ಲೂ ಅನೇಕಸಲ ಅನ್ನಿಸುತ್ತೆದೆ - ಯಾರಿಗೆ ಬೇಕಾಗಿತ್ತು ನ್ಯಾಯ?