ಊರ ಮದುವೆ ಭಾಗ-೨

ಊರ ಮದುವೆ ಭಾಗ-೨

ನಿನ್ನೆ ನನ್ನ ಬರಹದಲ್ಲಿ ಇಂದಿನ ಕಾಲದಲ್ಲೂ ಶಿಖೆ ಬಿಟ್ಟು, ಪ್ಯಾಂಟ್ ಧರಿಸದ, ತಲೆಕೂದಲು ಕ್ರಾಪ್ ಮಾಡದ, ಅಪ್ಪಟ ಭಾರತೀಯ ಶೈಲಿಯಲ್ಲಿ ಬದುಕುತ್ತೇನೆಂದು ಹೇಳುವ ಹುಡುಗನನ್ನು ಒಬ್ಬ ಓದಿದ ಹುಡುಗಿ ಮದುವೆಯಗಲು ಒಪ್ಪಿರುವ ವಿಚಾರ ಪ್ರಸ್ಥಾಪಿಸಿರುವೆ. ಶಿಖೆ ಬಿಟ್ಟು ,ಕೇವಲ ಪಂಚೆ ಉಟ್ಟು ಶಲ್ಯ ಹೊದ್ದು ವೇದ ಕಲಿಯುವ ಸಹಸ್ರಾರು ವಿದ್ಯಾರ್ಥಿಗಳು ಈಗಲೂ ಇದ್ದಾರೆ. ಇಲ್ಲವೆಂದಲ್ಲ. ಆದರೆ ವಿದ್ಯಾಭ್ಯಾಸ ಮುಗಿದ ನಂತರ ಎಲ್ಲರಂತೆ ಪ್ಯಾಂಟ್ ರಿಸುವುದು ಮಾಮೂಲಾಗಿದೆ. ನಾವು ಧರಿಸುತ್ತಿರುವ ಪ್ಯಾಂಟ್-ಶರ್ಟ್ ಗಳು ಬ್ರಿಟಿಶರ ಕೊಡುಗೆ ಇದ್ದಿರಬಹುದು. ಆದರೆ ಈ ಉಡುಪಿಗೆ ಹಾಗೂ ಅರೆಬರೆ ಇಂಗ್ಳೀಶ್ ಭಾಷೆಗೆ ನಾವು ಎಷ್ಟು ಹೊಂದಿಕೊಂಡು ಬಿಟ್ಟಿದ್ದೀವೆಂದರೆ ನಾವು ಈಗ ಇರುವುದು ಸಹಜ ವೆನಿಸುತ್ತಿದೆ, ಅಪ್ಪಟ ಭಾರತೀಯ ಉಡುಪು ಅಸಹಜವೆನಿಸಿದೆ. ಏನು ಮಾಡೋಣ! ನೂರು ವರ್ಷಗಳಿಂದ ನಮ್ಮನ್ನು ನಮ್ಮ ಅಪ್ಪ-ಅಮ್ಮ ಹೀಗೆ ಬೆಳೆಸಿದರು. ಇರಲಿ, ಮುಂದಿನ ವಿಚಾರಕ್ಕೆ ಬರುವೆ.
ನನ್ನ ತಮ್ಮನ ಮಗಳ ಮದುವೆ ವೈಶಿಷ್ಟ್ಯ ಬರೆಯುವುದೇ ಈ ಬರಹದ ಉದ್ದೇಶ.ಮದುವೆ ಯಾವ ಅದ್ಧೂರಿ ಇಲ್ಲದೆ ಹಳ್ಳಿಯ ಹೆಂಚಿನ ಮನೆಯಲ್ಲಿ ನಡೆಯುತ್ತೆ. ನಾಲ್ಕು ದಿನಗಳ ಮದುವೆ. ನಾಲ್ಕು ದಿನಗಳ ಕಾರ್ಯಕ್ರಮಗಳ ವಿವರ ಪಡೆದು ಮತ್ತೆ ಬರೆಯುವೆ. ಆದರೆ "ಊರ ಮದುವೆ" ಎಂಬ ತಲೆ ಬರಹ ಕೊಟ್ಟೆನಲ್ಲಾ, ಆ ಬಗ್ಗೆ ತಿಳಿಸಿ ಬಿಡುವೆ. ನಮ್ಮ ಹಳ್ಳಿಯಲ್ಲಿ ೧೩ ಬ್ರಾಹ್ಮಣರ ಮನೆಗಳಿವೆ .ಎಲ್ಲವೂ ನಾಡಹೆಂಚಿನ ಹಳ್ಳಿ ಮನೆಗಳು. ಸಾಮಾನ್ಯವಾಗಿ ಯಾರ ಮನೆಯಲ್ಲೂ ೧೦-೧೫ ಜನರಿಗಿಂತ ಹೆಚ್ಚು ಜನ ಮಲಗಲು ಅವಕಾಶವಿರದ ಚಿಕ್ಕ ಮನೆಗಳು. ಇಂತಾ ಹಳ್ಳಿಯಲ್ಲಿ ಮದುವೆ ಮಾಡುವುದು ಹೇಗೆ? ಇಂದಿನ ಕಾಲದಲ್ಲಿ ಕಡಿಮೆ ಎಂದರೂ ೨೦೦-೩೦೦ ಜನರಾದರೂ ಮದುವೆಗೆ ಬಂದೇ ಬರುತ್ತಾರೆ.