ಅನುರಾಗ ಅರಳಿತು!!!(ಸಣ್ಣ ಕಥೆ)

ಅನುರಾಗ ಅರಳಿತು!!!(ಸಣ್ಣ ಕಥೆ)

ಬರಹ

ಅನುರಾಗ ಅರಳಿತು!!!(ಸಣ್ಣ ಕಥೆ)
ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ( ಚಿತ್ರ ರಚನೆ: ಹಂಸಾನಂದಿ )

ಚಿತ್ಕಲ ದೇವರಿಗೆ ದೀಪ ಹಚ್ಚುತ್ತಾ "ಈ ಹುಡುಗಿಗೆ ಒಂದು ನೆಮ್ಮದಿಯಾದ ನೆಲೆ ತೋರಿಸಿಬಿಡಪ್ಪಾ, ಪರಮಾತ್ಮಾ" ಎಂದು ಬೇಡಿಕೊಳ್ಳುತ್ತಾ, ಮನಸ್ಸಿನಲ್ಲೇ ದೇವರ ಸ್ತುತಿಯಲ್ಲಿ ಕಣ್ಣು ಮುಚ್ಚಿ ದೇವರ ಮನೆಯಲ್ಲೇ ಕುಳಿತರು.

ನಮ್ರತಾ ಆಕಳಿಸುತ್ತಾ, ಅರೆನಿದ್ದೆಯಿಂದ ಎದ್ದು, "ಅರೆ, ಗಂಟೆ ಒಂಬತ್ತಾಯಿತು, ಇನ್ನೂ ಏಕೆ ದೇವರಮನೆ ದೀಪ ಉರಿಯುತ್ತಿದೆ!?" ಎನ್ನುತ್ತಾ ದೇವರ ಮನೆಗೆ ಧಾವಿಸುತ್ತಾ, "ಅಮ್ಮಾ ನಿನಗೆ ಸ್ಕೂಲ್‌ಗೆ ಹೊತ್ತಾಯಿತು, ಇವತ್ತ್ಯಾಕೋ ನಿನ್ನ ಪೂಜೆನೇ ಮುಗಿಲಿಲ್ವಲ್ಲಾ?". ಚಿತ್ಕಲ ಕಣ್ಣು ಬಿಟ್ಟು "ಇಗೋ ಹೊರಟೆ, ಇವತ್ಯಾಕೋ ಟೈಮ್ ಆಗಿದ್ದೇ ತಿಳಿಯಲಿಲ್ಲ. ಇವತ್ತೇ ಸಂಜೆ ಪ್ರತಿಮಾ ಅವರು ನಿನ್ನ ನೋಡಲು ಬರ್ತಾರೆ, ಆ ನೀಲಿ ಸೀರೆ ಉಟ್ಕೊಂಡು ರೆಡಿಯಾಗಿರು, ನಿನಗದು ಚೆನ್ನಾಗಿ ಒಪ್ಪತ್ತೆ." ಎಂದೊಡನೆ ಬಾಗಿಲಿಂದ ಹೊರಜಾರಿದರು.

ಸ್ಕೂಲ್‌ಗೆ ನಡೆಯುತ್ತಾ ಚಿತ್ಕಲಾ, ಅವರ ನೆನಪಿನಾಳದಿಂದ ಹೊರಬಂದ ವಾಹಿನಿಯನ್ನು ಏಕಾಗ್ರತೆಯಿಂದ ಮನದಲ್ಲೇ ಹರಿಸಿದರು.

