ಇದೀಗ ಬಂದ ಸುದ್ದಿಗಳು (ಇಂದು ಏಪ್ರಿಲ್ ಒಂದು)

ಇದೀಗ ಬಂದ ಸುದ್ದಿಗಳು (ಇಂದು ಏಪ್ರಿಲ್ ಒಂದು)

ಬರಹ

  ವರುಣ್‌ಗೆ ಒಂದು ವರ್ಷ ಶಿಕ್ಷೆ
  ವರುಣ್ ಗಾಂಧಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದು ವರ್ಷದ ಶಿಕ್ಷೆ ಮುಗಿಯುತ್ತಲೇ ಇನ್ನಾವ ಕಾಯ್ದೆಯಡಿ ಆತನಿಗೆ ಇನ್ನಷ್ಟು ಜೈಲು ಶಿಕ್ಷೆ ವಿಧಿಸಬಹುದೆಂಬುದನ್ನು ತಿಳಿಯಲು ಸೋನಿಯಾ ಮತ್ತು ಮಾಯಾವತಿ ಪ್ರತ್ಯೇಕವಾಗಿ ಕಾನೂನು ತಜ್ಞರ ಉನ್ನತ ಮಟ್ಟದ ರಹಸ್ಯ ಸಭೆ ಕರೆದು ಈಗಾಗಲೇ ಸಮಾಲೋಚನೆಯಲ್ಲಿ ತೊಡಗಿದ್ದಾರೆಂದು ಬಲ್ಲ ಮೂಲೆಗಳಿಂದ ತಿಳಿದುಬಂದಿದೆ.
  ಈ ನಡುವೆ ಯಡಿಯೂರಪ್ಪನವರು ಶಿವಮೊಗ್ಗದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತ, ’ವರುಣ್ ಜೈಲು ಶಿಕ್ಷೆಯು ಸೋನಿಯಾ ತನ್ನ ಮಗನಿಗೆ ಮುಂದೆ ಎದುರಾಗಬಹುದಾದ ಆತಂಕವನ್ನು ಇಂದೇ ನಿವಾರಿಸಲು ಮತ್ತು ಮಾಯಾವತಿಯು ಅಲ್ಪಸಂಖ್ಯಾತರ ವೋಟುಗಳನ್ನು ಸಮಾಜವಾದಿ ಪಕ್ಷದ ಕೈಯಿಂದ ಕಸಿದುಕೊಳ್ಳಲು ಹೂಡಿರುವ ಷಡ್ಯಂತ್ರ’, ಎಂದು ಆರೋಪಿಸಿದ್ದಾರೆ.
  ಅದೇ ವೇಳೆ, ಈ ರೀತಿ ಆರೋಪ ಮಾಡುವ ಮೂಲಕ ಯಡಿಯೂರಪ್ಪನವರು ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆಂದು ಡಿ.ಕೆ. ಶಿವಕುಮಾರ್ ಮತ್ತು ಉಗ್ರಪ್ಪ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

  ಕೋಟಿ ರಾಮು ಚಿತ್ರ
  ’ಕಿರಣ್ ಬೇಡಿ’ ಚಿತ್ರದ ಮೂಲಕ ಪತ್ನಿ ಮಾಲಾಶ್ರೀಗೆ ಬೆಳ್ಳಿ ತೆರೆಮೇಲೆ ಮರುಹುಟ್ಟು ನೀಡಿರುವ ನಿರ್ಮಾಪಕ ಕೋಟಿ ರಾಮು ಅವರು ತಮ್ಮ ಮುಂದಿನ ಚಿತ್ರಕ್ಕಾಗಲೇ ನಾಮಕರಣ ಮಾಡಿದ್ದಾರೆ. "ಅತ್ತೆಗಿಂತ ಒಂದು ’ಕೈ’ ಮಿಗಿಲಾದ ಸೊಸೆ" ಎಂಬ ಇಷ್ಟುದ್ದದ ಹೆಸರು ಹೊತ್ತು ನಿರ್ಮಾಣವಾಗಲಿರುವ ಆ ಚಿತ್ರದ ವಿಶೇಷವೆಂದರೆ ಅದರಲ್ಲಿ ಅತ್ತೆಯ ಪಾತ್ರವೇ ಇಲ್ಲ! ಇಂದಿರಾಗಾಂಧಿಯನ್ನು ಹೋಲುವ ಭಾವಚಿತ್ರಗಳಿಂದಲೇ ಅತ್ತೆಯ ಪಾತ್ರವನ್ನು ಬಿಂಬಿಸಲಾಗುವುದು. ಸೊಸೆಯ ಪಾತ್ರದ ಮೂಲಕ ಸಂಸದೆ ತೇಜಸ್ವಿನಿ ಗೌಡ ಅವರು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.
  ’ಕಿರಣ್ ಬೇಡಿ’ ಯಶಸ್ಸಿನಿಂದ ಸ್ಫೂರ್ತಿಹೊಂದಿ ನೀವಿನ್ನು ’ಸಾಂಗ್ಲಿಯಾನಾ ಭಾಗ-೪’ ತೆಗೆಯುವಿರಾ ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ರಾಮು ಕೆರಳಿ ಕೆಂಡಾಮಂಡಲ ಆದರೆಂದು ವರದಿಯಾಗಿದೆ.
 

