ಡಬ್ಲ್ ಸೆಂಚುರಿ ಹೊಡೆದ ಅಶೋಕ್ ಸಂದರ್ಶನ

ಡಬ್ಲ್ ಸೆಂಚುರಿ ಹೊಡೆದ ಅಶೋಕ್ ಸಂದರ್ಶನ

ಅಶೋಕ್ ಡಬಲ್ ಸೆಂಚುರಿ ಹೊಡೆದು ತ್ರಿಬ್‌ಲ್ಸೆಂಚುರಿಗೆ ಮುನ್ನುಗ್ಗುತ್ತಿದ್ದಾರೆ..
ನಾನೇ ಮೊದಲು ಅವರ ಸಂದರ್ಶನ ತೆಗೆದುಕೊಂಡರೆ ಹೇಗೇ.. ಅನಿಸಿತು.

ಫೋನ್ ಮಾಡಿ ಕೇಳಿದೆ. ಮೊದಲ ಪತ್ರಿಕೆ ಬಂದು ಬೀಳುವ ಮೊದಲೇ ಬಂದರೆ ಮಾತ್ರ ಸಂದರ್ಶನ ಕೊಡುವೆ ಅಂದರು.
ಕೂಡಲೇ ಅವರಿಗೆ ಪತ್ರಿಕೆ ಹಾಕುವ ಏಜೆಂಟ್ ಬಳಿ ಹೋಗಿ, ಮಾರನೇ ದಿನದ ಪತ್ರಿಕೆ ಲೇಟ್ ಆಗಿ ಹಾಕುವಂತೆ ವ್ಯವಸ್ಥೆ ಮಾಡಿ ಬಂದೆ. :)

ಬೆಳಗ್ಗಿನ ಜಾವ ೪ ಗಂಟೆಗೆ ಹೋದರೆ- ಮನೆ ಬಾಗಿಲು ತೆರೆದೇ ಇತ್ತು!
ಒಳಗೆ ನೋಡಿದರೆ ೫-೬ ಟಿ.ವಿ.ಗಳಲ್ಲಿ ಬೇರೆ ಬೇರೆ ನ್ಯೂಸ್ ಚಾನಲ್‌ಗಳು, ೩-೪ ಕಂಪ್ಯೂಟರ್ ಲ್ಯಾಪ್‌ಟಾಪ್‌ಗಳು ರನ್ ಆಗುತ್ತಿದ್ದವು! ಆದರೆ ಅಶೋಕ್ ನಾಪತ್ತೆ...

‘ಅಶೋಕ್ ಸರ್’ ಎಂದು ಕರೆದಾಗ ಪತ್ರಿಕೆಗಳ ರಾಶಿಯೇ ಎದುರುಬಿತ್ತು. ಅದರ ಎಡೆಯಿಂದ ಹೊರಗೆ ಬಂದು ‘ಹೋ.. ಗಣೇಶರಾ, ನಿನಾನ್ ಕಾರ್ಟೂನ್ ನೋಡುತ್ತೀರಾ’ ಎಂದರು. ನನಗೆ ಈ ೫-೬ ಟಿ.ವಿ.ಗಳ ಗದ್ದಲದಲ್ಲಿ ‘ಬನ್ನಿ, ಟೀ ಕುಡೀತೀರಾ’ ಅಂದ ಹಾಗೆ ಕೇಳಿಸಿತು. ‘ಹೂಂ’ ಅಂದೆ. ಒಂದು ಬಂಡಲ್ ನಿನಾನ್ ಕಾರ್ಟೂನ್‌ಗಳಿದ್ದ ಪೇಪರ್ ತಂದು ಎದುರಿಗಿಟ್ಟರು!
ನಿನಾನ್ ಕಾರ್ಟೂನ್‌ಗಳೇ ಇವರಿಗೆ ಟೀ! ಇನ್ನು ನಾಷ್ಟಾ..ಊಟಾ..!?

‘ಟೀ ಕುಡಿದ’ ಶಾಸ್ತ್ರ ಮಾಡಿ ‘ಸರ್, ಅಶೋಕ್ ಸರ್’ ಎಂದೆ. ಅವರಿಗೆ ‘ನೀರ್, ಅಶೋಕ್ ನೀರ್’ ಎಂದು ಕೇಳಿಸಿತು ಕಾಣುತ್ತದೆ. "ಫ್ಲಾಸ್ಕ್‌ಲ್ಲಿದೆ. 'ನಿಶ್ಚಿಂತೆ'ಯಿಂದ ಕುಡಿಯಿರಿ. ಹೋದವರ್ಷದ ಮಳೆನೀರು ಸಂಗ್ರಹಿಸಿದ್ದು." ಅಂದರು.
ಉಗುಳು ನುಂಗಿಕೊಂಡೆ. ಹೀಗಾದರೆ ಸಂದರ್ಶನ ಗೋವಿಂದ ಅಂದುಕೊಂಡು ಮೆಲ್ಲನೆ ಅಲ್ಲಿದ್ದ ರಿಮೋಟುಗಳಿಂದ ಟಿ.ವಿ.ಗಳನ್ನು ಮ್ಯೂಟ್ ಮಾಡಿ, ಬಾಗಿಲ ಕಡೆ ಅವರ ಗಮನ ಸೆಳೆದು-

