ಪತಂಜಲಿಯ ಯೋಗ : ಭಾಗ ೨

ಪತಂಜಲಿಯ ಯೋಗ : ಭಾಗ ೨

ಬರಹ
ಪತಂಜಲಿಯ ಯೋಗ (ಎರಡನೆಯ ಲೇಖನ) ಸ್ಪಷ್ಟೀಕರಣ: ಪತಂಜಲಿಯ ಸೂತ್ರದಂತೆ 'ಯೋಗವೆಂದರೆ ಚಿತ್ತ ವೃತ್ತಿ ನಿರೋಧ.' ಯೋಗ ಸೂತ್ರ.ಪಾದ೧. ಸೂತ್ರ.೨ ಆಗಬೇಕಿತ್ತು. ಅಥ: ಯೋಗಾನುಶಾಸನಮ್ ಎನ್ನುವುದು ಯೋಗ ಸೂತ್ರ.ಪಾದ೧. ಸೂತ್ರ.೧. ಎಂದರೆ ಈಗ ಯೋಗ ಶಾಸ್ತ್ರದ ಬಗ್ಗೆ ಹೇಳಲಾಗುತ್ತದೆ ಎಂಬ ವಾಕ್ಯದಿಂದ ಪತಂಜಲಿಯ ಯೋಗ ಪ್ರಾರಂಭವಾಗುತ್ತದೆ. ಚಿತ್ತ ವೃತ್ತಿ ನಿರೋಧವಾದಾಗ ಏನಾಗುತ್ತದೆ ಎಂಬುದನ್ನು ಪತಾಂಜಲಿಯ ಮೊರನೆಯ ಸೂತ್ರ ಹೇಳುತ್ತದೆ. ಆಗ ದೃಷ್ಟ ತನ್ನ ಸ್ವರೂಪದಲ್ಲಿರುತ್ತಾನೆ. ಇಲ್ಲಿ ದೃಷ್ಟ ಎಂದರೆ ನೋಡುವವನು ಎಂಬರ್ಥದಲ್ಲಿ ಪ್ರಯೋಗಿಸಲ್ಪಟ್ಟಿದೆ. ಮನಸ್ಸು ಬುದ್ದಿ ಮತ್ತು ಅಹಂಕಾರ(ಇಲ್ಲಿ ಅಹಂಕಾರವೆಂದರೆ ಸಾಮಾನ್ಯ ಮಾತಿನಲ್ಲಿ ಬರುವ ಕೊಬ್ಬು ಎಂದ‍‌ರ್ಥವಲ್ಲ; ನಾನು ಎಂಬ ತಿಳುವಳಿಕೆ ಅಷ್ಟೇ!) ಇವುಗಳಿಂದ ನಾವು ನಮ್ಮನ್ನು ಗುರುತಿಸಿಕೊಳ್ಳುತ್ತೇವೆ. ಆದರೆ ಯೋಗದ ಪ್ರಕಾರ ಇವುಗಳ ಹಿಂದೆ ಒಂದು ಶಕ್ತಿ ಇದ್ದು ಅದು ವೀಕ್ಷಕನಂತೆ ನೋಡುತ್ತಿರುವುದರಿಂದ ಇಲ್ಲಿ ದೃಷ್ಟ ಎಂಬ ಪದದ ಬಳಕೆಯಾಗಿದೆ. ಇದು ಅಗೋಚರ. ಇದನ್ನೇ ಶಕ್ತಿ ಎಂಬರ್ಥದಲ್ಲಿ ಹೇಳುವಾಗ ಚಿತಿಶಕ್ತಿ ಎಂದು ಹೇಳಲಾಗುತ್ತದೆ. ಹೀಗೆಯೆ ಸಂಧ‍ರ್ಭಾನುಸಾರ ಪುರುಷ, ಆತ್ಮ ಎಂದೂ ಗುರುತಿಸಲ್ಪಡುತ್ತದೆ. ದೃಷ್ಟ ತನ್ನ ಸ್ವರೂಪದಲ್ಲಿರುವುದು ಎಂದರೆ ಕೈವಲ್ಯ. ಇದರ ಬಗ್ಗೆ ಮುಂದೆ ಚ‍ರ್ಚಿಸಬಹುದು. ಹಾಗಾದರೆ ಸಾಮಾನ್ಯವಾಗಿ ದೃಷ್ಟ (ಚಿತ್ತ ವೃತ್ತಿ ನಿರೋಧವಾಗದಿದ್ದಾಗ) ಹೇಗಿರುತ್ತಾನೆ ಎಂದರೆ ವೃತ್ತಿಗಳ ಜೊತೆ ಬೆರೆತುಹೋದಂತೆ ಅನಿಸುತ್ತದೆ. (ಯೋಗ ಸೂತ್ರ.ಪಾದ೧. ಸೂತ್ರ.೪) ಆದರೆ ಬೆರೆತಿರುವುದಿಲ್ಲ-ಇದನ್ನೇ ಸಾರೂಪ್ಯ ಎಂದು ಕರೆಯಬಹುದು. ಮೇಲೆ ಹೇಳಿದಂತೆ ನಾನು ಎಂದರೆ ಮನಸ್ಸು ಬುದ್ಧಿ ಮತ್ತು ಅಹಂಕಾರ ಇವುಗಳಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುತ್ತೇವೆ. ಉದಾಹರಣೆಗೆ 'ನನಗೆ ಸಿಟ್ಟು ಬಂದಿದೆ' ಎಂಬುದನ್ನು ಪರಿಶೀಲಿಸೋಣ. ಇದರಲ್ಲಿ ನಾನು ಎಂದರೆ ಅಹಂಕಾರ, ಬುದ್ದಿ ಅಥವಾ ಮನಸ್ಸಿನ ಸಹಾಯದಿಂದ ಸಿಟ್ಟು ಬಂದಿರುವುದನ್ನು ಗುರುತಿಸಿ ಅದನ್ನು ವಾಕ್ಯರೂಪದಲ್ಲಿ ಹೇಳಿದೆ. ವೃತ್ತಿಗಳು ಐದು. ಇವು ಯಾವುದೆಂದರೆ ಪ್ರಮಾಣ, ವಿಪ‍‍‍ರ್ಯಾಯ, ವಿಕಲ್ಪ, ನಿದ್ರೆ ಮತ್ತು ಸ್ಮೃತಿ.ಈ ಐದೂ ವೃತ್ತಿಗಳಲ್ಲಿ ನೋವನ್ನುಂಟುಮಾಡುವ ಹಾಗೂ ನೋವನ್ನುಂಟುಮಾಡದಿರುವ ಗುಣಗಳನ್ನು ಹೊಂದಿರುವ ವೃತ್ತಿಗಳು ಎಂದು ಉಪವಿಭಾಗ ಇದೆ.(ಯೋಗ ಸೂತ್ರ.ಪಾದ೧. ಸೂತ್ರ.೫) ಪ್ರಮಾಣವೆಂದರೆ ಸರಿಯಾದ ಜ್ಞಾನ. ವಿಪ‍‍‍ರ್ಯಾಯ: ತಪ್ಪು ತಿಳುವಳಿಕೆ. ವಿಕಲ್ಪ: ನಿಜವಲ್ಲದ ಆಲೋಚನೆ,ಶಬ್ದ, ಪದ, ವಾಕ್ಯಗಳಿಂದ ಹುಟ್ಟುತ್ತದೆ. (ಕಲ್ಪನೆ-ಹಗಲುಗನಸು) ನಿದ್ರೆ: ಪ್ರತ್ಯಯಗಳಿಲ್ಲದ ಒಂದು ಸ್ಥಿತಿ. ಇಲ್ಲಿ ಪ್ರತ್ಯಯವೆಂದರೆ ವೃತ್ತಿಗಳಿಂದ ಬರುವ ಜ್ಞಾನ. ಸ್ಮೃತಿ: ಗ್ರಹಿಸಿದ ವಿಷಯಗಳನ್ನು ಕಳೆದುಹೋಗದಂತೆ ಸಂಗ್ರಹಿಸಿಡುವ ವೃತ್ತಿ. ಇದೇ ಅಹಂಕಾರದಿಂದ ಹಿಡಿದು ಮನುಷ್ಯನ ಎಲ್ಲಾ ಆಲೋಚನೆ, ಕೃತಿಗಳಿಗೂ ಮೊಲ . ಸ್ಮೃತಿಹೀನನಾದವನಿಗೆ ತನ್ನತನವೇ ಇರುವುದಿಲ್ಲ. ಮನಸ್ಸಿನ ಸಹಾಯದಿಂದ ಸ್ಮೃತಿಯನ್ನು ಪರಿಶುಧ್ಧಗೊಳಿಸುವುದೇ ಎಲ್ಲ ಆಧ್ಯಾತ್ಮಿಕಹಾದಿಯ ಗುರಿ. ಇದನ್ನು ಕರ್ಮದಿಂದ, ಜ್ಞಾನದಿಂದ, ಭಕ್ತಿಯಿಂದ, ತಂತ್ರದಿಂದ ಹೀಗೆಯೇ ಹಲವಾರು ದಾರಿಯಿಂದ ಮಾಡಬಹುದು. ಪ್ರತಿಯೊಬ್ಬರೂ ತಮ್ಮ ತಮ್ಮ ಹಾದಿಯನ್ನು ಅನ್ವೇಷಿಸಿ ತಮಗೆ ಸರಿಹೊಂದುವ ಹಾದಿಯಲ್ಲಿ ಸಾಗಬೇಕು. ಚಿತ್ತ ವೃತ್ತಿಗಳ ನಿರೋಧ ಹೇಗೆ ಸಾಧ್ಯ ? ಎಂಬ ಪ್ರಶ್ನೆಗೆ ಉತ್ತರ ಯೋಗ ಸೂತ್ರ.ಪಾದ೧. ಸೂತ್ರ.೧೨ರಲ್ಲಿ ಸಿಗುತ್ತದೆ. ಅಭ್ಯಾಸ ಮತ್ತು ವೈರಾಗ್ಯದಿಂದ ಚಿತ್ತ ವೃತ್ತಿಗಳ ನಿರೋಧ ಕ್ರಮೇಣ ಸಾಧ್ಯವಾಗುತ್ತದೆ. ೧೫/೮/೦೫ ಮುಂದುವರೆಯುವುದು...