  ರಾಹುಲ್‌ಗೆ ಪ್ರಶಸ್ತಿ
  ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಯನ್ನು ರಾಹುಲ್ ಗಾಂಧಿಗೆ ನೀಡಲಾಗುವುದು. ಕಳೆದ ಒಂದು ವರ್ಷದಲ್ಲಿ ರಾಹುಲ್ ಗಾಂಧಿಯು ವಿಮಾನ, ಹೆಲಿಕಾಪ್ಟರ್ ಮತ್ತು ಕಾರಿನಲ್ಲಿ ದೇಶದ ಕೆಲವು ಸ್ಥಳಗಳಿಗೆ ಭೇಟಿಕೊಟ್ಟು ಒಂದಿಬ್ಬರು ಗುಡಿಸಲುವಾಸಿಗಳೊಡನೆ ಕ್ಯಾಮೆರಾಗಳಿಗೆ ಪೋಸು ಕೊಟ್ಟು ಹಾದಿಬದಿಯ ಡಾಬಾವೊಂದರಲ್ಲಿ ಚಾಯ್ ಕುಡಿದದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಕೊಡಲಾಗುವುದು. ಈ ಬಗ್ಗೆ ಪ್ರಕಟಣೆ ಹೊರಬೀಳುತ್ತಲೇ ರಾಹುಲ್‌ನನ್ನು ಮುತ್ತಿಕೊಂಡ ಪತ್ರಕರ್ತೆಯರೊಡನೆ ಮಾತನಾಡುತ್ತ ರಾಹುಲ್, ’ಈ ಪ್ರಶಸ್ತಿಗೆ ನನಗಿಂತ ನನ್ನ ಅಕ್ಕ ಹೆಚ್ಚು ಅರ್ಹಳು. ಗೀತೋಪದೇಶೋಪದೇಶದ ಮೂಲಕ ರಾಷ್ಟ್ರಾದ್ಯಂತ ಭಾವೈಕ್ಯತೆಯ ಮಿಂಚಿನ ಸಂಚಾರ ಉಂಟುಮಾಡಿದ್ದಾಳೆ ಆಕೆ’, ಎಂದಿದ್ದಾರೆ.
  ರಾಹುಲ್‌ನ ಈ ವಿನಯಪೂರ್ಣ ಮಾತಿಗಾಗಿ ಆತನಿಗೆ ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನೂ ಕೊಡತಕ್ಕದ್ದೆಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

  ತೇಜಸ್ವಿನಿಯ ಮನಸ್ವಿ ಹೇಳಿಕೆಗಳು
  ಡಿಕೆಶಿ ನನ್ನ ಗೆಲುವಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಮೂಲಕ ತಮ್ಮ ಮತ್ತು ಡಿಕೆಶಿ ನಡುವಿನ ವೈಮನಸ್ಯಕ್ಕೆ ಸಂಸದೆ ತೇಜಸ್ವಿನಿಗೌಡ ಅವರು ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ಹೇಳಿಕೆ ನೀಡಿದ ತೇಜಸ್ವಿನಿ ಮುಂದುವರಿದು, ’ನನ್ನ ಗೆಲುವಿಗಾಗಿ ಶ್ರಮಿಸುವಂತೆ ರಾಜ್ಯದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರಿಗೂ ದೇಶಪಾಂಡೆ ಆದೇಶ ನೀಡಲಿದ್ದಾರೆ, ನನ್ನ ಪರವಾಗಿ ಸೋನಿಯಾಜಿ, ರಾಹುಲ್‌ಜಿ, ಪ್ರಿಯಾಂಕಾಜಿ ಬಂದು ಪ್ರಚಾರ ಭಾಷಣ ಮಾಡಲಿದ್ದಾರೆ, ಸಂಸದೆಯಾಗಿ ನಾನು ಮಾಡಿರುವ ಸಾಧನೆಗಳ ಬಗ್ಗೆ ಬಿಬಿಸಿಯವರು ವಿಶೇಷ ಕಿರುಚಿತ್ರ ತೆಗೆದು ಟಿವಿಯಲ್ಲಿ ತೋರಿಸಲಿದ್ದಾರೆ, ಲಂಡನ್‌ನ ’ಕಜ್ಜಿ ನೋವಾ’ ವಿಶ್ವವಿದ್ಯಾಲಯವು ನನಗೆ ರೌರವ ಡಾಕ್ಟರೇಟ್ ನೀಡಲಿದೆ,....’ ಎಂದೆಲ್ಲ ಬಡಬಡಿಸಿದ್ದಾರೆ.
  ಇನ್ನೂ ಅವರ ಹೇಳಿಕೆಯು ತುಂಬಾ ಇತ್ತು, ಆದರೆ, ಅಷ್ಟರಲ್ಲಾಗಲೇ ಪತ್ರಕರ್ತರು ಎದ್ದು ಹೊರಟುಹೋಗಿದ್ದರಿಂದಾಗಿ ಅದು ಇಷ್ಟಕ್ಕೇ ನಿಂತಿತು ಎಂದು ಅವರ ಆಪ್ತ ವಲಯದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

