ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧

ಅದು ಮಾರ್ಚ್‌ ತಿಂಗಳ ಮೂರನೇ ವಾರದ ಕೊನೆ.

ಎಂದಿನಂತೆ ನಸುಕಿನಲ್ಲಿ ಎದ್ದು ಕಂಪ್ಯೂಟರ್‌ ಮುಂದೆ ಪತ್ರಿಕೆಗಳ ಅಂತರ್ಜಾಲ ತಾಣಗಳನ್ನು ಹುಡುಕಿ ಓದುತ್ತ, ನೋಟ್ಸ್‌ ಮಾಡಿಕೊಳ್ಳುತ್ತಾ ಕೂತಿದ್ದೆ. ಸಮಯ ಆಗಲೇ ಆರೂ ಕಾಲು. ಇನ್ನೊಂದು ಹದಿನೈದು ನಿಮಿಷ ಸಮಯ. ಮಕ್ಕಳು ಏಳುತ್ತವೆ. ಅವರ ಮುಖ ತೊಳೆದು, ಒಂದಿಷ್ಟು ಹಾಲು ಕುಡಿಸಿಕೊಂಡು ವಾಕಿಂಗ್‌ ಹೋಗುವುದು ರೂಢಿ.

ಮತ್ತೈದು ನಿಮಿಷದಲ್ಲಿ ಚಿಕ್ಕವಳು ಎದ್ದಳು. ರೇಖಾ ಅವಳನ್ನು ರೆಡಿ ಮಾಡುವಷ್ಟರಲ್ಲಿ ದೊಡ್ಡ ಮಗಳು ಗೌರಿ ಕೂಡ ಎದ್ದು ಕೂತಳು. ಹಾಗೇ ಬಿಟ್ಟರೆ ಹಾಸಿಗೆಯಲ್ಲೇ ಸೂಸೂ ಮಾಡುತ್ತಾಳೆಂದು ಅವಳನ್ನು ಎಬ್ಬಿಸಿದ ರೇಖಾ ಬಾತ್‌ರೂಮಿನ ಕಡೆ ನಡೆಸಿಕೊಂಡು ಬಂದಳು.

ಏಕೋ ಗೌರಿ ನಡೆಯಲು ಹಠ ಮಾಡಿದಳು. ಅದು ಹಳೆಯ ಅಭ್ಯಾಸ. ಬಾತ್‌ರೂಮಿನ ನೆಲ ತಂಪಗಿರುತ್ತದೆ. ಎದ್ದ ಕೂಡಲೇ ಕಾಲು ನೆನೆಸಿಕೊಳ್ಳಲು ಆಕೆ ಇಷ್ಟಪಡುವುದಿಲ್ಲ.

ಬಹುಶಃ ಅದೇ ಕಾರಣಕ್ಕೆ ನಡೆಯಲು ಹಠ ಮಾಡುತ್ತಿರಬಹುದೆಂದು ಭಾವಿಸಿ ಆಕೆ ಕೊಂಚ ಒತ್ತಾಯದಿಂದಲೇ ನಡೆಸಿಕೊಂಡು ಬಂದಳು. ಆದರೆ, ನಾನು ಕೂತಿದ್ದ ಕೋಣೆಯ ಬಾಗಿಲ ಚೌಕಟ್ಟನ್ನು ಗಟ್ಟಿಯಾಗಿ ಹಿಡಿದು ನಿಂತುಕೊಂಡ ಗೌರಿ ಹೆಜ್ಜೆ ಎತ್ತಿಡಲಿಲ್ಲ. ರೇಖಾ ಜಗ್ಗಿದರೂ ಈಕೆ ಕದಲಲಿಲ್ಲ. ’ಸೋಮಾರಿತನ ಮಾಡಬಾರದು ಪುಟ್ಟಾ’ ಎಂದು ಕೂತಲ್ಲಿಂದಲೇ ನಾನು ಮೆಲುವಾಗಿ ಗದರಿದೆ. ಆದರೂ, ಗೌರಿ ಅಲ್ಲಾಡಲಿಲ್ಲ. ’ಈಕೆಗೆ ನೀವೇ ಮುಖ ತೊಳೆಸಿ’ ಎಂದು ಆಕೆಯ ಕೈಬಿಟ್ಟ ರೇಖಾ ಚಿಕ್ಕವಳತ್ತ ಗಮನ ಹರಿಸಿದಳು.

ಈಗ ನಾನು ಏಳಲೇಬೇಕಾಯಿತು.