"ವರ್ಷಗಳು ಕಳೆದಿದ್ದೇ ತಿಳಿಯಲಿಲ್ಲ. ನಮ್ರತಾ ಮಗುವಾಗಿ, ಬಾಲೆಯಾಗಿ, ಹುಡುಗಿಯಾಗಿ ಈಗ ಮೈನೆರೆದು ಮದುವೆಗೆ ರೆಡಿಯಾಗಿದ್ದಾಳೆ. ಅವಳ ಹೆತ್ತ ತಾಯಿ ಸುಹಾನಿ ಅಂದು ನಮ್ರತೆಯಿಂದ ನನ್ನನ್ನು ಕೇಳಿಕೊಂಡ ಪರಿಯೇ ಹಾಗಿತ್ತು. ಅದಕ್ಕಲ್ಲವೇ ನಾನು ಅವಳಿಗೆ ನಮ್ರತಾ ಅಂತ ಹೆಸರಿಸಿದ್ದು? ಚಿತ್ಕಲಾ, ಈ ನನ್ನ ಮಗುವನ್ನು ಯಾರ ಒಡಲಿಗೂ ಹಾಕಲು ನನಗಿಷ್ಟವಿಲ್ಲ. ಇವಳಿಗೆ ಇರುವುದು ಒಂದೇ ಒಂದು ಜಾಗ, ಅದು ಸಿಕ್ಕಿದರೆ ಇವಳ ಅಧೃಷ್ಟ, ಇಲ್ಲದಿದ್ದರೆ ಇವಳು ನತಧೃಷ್ಟಳು. ಇವಳಿಗೆ ತಾಯಿಯಾಗಿ, ತಂದೆಯಾಗಿ, ಪೋಷಕಿಯಾಗಿ, ಬೆಳೆಸಿ ಒಂದು ದಡ ಸೇರಿಸುವುದು ನಿಮಗೆ ದೇವರು ಕೊಟ್ಟ ಅಭಿಲಾಷೆಗಳಲ್ಲಿ ಒಂದು ಎಂದು ನಂಬಿದ್ದೇನೆ. ಹೆಚ್ಚು ದಿನ ಮಗುವಿನ ಜೊತೆ ಇದ್ದರೆ, ಈ ಬಂಧನ ಮುರಿಯುವುದು ನನಗಷ್ಟೇ ಅಲ್ಲಾ, ನಿಮಗೂ ಬಂಧನ ಬೆಳೆಸುವುದು ಅಷ್ಟೇ ಕಷ್ಟವಾಗುತ್ತೆ. ನನಗಾದಾಗಲೆಲ್ಲ ಬಂದು ನೋಡುತ್ತೇನೆ, ನನ್ನನ್ನು ಮಾತ್ರ ಹುಡುಕಬೇಡಿ. ನಮ್ರತನಿಗೆ ಈ ವಿಷಯ ತಿಳಿಸಬೇಕೋ, ಬೇಡವೋ, ಯಾವಾಗ ತಿಳಿಸಬೇಕು ಎನ್ನುವ ವಿಷಯದಲ್ಲಿ ನಿಮಗೆ ಸಂಪೂರ್ಣ ಹಕ್ಕುಂಟು ಎಂದಿದ್ದು ಕಣ್ಣಿಗೆ ಕಟ್ಟಿದಂತಿದೆ. ಇಂದಿಗೆ ಇದಾಗಿ ಮತ್ತು ನಮ್ರತಳಿಗೆ ೨೧ ವರ್ಷಗಳಾಗಿ ಹೋಗಿವೆ. ನಮ್ರತಳನ್ನು ಕಟ್ಟಿಕೊಂಡು, ತನ್ನ ಮಿಡ್ ವೈಫ್ ಕೆಲಸಕ್ಕೆ ರಾಜಿನಾಮೆ ಕೊಟ್ಟು, ಬೇರೊಂದು ಊರಿಗೆ ಬಂದು ಶಿಕ್ಷಕಿ ತರಭೇತಿ ಪಡೆದು ಟೀಚರ್ ಆಗಿದ್ದೇ ಇದಕ್ಕಲ್ಲವೇ? ಒಂದುವೇಳೆ ಇನ್ನೂ ಮಿಡ್ ವೈಫ್ ಆಗಿ ಕೆಲಸ ಮಾಡುತ್ತಲೇ ಇದ್ದಿದ್ದರೆ, ಇಷ್ಟು ಹೊತ್ತಿಗೆ ಅದೆಷ್ಟು ಮಕ್ಕಳಿಗೆ ತಾಯಿಯಾಗಬೇಕಿತ್ತೋ? ಎನೋ ಎಲ್ಲಾ ಆ ದೇವರ ಕೃಪೆ. ನನ್ನ ಮದುವೆಯಾಗಿ ೫-ವರ್ಷಗಳಲ್ಲಿ ಮಗುವಾಗದೆ ಆ ದುರಂತದಲ್ಲಿ ಗಂಡನನ್ನು ಕಳೆದುಕೊಂಡು ಜೀವನೋಪಾಯಕ್ಕೆ ನರ್ಸಿಂಗ್ ಮಾಡಿ, ಮಿಡ್ ವೈಫ್ ಆಗಿ, ಮಗುವಿನ ಲಭ್ಯ ಈ ರೀತಿಯಲ್ಲಿ ಹಣೆಯಲ್ಲಿ ಬರೆದಿತ್ತಲ್ಲವೆ? ನಮ್ರತಾ ಅಪ್ರತಿಮ ಸುಂದರಿ, ಎಲ್ಲಾ ಅವಳಮ್ಮನ ಸೌಂದರ್ಯವೇ ಧಾರೆ ಎರೆದು ಕೊಟ್ಟಿದ್ದಾಳೆ. ಆದರೆ, ನನ್ನ ಬಡತನ ಯಾವಾಗ ಎಲ್ಲಿ ತಲೆ ಹಾಕುವುದೋ ಅವಳ ಬಾಳಿನ ನಿರ್ಧಾರದಲ್ಲಿ? ಈ ಊರಲ್ಲಿ ಪ್ರತಿಮಾಳಂತಹ ಒಳ್ಳೇ ಸಹೋದ್ಯೋಗಿಯ ಪರಿಚಯವಾಗಿದ್ದು ನನ್ನ ಸುಯೋಗ. ನೋಡೋಣ, ನಮ್ರತನ ಹಣೆಯಲ್ಲಿ ಏನು ಬರೆದಿದೆ ಅಂತ. ಪ್ರತಿಮಾ ಅಂತೂ ಇವತ್ತು ಬಂದು ನಮ್ರತಾನ ನೋಡುತ್ತಾರೆ." ಹೀಗೆ ನಿರಂತರವಾಗಿ ಲಹರಿ ಮುಂದುವರೆಯುತ್ತಿದ್ದಂತೆ.........