  ನಟರಾಜನಾದ ಶಂಕರ
  ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಎಂ.ಎನ್.ವಿದ್ಯಾಶಂಕರ್ ಅವರು ಭರತನಾಟ್ಯ ಪ್ರವೀಣರು ಎಂಬ ಸ್ವಾರಸ್ಯಕರ ಸಂಗತಿ ಬಯಲಾಗಿದೆ. ಪತ್ರಿಕಾಗೋಷ್ಠಿಗಳಲ್ಲಿ ಅವರ ಹಾವಭಾವ ಕಂಡು ಅನುಮಾನಗೊಂಡ ಪತ್ರಕರ್ತನೊಬ್ಬ ವಿದ್ಯಾಶಂಕರ್ ಅವರನ್ನು ವಿಚಾರಿಸಿದಾಗ ಅವರೇ ಈ ಸಂಗತಿಯನ್ನು ಹೊರಗೆಡಹಿದ್ದಾರೆ. ಹೈಸ್ಕೂಲ್ ದಿನಗಳಿಂದಲೂ ತಾನು ಭರತನಾಟ್ಯ ಅಭ್ಯಾಸ ಮಾಡಿದುದಾಗಿಯೂ, ವಿದ್ಯಾಭ್ಯಾಸ, ಐಎಎಸ್ ತಯಾರಿ ಮತ್ತು ಉನ್ನತ ಅಧಿಕಾರಿಯಾಗಿ ಆಡಳಿತ ನಿರ್ವಹಣೆ ಈ ಒತ್ತಡಗಳ ದೆಸೆಯಿಂದಾಗಿ ತನಗೆ ನೃತ್ಯ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿಲ್ಲವೆಂದೂ, ಇಷ್ಟು ವರ್ಷ ತಾನು ಅದುಮಿಟ್ಟುಕೊಂಡ ಆ ಅಭಿಲಾಷೆಯು ಈಗ ಪತ್ರಿಕಾಗೋಷ್ಠಿಗಳಲ್ಲಿ ಆಂಗಿಕ ಅಭಿನಯ ಮತ್ತು ಹಾವಭಾವಗಳ ಮೂಲಕ ಪ್ರಕಟಗೊಳ್ಳುತ್ತಿದೆಯೆಂದೂ ವಿದ್ಯಾಶಂಕರ್ ಅವರು ಹೇಳಿದ್ದಾರೆ.
  ನೌಕರಿಯಿಂದ ನಿವೃತ್ತಿ ಹೊಂದಿದ ನಂತರ ತಾವು ಭರತನಾಟ್ಯ ಶಾಲೆಯೊಂದನ್ನು ತೆರೆಯಲಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

