ವಾರಾಂತ್ಯದಲ್ಲಿ ಕೇಳಿದ ಸಂಗೀತ ಕಚೇರಿಗಳು

ವಾರಾಂತ್ಯದಲ್ಲಿ ಕೇಳಿದ ಸಂಗೀತ ಕಚೇರಿಗಳು

ರಾಮ ನವಮಿ ಎಂದಾಗ ನೆನಪಾಗುವುದು ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯುವ ಸಂಗೀತ ಕಚೇರಿಗಳು. ಈ ಬಾರಿ ಬೆಂಗಳೂರಿನಲ್ಲಿ ಇದ್ದುದ್ದರಿಂದ ವಾರಾಂತ್ಯದಲ್ಲಿ ಕಚೇರಿಗಳಿಗೆ ಭೇಟಿ ನಿಡುವ ಮನಸ್ಸಾಯಿತು. ಅಂತೆಯೇ ಏಪ್ರಿಲ್ ೪,೫ ರಂದು ಸಂಗೀತ ಕಚೇರಿ ಆಸ್ವಾದಿಸಿದೆ. ಅದರ ಸಣ್ಣ ವರದಿ ಇಲ್ಲಿದೆ

ಏಪ್ರಿಲ್ ೪, ೨೦೦೯

ಕೋಟೆ ಮೈದಾನದಲ್ಲಿ ಬಾಂಬೆ ಜಯಶ್ರೀ ಅವರ ಗಾಯನ ಕೇಳಲು ಹೊರಟೆ. ಆದರೆ ಆದದ್ದೇ ಬೇರೆ. ಹೊರಡುವುದೇ ತಡವಾಗಿತ್ತು. ಅಲ್ಲಿಗೆ ತಲುಪಿದಾಗ ಸಮಯ ೬:೪೫ ಆಗಿತ್ತು. ಟಿಕೆಟ್ ಕೊಳ್ಳಲು ಬಹಳ ಉದ್ದದ ಸರತಿಸಾಲು ಇತ್ತು. ಈ ಸರತಿ ಅಂದಿನ ಕಚೇರಿಗೋ ಅಥವ ಮುಂದಿನ ದಿನದ ಯೇಸುದಾಸ್ ಕಚೇರಿಗೋ ತಿಳಿಯಲಿಲ್ಲ. ಸರಿ ನಾನು ಟಿಕೆಟ್ ಕೊಳ್ಳುವಷ್ಟರಲ್ಲಿ ಅರ್ಧ ಕಚೇರಿ ಮುಗಿಯಬಹುದೆಂದು ಎಣಿಸಿ ವಾಪಾಸ್ ಹೋಗಲು ಚಿಂತನೆ ನಡೆಸಿದೆ. ಪಕ್ಕದಲ್ಲಿ ಗಾಯನ ಸಮಾಜ ಕಂಡಿತು. ಮೊದಲ ಬಾರಿ ನೋಡಿದರಿಂದ ಅಲ್ಲಿ ಒಮ್ಮೆ ಭೇಟಿ ಕೊಡಲು ಮನಸ್ಸಾಯಿತು. ಏನಾಶ್ಚರ್ಯ ಅಲ್ಲಿ ಸಹ ಕಚೇರಿ ನಡೆಯುತ್ತಿತ್ತು. ಅದು ಪ್ರಖ್ಯಾತ ಕೊಳಲು ವಿದ್ವಾಂಸರಾದ ಡಾ. ಎನ್. ರಮಣಿಯವರದು. ನಿರಾಸೆಯಾಗಿದ್ದ ನನಗೆ ಬಹಳ ಸಂತೋಷವಾಯಿತು. ಪೂರ್ತಿ ಕಚೇರಿ ಕೇಳಿಯೇ ಹಿಂತಿರುಗುವ ನಿರ್ಧಾರ ಕೈಗೊಂಡೆ.

ಕೊಳಲು ವಾದನ: ವಿದ್ವಾನ್ ಡಾ.ಎನ್.ರಮಣಿ
ವಯೊಲಿನ್ ಸಹಕಾರ: ವಿದ್ವಾನ್ ಎಚ್.ಕೆ. ವೆಂಕಟ್ರಾಮ್
ಮೃದಂಗ ಸಹಕಾರ: ವಿದ್ವಾನ್ ವೆಲ್ಲೂರ್ ರಾಮಭದ್ರನ್
ಘಟ ಸಹಕಾರ: ವಿದ್ವಾನ್ ದಯಾನಂದ ಮೋಹಿತೆ