ಮಿಸ್ ಸುಮತಿ ಎದುರಿಗೆ ಬಂದು, "ಏನು, ಚಿತ್ಕಲಾ ಮೇಡಮ್ ತುಂಬಾ ಗಾಢ ಯೋಚನೆಯಲ್ಲಿದ್ದಹಾಗಿದೆ?"

ಚಿತ್ಕಲಾ: "ಏನಿಲ್ಲ, ನಿನ್ನೆ ಸ್ವಲ್ಪ ಕೆಲಸ ಜಾಸ್ತಿ ಇದ್ದಿದ್ದರಿಂದ ಸುಸ್ತು ಹೋಗಿಲ್ಲ. ಇವತ್ತು ಸ್ವಲ್ಪ ಜಾಸ್ತಿ ಮಲಗಿ ಸುಧಾರಿಸಿಕೊಡರೆ ಸರಿಹೋಗುತ್ತೆ".

ಸುಮತಿ: "ಹೆಡ್ ಮಿಸ್ಟ್ರೆಸ್ ನೀಲ, ಸುನೀಲ್ ಜೊತೆ ಫೋರ್ತ್ ಗ್ರೇಡ್ ಫೀಲ್ಡ್ ಟ್ರಿಪ್ ಗೆ ಹೊರಟಿದ್ದಾರೆ. ನೀವು, ನಾನು ತರ್ಡ್ ಗ್ರೇಡ್ ಕ್ಲಾಸ್ ತಗೋಬೇಕಂತೆ ಇವತ್ತು. ನೀವು ಸಹಿ ಮಾಡಿ ಬನ್ನಿ, ನಾನು ಕ್ಲಾಸ್ ನಲ್ಲಿ ಕಾಯ್ತೀನಿ."

ಚಿತ್ಕಲಾ: "ಆಯ್ತು ಸುಮತಿ, ಬೇಗ ಸಹಿ ಮಾಡಿ ಬರ್ತೇನೆ" ಎನ್ನುತ್ತಾ ಸ್ಕೂಲ್ ಆಫೀಸ್ ಕಡೆಗೆ ಸಾಗಿದರು.

* * * * *

ನಮ್ರತಾ ತಾಯಿನ ಸ್ಕೂಲ್‌ಗೆ ಕಳಿಸಿ, ಕನ್ನಡಿ ಮುಂದೆ ನಿಂತು ಯಾಕೋ ನನ್ನ ಮುಖ ತುಂಬಾ ಸುಸ್ತಾಗಿರೋ ಹಾಗಿದೆ. ಸಂಜೆ ಪ್ರತಿಮಾ ಬರೋ ಹೊತ್ತಿಗೆ ಸ್ವಲ್ಪ ಸುಧಾರಿಸಿಕೊಂಡು ಚೆನ್ನಾಗಿ ಸಿಂಗರಿಸಿಕೋಬೇಕು" ಎಂದು ಕೊಳ್ಳುತ್ತಾ ಹಾಸಿಗೆ ಮೇಲೆ ಉರುಳಿದಳು. "ಸಣ್ಣ ನಿದ್ದೆ ತೆಗೆಯೋಣ ಎಂದರೆ ಯಾಕೋ ನಿದ್ದೆನೇ ಬರುತ್ತಿಲ್ಲ. ಈ ಹಾಳು ಮನಸ್ಸು ಅದೇ ವಿಷಯಾನೇ ಕೊರೆದೂ ಕೊರೆದೂ ಮೆಲುಕು ಹಾಕುತ್ತಿದೆ. ಅಮ್ಮಾ ಯಾಕೆ ಇಷ್ಟು ದಿನ ಕಾದಿರಿಸಿಕೊಂಡು ಮೊನ್ನೆ ಮೊನ್ನೆ "ನಾನು ಅಮ್ಮನಿಗೆ ಸಾಕು ಮಗಳು" ಅನ್ನೋ ವಿಷಯಾನ ಈಗ ಹೇಳಿದಳು? ಅಮ್ಮಾ ಇಷ್ಟು ದಿನ ನಿಜ ಮುಚ್ಚಿಟ್ಟಿದ್ದರೂ, ನನಗೆ ತೋರಿದ ಪ್ರೀತಿ, ಅಕ್ಕರೆಯಲ್ಲಿ ಯಾವ ಕೊರತೆಯೂ ಇರಲಿಲ್ಲ, ಆದರೂ ಯಾಕೋ ಈ ಕೆಟ್ಟ ಮನಸ್ಸು ಒಪ್ಪುತ್ತಿಲ್ಲ. ನನ್ನ ಹುಟ್ಟಿನ ನಿಜಗುಣ, ಕುಲ, ಗೋತ್ರ ಅದಾಗಿರುವುದು ನನ್ನ ಹಣೆಯ ಬರಹ. ಅದನ್ನು ಯಾವ ಕುಂದೂ ಕೊರತೆಯಿಲ್ಲದೆ ಕ್ರಮವಾಗಿಸಲು ಅನುವಾಗಿರುವ ಅಮ್ಮನ ಮೇಲ್ಯಾಕೆ ಈ ಕೋಪ, ಸಿಟ್ಟೂ, ಸಿಡುಕು? ಮೊದಲೇ ತಿಳಿದಿದ್ದಾದರೆ, ನಾನು ಮಾಡುವುದಾದರೂ ಏನಿತ್ತು? ಇನ್ನೂ ಡಿಗ್ರೀ ಓದೋವಾಗ್ಲೇ ಗೊತ್ತಾಗಿದ್ದರೆ, ಪಾಸಾಗುವುದೂ ಕಷ್ಟವಾಗುತ್ತಿತ್ತು. ಏನೋ, "ಆಗಿದ್ದೆಲ್ಲಾ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ" ಎಂಬ ದಾಸನುಡಿಯಂತೆ ಆಗಿದ್ದೆಲ್ಲ ಒಳ್ಳೇದಕ್ಕೆ ಅಂತ ಅಂದ್ಕೋಬೇಕೇನೋ?.