ಏಕೋ ಗೌರಿ ಕೊಂಚ ಹೊಯ್ದಾಡಿದಂತಾಯಿತು. ನಿದ್ದೆಗಣ್ಣಿನಲ್ಲಿ ಬಿದ್ದುಗಿದ್ದಾಳೆಂದು ನಾನು ತಕ್ಷಣ ಎದ್ದು ಆಕೆಯತ್ತ ಹೋಗುವಷ್ಟರಲ್ಲಿ, ಗೌರಿ ಏಕೋ ಅಸಹಜವಾಗಿದ್ದನ್ನು ಗಮನಿಸಿದೆ.

ಆಕೆಯ ಕಣ್ಣುಗಳು ವಿಚಿತ್ರವಾಗಿದ್ದವು. ದೃಷ್ಟಿ ಎಲ್ಲೋ ನೆಟ್ಟಿತ್ತು. ಮೈಯಲ್ಲಿ ಶಕ್ತಿ ಇಲ್ಲದವಳಂತೆ ನಿಂತಿದ್ದ ಆಕೆ ಯಾವ ಕ್ಷಣದಲ್ಲಾದರೂ ಬೀಳಬಹುದು ಅನಿಸಿತು.

ಹೋಗಿ ಆಕೆಯ ರೆಟ್ಟೆ ಹಿಡಿದುಕೊಂಡೆ. ಮೈಯಲ್ಲಿ ಶಕ್ತಿ ಇಲ್ಲದಂತೆ ನಿಂತಿದ್ದ ಆಕೆ ನಿಧಾನವಾಗಿ ಬಿಗಿಯಾಗತೊಡಗಿದಳು. ನಡೆಯಲು ಇಷ್ಟವಿಲ್ಲದಾಗ ಕುಸಿದು ಕೂಡುವಂತೆ ಕಾಣಲಿಲ್ಲ.

ತಕ್ಷಣ ಆಕೆಯನ್ನು ಎತ್ತಿಕೊಂಡು ಹೋಗಿ ಕುರ್ಚಿಯಲ್ಲಿ ಕೂರಿಸಿದೆ. ಆಕೆಯ ಮುಖ ಇನ್ನಷ್ಟು ಅಸಹಜವಾಯಿತು. ದೃಷ್ಟಿ ಎಲ್ಲೋ. ಒಂದು ಲೋಟ ತೆಗೆದುಕೊಂಡು ಅದನ್ನು ತಿರುಗಿಸಿದೆ. ಆ ರೀತಿ ತಿರುಗಿಸುವುದನ್ನು ನೋಡುವುದು ಆಕೆಗೆ ಇಷ್ಟ.

ಆದರೆ, ಗೌರಿ ಪ್ರತಿಕ್ರಿಯಿಸಲಿಲ್ಲ. ಮೈ ಶಕ್ತಿ ಇಲ್ಲದಂತೆ ಇಳಿಬೀಳತೊಡಗಿತು. ಕುರ್ಚಿಯಲ್ಲಿದ್ದರೂ ಆಕೆ ಬಿದ್ದುಬಿಡಬಹುದು ಅನಿಸಿದಾಗ ಮೊದಲ ಬಾರಿ ನಾನು ಕೊಂಚ ಗಾಬರಿಗೊಂಡೆ.

ತಕ್ಷಣ ಆಕೆಯನ್ನು ಎತ್ತಿಕೊಂಡು ದಿವಾನ್‌ ಮೇಲೆ ಮಲಗಿಸಿದೆ. ಗೌರಿಯ ನಡವಳಿಕೆ ವಿಚಿತ್ರವಾಯಿತು. ಕಣ್ಣಿನ ಅಸಹಜತೆ ನನ್ನನ್ನು ಮತ್ತಷ್ಟು ಗಾಬರಿಗೊಳಿಸಿತು. ರೇಖಾಳನ್ನು ಕೂಗಿ ಕರೆದೆ.

ಅಷ್ಟೊತ್ತಿಗೆ ಗೌರಿ ವಿಚಿತ್ರವಾಗಿ ವರ್ತಿಸತೊಡಗಿದಳು. ದೇಹ ಒಂದು ಕಡೆ ವಾಲಿತು. ಕುತ್ತಿಗೆ ಒಂದು ಭಾಗಕ್ಕೆ ತಿರುಚಿತು. ಬಾಯಿ ಅಸಹಜವಾಗಿ ತೆರೆದುಕೊಂಡಿತು. ನಮ್ಮ ಕಣ್ಮುಂದೆಯೇ ನಿಧಾನವಾಗಿ ಅಕೆಯ ಪ್ರಜ್ಞೆ ತಪ್ಪತೊಡಗಿತು.

