ಧಾರವಾಡದಲ್ಲಿ ಮತ್ತೆ ಮೂಡಿದ ಪುನಗು ‘ನಗು’..!

ಧಾರವಾಡದಲ್ಲಿ ಮತ್ತೆ ಮೂಡಿದ ಪುನಗು ‘ನಗು’..!

ಬರಹ

ಧಾರವಾಡದ ‘ಐಕಾನಿಕ್’ ಕಟ್ಟಡಗಳಲ್ಲಿ ಒಂದು ಕರ್ನಾಟಕ ಕಾಲೇಜಿನ ಬಿಲ್ಡಿಂಗ್. ಈ ಕಾಲೇಜು ರಸ್ತೆಯಲ್ಲಿ ಶಿಕ್ಷಕರ ತರಬೇತಿ ಮಹಾವಿದ್ಯಾಲಯ ‘ಡಯಟ್’ ಕೂಡ ಇದೆ. ಅದು ಸಹ ಬ್ರಿಟೀಷ್ ವಾಸ್ತುಶಿಲ್ಪ ಮೆರುಗಿಗೆ ಹಿಡಿದ ಕನ್ನಡಿ.

ಆದರೆ ಕರ್ನಾಟಕ ಕಾಲೇಜಿಗೆ ಇರುವಂತೆ ಅದಕ್ಕೆ ಸುಂದರ ಬಯಲು ಇಲ್ಲ. ಹಾಗಾಗಿ ಆರೋಗ್ಯದ ಪ್ರತಿ ಕಾಳಜಿ ಇರುವವರೆಲ್ಲ ಪ್ರತಿ ದಿನ ಬೆಳಿಗ್ಗೆ ಈ ಕಾಲೇಜಿನ ಮೈದಾನಕ್ಕೆ ಬಂದು ತಮ್ಮ ವಯಸ್ಸು ಹಾಗು ಶಕ್ತ್ಯಾನುಸಾರ ಸುತ್ತು ಹೊಡೆದು, ವ್ಯಾಯಾಮ ಮಾಡುತ್ತಾರೆ. ಇವರಿಗೆ ಅಡ್ಡಬರುವವರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಯುವ ಕ್ರೀಡಾ ‘ಐಕಾನ್’ ಗಳು.

ನಿತ್ಯ ಹೀಗೆ ತಮ್ಮ ದೇಹದಂಡಿಸಲು ಈ ಯುವ ಕ್ರೀಡಾಪಟುಗಳು ಮೈದಾನದಲ್ಲಿ ಸಜ್ಜಾಗುತ್ತಿದ್ದರು. ಅಂದು ಶುಕ್ರವಾರ ಬೆಳಗಿನ ಜಾವ ಎಂದಿನಂತೆ ಇರಲಿಲ್ಲ. ಈಚಲ ಮರದಲ್ಲಿ ವಿಶೇಷ ಪ್ರಾಣಿಯೊಂದು ಕುಳಿತುಕೊಂಡು ಕೀರಲು ಧ್ವನಿಯಿಂದ ಕೂಗುತ್ತ ಎಲ್ಲರ ‘ಮಾರ್ನಿಂಗ್ ವಾಕ್..ಜಾಗಿಂಗ್’ ಬಂದ್ ಮಾಡಿಸಿ ತಲೆ ಎತ್ತಿ ಕೇವಲ ಸೂರ್ಯ ನಮಸ್ಕಾರ ಮಾಡುವಂತೆ ಮಾಡಿತ್ತು!

ಕಾರಣ ಯಾರಿಗೂ ಗೊತ್ತಿಲ್ಲ..ಯಾವ ಪ್ರಾಣಿ ಅದು ಎಂದು! ಕುತೂಹಲ.. ವಯಸ್ಸು, ಲಿಂಗ ಬೇಧ ಎಲ್ಲ ಮರೆಸಿ ಎಲ್ಲರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಇಷ್ಟಾದ ಮೇಲೆ ನಮ್ಮ ಛಾಯಾಪತ್ರಕರ್ತ ಕೇದಾರನಾಥ್ ಅವರಿಗೆ ಸುದ್ದಿ ತಲುಪದಿರಲು ಹೇಗೆ ಸಾಧ್ಯ? ಜಿಮ್ನ್ಯಾಸ್ಟಿಕ್ಸ್ ಕೋಚ್ ಪ್ರಶಾಂತ ಮುರ್ತುಗುಡ್ಡೆ ಫೋನಾಯಿಸಿದ್ದೇ ತಡ ಸುದ್ದಿ ಯೋಧರು ಸಮರೋಪಾದಿಯಲ್ಲಿ ಕೇದಾರ ಅಣ್ಣನ ನೇತೃತ್ವದಲ್ಲಿ ಲಗ್ಗೆ ಹಾಕಿದರು.

