ಬೆಳಗಾವಿ ಮಹಾಪೌರರಾಗಿ ಕನ್ನಡಿಗರ ಆಯ್ಕೆ - ಕ.ರ.ವೇ. ಹೋರಾಟಕ್ಕ ಸಿಕ್ಕ ಫಲ

ಬೆಳಗಾವಿ ಮಹಾಪೌರರಾಗಿ ಕನ್ನಡಿಗರ ಆಯ್ಕೆ - ಕ.ರ.ವೇ. ಹೋರಾಟಕ್ಕ ಸಿಕ್ಕ ಫಲ

ನಮಸ್ಕಾರ ಸ್ನೇಹಿತರೆ,
ಚುನಾವಣೆಯ ಕಾವು ನಿಮಗೂ ತಟ್ಟುತ್ತಿರಬಹುದು. ಎಲ್ಲ ರಾಜಕೀಯ ಪಕ್ಷಗಳು ಇತರರನ್ನ ಜರಿಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆಯೇ ಹೊರೆತು ಕರ್ನಾಟಕದ ಏಳಿಗೆ, ಶಿಕ್ಷಣ, ಜನಸಾಮಾನ್ಯರ ಬವಣೆಗಳು ಎಲ್ಲವನ್ನು ತಮ್ಮ ಪ್ರಣಾಳಿಕೆಯಲ್ಲಿ ಭದ್ರವಾಗಿ ಇಟ್ಟುಕೊಂಡು ನಮ್ಮ ಕೆಲಸ ಇಲ್ಲಿ ಏನಿದ್ದರು ಅಧಿಕಾರ ಹಂಚಿಕೊಳ್ಳುವುದು. ನಿಮ್ಮ ಕಷ್ಟಗಳಿದ್ದರೆ ಅದು ನಿಮ್ಮ ಕರ್ಮ ಅನ್ನುವ ತರಹ ವರ್ತಿಸುತಿದ್ದಾರೆ. ಈ ಸಮಯದಲ್ಲಿ ನಿಮ್ಮ ಮನೆಯ ಮುಂದೆ ಕಾಣಸಿಗುವ ಇವರು ಮತ್ತೆ ಸಿಗುವುದು ೫ ವರ್ಷ ಕಳೆದ ಮೇಲೆ ಅಥವಾ ಮಧ್ಯಂತರ ಚುನಾವಣೆಗಳು ಎದುರಾದರೆ ಮಾತ್ರ. ಇಂತಹ ಸಮಯದಲ್ಲೇ ನಾವುಗಳು ಯೋಚಿಸಬೇಕು ರಾಜಕಾರಣಿಗಳಿಗೆ ಪಾಠ ಕಲಿಸಲು ಇದೆ ಸರಿಯಾದ ಸಮಯ. ದಯವಿಟ್ಟು ನಿಮ್ಮ ಮತಗಳನ್ನ ನಾಡ ಪರ ಕಾಳಜಿ ಇರುವಂತಹ ಜನಪ್ರತಿನಿಧಿಗಳಿಗೆ ಹಾಕಿ ಅನ್ನುವುದು ನನ್ನಯಾ ಸವಿನಯ ಮನವಿ.
ಇವತ್ತು ನಾವುಗಳು ಯಾವುದಾದರು ರಾಜಕಾರಣಿಗೆ ಮತ ಹಾಕಬೇಕು ಅಂದರೆ ಕೂಡ ಅರ್ಹರು ಅನ್ನಿಸುವವರು ಸಿಗೋದಿಲ್ಲ ಅನ್ನೋದು ಮತ್ತೊಂದು ವಿಚಾರ ಬಿಡಿ. ಇದರಲ್ಲಿ ಯಾವುದೇ ಪಕ್ಷಗಳು ಪ್ರತ್ಯೇಕವಾಗಿಲ್ಲ.

ಇನ್ನೊಂದು ಮುಖ್ಯ ವಿಚಾರ ನಿಮ್ಮ ಜೊತೆ ಹಂಚಿಕೊಳ್ಳಬೇಕಿತ್ತು:

ಕರ್ನಾಟಕ ರಕ್ಷಣಾ ವೇದಿಕೆಯ ಬ್ಲಾಗಿನಲ್ಲಿರುವ ವರದಿಯನ್ನ ಓದಿ ನೋಡಿ : http://karave.blogspot.com/2009/03/belagaavi-mayor-shramakke-phala.html

