ವಿಯೋಗ

ವಿಯೋಗ

ಗಿಡಮರಗಳ ನಡುವೆಲ್ಲೋ ಚಿಲಿಪಿಲಿಗಳನ್ನು ಕೇಳುತ್ತಾ ಮನೆಕಡೆ ಹೋಗುತ್ತಿದ್ದ ನಾಗಪ್ಪ ತನ್ನವರ ಬಗ್ಗೆ ತನ್ನ ಮನೆಯವರ ಬಗ್ಗೆ ಯೋಚಿಸತೊಡಗಿದ.. ನಾಗಪ್ಪನಿಗೆ ಸತ್ತ ಹೆಂಡತಿಯ ನೆನಪು ಅಷ್ಟೇನೂ ಕಾಡದಿದ್ದರೂ,ಶಾಲೆಯ ಮೂರನೇ ಕ್ಲಾಸಿನ ಹಾಜರಿ ಪುಸ್ತಕದಲ್ಲಿ ಮಾತ್ರ ಸಿಗುವ ತನ್ನ ಮಗನ ಕುರಿತು ಅಗತ್ಯಕ್ಕಿಂತ ಹೆಚ್ಚೇ ಯೋಚಿಸುತ್ತಿರುತ್ತಿದ್ದ.ಶಾಲೆ ತಪ್ಪಿಸುವುದು ಮೊದಮೊದಲು ಬಾಲಿಶವೆಂದುಕೊಂಡರೂ ಈಗೀಗ ಸೋಮಣ್ಣನ ಚಾ ಅಂಗಡಿಯ ಮುಂದೆ ಆಕಾಶ ದಿಟ್ಟಿಸಿತ್ತಾ ಗುಮ್ಮನಂತೆ ಕುಳಿತಿರುತ್ತಿದ್ದ ಮಗನ ಬಗ್ಗೆ ಸಿಟ್ಟು ಬರುತ್ತಿತ್ತು.ಹೇಳುವಷ್ಟೂ ಹೇಳಾಗಿತ್ತು. ನಿನ್ನೆ ಯಾವುದೋ ಶಕ್ತಿ ಆವೇಶವಾದಂತೆ ಮಗನಿಗೆ ಯದ್ವಾ ತದ್ವಾ ಬೈದು ಮನೆಯ ಹೊರಗೇ ರಾತ್ರಿ ಕಳೆವಂತೆ ಮಾಡಿದ್ದ. ಒಂದೂ ಮಾತಾಡದೇ ಮಗನೂ ಹೊರಗೇ ಮಲಗಿದ್ದು ವಿಶೇಷವಾಗಿ ಕಂಡಿತಾದರೂ, ಅಪ್ಪನ ಎದುರು ಉಸಿರೆತ್ತದ ಮಗನ ಗುಣ ಸಮಾಧಾನ ಮಾಡಿತ್ತು. ಲೋಕದ ಜಂಜಾಟಗಳನ್ನೆಲ್ಲಾ ಬಿಟ್ಟು ಸನ್ಯಾಸಿಯಾಗುವ ಬುದ್ಧಿ ಬಂದಂತೆ ಆಡುವ ಆ ಚಿಕ್ಕ ವಯಸ್ಸಿನ ಮಗನ ಬಗ್ಗೆ ಸ್ವಲ್ಪ ಭಯ ಹುಟ್ಟಿದ್ದು ಆಗಲೇ...ಅದಾದ ಮೇಲೆ ಅಪಶಕುನಗಳು ನಡೆದಿದ್ದೇ ಹೆಚ್ಚೋ ಅಥವಾ ನಡೆದ ಘಟನೆಗಳಿಗೆಲ್ಲ ವಿಚಿತ್ರ ಅರ್ಥ ಕಲ್ಪಿಸುವ ವಿಚಾರಗಳು ಬಂದಿದ್ದು ಹೆಚ್ಚೋ ನಾಗಪ್ಪನಿಗೆ ಅರ್ಥವಾಗದೆ ಚಡಪಡಿಸಿದ.ಈ ರೀತಿಯೇ ಮುಂದುವರಿದರೆ ಊರು ಕಾಯುವ ಮಾಸ್ತಿ ಗುಡಿಗೆ  ಹೋಗಿ ಹೇಳಿಕೆ ಮಾಡಿಕೊಳ್ಳಬೇಕು ಅಂದುಕೊಂಡ. ಅಲ್ಲೇ ಮಠ ಮಾಡಿಕೊಂಡು ಊರನ್ನು ಹರಸುತ್ತಿರುವ ಸುಕುಮಾರೇಂದ್ರ ಸ್ವಾಮೀಜಿಗಳ ಮುಖ ಜ್ಞಾಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆಯೇ ಎಲ್ಲೋ ಗೂಗೆ ಕೂಗಿದಂತಾಗಿ, ಮಗನಿಗಾಗಿ ತಂದಿದ್ದ ಭಜೆ ಪೊಟ್ಟಣವನ್ನು ಎದೆಗವುಚಿಕೊಂಡ.

Rating
No votes yet

Comments