‘ಮನೆ ಬಾಗಿಲು ಈ ಹೊತ್ತಿನಲ್ಲೂ ತೆರೆದೇ ಇಟ್ಟಿರುವಿರಲ್ಲಾ..,’ ಎಂದೆ.
‘ಟೈಮ್ ಸೇವ್ ಮಾಡಲು, ಬೆಳಗ್ಗಿನ ಪೇಪರ್ ಸೀದಾ ಟೇಬ್‌ಲ್ ಮೇಲೆ ಬೀಳುವುದು’ ಎಂದರು.
ಸಂದರ್ಶನ ಸುರು ಮಾಡಿದೆ- ಮೊದಲ (ಕೊನೆಯ :( ) ಪ್ರಶ್ನೆ-
> ‘ಸರ್, ನೀವು ಡಬಲ್ ಸೆಂಚುರಿ ಹೊಡೆದಾಗ ಮೇಲೆ ನೋಡಿದಿರಲ್ಲಾ? ಸೂರ್ಯನಿಗೆ ನಮಸ್ಕರಿಸಿದ್ದಾ?’ ಎಂದೆ.
-‘ಸೂರ್ಯ ಅಲ್ರೀ, ಕರೆಂಟಿಗೆ ನಮಸ್ಕರಿಸಿದ್ದು. ಇದೇ ವಿಷಯದಲ್ಲಿ ಮಹಮ್ಮದ್ ಬರೆದ ಕಾರ್ಟೂನ್ ತೋರಿಸುತ್ತೇನೆ. ನೀವೇ ನೋಡಿ’ಎಂದು ಪೇಪರ್ ರಾಶಿಯೊಳಗೆ ನುಗ್ಗಿದರು.
ಕಾದೆ..ಕಾದೆ..
ಕರೆದೆ.. ಕರೆದೆ..ಗೋಗರೆದೆ.. ‘ಸಾರ್..ಪರವಾಗಿಲ್ಲ, ಸಾರ್’..
ಪೇಪರ್ಗಳ ಎಡೆಯಲ್ಲಿ ನುಗ್ಗಿ ಹುಡುಕಿದೆ. ಎಲ್ಲಿ ಹೊರ ಬರುವ ದಾರಿ ತಪ್ಪುವುದೋ ಎಂದು ಹೆದರಿ ಪುನಃ ಮೊದಲ ಜಾಗಕ್ಕೇ ಬಂದು ಕುಳಿತೆ.

ಕೇಳಲು ಹಲವು ಪ್ರಶ್ನೆಗಳಿದ್ದುವು-
>ಪೇಪರ್‌ಗಳಲ್ಲಿ ಇಂಗ್ಲೀಷ್ ಪೇಪರ್ ಇಷ್ಟಾನಾ? ಕನ್ನಡಾನಾ?
> ಇಂಗ್ಲೀಷ್‌ನ DNA, TOI, DH ..ಪೇಪರ್‌ಗಳು ಒಟ್ಟಿಗೆ ಬಂದಾಗ ಯಾವುದನ್ನು ಮೊದಲಿಗೆ ಕೈಗೆತ್ತಿಕೊಳ್ಳುವಿರಿ?

> ಕನ್ನಡದಲ್ಲಿ ಯಾವ ಪತ್ರಿಕೆ ನಿಮ್ಮನ್ನು ಮೊದಲು ಸೆಳೆಯುವುದು?
>ನನಗೆ ಒಂದು ಪೇಪರ್ ಓದಲು ಒಂದು ದಿನ ಸಾಲುವುದಿಲ್ಲ, ಅದು ಹೇಗೆ ನೀವು ಅಷ್ಟೊಂದು ಪೇಪರ್ ಓದಿ ವಿಷಯ ಸಂಗ್ರಹಿಸುವಿರಿ?
ಹೀಗೆ ಹತ್ತಾರು ಪ್ರಶ್ನೆ ಕೇಳಬೇಕೆಂದಿದ್ದೆ.

ಅಷ್ಟುಹೊತ್ತಿಗೆ ಈ ದಿನಗಳ ಪೇಪರ್ಗಳ ದೊಡ್ಡರಾಶಿ ನನ್ನ ತಲೆ ಮೇಲೆ ಬಂದು ಬೀಳುವುದರಲ್ಲಿತ್ತು. ಎಲ್ಲಿಂದಲೋ ಡೈವ್ ಹೊಡೆದು ಪೇಪರ್‌ಗಳ ಕಟ್ಟನ್ನು ಹಿಡಿದು ಅಶೋಕ್ ನನ್ನ ತಲೆ ರಕ್ಷಿಸಿದರು.
ಮಕ್ಕಳು ಟಾಮ್ ಅಂಡ್ ಜೆರ್ರಿ ನೋಡುವಂತೆ ಪೇಪರ್ ಓದಲು ಕುಳಿತರು.
ಇನ್ನೆಲ್ಲಿಯ ಸಂದರ್ಶನ :( ?
****************************
ಅಶೋಕ್ ಸೆಂಚುರಿಗಳ ಮೇಲೆ ಸೆಂಚುರಿ ಹೊಡೆಯುತ್ತಾ ಇರಲಿ. ನಮಗೆ ಸುದ್ದಿಗಳ
ಸಂಗ್ರಹ ನೀಡುತ್ತಿರಲಿ. ಶುಭಾಶಯಗಳು.
-ಗಣೇಶ.

Rating
No votes yet

Comments