ಮಲೆನಾಡು, ಅರೆ ಮಲೆನಾಡು ಹಾಗು ಬಯಲು ಸೀಮೆಯ ಮಧ್ಯೆ ಚಾಚಿಕೊಂಡಿರುವ ೭ ಗುಡ್ಡಗಳು ಹಾಗು ೭ ಕೆರೆಗಳ, ಶಾಲ್ಮಲಾ ತಟದ ನಾಡು ‘ಛೋಟಾ ಮಹಾಬಳೇಶ್ವರ’ ಧಾರವಾಡ. ಇಲ್ಲಿ ಆಗೊಮ್ಮೆ-ಈಗೊಮ್ಮೆ ಅಪರೂಪಕ್ಕೊಮ್ಮೆ ಭೇಟಿ ಕೊಡುತ್ತಿದ್ದ ಕಾಡು ಪ್ರಾಣಿಗಳು ಇತ್ತೀಚೆಗೆ ತಮ್ಮ ನಿರಂತರ ಕಾಯಕ ಮಾಡಿಕೊಂಡಂತಿದೆ. ನಿತ್ಯ ಭೇಟಿಯನ್ನು ಖಾಯಂಗೊಳಿಸುವ ನಿರ್ಧಾರ ಕೈಗೊಂಡಂತಿದೆ!

ಕರ್ನಾಟಕ ಕಾಲೇಜಿಗೆ ಭೇಟಿ ನೀಡಿದ್ದು ಸಂಪೂರ್ಣ ಬೆಳೆದು ನಿಂತ ಯುವ ಪುನುಗು ಬೆಕ್ಕು `CIVET CAT'.

ಆದರೆ ಧಾರವಾಡದ ಕೋಟೆ ಆವರಣದಲ್ಲಿರುವ ಧಾರವಾಡ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಸುವಾಸನೆ ಬೀರುವ ಪುನುಗು ಬೆಕ್ಕು ಭೇಟಿ ನೀಡಿ, ಜನರ ಕೈಗೆ ಸಿಗದೇ..ಸುದ್ದಿ ವೀರರ ಕೈಗೆ, ಕ್ಯಾಮರಾ ಯೋಧರ ಕ್ಯಾಮೆರಾಗಳಿಗೆ ಸಿಕ್ಕು.. ಅವರ ಸಮಯೋಚಿತ ಕ್ರಮಗಳಿಂದಾಗಿ ಬದುಕಿ ಉಳಿದು, ಅರಣ್ಯ ಇಲಾಖೆಯವರ ಸೂಕ್ತ ನಿರ್ಧಾರದಿಂದಾಗಿ ಮೊದಲು ಗೋಣಿ ಚೀಲ ಸೇರಿತು! ನಂತರ ಸಮೀಪದ ದಾಂಡೇಲಿ ಅರಣ್ಯಕ್ಕೆ ತೆರಳಿ ಬಿಡುಗಡೆಗೊಂಡ ಸಂತಸದ ಸಂಗತಿ ಸಂಪದಿಗರಿಗೆ ತಿಳಿದಿದೆ. ಆದರೆ ಈ ಬಾರಿ ಅದು ಯಾರ ಕೈಗೂ ಸಿಗಲಿಲ್ಲ. ಅರಣ್ಯ ಇಲಾಖೆಯವರೇನೋ ಬಂದರು ಆದರೆ ಹಿರಿಯರಾದ ಮನ್ಸೂರ್ ಅವರು ಎಲ್ಲರ ಮನವೊಲಿಸಿ ಅಲ್ಲಿಂದ ಕಳುಹಿಸಿದ್ದರಿಂದ ಅದರ ಸ್ವಾತಂತ್ರ್ಯಕ್ಕೆ ಧಕ್ಕೆ ಬರಲಿಲ್ಲ. ಗಿಡದ ಗರಿಗಳ ಮಧ್ಯಕ್ಕೆ ಜಾರಿ ಅವಿತು ಕುಳಿತಿತು.

‘ಕಾಡು ಬೆಕ್ಕು’ ಅದು. ಅಲ್ಲಲ್ಲ.. ಅದು ‘ಗುರ್ಜಿ ಬೆಕ್ಕು’. ಹೀಗೆಯೇ ಸಾಗಿತ್ತು ಎಲ್ಲರ ವಿಚಾರ ವಿನಿಮಯ. ಆದರೆ ವಾಸ್ತವದಲ್ಲಿ ಏನಿದು?