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎರಡನೆಯ ಬಾರಿಗೆ ಕನ್ನಡಿಗರು ಮೇಯರ್ ಮತ್ತು ಉಪ ಮೇಯರ್ ಗಳಾಗಿ ಆಯ್ಕೆಯಾಗಿದ್ದಾರೆ ಅನ್ನೋದು ಸಂತೋಷದ ವಿಚಾರ. ಇದನ್ನ ಐತಿಹಾಸಿಕ ಅಂದರು ತಪ್ಪಲ್ಲ. ಕನ್ನಡಿಗರು ಒಗ್ಗಟ್ಟು ತೋರಿಸಿದರೆ ಯಾವುದೇ ಪಕ್ಷ ಅಥವಾ ವ್ಯಕ್ತಿ ಏನು ಮಾಡಲು ಸಾಧ್ಯವಿಲ್ಲ ಅನ್ನೋದನ್ನ ಸಾಬೀತುಪಡಿಸಿದೆ.
ಈ ವಿಚಾರದಲ್ಲಿ ಬಹಳಷ್ಟು ಗೊಂದಲಗಳು ಕಂಡುಬಂದಿದ್ದವು. ಬಿ ಜೆ ಪಿ ಎಂಬ ರಾಜ್ಯ ಆಳುತ್ತಿರುವ ಪಕ್ಷ ತನ್ನ ಮತ ಬ್ಯಾಂಕಿಗಾಗಿ ಭಾಷಾ ಅಲ್ಪಸಂಖ್ಯಾತರನ್ನ ಓಲೈಸಲು ನಾಡ ಒಗ್ಗಟ್ಟಿಗೆ ಮಾರಕವಾಗುವ ಕೆಲಸಗಳನ್ನು ಮಾಡುತ್ತಲಿತ್ತು ಮತ್ತು ಮಾಡುತ್ತಿದೆ ಕೂಡ. ಅದು ಮುಖ್ಯಮಂತ್ರಿಗಳು ತಮಿಳು ಓಟಿಗಾಗಿ ತಮಿಳು ಭಾಷಣವನ್ನ ಕನ್ನಡದಲ್ಲಿ ಬರೆದುಕೊಂಡು ಓದುವುದು ಇರಬಹುದು, ಶಿವಮೊಗ್ಗದಲ್ಲಿ ತಮಿಳರ ಸಮಾವೇಶಕ್ಕೆ ಮಾನ್ಯ ಸಚಿವರೊಬ್ಬರು ೨೫ ಲಕ್ಷ ಕೊಡುವುದಾಗಿ ಹೇಳಿ ಸಮಾವೇಶಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನ ಮಾಡಿಕೊಡುವುದಾಗಿ ಹೇಳುತ್ತಾರೆ. ವೆಂಕಯ್ಯ ನಾಯ್ಡು ಅನ್ನೋ ರಾಜ್ಯದ ನಾಯಕರು (ಇವರು ಇಲ್ಲಿಂದ ಆರಿಸಿ ಹೋಗಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ಅವರನ್ನ ಹೀಗೆ ಕರೆದಿದ್ದೇನೆ, ಕನ್ನಡ, ಕರ್ಣಾಟಕದ ಪರವಾಗಿ ಸದನದಲ್ಲಿ ಒಮ್ಮೆಯೂ ಕೂಡ ಈ ವ್ಯಕ್ತಿ ತನ್ನ ಬಾಯಿ ಬಿಚ್ಚಿಲ್ಲ) ಬೆಂಗಳೂರಿನಲ್ಲಿ ತೆಲುಗರನ್ನ ಕಲೆ ಹಾಕಿಕೊಂಡು ತೆಲುಗಿನಲ್ಲಿ ಭಾಷಣ ಮಾಡುತ್ತಾರೆ. ಹಾಗೆಯೇ ಕನ್ನಡದಲ್ಲಿ ಮಾತನಾಡಿ ಅಂತ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದರೆ ಪೋಲೀಸರನ್ನು ಬಿಟ್ಟು ಹೊಡೆಸುವಷ್ಟು ಕೀಳು ಮಟ್ಟಕ್ಕೆ ಹೋಗುತ್ತಾರೆ.