ಆದರೆ, ನಾನೆಷ್ಟೋ ಸುಂದರ ಕನಸುಗಳನ್ನು ಕಟ್ಟಿದ್ದೇನೆ. ವಿದ್ಯೆ, ರೂಪ, ಸಂಗೀತ ಇರುವ ನನಗೆ ಮದುವೆಯ ವಿಷಯದಲ್ಲಿ ಅನಾಹುತವಾಗಲು ಹೇಗೆ ಸಾಧ್ಯ ಎಂದಂದಿತ್ತಲ್ಲವೇ ನನ್ನ ಮನ?. ಆದರೆ, ಈಗ ಚಿತ್ಕಲಳಿಗೆ ನಾನೊಬ್ಬಳು ಸಾಕು ಮಗಳು ಎಂದು ಸಮಾಜಕ್ಕೆ ಗೊತ್ತಾದರೆ, ಜನ ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಜಾತಿ, ಕುಲ, ಗೋತ್ರ, ಪರಂಪರೆ ಎಲ್ಲವುದನ್ನು ಮತ್ತೊಮ್ಮೆ ಹುಟ್ಟಿಸಲು ಸಾಧ್ಯವೇ? ಅಥವಾ ಹುಟ್ಟಿಸಿದರೆ, ಅದು ಅನರ್ಥವಾಗುವುದಿಲ್ಲವೇ? ನನಗೆ ಜನ್ಮಕೊಟ್ಟ ತಾಯಿ ಯಾಕೆ ಇಷ್ಟು ಕಟು ಹೃದಯಿಯಾದಳು? ನನ್ನ ಬಿಟ್ಟು, ಈ ಕಷ್ಟಕ್ಕೆ ಸಿಲುಕಿಸಿ ಯಾವ ಸರ್ವತ್ವವನ್ನು ಸಾಧಿಸ ಹೋದಳಾದರೂ ನನಗೆ ಅದು ಕ್ಷಮಿಸಲಾರದ ತಪ್ಪು. ಈ ಕ್ಷಣದಲ್ಲಿ ನನ್ನ ಮುಂದೆ ಬಂದರೂ, ನನ್ನ ಹೃದಯ ವೀಣೆಯಲ್ಲಿ ಅನುರಾಗವಿರಲಿ, ಯಾವ ರಾಗವೂ ಪಾಡುವುದಿಲ್ಲ, ಜಡ ವೀಣೆಯಂತೆ. ನನ್ನ ಸಾಕು ತಾಯಿಯ ಪ್ರೀತಿ ಅಪರಿಮಿತವಾಗಿದ್ದರೂ ಈ ಹೃದಯ ಏಕೆ ಒಂದೇ ಸಮನೆ ಒಡಂಬಡಿಸುತ್ತಿರುವುದು ೨೧ ವರ್ಷಗಳ ಹಿಂದೆ ಕಳೆದು ಹೋದ ಪ್ರೀತಿಗೋ, ಪ್ರೇಮಕ್ಕೋ, ಒಲವಿಗೋ, ಮಮತೆಗೋ, ಅನುರಾಗಕ್ಕೋ, ಅನುಕಂಪಕ್ಕೋ? ಒಂದೂ ಅರಿಯೇ ನಾ? ಅಮ್ಮ ಪ್ರತಿಮಾಗೆ ನನ್ನ ನಿಜಹುಟ್ಟಿನ ಸತ್ಯ ಹೇಳಿಲ್ಲದೇ ಇರಬಹುದು, ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂದಹಾಗೆ. ಪ್ರತಿಮಾ ಅವರ ತಮ್ಮನಿಗೆ ಹುಡುಗಿ ಹುಡುಕುತ್ತಿದ್ದಾರೆ, ಬೆಂಗಳೂರಲ್ಲಿ ದೊಡ್ಡ ಕೆಲಸ ಇದೆಯಂತೆ, ನೋಡಲೂ ಸುಂದರವಾಗಿದ್ದಾನಂತೆ, ಜೊತೆಗೆ ಹಿರಿಯ ಮಗನಂತೆ. ಅಮ್ಮ ಹೀಗೆ ಹೇಳಿದಮೇಲೆ ನನ್ನ ಆಸೆಯ ಕನಸುಗಳು ಆಗಸದಿಂದ ಇಳಿಯಲೇ ಇಲ್ಲ. ಇವತ್ತು ಪ್ರತಿಮಾ ಬಂದಾಗ ಏನಾದರೂ ಸಂಚು ನಡೆಸಿ ಅವರಿಗೆ ಈ ವಿಷಯ ಹೇಳಲೇ ಬೇಕು" ಎಂದು ನಿರ್ಧರಿಸಿದಳು. ಏಳಲು ಮನಬಾರದೇ ಸಂಗೀತ ಹಾಕಿ ಕಣ್ಣು ಮುಚ್ಚಿದಳು. " ಒಲವಂತೆ, ಗೆಲುವಂತೆ, ಬಾಳಿನ ಬೆಳಕಂತೆ! ಅನಾಥೆಯಾ ಸದಾಶಯಾ......ದ್ವನಿ ಸುರುಳಿ ಸುತ್ತುತ್ತಿತ್ತು.