ಪುನುಗು ಇಲಿ: ಬೆಕ್ಕಲ್ಲ! -ವಾಸ್ತವದಲ್ಲಿ ಪುನುಗು ಬೆಕ್ಕು ಎಂದು ಕರೆಯಲ್ಪಡುವ ಈ ವಿಶಿಷ್ಟ ಪ್ರಾಣಿ ಬೆಕ್ಕಿನ ಕುಟುಂಬಕ್ಕೆ ಸೇರಿದ್ದಲ್ಲ. ಇಲಿಯ ಜಾತಿಗೆ ಸೇರಿದ ಪುನುಗು ಇಲಿ. ರಾತ್ರಿಯ ವೇಳೆ ಮಾತ್ರ ಆಹಾರ ಹೆಕ್ಕಲು ಹೊರಡುವ ಈ ಪುನುಗು ಬೆಳಗಿನ ವೇಳೆಯಲ್ಲಿ ತನ್ನ ಚಟುವಟಿಕೆಗಳನ್ನು ನಿಷೇಧಿಸಿರುತ್ತದೆ. ಆದರೆ ಕಣ್ಣು ಎರಡೂ ಹೊತ್ತಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇಲಿಗಳ ತರಹ ಬಿಲ ಅಥವಾ ಪೊದೆ, ಕುರುಚಲ ಗಿಡಗಳ ಮಂದೆಯಲ್ಲಿ ವಾಸ. ಮಳೆ ಕಾಡುಗಳಲ್ಲಿ ಕುರುಚಲು ಗಿಡಗಳ ಪೊದೆಗಳಲ್ಲಿ ಮತ್ತು ಕಲ್ಲು ಬಂಡೆಗಳ ಕೆಳಗಿನ ಪೊಟರೆಗಳನ್ನು ತನ್ನ ಮನೆಯಾಗಿಸಿಕೊಂಡು ಇದು ಬದುಕುತ್ತದೆ. ಹಿಂದಿ ಭಾಷೆಯಲ್ಲಿ ಈ ಬೆಕ್ಕನ್ನು ‘ಸ್ಮಶಾನ ಚೇಳು’ ಎಂದು ಸಹ ಕರೆಯಲಾಗುತ್ತದೆ.

ಜನ ವಸತಿಯಿಂದ ಹಾಗು ಇತರೆ ಪ್ರಾಣಿಗಳ ಆವಾಸದಿಂದ ತೀರ ದೂರ ಇರಲು ಬಯಸುವ ಈ ಪ್ರಾಣಿ ಅತ್ಯಂತ ಸಂಕೋಚದ ಹಾಗು ನಾಚಿಕೆ ಸ್ವಭಾವದ್ದು. ಹಣ್ಣುಗಳೆಂದರೆ ಪುನುಗಿಗೆ ತೀರ ಇಷ್ಟ. ಅದರಲ್ಲೂ ಕಾಫಿ ತೋಟದ ಕೆಂಪು ಕಾಫಿ ಹಣ್ಣುಗಳೆಂದರೆ ತೀರ ಅಚ್ಚುಮೆಚ್ಚು. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಪುನಗು ಬೆಕ್ಕುಗಳು ಇಲಿ, ಹಲ್ಲಿ, ಚಿಕ್ಕ ಪಕ್ಷಿಗಳು, ಹಕ್ಕಿ ಗೂಡಿನ ತತ್ತಿಗಳು ಮತ್ತು ಕೀಟಗಳನ್ನು ಸಹ ತಿನ್ನುತ್ತವೆ. ಭೂಮಿ ಹಾಗು ಗಿಡ ಎರಡರ ಮೇಲೂ ವಾಸ ಮಾಡಬಲ್ಲ ಈ ಬೆಕ್ಕು ಶಾಖಾ ಹಾಗು ಮಾಂಸಾಹಾರಿ.

ಪುನಗು ಬೆಕ್ಕಿನ ಬೆವರಿನಲ್ಲಿ ಸುವಾಸನೆ ಇದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆಯುಕ್ತ ಬೆವರು ಜೇನುತುಪ್ಪದಂತೆ ಗೋಚರಿಸುತ್ತದೆ. ಇದನ್ನು ಸುವಾಸನೆ (ಸೇಂಟ್) ದ್ರವ್ಯಗಳಲ್ಲಿ ಸುವಾಸನೆಯನ್ನು ಸ್ಥಿರಗೊಳಿಸುವ ಮಾಧ್ಯಮವಾಗಿ ಬಳಸಲಾಗುತ್ತದೆ. ಕಾಮ ಪ್ರಚೋದಕ ಔಷಧಿಯಾಗಿ ಸಹ ಉಪಯೋಗಿಸಲಾಗುತ್ತದೆ. ಹಾಗಾಗಿ ಅದನ್ನು ತೀವ್ರ ಹಿಂಸೆಗೂ ಒಳಪಡಿಸಿ ಬೆವರಿನ ಸ್ರಾವ ಹೆಚ್ಚುವಂತೆ ಬಾಹ್ಯ ಒತ್ತಡ ಸಹ ಹೇರಲಾಗುತ್ತದೆ. ಸದ್ಯ ವಿನಾಶದ ಅಂಚಿಗೆ ಪುನುಗು ಬೆಕ್ಕು/ಇಲಿ ಹೋಗಲು ಬಲವಾದ ಕಾರಣ ಇದು.