ನಾನು ಹೋದಾಗ ಕಚೇರಿ ಆಗಲೇ ಪ್ರಾರಂಭವಾಗಿತ್ತು. ಪಂತುವರಾಳಿ ರಾಗದ ತ್ಯಾಗರಾಜರ ’ರಘುವರ’ ಕೀರ್ತನೆಯ ’ಮನಸುನ’ ಎಂಬ ಸಾಲಿನಲ್ಲಿ ನೆರವಲ್ ನುಡಿಸುತ್ತಿದ್ದರು. ವಯಸ್ಸಾದರೂ ಈಗಲೂ ಬಹಳ ಚೆನ್ನಾಗಿ ನುಡಿಸುತ್ತಾರೆ. ಕೊಳಲಿನಲ್ಲಿ ತಿರುಗಿಸಿ ತಿರುಗಿಸಿ ನುಡಿಸುತ್ತಿದ್ದುದ್ದು ಅದ್ಭುತವಾಗಿತ್ತು. ಮುಂದಿನ ಹಾಡು ಅನಂದ ಭೈರವಿ ರಾಗದ್ದು. ಸಣ್ಣ ಆಲಾಪನೆ ನುಡಿಸಿದರು. ಬಹಳ ಸುಮಧುರವಾಗಿತ್ತು. ಆನಂದ-ಭೈರವಿ, ಭೈರವಿ, ಮೋಹನ ರಾಗಗಳನ್ನು ಕೊಳಲಿನಲ್ಲಿ ಕೇಳುವ ಅನುಭವವೇ ಬೇರೆ. ಇದರೊಂದಿಗೆ ವಯೊಲಿನ್ ಜೊತೆ ಕೂಡ ಅದ್ಭುತವಾಗಿತ್ತು. ಆದಿತಾಳದ ಹಾಡು ಯಾವುದೆಂದು ನನಗೆ ಗುರುತಿಸಲಾಗಲಿಲ್ಲ (ನನಗೆ ಪರಿಚಯವಿರಲಿಲ್ಲ). ನಂತರದ ಕೀರ್ತನೆ ಮೋಹನ ರಾಗದ ತ್ಯಾಗರಾಜರು ರಚಿಸಿದ ’ಭವನುತ’. ಆಲಾಪನೆ ಚೆನ್ನಾಗಿದ್ದರೂ ತಾರಾಸ್ಥಾಯಿಗೆ ಹೋದಾಗ ಕೊಳಲಿನ ನುಡಿ ತಪ್ಪುತ್ತಿತ್ತು. ಬಹುಶಃ ವಯಸ್ಸಿನ ಪ್ರಭಾವ ಇರಬಹುದು. ಇದೊಂದು ಹೊರತು ಪಡಿಸಿ, ಹಾಡಿನ ಎಲ್ಲಾ ಭಾಗಗಳು ಸುಂದರವಾಗಿತ್ತು. ನವರಸ-ಕನ್ನಡ ರಾಗದಲ್ಲಿ ತ್ಯಾಗರಾಜರ ರೂಪಕತಾಳದ ರಚನೆ ’ನಿನುವಿನ ನಾಮ’ ನುಡಿಸಿದರು. ಈ ಹಾಡಿನ ’ಕನುಲಕು ನೀ ಸೊಗಸೆಂತೋ’ ಸಾಲನ್ನು ವಿವಿಧ ಶೈಲಿಯಲ್ಲಿ ನುಡಿಸಬಹುದು ಎಂದೆಣಿಸಿದ್ದೆ. ಆದರೆ ಅವರಿಗೆ ವಯಸ್ಸಿನ ಮಿತಿಯಿರಬಹುದೇನೊ, ಮೂರು ಬಾರಿ ಮಾತ್ರ ನುಡಿಸಿದರು.

ನೆನಪು:
’ನಿನುವಿನ’ ಹಾಡನ್ನು ಅದ್ಭುತವಾಗಿ ನುಡಿಸಿರುವುದನ್ನು ನಾನು ಕೇಳಿದ್ದು ದಿವಂಗತ ಕುನ್ನಕುಡಿ ವೈದ್ಯನಾಥನ್ ಅವರ ವಯೊಲಿನ್ ವಾದನದಲ್ಲಿ. ಅದೇನು ವೈವಿಧ್ಯತೆ ಅವರ ವಾದನದಲ್ಲಿ. ವಯೊಲಿನ್ ಅನ್ನು ನೀರು ಕುಡಿದ ಹಾಗೆ ನುಡಿಸುತ್ತಿದ್ದರು.  ’ಕನುಲಕು ನೀ ಸೊಗಸೆಂತೋ’ ಈ ಸಾಲನ್ನು ಸುಮಾರು ೧೦ ನಿಮಿಷ ನುಡಿಸಿದ್ದಾರೆನೋ ನೆನಪಿಗೆ ಬರುತ್ತಿಲ್ಲ. ಕೈಯಲ್ಲಿ ಕೂಡ ನುಡಿಸಿದ್ದರು. ಅದರ ಜೊತೆಗೆ ಹಕ್ಕಿಯ ಶಬ್ಧ ಕೂಡ. ಗಾಯನಕ್ಕೆ ಬಂದಾಗ ನೆನಪಾದವರು ಮಣಕ್ಕಲ್ ರಂಗರಾಜನ್ ಅವರು. ಅಬ್ಬಬ್ಬ ಅದೆನು ಹಾಡುತ್ತಾರೆ. ’ಕನುಲಕು ನೀ ಸೊಗಸೆಂತೋ’ ಈ ಸಾಲನ್ನು ಇಂಸ್ಟ್ರುಮೆಂಟ್ ನಲ್ಲಿ ವಿವಿಧ ಶೈಲಿಯಲ್ಲಿ ನುಡಿಸಬಹುದು. ವಿವಿಧ ಶೈಲಿಯಲ್ಲಿ ಹಾಡುವುದು ಬಹಳ ಕಷ್ಟ. ಅದನ್ನು ಹಾಡಿ ತೋರಿಸಿದವರು ಮಣಕ್ಕಲ್ ರಂಗರಾಜನ್ನರು. ಊರಿಗೆ ಹೋದಾಗ ಈಗಲೂ ಅವರ ಕಂಠದಿಂದ ಈ ಹಾಡನ್ನು ಕೇಳಲು ಮರೆಯುವುದಿಲ್ಲ. ಮಧುರೈ ಸೋಮಸುಂದರ್ ಕೂಡ ಹಾಡಿರಬಹುದೇನೊ (ನಾನು ಇದುವರೆಗೆ ಕೇಳಿಲ್ಲ)