* * * * * *

ಪ್ರತಿಮಾ ಒಬ್ಬರೆ ಹೂವು ಹಣ್ಣುಗಳ ಜೊತೆ ಚಿತ್ಕಲಾ ಮನೆಗೆ ಬಂದಕೂಡಲೇ ಮಾತಿಗೆ ಶುರು ಮಾಡಿದರು. ನಮ್ಮ ಸುಮತಿ, ನೀಲ ಮೇಡಮ್ ಎಲ್ಲಾ ಹೇಳಿದ್ದು ಅಕ್ಷರಷಃ ನಿಜ. ನಮ್ರತಾ ತುಂಬಾ ಚೆನ್ನಾಗಿದಾಳೆ, ನನ್ನ ತಮ್ಮನಿಗೆ ವರಸಾಮ್ಯ ಚೆನ್ನಾಗಿ ಆಗುತ್ತೆ. ನೀವು ತುಂಬಾ ಲಕ್ಕಿ ಚಿತ್ಕಲಾ. ಹೆಸರಿಗೆ ತಕ್ಕಂತೆ ನಯ, ವಿನಯ ಎಲ್ಲಾ ಎದ್ದು ಕಾಣಿಸುತ್ತಿದೆ."

ಚಿತ್ಕಲಾ: "ಏನೋ ಎಲ್ಲಾ ಆ ದೇವರ ಬರವಣಿಗೆ, ನಮ್ಮ, ನಿಮ್ಮ ಕೈಯಲ್ಲೇನಿದೆ ಹೇಳಿ?"

ಪ್ರತಿಮಾ: " ನಮ್ರತನಿಗೆ ನಾನು ಬರುವ ವಿಷಯ ತಿಳಿಸಿದ್ರಾ?"

ಚಿತ್ಕಲಾ: " ಹೌದು, ನೀವು ನಿಮ್ಮ ತಮ್ಮನಿಗೆ ಹುಡುಗಿ ಹುಡುಕೋ ಸಲುವಾಗಿ ನಿನ್ನನ್ನು ನೋಡೋಕ್ಕೆ ಬರ್ತಾರೆ ಅಂತ ಹೇಳಿದ್ದೆ. ಬರೀ ಮಾತಾಡ್ತಾ ಕೂತ್ ಬಿಟ್ವಲ್ಲಾ, ಸ್ವಲ್ಪ ಕಾಫಿ, ತಿಂಡಿ ತರುತ್ತೀನಿ" ಎಂದು ಅಡಿಗೆ ಮನೆಗೆ ನಡೆದರು.