‘ವಿವಿರಿಡೇ’ ಕುಟುಂಬಕ್ಕೆ ಸೇರಿದ ಪುನುಗಿಗೆ ಆಂಗ್ಲ ಭಾಷೆಯಲ್ಲಿ ‘ಸಿವೆಟ್ ಕ್ಯಾಟ್’ (Civet Cat) ಎಂದು ಕರೆಯಲಾಗುತ್ತದೆ. ಪ್ರಾಯಕ್ಕೆ ಬಂದ ಪುನುಗು ಬೆಕ್ಕು ೧ ರಿಂದ ೩ ಅಡಿ ಉದ್ದವಿರುತ್ತದೆ. ೮ ರಿಂದ ೯ ಪೌಂಡ್ ತೂಗಬಲ್ಲುದು ಎನ್ನುತ್ತಾರೆ ವನ್ಯ ಪ್ರಾಣಿ ತಜ್ಞರು. ಕಪ್ಪು ಬಣ್ಣದಿದ್ದು ಪ್ರಾಯಕ್ಕೆ ಬರುತ್ತ ಕಂದು ಮಿಶ್ರಿತ ಕಪ್ಪು ಬಣ್ಣಕ್ಕೆ ಅದರ ದೇಹ ಹಾಗು ತುಪ್ಪಳ ಬಣ್ಣ ತಿರುಗುತ್ತದೆ. ಧಾರವಾಡ ಮಲೆನಾಡಿಗೆ ಅಂಟಿಕೊಂಡಿರುವುದರಿಂದ ಜೊತೆಗೆ ತನ್ನ ಬಾಹುಗಳನ್ನು ನಾಡಿನಿಂದ ಕಾಡಿಗೂ ಚಾಚುತ್ತಿರುವುದರಿಂದ ತನ್ನ ಅಳಲು ತೋಡಲು ಪುನುಗು ಸಿವಿಲ್ ಆಸ್ಪತ್ರೆಯ ನಂತರ ಪ್ರಾಜ್ಞರೇ ತುಂಬಿರುವ ಕರ್ನಾಟಕ ಕಾಲೇಜಿಗೆ ತನ್ನ ಮೊರೆ ಇಡಲು ಭೇಟಿ ಕೊಟ್ಟಿತ್ತು.

ಆದರೆ ಈ ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡಗಳಿಲ್ಲ. ಆದರೆ ನೂರಾರು ವರ್ಷಗಳಷ್ಟು ಹಳೆಯದಾದ ಮರಗಳಿವೆ. ಆದರೂ ಪುನಗು ಇಲ್ಲಿಗೆ ಭೇಟಿ ನೀಡಿತ್ತು ಎಂಬುದು ಸೋಜಿಗ. ಇಲ್ಲಿನ ವಸತಿ ಗೃಹಗಳಲ್ಲಿ ವಾಸ ಮಾಡುವ ಮಕ್ಕಳ ಪ್ರಕಾರ ಹಲವಾರು ಬಾರಿ ಈ ಪುನಗು ಬೆಕ್ಕುಗಳು ರಾತ್ರಿಯ ವೇಳೆ ರಸ್ತೆಗಿಳಿದು ಆಹಾರ ಹೆಕ್ಕುತ್ತ ಕುಳಿತಿರುತ್ತವೆ. ನಮ್ಮ ಕೇದಾರ ಅಣ್ಣ ಇನ್ನು ರಾತ್ರಿ ಗಸ್ತು ತಿರುಗಿ ಈ ಮಾತಿನ ಸತ್ಯಾಸತ್ಯತೆ ಫೋಟೊ ಸಮೇತ ಸಾಕ್ಷೀಕರಿಸಿ ಸಧ್ಯದಲ್ಲಿಯೇ ನನಗೆ ಹೇಳಲಿದ್ದಾರೆ. ನಾನು ಸಂಪದಿಗರಿಗೆ!