ಅದನ್ನು ನೋಡಿ ರೇಖಾ ಅಳತೊಡಗಿದಳು. ಆಕೆಯ ಮೈ ಅಲುಗಿಸಿ ಮಾತನಾಡಿಸಲು ಯತ್ನಿಸಿದರೂ ಪ್ರತಿಕ್ರಿಯೆ ಬರಲಿಲ್ಲ. ಜಗತ್ತಿನ ಪರಿವೇ ಇಲ್ಲದಂತೆ ಆಕೆ ನಿಧಾನವಾಗಿ ಕುಸಿಯತೊಡಗಿದಳು. ನಾನು ಪೂರ್ತಿ ಗಾಬರಿಗೊಂಡೆ. ತಕ್ಷಣ ಏನು ಮಾಡಬೇಕೋ ತೋಚಲಿಲ್ಲ. ನಮ್ಮ ಅವಸ್ಥೆ ನೋಡಿ ಚಿಕ್ಕ ಮಗಳು ನಿಧಿ ಅಳಲು ಪ್ರಾರಂಭಿಸಿದಳು.

ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ಅಪಾಯ ತಪ್ಪಿದ್ದಲ್ಲ ಎಂಬ ಭೀತಿಯಲ್ಲಿ ಕೆಳ ಅಂತಸ್ತಿನ ಗೌಡರ ಮನೆಯತ್ತ ಓಡಿ ಹೋದೆ. ಅವರ ಮನೆಯಲ್ಲಿ ಬೈಕಿತ್ತು. ಆ ಸಮಯದಲ್ಲಿ ಆಟೊ ಅಥವಾ ಆಂಬುಲೆನ್ಸ್‌ ಬರುವುದನ್ನು ಕಾಯುವುದಕ್ಕಿಂತ, ಗೌಡರ ಬೈಕ್‌ನಲ್ಲಿ ಗೌರಿಯನ್ನೆತ್ತಿ ಕೂತು ಹತ್ತಿರದಲ್ಲೇ ಇರುವ ೨೪ ಗಂಟೆಗಳೂ ತೆರೆದಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ನನ್ನ ಉದ್ದೇಶವಾಗಿತ್ತು. ಹೇಗೆ ಮೆಟ್ಟಿಲಿಳಿದೆನೋ ಗೊತ್ತಿಲ್ಲ. ಇನ್ನೇನು ಗೌಡರ ಮನೆಯ ಬಾಗಿಲು ತಟ್ಟಬೇಕು-

ಅಷ್ಟರಲ್ಲಿ ರೇಖಾ ಜೋರಾಗಿ ಚೀರಿದಳು.

ನನ್ನ ಜಂಘಾಬಲವೇ ಉಡುಗಿದಂತಾಯಿತು. ಬಂದ ವೇಗಕ್ಕಿಂತ ದುಪ್ಪಟ್ಟು ವೇಗದಲ್ಲಿ ಮೆಟ್ಟಿಲೇರಿ ಒಳಗೆ ಓಡಿದೆ. ಆ ದೃಶ್ಯವನ್ನು ಬಹುಶಃ ನನ್ನ ಜೀವಮಾನದಲ್ಲಿ ಎಂದಿಗೂ ಮರೆಯಲಾರೆ.

ಗೌರಿಯ ಮೈ ತರಗಲೆಯಂತೆ ಕಂಪಿಸುತ್ತಿದೆ. ಬಾಯಿ ವಿಚಿತ್ರವಾಗಿ ತೆರೆದುಕೊಂಡಿದೆ. ಕಣ್ಣುಗಳು ಅರೆತೆರೆದಿದ್ದವು. ಇಡೀ ದೇಹ ಅಲೆಅಲೆಯಾಗಿ ನಡುಗುತ್ತಿತ್ತು. ರೇಖಾ ಜೋರಾಗಿ ಅಳುತ್ತಿದ್ದಳು. ನಿಧಿ ಕೂಡಾ.

ಅದನ್ನು ನೋಡಿ ನಾನೂ ಅಳತೊಡಗಿದೆ. ನಮ್ಮ ಕಣ್ಣೆದುರೇ ಗೌರಿ ಜಾರಿ ಹೋಗುತ್ತಿರುವಂತೆ ಭಾಸವಾಯಿತು. ಗುರುವಾರದ ಆ ಬೆಳಿಗ್ಗೆ ಇದ್ದ ನಾಲ್ವರ ಪೈಕಿ ಮೂವರು ಅಳುತ್ತ ಕೂತಿದ್ದರೆ, ಗೌರಿ ಇಹದ ಪರಿವೆ ಇಲ್ಲದಂತೆ ಗಡಗಡ ನಡುಗುತ್ತ ಮಲಗಿದ್ದಳು. ಆ ಚಿತ್ರ ಇನ್ನೂ ಮರೆಯಾಗಲೊಲ್ಲದು.