ಪ್ರತಿಮಾ: ಚಿತ್ಕಲಾ ನಿನ್ನ ಬಗ್ಗೆ ಎಲ್ಲ ಹೇಳಿದ್ದಾರೆ, ಲಾಸ್ಟ್ ಇಯರ್ ಗ್ರಾಜುಯೇಟ್ ಆದ್ಯಂತೆ, ಈಗ ಸಂಗೀತ, ಆರ್ಟ್, ಎಲ್ಲಾ ಕಲಿತಿದಿಯಂತೆ. ಹಾಗೆ ಕೆಲಸಾನೂ ಹುಡುಕುತ್ತಿದಿಯಂತೆ.

ನಮ್ರತಾ: ಆಂಟೀ, "ಅಮ್ಮಂಗೆ ನಾನು ಕೆಲಸಕ್ಕೆ ಸೇರುವುದು ಇಷ್ಟ ಇಲ್ಲ. ಇಬ್ಬರೂ ಹೊರಗೆ ಕೆಲಸ ಮಾಡೋಕ್ಕಿಂತ ಒಬ್ಬರು ಮನೇಲಿದ್ದರೆ ಚೆನ್ನಾಗಿರುತ್ತೆ" ಅಂತಾರೆ.

ಪ್ರತಿಮಾ: "ಅಂದಹಾಗೆ ನಾನು ಬಂದಿದ್ದು ನನ್ನ ತಮ್ಮನಿಗೆ ಹುಡುಗಿ ಹುಡುಕ್ಕೊಂಡು. ನಿನಗೆ ಬೆಂಗಳೂರಲ್ಲಿ, ದೊಡ್ಡ ಮನೇಲಿ, ದೊಡ್ಡ ಸೊಸೆಯಾಗಿ ಇರಕ್ಕೆ ಇಷ್ಟ ಇದೆಯೇನಮ್ಮಾ? ನಿನ್ನ ಅಭಿಪ್ರಾಯವೇನು?"

ನಮ್ರತಾ: ಆಂಟೀ,......(ಅಷ್ಟರಲ್ಲಿ, ಚಿತ್ಕಲಾ ತಿಂಡಿ, ಕಾಫಿ ತಂದರು).

ಪ್ರತಿಮಾ ಹೊರಟಾಗ ರಾತ್ರಿ ಒಂಬತ್ತಾಗಿತ್ತು. ಚಿತ್ಕಲಾ, ನಮ್ರತಾ ಜಾಸ್ತಿ ಮಾತನಾಡದೆ ಮಲಗಲು ಸಿದ್ದರಾದರು. ಚಿತ್ಕಲ ನಿಗೆ ಕೆಲಸ ಜಾಸ್ತಿಯಾದ್ದರಿಂದ ನಿದ್ರಾದೇವಿ ಬೇಗ ಒಲಿದಳು. ನಮ್ರತಾ ಪ್ರತಿಮಾ ಕೊಟ್ಟ ಅವರ ತಮ್ಮ ಪರಾಗ್ ನ ಭಾವಚಿತ್ರವನ್ನು ನೋಡುತ್ತಾ ಮಲಗಿದಳು. ಆದರೆ, ನಿದ್ದೆ ಹತ್ತಲಿಲ್ಲ, ಈಗ ಮನಸ್ಸು ಬೇರೊಂದು ಲಹರಿಯನ್ನು ಶುರುಮಾಡಿತ್ತು. ಇದು ಭಾವ ಚಿತ್ರವಾ? ಯಾರೋ ಬಿಡಿಸಿದ ಚಿತ್ರದಂತಿದೆಯಲ್ಲ? ಎಲ್ಲ ಮುಖಲಕ್ಷಣಗಳೂ ಹೇಳಿ ಮಾಡಿಸಿದಹಾಗಿದೆ, ಕಪ್ಪಿನ ದಟ್ಟವಾದ ಕೂದಲು, ನೀಳ ನಾಸಿಕ, ಗೋದಿ ಮೈಬಣ್ಣ, ನೋಡಲು ಸುಂದರಾಂಗ. ದೊಡ್ಡ ಕೆಲಸ, ಶ್ರೀಮಂತ ಮನೆ, ವಿದ್ಯಾವಂತ, ಎಲ್ಲವೂ ಸರಿಯಾಗೇ ಇದೆ. ಆದರೆ, ನನ್ನನ್ನ್ಯಾಕೆ ಹುಡುಕ್ಕೊಂಡು ಬಂದಿದ್ದಾರೆ? ಅಮ್ಮ ನನ್ನ ಹುಟ್ಟು ವಿಷಯ ಹೇಳದಿದ್ದರೂ ನನ್ನನ್ನು ಅರಸಿಕೊಂಡು ಬರುವ ಅವಶ್ಯಕತೆ ಇವರಿಗಿರಲಿಲ್ಲ. ನಮ್ಮ ಬಡತನ ಇವರ ಅಂತಸ್ತಿಗೆ ಸರಿಸಾಟಿಯಲ್ಲ. ಏನೋ (ನನ್ನ ತರಹ) ನಮಗೆ ಗೊತ್ತಿರದ ವಿಷಯ ಹಿನ್ನೆಲೆಯಲ್ಲಿರಬೇಕು."