ಮದುವೆ ದಾರೆಯನ್ನು ಒಂದು ಮನೆಯಲ್ಲಿ ಮಾಡಿದರೆ ಮದುವೆಗೆ ಬಂದ ಬಂಧುಗಳನ್ನು ಎಲ್ಲರ ಮನೆಯಲ್ಲಿ ಉಳಿಸಲಾಗುವುದು. ಆಯಾ ಮನೆಗಳಲ್ಲಿ ಅವರಿಗೆ ಸ್ನಾನದ ವ್ಯವಸ್ಥೆ ಆಯಾ ಮನೆಯವರೇ ಮಾಡುವರು. ಅವರ ಮನೆಯಲ್ಲಿಯೇ ಇದ್ದಂತ ವ್ಯವಸ್ಥೆಯಲ್ಲಿಯೇ ಮಲಗಲು ಅವಕಾಶ ಮಾಡುವರು. ಊಟ-ತಿಂಡಿಮಾತ್ರ ಒಂದು ಕಡೆ. ಅದಕ್ಕಾಗಿ ಒಂದು ಶಾಮಿಯಾನ ಹಾಕಲು ಉದ್ಧೇಶಿಸಲಾಗಿದೆ. ಆದ್ದರಿಂದ ಮದುವೆ ಎಂದರೆ ಕೇವಲ ನಮ್ಮ ಮನೆಯ ಕಾರ್ಯಕ್ರಮವಾಗಿ ಉಳಿಯುವುದಿಲ್ಲ. ಬದಲಿಗೆ ಅದು ಊರ ಜನರ ಕಾರ್ಯಕ್ರಮವಾಗುತ್ತೆ. ಮದುವೆಗೆ ಬಂದ ಜನರೆಲ್ಲಾ ಊರ ಮನೆಯ ಅತಿಥಿಗಳಾಗುತ್ತಾರೆ. ಬ್ರಾಹ್ಮಣರ ಮನೆಗಳಲ್ಲಿ ಎಲ್ಲರೂ ಸೇರಿ ಮದುವೆಯ ಕಾರ್ಯಕ್ರಮಗಳಲ್ಲಿ ತೊಡಗುತ್ತಾರೆಂದರೆ ಮದುವೆಗೆ ಬರುವವರೆಲ್ಲರೂ ಬ್ರಾಹ್ಮಣ ಜಾತಿಗೆ ಸೇರಿರಲೇ ಬೇಕೆಂದಲ್ಲ. ಎಲ್ಲಾ ಜಾತಿಯ ಮಿತ್ರರೂ ಬಂದು ಪಾಲ್ಗೊಳ್ಳುತ್ತಾರೆ. ಎಲ್ಲರಿಗೂ ಊರಜನರ ಆತಿಥ್ಯ ವಿರುತ್ತದೆ.[ವ್ಯವಸ್ಥೆಮಾಡುವ ವಿಷಯದಲ್ಲಿ ಬ್ರಾಹ್ಮಣರ ಮನೆ ಎನ್ನುವಾಗ ನನಗೆ ಸಂಕೋಚವಿದೆ. ಆದರೆ ಮದುವೆಗೆ ಬಂದ ನೆಂಟರಿಷ್ಟರನ್ನು ಉಳಿದೆಲ್ಲಾ ಜಾತಿಯವರ ಮನೆಯಲ್ಲಿ ಉಳಿಸುವುದು ಬಂದವರಿಗೆ ಹಿತವಾಗುವುದಿಲ್ಲ.ಅಲ್ಲದೆ ವೈದಿಕರುಗಳ ಸಂಖೆಯೇ ಹೆಚ್ಚು ಇರಬಹುದಾದ ಈ ಮದುವೆಯಲ್ಲಿ ಬಂದವರಿಗೆ ಅನುಸರಿಸಿ ವ್ಯವಸ್ಥೆ ಮಾಡಬೇಕಲ್ಲಾ, ಎಲ್ಲರ ಮನೆಯಲ್ಲಿ ಇದು ಸಾಧ್ಯವಿಲ್ಲ. ಹಾಗಾಗಿ ಜಾತಿ ಪದ ಬಳಕೆಯಾಯ್ತು. ಅದಕ್ಕಾಗಿ ನನಗೆ ವಿಷಾಧವಿದೆ]
ನೆನಪು:
ನನ್ನ ಮದುವೆಯೂ ಹೀಗೆಯೇ ಆಯ್ತು ಮೂವತ್ತು ವರ್ಷಗಳ ಹಿಂದೆ. ಮದುವೆಯ ಫೋಟೋ ವನ್ನು ಸಂಪದದಲ್ಲಿ ಪೇರಿಸೋಣ ವೆಂದರೆ ಆಗ ಫೋಟೋ ವನ್ನೇ ತೆಗೆಸುವ ಗೋಜಿಗೇ ಹೋಗಲಿಲ್ಲ. ನಮ್ಮ ಮನೆಯಲ್ಲಿ ಮದುವೆಯನೆನಪಿನ ಫೋಟೋ ಇಲ್ಲ.ಬದಲಿಗೆ ಸಾಕ್ಷಿಗೆ ನಾವೇ ಇದ್ದೇವೆ.
