OBC ಸರ್ಟಿಫಿಕೆಟ್ ಬಿಕರಿ

OBC ಸರ್ಟಿಫಿಕೆಟ್ ಬಿಕರಿ

(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ಜೂ.19- ಮೀಸಲಾತಿ ಪರವಾಗಿ ಬೊಗಳೆ ಬ್ಯುರೋದ ಜತೆಗೆ ನಮ್ಮ ಪ್ರೇರಕ ಪತ್ರಿಕೆ ಮಜಾವಾಣಿ ಬ್ಯುರೋ ಕೂಡ ಕೈಜೋಡಿಸಿರುವುದರಿಂದ ಇರುವೆ ಬಲ ಬಂದಂತಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ತೀವ್ರಗತಿಯ ತನಿಖೆ ನಡೆಸಿದ ಬೊಗಳೆ ಬ್ಯುರೋಗೆ ಮತ್ತಷ್ಟು ಅಸತ್ಯದ ತಲೆ ಮೇಲೆ ಹೊಡೆಯುವ ಸಂಚುಗಳ ಬಗ್ಗೆ ತಿಳಿಯಿತು.

ಕೇಂದ್ರ ಸಂಪತ್ತಿನ ಮೂಲದ ಸಚಿವ ದುರ್ಜನ್ ಸಿಂಗ್ ಅವರು OBC ಪರವಾಗಿ ಮೀಸಲಾತಿಗೆ ಬಲವಾಗಿ ಹೋರಾಟ ಮಾಡುತ್ತಿರುವುದರ ಹಿಂದೆ ಅವರಿಗೇ ಮೀಸಲಾತಿ ಪಡೆಯುವ ಪರಮಗುರಿಯೇ ಕಾರಣ ಎಂಬ ಅಂಶ ಇಲ್ಲಿ ಬಯಲಾಗಿದೆ.

ಒಂದೆಡೆ ಹೆಚ್ಚಿಸಿದ "ಖೋಟಾ" ಸೀಟುಗಳಿಗೆ ಸಾಕಷ್ಟು ಬಾಚಿಕೊಂಡು ಸೂಕ್ತ ಜಾಗ ಮಾಡುವುದು ಹೇಗೆ ಎಂದು ಬೀರ್‌ಅಪ್ಪ ಮೂಗಿಲಿ ಅವರು ತಲೆಯನ್ನು ರಪರಪನೆ ಕೆರೆದುಕೊಳ್ಳುತ್ತಿದ್ದರೆ, ಹೇಗಾದರೂ ಮಾಡಿ ಈ ದೇಶದಲ್ಲಿ ನಾವೂ ಬದುಕಬೇಕು, ಅದಕ್ಕಾಗಿ OBC ಸರ್ಟಿಫಿಕೆಟ್ ಪಡೆದುಕೊಳ್ಳಬೇಕೆಂದು ಘೋರವಾಗಿ ಚಿಂತಿಸುತ್ತಿರುವವರಿಗೆ ಸರಕಾರ ಈ ರೀತಿ ಸಹಾಯ ಮಾಡಲು ಹೊರಟಿರುವುದು ಸರಕಾರದ ಜನಪರ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಜಾತ್ಯಾಧಾರಿತ ರಾಷ್ಟ್ರ ಎಂಬ ಬಿರುದು ದೊರಕಿಸಿಕೊಡುವುದೇ ನಮ್ಮ ಮೂಲ ಗುರಿ ಎಂದು ಈಗಾಗಲೇ ಸರಕಾರ ಸ್ಪಷ್ಟಪಡಿಸಿದೆ.

ಅಟಲ್ ಬಿಹಾರಿ ವಾಜಪೇಯಿ, ಪ್ರಕಾಶ್ ಕಾರಟ್, ರಾಜನಾಥ್ ಸಿಂಗ್ ಹಾಗೂ ಅರ್ಜುನ್ ಸಿಂಗ್‌ರಂಥವರಿಗೇ ಒಂದೇ ಕ್ಷಣದಲ್ಲಿ OBC ಸರ್ಟಿಫಿಕೆಟ್ ದೊರಕಿಸಿಕೊಳ್ಳಬಹುದು ಎಂಬ ಅಂಶವನ್ನು ಇಂಡಿಯನ್ ಎಕ್ಸ್ ಪ್ರೆಸ್ ರೈಲು ಜೂ.17ರ ಮುಖಪುಟದಲ್ಲಿ ತನಿಖಾ ವರದಿ ಪ್ರಕಟಿಸಿ ಭಾರತೀಯರಿಗೆ ಬದುಕಲು ದಾರಿಯೊಂದನ್ನು ತೋರಿಸಿತ್ತು.