* * * * * *

ಪ್ರತಿಮಾ: "ಏನೋ, ಹುಡುಗಿಯನ್ನ ನೋಡಿದ್ಯಲ್ಲ, ಹೇಗಿದ್ದಾಳೆ? ನಿನಗೆ ಒಪ್ಪಿಗೆ ಆಗಿದ್ಯೇನೋ?, ಅದಿರಲಿ, ಏಲ್ಲ ವಿಷಯ ಅವಳ ಹತ್ತಿರ ಖುದ್ಧಾಗಿ ಮಾತಾಡ್ತೀನಿ ಅಂದಿದ್ಯಲ್ಲ, ಮಾತಾಡ್ದ್ಯಾ?"

ಪರಾಗ್: "ಅಕ್ಕಾ, ಎಲ್ಲಾ ಪ್ರಶ್ನೆಗಳನ್ನು ಒಟ್ಟಿಗೆ ಹಾಕಿ ಸುರಿಮಳೆ ಮಾಡ್ತಿದೀಯಲ್ಲಾ? ನಾನು ಮಾತ್ರ ಒಂದೊಂದಾಗಿ ಉತ್ತರ ಕೊಡುತ್ತೀನಿ. ಹುಡುಗಿ ಲಕ್ಷಣವಾಗಿದ್ದಾಳೆ, ಎಲ್ಲದರಲ್ಲೂ ಸರಿಯಾಗಿದೆ. ನನಗೆ ಅವಳನ್ನು ನೋಡಿದಾಗ ಮಾತೇ ಹೊರಡಲಿಲ್ಲ. ನನ್ನ ಊನತೆ ಬಗ್ಗೆ ಹೇಳಲು ಸಂದರ್ಭ ಸರಿಯಾಗಿ ಸಿಗಲಿಲ್ಲ. ನನಗೆ ಹೀಗೆ ಮಾಡುವುದು ಸರಿಯಾಗುತ್ತೆ ಅಂತ ಅನ್ನಿಸುತ್ತಿದೆ, ನೀನು ಹುಡುಗಿಯ ಒಪ್ಪಿಗೆ ಖಚಿತ ಮಾಡಿಕೋ, ನಂತರ ನಾನು ಅವಳಲ್ಲಿ ಮಾತಾಡುತ್ತೇನೆ. ಒಪ್ಪಿಗೆ ಇಲ್ಲದಿದ್ದರೆ, ನಾನು ಮಾತಾಡುವ ಅವಶ್ಯಕತೆಯೇ ಬರುವುದಿಲ್ಲ".

ಪ್ರತಿಮಾ: ನನಗೂ ಅದೇ ಸೂಕ್ತ ಅಂತ ಅನ್ನಿಸ್ತಾ ಇದೆ.

* * * * *

ಪರಾಗ್: "ನಮ್ರತಾ, ನಿಮ್ಮ ತಾಯಿ ಮತ್ತು ನಮ್ಮಕ್ಕ ಪ್ರತಿಮಾ ನಿಮ್ಮ ಬಗ್ಗೆ ಎಲ್ಲಾ ವಿಷಯಗಳನ್ನು ನನಗೆ ತಿಳಿಸಿದ್ದಾರೆ. ಈಗ ನಾನು ನಿಮಗೊಂದು ವಿಷಯ ಹೇಳಬೇಕು."

ನಮ್ರತಾ: "ಹೇಳಿ, ಧೈರ್ಯವಾಗಿ ಹೇಳಿ. ನಾನು ಇದಕ್ಕೆಲ್ಲಾ ಸಿದ್ಧಳಾಗೇ ಬಂದಿದ್ದೀನಿ."

ಪರಾಗ್: "ನಾನು ಹೇಳುವ ವಿಷಯದ ಬಗ್ಗೆ ನಿಮಗೆ ಮೊದಲೇ ಹೇಗೆ ಗೊತ್ತಿತ್ತು? ಸಿದ್ಧಳಾಗಿ ಬರುವುದಕ್ಕೆ?"

ನಮ್ರತಾ: "ನನ್ನ ಎಲ್ಲಾ ವಿಷಯ ಕೇಳಿದ ಮೇಲೆ, ನೀವು ಹೇಳುವುದೇನೆಂದು ಊಹಿಸಲು ಕಷ್ಟವೆನಿಸಲಿಲ್ಲ."

ಪರಾಗ್: "ಈ ವಿಷಯ ನನಗಿರುವ ಒಂದು ಊನತೆ ಕುರಿತು."

ನಮ್ರತಾ: "ನಿಮಗೂ ಒಂದು ಊನತೆ ಇದೆಯಾ!? ನನಗೆ ಎಷ್ಟು ನೋಡಿದರೂ ಎನೂ ಗೋಚರಿಸುತ್ತಿಲ್ಲವಲ್ಲ?"