ನಮ್ಮೂರಿನ ಮಾಧಕೃಷ್ಣ ದೇವಾಲಯದಲ್ಲಿ ನನ್ನ ಮದುವೆ ಯಾಯ್ತು. ದಾರೆ ಮಂಟಪದಲ್ಲಿ ೨೦-೩೦ ಜನರಿಗೆ ಮಾತ್ರ ಸ್ಥಳಾವಕಾಶವಿತ್ತು. ಉಳಿದವರೆಲ್ಲಾ ಯಾರ ಮನೆಯಲ್ಲಿ ಮಲಗಿದರೋ, ಯಾರಮನೆಯಲ್ಲಿ ಸ್ನಾನ ಮಾಡಿದರೋ ನನಗೆ ಗೊತ್ತಾಗಲೇ ಇಲ್ಲ. ಅಂತೂ ಎಲ್ಲರೂ ಸಂತೋಷವಾಗೇ ತೆರಳಿದ್ದು ನೆನಪಿದೆ.
ಈ ಮದುವೆಯಲ್ಲಿ ನಮ್ಮ ಮನೆಯ ಮುಂದೆ ಒಂದು ಶಾಮಿಯಾನ ಹಾಕಿ ಬಂದವರಿಗೆಲ್ಲಾ ಆಸನ ವ್ಯವಸ್ಥೆಮಾಡಿ ಮದುವೆಯ ವಿಧಿ-ವಿಧಾನಗಳನ್ನು ವೀಡಿಯೋ ತೆಗೆಯ ಬೇಕೆಂಬ ಉದ್ಧೇಶವಿದೆ.ಕಾರಣ ನಮ್ಮ ಇಂದಿನ ಆಧುನಿಕ ಸಮಾರಂಭಗಳಿಗೆ ಭಿನ್ನವಾಗಿ ಶಾಸ್ತ್ರೋಕ್ತವಾಗಿ , ವೇದೋಕ್ತವಾಗಿ ಮದುವೆ ನಡೆಯುವುದೆಂಬ ವಿಶ್ವಾಸ ನನಗಿದೆ.
ಸಂಪದಿಗರೇ,
ಇಂತಹ ಒಂದು ವಿಭಿನ್ನ ಮದುವೆಗೆ ನೀವೂ ಬನ್ನಿ. ಹಳ್ಳಿಯ ಆತಿಥ್ಯ ಪಡೆದು ವಧು-ವರರನ್ನು ಹಾರೈಸ ಬನ್ನಿ.
ವಧು: ಹೇಮಾ
ವರ: ಲಕ್ಶ್ಮೀಶ
ಮದುವೆ ದಿನಾಂಕ: ಮೇ ೬
ಸ್ಥಳ: ವಧುವಿನ ಗೃಹ, ಹರಿಹರಪುರ,
ಹೊಳೇ ನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ.
ಬರಲು ಮಾರ್ಗ:
ಹಾಸನಕ್ಕೆ ೩೦ ಕಿಲೋ ಮೀಟರ್ ದೂರ.
ಬೆಂಗಳೂರಿನಿಂದ: ಚನ್ನರಾಯಪಟ್ನ ಮಾರ್ಗ, ಗೊರೂರಿಗೆ ಹರಿಹರಪುರದ ಮೂಲಕ ಹೋಗುವ ಬಸ್ ಮಾರ್ಗ[ಡಬಲ್ ರೋಡ್]

Rating
No votes yet

Comments