ಮತ್ತೆ ಸಂಗೀತ ಕಚೇರಿಗೆ ಬರುವ. ದೀರ್ಘಕಾಲದ ಆಲಾಪನೆಗೆ ಅವರು ಆರಿಸಿಕೊಂಡಿದ್ದು ಖರಹರಪ್ರಿಯ ರಾಗ. ಆಲಾಪನೆ ಸೊಗಸಾಗಿತ್ತು (ವಯೊಲಿನ್ ಕೂಡ). ಈ ರಾಗಕ್ಕೆ ಅವರು ಆರಿಸಿಕೊಂಡ ಕೀರ್ತನೆ ತ್ಯಾಗರಾಜರ ’ಚಕ್ಕನಿ ರಾಜ’. ಬಹಳಷ್ಟು ಸಂಗೀತಗಾರರು ಇದೇ ಹಾಡನ್ನು ಆರಿಸಿಕೊಳ್ಳುತ್ತಾರೆ (ಪಾಲ್ಘಾಟ್ ಕೆ.ವಿ.ನಾರಾಯಣಸ್ವಾಮಿಯವರು ಕ್ಲಿಷ್ಟವಾದ ಮಿಶ್ರಛಾಪುತಾಳದ ’ಪಕ್ಕದ ನೀಲಬಡಿ’ ಹಾಡನ್ನು ಆರಿಸಿಕೊಂಡಿದ್ದು ನೆನಪು). ನೆರವಲ್ ಗೆ ಇವರು ಆರಿಸಿಕೊಂಡಿದ್ದು ಕೀರ್ತನೆಯ ’ಕಂಟಿಕಿ’ ಸಾಲು. ಕೀರ್ತನೆ ಸಮಾಪ್ತಿಯಾದ ನಂತರ ತನಿ ಬಿಟ್ಟರು.

ಹಿರಿಯರಾದ ಮತ್ತು ಅನುಭವಿ ಮೃದಂಗ ವಾದಕರಾದ ವೆಲ್ಲೂರ್ ರಾಮಭದ್ರನ್ ಅವರದ್ದು ಬಹಳ ಸಿಂಪಲ್ ಹಾಗೂ ಕಾಲ್ಕುಲೇಟೆಡ್ ಬೀಟ್ಸ್ ಗಳು. ಯಾವುದೇ ಅಬ್ಬರವಿಲ್ಲದ ಮೃದಂಗ ವಾದನ. ಈ ಶೈಲಿ ತನಿ ಆವರ್ತನೆಯಲ್ಲಿ ಕಂಡು ಬಂತು. ಕೆಲವರಿಗೆ ಇದು ಸಪ್ಪೆಯಾಗಿ ಕಾಣಬಹುದು ಆದರೆ ಬಹಳ ಪರ್ಫೆಕ್ಟ್ ಬೀಟ್ಸ್ ಇವರದು. ಸ್ವರಗಳ ಮುನ್ಸೂಚನೆಯನ್ನು ಅದ್ಭುತವಾಗಿ ಕಂಡುಹಿಡಿಯುತ್ತಿದ್ದರು (ಅನುಭವದ ಫಲ). ಇವರೊಂದಿಗೆ ಘಟ ವಾದಕರು ಅದ್ಭುತ ಜೊತೆ ನೀಡಿದರು. ಚಿರಪರಿಚಿತರಾದ ಎಚ್.ಕೆ.ವೆಂಕಟ್ರಾಮ್ ಅವರ ವಯೊಲಿನ್ ವಾದನ ಅಮೋಘವಾಗಿತ್ತು.

ತನಿ ಆವರ್ತನೆ ಬಳಿಕ ರಮಣಿಯವರು ಆರಿಸಿಕೊಂಡಿದ್ದು ಪುರಂದರದಾಸರ ