ಅಜ್ಜಿಯರ ಪಿಡ್ಜಾ (ಗ್ರಾನೀಸ್ ಪಿಡ್ಜಾ)

ಅಜ್ಜಿಯರ ಪಿಡ್ಜಾ (ಗ್ರಾನೀಸ್ ಪಿಡ್ಜಾ)

ಹೀಗೆ ವೀಕ್ ಮ್ಯಾಗಝೀನ್ ಓದ್ತಿದ್ದೆ. ಅದರಲ್ಲಿ ಇದನ್ನು ಓದಿದಾಗ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕೆನಿಸಿತು. ಅನುವಾದಿಸಿದ್ದೇನೆ. ತಪ್ಪಿದ್ದರೆ ಕ್ಷಮಿಸಿ :-)

ಪದ್ಮಾ ಶ್ರೀನಿವಾಸನ್ (೭೫ ವರ್ಷ) ಹಾಗೂ ಅವರ ಮಗಳು ಸರಸ ವಾಸುದೇವನ್ ಮತ್ತು ಜಯಲಕ್ಷ್ಮಿ ಶ್ರೀನಿವಾಸನ್ (೮೨ ವರ್ಷ!), ಈ ಮೂವರು ಮಹಿಳೆಯರು, ವೃದ್ಧರಿಗಾಗಿ ಆಶ್ರಮವೊಂದನ್ನು ತೆರೆಯಲು ಮನಸ್ಸು ಮಾಡಿದರು. ಅದಕ್ಕಾಗಿ ಹಣ ಸಂಗ್ರಹಿಸಲು ಅವರು ಕಂಡುಕೊಂಡ ದಾರಿಯೇನು ಗೊತ್ತೇ? ಮಗಳ ಮನೆಯ ಗ್ಯಾರೇಜಿನಲ್ಲಿ ಪಿಡ್ಜಾ ತಯಾರಿಸಿ ಮಾರುವುದು! ಈ ಇಬ್ಬರೂ ಅಜ್ಜಿಯರಿಗೆ ಸಾಂಪ್ರದಾಯಿಕ ಅಡುಗೆಗಳು ಗೊತ್ತಿದ್ದವೇ ಹೊರತೂ ಎಂದೂ ಅವರು ಪಿಡ್ಜಾ ದ ಹೆಸರನ್ನು ಕೂಡಾ ಕೇಳಿರಲಿಲ್ಲವಂತೆ. ಆದರೂ ಯುವ ಜನತೆ ಅದಕ್ಕೆ ಮುಗಿಬೀಳುವದನ್ನು ಅರಿತು, ಅಮುಲ್ ಎಂಬ ಸಂಸ್ಥೆಯ ಫ್ರಾಂಚೈಸಿ ತೆಗೆದುಕೊಂಡು ಶುರು ಮಾಡಿದ ಈ ಪಿಡ್ಜಾ ಸೆಂಟರ್, ಬಾಲ್ಡ್ ವಿನ್ಸ್ ಬಾಯ್ಸ್ ಸ್ಕೂಲಿನ ಬಳಿ ಇದ್ದದ್ದರಿಂದ, ಆ ಮಕ್ಕಳನ್ನು ಆಕರ್ಷಿಸುವುದರಲ್ಲಿ ತಡ ಮಾಡಲಿಲ್ಲ. ಮಗಳು ಕೆಲಸಕ್ಕೆ ಹೋಗುತ್ತಿದ್ದಾಗಿ, ಈ ವಯಸ್ಸಾದ ಇಬ್ಬರೂ ಮಹಿಳೆಯರೇ ಈ ಸೆಂಟರನ್ನು ಪೂರ್ತಿಯಾಗಿ ನೋಡಿಕೊಳ್ಳುತ್ತಿದ್ದರಂತೆ. ಒಂದು ದಿನ ಈ ಅಜ್ಜಿಯರು ಎಲ್ಲೋ ಹೋಗಿದ್ದಾಗ, ಮಗಳು ಕೌಂಟರಿನಲ್ಲಿ ಕುಳಿತ್ತಿದ್ದರಂತೆ. ಪಿಡ್ಜಾ ಕೊಳ್ಳಲು ಬಂದ ಹುಡುಗನೊಬ್ಬ, ಪಿಡ್ಜಾದ ರುಚಿಯನ್ನು ನೋಡಿ, "ಗ್ರಾನೀಸ್ (ಅಜ್ಜಿಯರು) ಇಲ್ಲವೇ" ಎಂದನಂತೆ. ಯಾಕೆಂದು ಮಗಳು ವಿಚಾರಿಸಿದಾಗ, "ಇವತ್ತಿನ ಪಿಡ್ಜಾದಲ್ಲಿ ಅವರ ಸ್ಟೈಲ್ ಇಲ್ಲದೇ ಏನೋ ಕೊರತೆಯಿದ್ದಂತಿದೆ" ಅಂದನಂತೆ! ಅಂದಿನಿಂದ ಆ ಪಿಡ್ಜಾ ಸೆಂಟರ್ ನ ಹೆಸರನ್ನು ‘ಪಿಡ್ಜಾ ಗ್ರಾನೀಸ್’ ಎಂದು ಇಟ್ಟರಂತೆ.

ಸತ್ಯಮ್ ಸಂಸ್ಥೆಯು ಇವರ ಗ್ಯಾರೇಜಿನ ಹತ್ತಿರವೇ ಇದ್ದದರಿಂದ ಅವರ ಮನವೊಲಿಸಿ, ಅವರ ಆಫೀಸಿನಲ್ಲಿ ಸಣ್ಣದೊಂದು ಜಾಗವನ್ನು ಈ ಪಿಡ್ಜಾ ಮಾರಲೂ ಕೇಳಿದರಂತೆ. ಇಬ್ಬರೂ ಅಜ್ಜಿಯರು ಕೌಂಟರಿನಲ್ಲಿ ಇರುವುದನ್ನು ನೋಡಿದ ಮಂದಿಯು, ಕುತೂಹಲದಿಂದ ಇಲ್ಲಿಗೆ ಬರಲು ಶುರು ಮಾಡಿದವರು, ಪಿಡ್ಜಾದ ರುಚಿಗೆ ಮನಸೋತರಂತೆ. ಅನೇಕ ಕಾರ್ಪೋರೇಟ್ ಸಂಸ್ಥೆಗಳಿಗೆ ಪಿಡ್ಜಾ ಕಳಿಸಲು ಶುರು ಮಾಡಿದರಂತೆ. ಅವರ ವೃದ್ದಾಶ್ರಮ ‘ವಿಶ್ರಾಂತಿ’ ಗಾಗಿ ತಿಂಗಳಿಗೆ ೨೦,೦೦೦ ರೂ.ಗಳಷ್ಟು ಈ ಪಿಡ್ಜಾ ಮಾರುವುದರಿಂದ ಸಿಗುತ್ತಿತ್ತು ಅಂದರೆ ಅದರ ರುಚಿ, ಪರಿಮಳ ಎಲ್ಲಿಯವರೆಗೂ ಪಸರಿಸಿತ್ತೋ ಊಹಿಸಿ!

ಇವರ ಯಶೋಗಾಥೆ ಇಲ್ಲಿಗೆ ನಿಲ್ಲುವುದಿಲ್ಲ. ಈ ಪದ್ಮಾ ಎಂಬಾ ವೃದ್ಧ ಮಹಿಳೆ ತನ್ನ ನಿವೃತ್ತಿಯ ಹಣದ ಬಹುಭಾಗವನ್ನು ಈ ‘ವಿಶ್ರಾಂತಿ’ ಗಾಗಿ ಬಳಸುತ್ತಿದ್ದಾರಂತೆ. ಇದಲ್ಲದೆ ಅನಾಥ ಮಕ್ಕಳಿಗಾಗಿ ಒಂದು ಅನಾಥಾಶ್ರಮವನ್ನು, ಹಳ್ಳಿಯ ಬಡಮಕ್ಕಳಿಗಾಗಿ ಒಂದು ಟೈಲರಿಂಗ್ ಮತ್ತು ಕಂಪ್ಯೂಟರ್ ಸೆಂಟರ್ ಅನ್ನು ಹಾಗೂ ಬೇಕರಿ ಮತ್ತು ರೆಸ್ಟೋರೆಂಟನ್ನು ಪ್ರಾರಂಭಿಸುವ ಬಯಕೆ ಕೂಡಾ ಇದೆ. ವಾರದ ವೀಕೆಂಡ್ ಗಳಲ್ಲಿ ಅನೇಕ ಕಾರ್ಪೋರೇಟ್ ಉದ್ಯೋಗಿಗಳು ಇಲ್ಲಿಗೆ ಬಂದು ಸಹಾಯ ಕೂಡ ಮಾಡುತ್ತಾರಂತೆ. ಇವರಿಗಾಗಿ ಕೂಡಾ ಒಂದು ರೆಸ್ಟೋರೆಂಟ್ ತೆರೆಯುವ ಉದ್ದೇಶವು ಇವರಲ್ಲಿದೆ.

೩೦-೪೦ ವರ್ಷಗಳಾದರೆ ನಮಗೆ ವಯಸ್ಸಾಗಿದೆ ಎಂದು ಕುಳಿತುಕೊಳ್ಳುವ ಮಹಿಳೆಯರು, ರಿಸೆಶನ್ ನಿಂದಾಗಿ ನಾನೇನು ಮಾಡಲು ಸಾಧ್ಯವಿಲ್ಲವೆಂದು ನಿರಾಶರಾಗಿರುವ ಯುವಕರು, ಪಬ್, ಸ್ತ್ರೀ ಸ್ವಾತಂತ್ರ, ಸಮಾನತೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಮಂದಿಯ ಮುಂದೆ, ನಮಗಿನ್ನೂ ಜೀವನದಲ್ಲಿ ಸಾಧಿಸುವ ಉತ್ಸಾಹವಿದೆ ಎಂದು ಹೇಳುತ್ತಿರುವ ಈ ವೃದ್ಧೆಯರನ್ನು (ಕ್ಷಮಿಸಿ, ತರುಣಿಯರು ಎಂದೆನ್ನಬೇಕು) ನೋಡಿದಾಗ ನಾವೇನೂ ಮಾಡುತ್ತಿಲ್ಲವಲ್ಲ ಎಂದು ನನಗೆ ನಾಚಿಕೆಯಾಗಿದ್ದಂತೂ ಸುಳ್ಳಲ್ಲ. ನಿಜವಾಗಲೂ ನಾವೆಲ್ಲರೂ ಇವರಿಗೆ ತಲೆಬಾಗಲೇಬೇಕು. ಏನಂತೀರಿ?

Rating
No votes yet

Comments