ಮಜಾವಾಣಿ ಹೋರಾಟ

ಈ ಮಧ್ಯೆ, ಬೊಗಳೆ-ರಗಳೆಯ ನೆಟ್ಟೊದೆತಗಳ ಸಂಖ್ಯೆ ಒಂದೇ ಸಮನೆ ಹೆಚ್ಚಾದ ಕಾರಣ ಬ್ಯುರೋದಲ್ಲಿ ಭೂಕಂಪನದ ಅನುಭವವಾದ ಕಾರಣ ಅದರ ಹಿನ್ನೆಲೆ ಶೋಧಿಸಹೊರಟಾಗ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ.

ಯಾರಿಂದಲೂ ಹಣ ಪಡೆಯದೆ ಅಸತ್ಯಾನ್ವೇಷಿ ನಡೆಸಿದ ತನಿಖೆ ವೇಳೆ, ಬ್ಲಾಗಿಸುವವರಿಗೂ ಶೇ.27 ಮೀಸಲಾತಿ ಬೇಕು ಅಂತ ಹೋರಾಟ ಮಾಡುತ್ತಿರುವ ಮಜಾವಾಣಿ ಬ್ಯುರೋದ ವಿಷಾದಾಂಕದ ಮೂಲಕವೇ ಈ ಹಿಟ್ಟುಗಳು (ನೆಟ್ಟೊದೆತಗಳು) ಬಂದಿದ್ದವು ಅಂತ ತಿಳಿಯಿತು.

ಇಡೀ ನೆಟ್ಟೋದುಗರನ್ನು ನಗೆಯ ನೆಟ್ಟಿನಲ್ಲಿ ಸಿಲುಕಿಸಿ, ಅವರ ಮನದ ದುಗುಡವನ್ನು ಒಂದೇ ವಾಕ್ಯದ ಡೋಸ್ ನೀಡಿ, ಅರೆಕ್ಷಣದಲ್ಲಿ ನಿವಾರಿಸುತ್ತಾ, ನೆಟ್ಟಿಗರಿಗೆ ಗಟ್ಟಿಗತನದ ನಗೆಯ ಅಮಲೇರಿಸಿದ್ದ ಮತ್ತು ಅಮಲೇರಿಸುತ್ತಲೇ ಇರುವ ಮಜಾವಾಣಿ ಬ್ಯುರೋ, ಬೊಗಳೆ-ರಗಳೆ ಉತ್ತಮ ಗುಣಮಟ್ಟದ್ದು, ಜನಪ್ರಿಯ ಎಂಬಿತ್ಯಾದಿ ಇಲ್ಲ ಸಲ್ಲದ ಅಪಾದನೆಗಳನ್ನು ಮಾಡಿಯಾದರೂ ಮೀಸಲಾತಿ ಪಡೆಯಬೇಕು ಎಂಬ ಕಾರಣಕ್ಕೆ ಮೀಸಲಾತಿ ಪರ ಹೋರಾಟ ಕಣಕ್ಕಿಳಿದಿದೆ ಎಂದು ತಿಳಿದುಬಂದಿದೆ.

ಈ ಕಾರಣಕ್ಕೆ ಮಜಾವಾಣಿ ಬ್ಯುರೋ ಸಂಪಾದಕರೂ, ಪ್ರಕಾಶಕರೂ, ಓದುಗರೂ, ವರದಿಗಾರರೂ ಮತ್ತು ಎಲ್ಲವೂ ಆಗಿರುವ ವಾರ್ತಾವಿದೂಷಕರಿಗೆ ನೆಟ್ಟೊದೆತಗಳಿಗೆ ಪ್ರತಿಯಾಗಿ ಸಾವಿರ ನಮನಗಳನ್ನು ಕೊಡಲು ಏಕಸದಸ್ಯ ಬೊಗಳೆ ರಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

Rating
No votes yet