  ಕಿಸ್ಬಾಯಿ ರೋಗ
  ಕಿಸ್ಬಾಯಿ ರೋಗ ಎಂಬ ಕಾಯಿಲೆಯು ದೇಶಾದ್ಯಂತ ವ್ಯಾಪಕವಾಗಿ ಹಬ್ಬಿದೆಯೆಂದು ಭಾರತೀಯ ವೈದ್ಯಕೀಯ ಮಂಡಳಿಯು ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಚುನಾವಣಾ ಸಮಯದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಈ ರೋಗವು ಪುಢಾರಿಗಳಿಗೆ ಮಾತ್ರ ತಗುಲಿಕೊಳ್ಳುತ್ತದೆ. ಈ ರೋಗಪೀಡಿತರು ಸದಾಕಾಲ ಬಾಯಿ ಕಿಸಿದುಕೊಂಡೇ ಇರುತ್ತಾರೆ. ಮತದಾನ ಮುಗಿದ ತಕ್ಷಣ ಈ ಕಾಯಿಲೆಯು ತಂತಾನೇ ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತದೆ. ದೇಶದಲ್ಲಿ ಎಲ್ಲೋ ಕೆಲವರಿಗೆ ಮಾತ್ರ ಕಿಸ್ಬಾಯಿ ರೋಗವು ಸದಾಕಾಲ ಇರುತ್ತದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಸದಾನಂದ ಗೌಡರು ಅಂಥವರಲ್ಲೊಬ್ಬರು. ರೋಗಿಗಳಿಗೆ ಈ ಕಾಯಿಲೆಯಿಂದ ಏನೂ ನಷ್ಟವಿಲ್ಲ, ಬದಲಾಗಿ ಲಾಭವಾಗುವ ಸಾಧ್ಯತೆ ಇದೆ! ಆದರೆ, ಕಿಸ್ಬಾಯಿ ರೋಗಿಗಳ ಎದುರಿರುವವರು ಮಾತ್ರ ಮೋಸವೆಂಬ ಹಾನಿಗೊಳಗಾಗುವ ಸಂಭವವಿದೆ ಎಂದು ವೈದ್ಯಕೀಯ ಮಂಡಳಿಯು ಎಚ್ಚರಿಸಿದೆ.

  ಗೌಡರ ಮುದ್ದೆ
  ಹಿಂದಿ ಭಾಷೆಯ ಅಜ್ಞಾನದಿಂದಾಗಿ ದೇವೇಗೌಡರು ಮುಜುಗರಕ್ಕೊಳಗಾದ ಪ್ರಕರಣ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
  ತೃತೀಯ ರಂಗದ ಚುನವಣಾ ಪ್ರಚಾರಕ್ಕಾಗಿ ಯು.ಪಿ.ಗೆ ಹೋಗಿದ್ದ ಗೌಡರು ಅಲ್ಲಿನ ಗ್ರಾಮವೊಂದರ ಸಭೆಯಲ್ಲಿ ಭಾಗವಹಿಸಿದ್ದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷನು ತನ್ನ ಭಾಷಣದಲ್ಲಿ, ’ಹಮಾರೇ ಸಾಮ್ನೆ ಅತ್ಯಂತ್ ಪ್ರಮುಖ್ ಮುದ್ದೆ ಹೈ..’ ಎಂದಾಕ್ಷಣ ದೇವೇಗೌಡರು, ’ಹೌದಾ? ಎಲ್ಲದೆ, ತತ್ತಾ’, ಎಂದು ಕೈಚಾಚಿದರೆಂದು ವರದಿಯಾಗಿದೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಆ ಹಳ್ಳಿಗನು ಒಂದು ಕ್ಷಣ ಏನೂ ತೋಚದೇ ಸುಮ್ಮನೆ ನಿಂತುಬಿಟ್ಟ. ಕೂಡಲೇ ಮಧ್ಯಪ್ರವೇಶಿಸಿದ ವೈ.ಎಸ್.ವಿ.ದತ್ತ ಉಭಯರಿಗೂ ಅರ್ಥ ವಿವರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
  ಸಭೆಯ ನಂತರ ತಮ್ಮತಮ್ಮೊಳಗೇ ದೇವೇಗೌಡರನ್ನು ಗೇಲಿಮಾಡಿ ಮಾತಾಡಿಕೊಳ್ಳುತ್ತಿದ್ದ ಪತ್ರಕರ್ತರತ್ತ ಧಾವಿಸಿದ ದತ್ತ, ’ಹಿಂದಿ ಭಾಷಿಕರಾದ ನೀವೇನು ಬಹುಭಾಷಾಪಂಡಿತರೇ? ಗೌಡ ಅನ್ನುವ ಬದಲು ನಿಮ್ಮಲ್ಲನೇಕರು ಘೋಡಾ ಅನ್ನುತ್ತೀರಲ್ಲ!’ ಎಂದು ದಬಾಯಿಸಿ ಪತ್ರಕರ್ತರ ಬಾಯಿಮುಚ್ಚಿಸಿದ್ದಾಗಿ ವರದಿಯಾಗಿದೆ.