ನಗೆಹನಿಗವನಗಳು

ನಗೆಹನಿಗವನಗಳು

ಬರಹ

ಐಶ್ ವಿಷ್ಯ ಐಸಾ!
----------------

ಎರಡು ವರ್ಷಗಳ ಕೆಳಗೆ
ಐಶ್ ಎಂಬ
ಐಶ್ಕಾಂತದ ಸೆಳೆತಕ್ಕೆ ಸಿಕ್ಕು
ಅಭಿಷೇಕು
ಶೇಕು!

ಅಭಿಷೇಕಿನ
ಶಾಕಿಗೆ
ಕರಗಿ
ಐಸ್
ಪಾನಿ ಪಾನಿ!

ಏನ್ಮಾಡೋದು ಸ್ವಾಮೀ,
ಜವಾನಿ
ದಿವಾನಿ!

ಪರಿಣಾಮ
ಸುಖಾಂತ.
ಅಭಿ-
-ಶೇಕ್ ಸಾಹೇಬ ಆದ
ಐಶ್-ಕಾಂತ.

ಅಮಿತಾಭನಿಗೆ ಅಮಿತಾನಂದ;
ಜಯಾ ಮುಖದಲ್ಲಿ ಜಯ.
ಕೃಷ್ಣರಾಜ ರೈ ಖುಷಿಯೇ ಸೈ;
ವೃಂದಮ್ಮನೋರು?
ಕುಡಿದರು ಹಾಲುಖೀರು.

ಐಶ್-ಅಭಿ ಇಬ್ಬರೂ
ಕೋಟ್ಯಧಿಪತಿಗಳಾದ್ದರಿಂದ
ಇಬ್ಬರದ್ದೂ ಈಗ
ಐಶಾರಾಮಿ ಬದುಕು.

ಸಲ್ಮಾನ್, ವಿವೇಕ್ ಮಾತ್ರ
ಸಲ್ಲಲಿಲ್ಲ
ಯದಕೂ!

(ಯದಕೂ=ಯಾವುದಕ್ಕೂ. ದಾವಣಗೆರೆ ಭಾಷೆಯಲ್ಲಿ.)

***0***

ನಾಯಿ ಪಾಲಿಸಿ
---------------

ನಾಯಿ
ಚತುರ್ವೇದ;
ಕೊಲ್ಲಬೇಡಿ, ಪೂಜಿಸಿ.

ನಾಯಿ
ಚತುರ ಹೈದ;
ಕೊಲ್ಲಬೇಡಿ, ಪ್ರೀತಿಸಿ.

ನಾಯಿ
ನಿಷ್ಠಾವಂತ;
ಕೊಲ್ಲಬೇಡಿ, ಪಾಲಿಸಿ.

ಇದು ನಮ್ಮ
ಪಾಲಿಸಿ.

’ಕಚ್ಚುವುದಲ್ಲಾ ಅದು
ಮಕ್ಕಳನ್ನು!’

’ಕಚ್ಚಲಿ ಬಿಡಿ;
ಯಾರ ಮಕ್ಕಳನ್ನೋ ಕಚ್ಚಿದರೆ
ನಮಗೇನು?’

***0***

ಅ(ನ)ರ್ಥಶಾಸ್ತ್ರ
---------------

ಪಾತಾಳಕ್ಕೆ ಹಣದುಬ್ಬರ;
ಆದರೆ,
ನಿಂತಿಲ್ಲ ಬೆಲೆಗಳ ಅಬ್ಬರ!
ಏನು ಅರ್ಥಶಾಸ್ತ್ರವೋ,
ಅರ್ಥವಾಗದೆ ಈ
ಶಾಸ್ತ್ರಿಯ ತಲೆಯಾಯ್ತು
ಗೊಬ್ಬರ!

***0***

ವಿಕಾಸವಾದ
------------

ಚಾರ್ಲ್ಸ್‌ ಡಾರ್ವಿನ್ ವಿದ್ಯಾರ್ಥಿಯಾಗಿದ್ದಾಗ
ಪುಸ್ತಕಗಳಿಗಿಂತ ಐಷಾರಾಮಿ ವಸ್ತುಗಳಿಗೇ
ಹೆಚ್ಚು ಹಣ ವ್ಯಯಿಸುತ್ತಿದ್ದ!

ಇದಪ್ಪಾ ನಿಜವಾದ
ವಿಕಾಸವಾದ!

***o***