ಪರಾಗ್: "ಅದು ಹಾಗೇ!, ಹಾಗೇ ಸುಮ್ಮನೆ ನೋಡಲು ಕಾಣಿಸುವುದಿಲ್ಲ."

ನಮ್ರತಾ: "ಹಾಗಾದರೆ, ದೇವರು ಎಲ್ಲರಿಗೂ ಏನಾದರೊಂದು ತೊಂದರೆ ಕೊಟ್ಟಿರುತ್ತಾನಾ (ಇಟ್ಟೇ ಇರುತ್ತಾನಾ)?"

ಪರಾಗ್: "ಅದು ತೊಂದರೆ ಅಂತ ನೀವು ಪರಿಗಣಿಸದಿದ್ದರೆ, ನಾವಿಬ್ಬರು ಹೊಸ ಬಾಳಿನ ಸಂಗಾತಿಗಳಾಗಬಹುದು."

ನಮ್ರತಾ: "ಅರ್ಥಾತ್, ನನ್ನ ಯಾವ ವಿಷಯದಲ್ಲೂ ನಿಮಗೆ ಅಸಮಧಾನವಿಲ್ಲವೆಂದಾಯಿತು?"

ಪರಾಗ್: "ನನ್ನದೇ ನನಗಿರುವಾಗ, ಅನ್ಯರಲ್ಲಿ ತೊಂದರೆ ಹುಡುಕುವುದು ಶುದ್ಧ ತಪ್ಪು. ಹಾಗೂ ಅದನ್ನು ಮಾಡಲು ನಾನು ಅನರ್ಹನು ಎಂದು ನಂಬಿದ್ದೇನೆ."

ನಮ್ರತಾ: (ಭಾವೋದ್ವೇಗದಿಂದ) "ಪರಾಗ್, ನಿಮ್ಮಲ್ಲಿ ಏನೇ ಊನತೆ ಇದ್ದರೂ, ದಯವಿಟ್ಟು ಅದನ್ನು ನನಗೆ ಹೇಳಬೇಡಿ. ಅದರ ಅವಶ್ಯಕತೆ ಈಗ ನನಗಿಲ್ಲ, ಅದೇನೇ ಇದ್ದರೂ ನನ್ನ, ನಿಮ್ಮ ಪ್ರೇಮಪರಾಗದಲ್ಲಿ ಮಧ್ಯ ಬರಲು ಸಾಧ್ಯವೇ ಇಲ್ಲ. ನಾನು ಇಷ್ಟು ದಿನ ಕಂಡ ಕನಸುಗಳು ನನಸಾಗುವ ದಿನವಿದು, ನನ್ನ ಹೃದಯದಿ ಅನುರಾಗ ಅರಳಲು ಇರುವ ಒಂದೇ ಒಂದು ಅವಕಾಶವಿದು. ಎಲ್ಲೋ ಯಾರಿಗೋ ಹುಟ್ಟಿ, ಯಾರದೋ ಮಡಿಲಿಗೆ ಬಿದ್ದು, ಬೆಳೆದು ಹಸಿರಾಗಿ, ನಲಿದು ನವಿರಾಗಿ, ಹೂಬಿಡುವ ಮುನ್ನ ಚಿಗುರನ್ನು ಚಿವುಟಿದ ಹಾಗೆ ಆಗಿದ್ದ ನನ್ನ ಹೃದಯಕ್ಕೆ ನೀವು ನೀಡುತ್ತಿರುವ "ಈ ಪ್ರೇಮ ಪರಾಗ" ಒಂದು ಬಾಳಿನ ಉಸಿರಿನಂತೆ. ನಿಮ್ಮ ಊನತೆ ಏನೇ ಇದ್ದರೂ ನನ್ನ "ಅರಳಿದ ಅನುರಾಗ" ದಿಂದ ನಾನೇ ಹುಡುಕಿ ಆಲಂಗಿಸುತ್ತೇನೆ. ಈ ಅನುರಾಗ ಅರಳಲು ನಿಮ್ಮ ಹೃದಯದಲ್ಲಿ ನನಗೆ ಜಾಗ ಕೊಡಿ" ಎಂದು ನಮ್ರತಾ ಅಗಲಿದ ಬಾಹುಗಳಿಂದ ಅಂಗಲಾಚಿದಳು.

ಪರಾಗ್, ನಮ್ರತಳ ಕಣ್ಣೀರೊರೆಸುತ್ತಾ ಅವಳೆದೆಯಲ್ಲಿ ಕರಗಿಹೋದ! ಅವಳ ಹೃದಯ ವೀಣೆ,..........

ನುಡಿಯಿತೊಂದು ಹೊಸ ರಾಗ!
ಅದುವೇ...ಅನುರಾ.............ಗ!