ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ತೇಜಕ್ಕನ ಸಾಧನೆ ಏನು? ಉತ್ತರ ಫಲಿತಾಂಶದ ಮುನ್ನುಡಿ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ತೇಜಕ್ಕನ ಸಾಧನೆ ಏನು? ಉತ್ತರ ಫಲಿತಾಂಶದ ಮುನ್ನುಡಿ!

ಲೋಕಸಭೆಗೆ ದ್ವಿತೀಯ ಬಾರಿಗೆ ಆಯ್ಕೆ ಬಯಸಿ ತೇಜಸ್ವಿನಿ ಶನಿವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಪಕ್ಷದ ದಿಗ್ಗಜರ ಗೈರುಹಾಜರಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ದುಗುಡ ಮೂಡಿಸಿದೆ.ಡಿ.ಕೆ.ಶಿವಕುಮಾರ್‍, ಹೆಚ್.ಎಂ.ರೇವಣ್ಣ, ಸಿ.ಎಂ.ಲಿಂಗಪ್ಪ ಮುಂತಾದ ಅನೇಕ ಘಟಾನುಘಟಿ ನಾಯಕರುಗಳ ಗೈರುಹಾಜರಿ ಕಾರ್ಯಕರ್ತರಲ್ಲಿ ಇದ್ದ ವಿಶ್ವಾಸ ಕಮರಿಸಿದಂತಿತ್ತು.
ವಿಶೇಷವಾಗಿ ರಾಮನಗರ, ಚೆನ್ನಪಟ್ಟಣ, ಮಾಗಡಿ, ಕನಕಪುರ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಪ್ರಮುಖರ ವಿರೋಧ ಕಟ್ಟಿಕೊಂಡಿರುವ ತೇಜಸ್ವಿನಿಯವರಿಗೆ ಟಿಕೆಟ್ ದೊರೆಯುವುದಿಲ್ಲವೆಂದೇ ಭಾವಿಸಲಾಗಿತ್ತು. ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‍ ರಂತಹ ಪ್ರಭಾವಿ ಕಾಂಗ್ರೆಸ್ಸಿಗರ ಮನವಿಯನ್ನು ಕಡೆಗಣಿಸಿ ಹೈಕಮಾಂಡ್ ತೇಜಸ್ವಿನಿಯವರಿಗೆ ಟಿಕೆಟ್ ನೀಡಿದ್ದು, ತೇಜಸ್ವಿನಿಯವರ ಬಗ್ಗೆ ದೆಹಲಿ ನಾಯಕರು ಇರಿಸಿರುವ ವಿಶ್ವಾಸ ಮಾತ್ರ ಪ್ರಕಟವಾದಂತಿದೆ.
2004ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರದಾನಿ ದೇವೇಗೌಡರನ್ನು ಸೋಲಿಸಿ `ದಿ ಜಯೆಂಟ್ ಕಿಲ್ಲರ್‍ ಎಂಬ ಹೆಗ್ಗಳಿಕೆಗೆ ಪಾತ್ರರಾದ ತೇಜಸ್ವಿನಿಯವರ ಗೆಲುವಿನ ಹಿಂದೆ ಹಿರಿಯ ನಾಯಕರ ಶ್ರಮವಿತ್ತು ಎಂಬುದು ಅಲ್ಲಗೆಳೆಯಲು ಸಾಧ್ಯವಿಲ್ಲ.
ಭವಿಷ್ಯದ ಪ್ರಧಾನ ಮಂತ್ರಿ ಎಂದೇ ಬಿಂಬಿತವಾಗುತ್ತಿರುವ ಹಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‍ ವಿರುದ್ದ ಪ್ರಸ್ತುತ ಸಂದರ್ಭದಲ್ಲಿ ಜಯಗಳಿಸುವುದು ಸುಲಭದ ಹಾದಿಯಲ್ಲ ಎನ್ನುವುದು ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತನ ಅನಿಸಿಕೆ.
ತೇಜಸ್ವಿನಿ ನಾಮ ಪತ್ರ ಸಲ್ಲಿಸಿದ ನಂತರ ನಡೆದ ರೋಡ್ ಷೋದಲ್ಲಿ ಕಾಂಗ್ರೆಸ್ ಪಕ್ಷದ ದ್ವಿತೀಯ, ತೃತೀಯ ವೃತ್ತದ ನಾಯಕರುಗಳು ಮಾತ್ರಭಾಗವಹಿಸಿದ್ದರು. ಪ್ರಭಾವಿ ಮುಖಗಳಿಲ್ಲದೆ ಮತದಾರನ ಬಳಿ ಮತಯಾಚಿಸುವುದು ಹೇಗೆ ಎಂದು ಕೆಲವು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬಂತು.
ತೇಜಕ್ಕನ ಸಾಧನೆ ಏನು? : ಕಳೆದ ಐದು ವರ್ಷಗಳಲ್ಲಿ ತೇಜಕ್ಕ ಸಂಸದೆಯಾಗಿ ಮಾಡಿದ ಅಭಿವೃದ್ದಿ ಏನು? ಎಂಬ ಪ್ರಶ್ನೆ ಮತದಾರನನ್ನು ಕಾಡುವುದಿರಲಿ, ಕಾಂಗ್ರೆಸ್ ಪಕ್ಷದ ನಮ್ಮನ್ನೆ ಕಾಡುತ್ತಿದೆ ಎಂದು ಕೆಲವು ಕಾರ್ಯಕರ್ತರು ಹೇಳಿದ್ದು ತೇಜಸ್ವಿನಿಯವರ ಫಲಿತಾಂಶಕ್ಕೆ ಮುನ್ನುಡಿ ಬರೆದಂತಿತ್ತು.
ಸಂಸದರ ನಿಧಿಯನ್ನು ಯಾವ ಭಾಗಕ್ಕೆ, ಯಾವ ಅಭಿವೃದ್ದಿಗೆ ಎಷ್ಟು ಹಣ ಹಂಚಿಕೆಯಾಗಿದೆ, ಕೇಂದ್ರ ಸರ್ಕಾರದ ಮನವೊಲಿಸಿ ಕ್ಷೇತ್ರಕ್ಕೆಂದೆ ವಿಶೇಷವಾಗಿ ತಂದ ಯೋಜನೆಗಳು ಯಾವುವು ಎಂಬ ವಿಚಾರಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಮಾಹಿತಿ ಇಲ್ಲದಿರುವುದು ಸೋಜಿಗ!
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳಂತು ಇದ್ದೇ ಇದೆ. ಆದರೆ ಇಂದು ರಾಜಕೀಯ, ದೃವೀಕರಣದತ್ತ ಸಾಗುತ್ತಿದೆ ಎಂದು ಪ್ರಜ್ಞಾವಂತರು ವಿಶ್ಲೇಷಿಸಿದ್ದಾರೆ, ಈ ಸಂಕೀರ್ಣ ಸಂದರ್ಭರ್ದಲ್ಲಿ ಮತದಾರರು ತಮ್ಮ ಸಾಂಪ್ರದಾಯಿಕತೆಯನ್ನು ಬದಿಗಿಟ್ಟರೆ ಏನಾಗುತ್ತದೆ ಎಂಬುದು ಊಹೆಗೆ ನಿಲುಕದ ಪ್ರಶ್ನೆಯಲ್ಲ!

Rating
No votes yet

Comments