*****

ಮುಕ್ಕಾಲು ನಿಮಿಷದ ಆ ನಡುಗುವಿಕೆ ನನ್ನ ಮನಸ್ಸನ್ನೇ ನಡುಗಿಸಿಬಿಟ್ಟಿದೆ. ಕನ್ನಡದಲ್ಲಿ ಅದಕ್ಕೆ ಮೂರ್ಛೆರೋಗ ಅನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಫಿಟ್ಸ್‌, ಸಿಝರ್‌, ಅಟ್ಯಾಕ್‌ ಎಂದೆಲ್ಲ ಹೇಳುತ್ತಾರೆ. ವಿಶಿಷ್ಟಚೇತನ ಮಕ್ಕಳಲ್ಲಿ ಫಿಟ್ಸ್‌ ಬರುವ ಸಾಧ್ಯತೆ ನೂರಕ್ಕೆ ನೂರರಷ್ಟಿದೆ. ಆದರೆ, ಗೌರಿಗೆ ಕಳೆದ ಏಳು ವರ್ಷಗಳಿಂದ ಒಮ್ಮೆಯೂ ಬಂದಿದ್ದಿಲ್ಲ. ಆಕೆಯನ್ನು ಅದೆಷ್ಟು ಜತನವಾಗಿ ನೋಡಿಕೊಳ್ಳುತ್ತಿದ್ದೇವೆಂದರೆ, ಬಹುಶಃ ಆಕೆಗೆ ಎಂದಿಗೂ ಬರಲಾರದು ಎಂದೇ ಭಾವಿಸಿದ್ದೆವು.

ಆದರೆ, ಆ ಗುರುವಾರದ ಬೆಳ್ಳಂಬೆಳಿಗ್ಗೆ ನಮ್ಮ ನಂಬಿಕೆ ಛಿದ್ರವಾಯಿತು.

ಅದುವರೆಗೆ ಯಾರಿಗೂ ಫಿಟ್ಸ್‌ ಬಂದಿದ್ದನ್ನು ನಾನು ಕಣ್ಣಾರೆ ನೋಡಿದ್ದಿಲ್ಲ. ಆಸ್ಪತ್ರೆಗೆ ಹೋಗುವವರೆಗೆ ಗೌರಿಗೆ ಬಂದಿದ್ದು ಫಿಟ್ಸ್‌ ಎಂಬುದೂ ನಮಗೆ ಗೊತ್ತಿರಲಿಲ್ಲ. ತಪಾಸಣೆ ನಡೆಸಿದ ಡಾ. ಶಿವಾನಂದ್‌, ಫಿಟ್ಸ್‌ ಎಂದು ದೃಢಪಡಿಸಿದರು. ದಿನಕ್ಕೆ ಮೂರು ಸಲದಂತೆ ಸದ್ಯ ಮೂರು ವರ್ಷ ಔಷಧಿ ಕೊಡಿ. ಆಕೆಯ ಮೆದುಳು ಸ್ಕ್ಯಾನ್‌ ಮಾಡಿಸಿದ ನಂತರ ಮತ್ತೆ ಬನ್ನಿ ಎಂದು ಹೇಳಿದರು. ಅತ್ಯಂತ ಭಾರವಾದ ಹೃದಯದೊಂದಿಗೆ ಗೌರಿಯನ್ನು ಆಟೊದಲ್ಲಿ ಕೂಡಿಸಿಕೊಂಡು, ಆಕೆಯ ಶಾಲೆಗೆ ಹೋದೆವು.

*****

ಅಷ್ಟೊತ್ತಿಗೆ ಶಾಲೆಯಲ್ಲಿ ವಿಷಯ ಗೊತ್ತಾಗಿತ್ತು. ನಡೆದ ಘಟನೆ ವಿವರಿಸುತ್ತಿದ್ದಂತೆ ರೇಖಾಗೆ ದುಃಖ ಉಮ್ಮಳಿಸಿ ಬಂತು.

(ಎರಡನೇ ಭಾಗದಲ್ಲಿ ಮುಕ್ತಾಯ)

- ಚಾಮರಾಜ ಸವಡಿ

Rating
No votes yet

Comments