ಕಾಡುವ ಹೂಗಳು

ಕಾಡುವ ಹೂಗಳು

ಬರಹ

ಮಧುಗಿರಿಯಿಂದ ತುಮಕೂರಿಗೆ ಮನೆ ಬದಲಾವಣೆ ಮಾಡಿದ ಸಂದರ್ಭ.ಗ್ರಾಮೀಣ ಹಿನ್ನೆಲೆಯವನಾದ ನನಗೆ ಮೊದಲಿನಿಂದಲೂ ಕುರುಚಲು ಕಾಡಿನ,ಬೆಟ್ಟಗುಡ್ಡಗಳಲ್ಲಿ ಅರಳುವ ಚಿಕ್ಕಪುಟ್ಟ ಹೂಗಳೆಂದರೆ ಆಸ್ಥೆ.ಹಾಗೆಂದು ಗುಲಾಬಿ,ಜರ್ಬೇರಾಗಳನ್ನು ಕಂಡು ಅಲರ್ಜಿಯಂತೂ ಇಲ್ಲ. ಹಳ್ಳಿಯ ಕುಸುಮಗಳಲ್ಲಿ ಒಂದು ಪಾಲು ಹೆಚ್ಹು ಆಸಕ್ತಿ ಅಷ್ಟೆ.
ತುಮಕೂರಿನ ಮನೆಯ ಮುಂದೆ ಒಂದು ಕಾರೆ ಗಿಡ ಇದೆ. ಬಳ್ಳಿಯಂತೂ ನನಗೆ ತೀರಾ ಅಪರಿಚಿತ.ನಾ ಬಂದ ಹೊಸದರಲ್ಲಿ ಕಾರೆ ಗಿಡದ ಮೇಲೆ ಹಚ್ಹ ಹಸುರಿನ ಬಳ್ಳಿಯೊಂದು ಆವರಿಸಿತ್ತು. ಬಳ್ಳಿಯಂತೂ ನನಗೆ ತೀರಾ ಅಪರಿಚಿತ.ಒಂದು ದಿನ ಬೆಳಿಗ್ಗೆ ಎಂಟು ಗಂಟೆಯ ಸಮಯದಲ್ಲಿ ಬಳ್ಳಿಯ ಬಳಿ ಸಾರಿದ ನನಗೆ ಅದರ ಕಾಯಿ ನೋಡಿ ವಿಸ್ಮಯವಾಯಿತು.ಹಸುರು ಕಾಯಿಯ ಸುತ್ತ ಮುಳ್ಳು ಪಹರೆಯ ಮೂರು ಪದರಗಳಿದ್ದದ್ದನ್ನು ಕಂಡು ಆಶ್ಚರ್ಯವಾಯಿತು.ಕಾಯಿಯ ಸ್ವಲ್ಪ ಹಿಂದೆ ಬಾಡಿದ ಹೂವೊಂದು ಕೂಡಾ ಬಳ್ಳಿಯಲ್ಲಿ ತಗುಲಿಕೊಂಡಿತ್ತು.ಆ ರೀತಿಯ ಹೂವನ್ನೆಂದೂ ನಾನು ಕಂಡಿದ್ದಿರಲಿಲ್ಲ.ಹೂವು ಅರಳಿದಾಗ ಒಮ್ಮೆ ಕ್ಲಿಕ್ಕಿಸಿಕೊಳ್ಳೋಣವೆಂದು ಸುಮ್ಮನಾದೆ.
ನನ್ನ ಅಲ್ಪ ಸ್ವಲ್ಪ ಬಿಡುವಿನ ವೇಳೆಯಲ್ಲಿ ಹಲವಾರು ದಿನ ಇದರ ಕಡೆ ಗಮನ ಹೋಗಲಿಲ್ಲ .ಆದರೆ ಕೆಲ ದಿನಗಳ ನಂತರ ಬೆಳಿಗ್ಗೆ ಆರರ ಸಮಯದಲ್ಲಿ ನಮ್ಮ ಮನೆಯ ಮುಂಭಾಗದ ಖಾಲಿ ನಿವೇಶನದಲ್ಲಿ ಒಂದಲ್ಲ ಹತ್ತಾರು ಇದೇ ಹೂಗಳು ಇದ್ದದ್ದನ್ನು ಕಂಡು ಕ್ಯಾಮೆರಾದಲ್ಲಿ ಸೆರೆ ಹಿಡಿದೆ.
ನಾನು ಗಮನಿಸಿದಂತೆ ಈ ಹೂವು ಬೆಳಗಿನ ತೆಳು ಬಿಸಿಲಿಗೆ ಮಾತ್ರ ನಳನಳಿಸುತ್ತದೆ.ಬಿಸಿಲು ಸ್ವಲ್ಪ ಬಲಿತರೂ ಬೇಗನೆ ಬಾಡುತ್ತದೆ. ಈಗ ಬಳ್ಳೀ ಮಾತ್ರ ಇದೆ. ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಮತ್ತೆ ಈ ಬಳ್ಳಿಗಳು ಹೂ ಬಿಡಬಹುದೆಂದು ನನ್ನ ಅನಿಸಿಕೆ.