ಕರ್ಣಾಟಕದಲ್ಲಿ ಇರುವ ಇತರೆ ಭಾಷ ಅಲ್ಪ ಸಂಖ್ಯಾತರನ್ನ ಕನ್ನಡಿಗರು ಬೇರೆ ಎಂದು ಯಾವತ್ತು ಕಂಡಿಲ್ಲ. ಎಷ್ಟೋ ತೆಲುಗು ಮನೆತನಗಳು, ತಮಿಳರು ನಮ್ಮ ಕನ್ನಡ, ಕರ್ನಾಟಕಕ್ಕೇ ಹೋರಾಡಿದ್ದಾರೆ ಅಂತಹುದರಲ್ಲಿ ಈ ಬಿ ಜೆ ಪಿ ಇಂತ ಒಡೆದು ಆಳುವ ನೀತಿಯನ್ನ ಅನುಸರಿಸುತ್ತಿದೆ.
ಇಂತಹುದೇ ಸ್ಥಿತಿಯಲ್ಲಿ ಬಂದಿದ್ದು ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆ. ಸರಕಾರದಲ್ಲಿರುವ ಬಿ ಜೆ ಪಿ ಇಂತಹ ನಾಡ ವಿರೋಧಿ ಕೆಲಸ ಮಾಡುವಾಗ ಅಲ್ಲಿಯ ಮರಾಠಿ ಮತದಾರರನ್ನ ಓಲೈಸಲು ಎಲ್ಲಿ ಇದು ಮೇಯರ್ ಮತ್ತು ಉಪ ಮೆಯರ್ಗಳನ್ನ ಮರಾಠಿಗರಿಗೆ ಬಿಟ್ಟು ಕೊಡುತ್ತಾರೋ ಅನ್ನೋ ಸಂಶಯ ಘಾಡವಾಗಿ ಹರಡಿದ್ದಾಗೆಲೇ ಕರ್ನಾಟಕ ರಕ್ಷಣಾ ವೇದಿಕೆ ರಂಗ ಪ್ರವೇಶ ಮಾಡಿದ್ದು. ಬೆಳಗಾವಿಯ ಪಾಲಿಕೆ ಮೇಲೆ ಎಂ ಈ ಎಸ್ ಎನ್ನೋ ಮರಾಠಿ ಪುಂಡರ ಪಕ್ಷ ಮರಾಠಿ ಧ್ವಜ ಹಾರಿಸಬೇಕು ಅಂತ ಕ್ಯಾತೆ ತೆಗೆದಾಗೆ ಇದೆ ಬಿ ಜೆ ಪಿ ಯ ಪಕ್ಷದ ಸಂಜಯ ಪಾಟಿಲ್ ಮತ್ತು ಸಂಸದ ಸುರೇಶ್ ಅಂಗಡಿ ಪ್ರೋತ್ಸ್ಹಾಹ ನೀಡಿದ್ದರು. ಕರವೇ ಅಧ್ಯಕ್ಷರಾದ ಶ್ರೀ ನಾರಾಯಣ ಗೌಡರು ರಾಜ್ಯಾದ್ಯಂತ ಬಿ ಜೆ ಪಿ ಯ ಕನ್ನಡ ವಿರೋಧಿ ನೀತಿಯ ಬಗ್ಗೆ ಹೋರಾಟ ಶುರು ಮಾಡಿದಾಗ ನಾಡ ಪರ ಇರುವ ಎಲ್ಲಾ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿದಾಗ ಈ ವಿಷಯ ಬಹಳ ಕಾವು ಪಡೆದಿತ್ತು. ಇದರಿಂದ ಹೆದರಿದ ಸರಕಾರ ತನ್ನ ಮಾನ ಉಳಿಸಿಕೊಳ್ಳಲು ಸಚಿವರನ್ನ ಕಳುಹಿಸಿ ಕನ್ನಡಿಗರು ಆಯ್ಕೆ ಆಗುವಂತೆ ನೋಡಿಕೊಳ್ಳಬೇಕು ಅಂತ ಹೇಳಿ ಕಳಿಸಿದರು.

ಇದು ನಿಜಕ್ಕೂ ಕರವೇಯ ಇನ್ನೊಂದು ಹೋರಾಟದ ಸಫಲತೆ. ಕನ್ನಡ, ಕರನಾಟಕದ ಬಗ್ಗೆ, ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಬಂದಾಗ ಕರವೇ ಕನ್ನಡಿಗರ ಪರವಾಗಿ ಹೋರಾಟಕ್ಕೆ ನಿಂತಿದೆ.
ರಾಷ್ಟ್ರೀಯ ಪಕ್ಷಗಳು ಮತ್ತು ಹುಸಿ ಪ್ರಾದೇಶಿಕ ಪಕ್ಷಗಳಿಂದ ನಮ್ಮ ರಾಜ್ಯದ ಉಧ್ಧಾರ ಸಾಧ್ಯವೇ? ನಮ್ಮ ಕರ್ನಾಟಕಕ್ಕೊಂದು ತನ್ನ ಹಿತ ಕಾಪಾಡಬಲ್ಲ ಪ್ರಾದೇಶಿಕ ಪಕ್ಷ ಬೇಕು ಅಂತ ನಿಮಗೆ ಅನ್ನಿಸೋಲ್ವಾ?

Rating
No votes yet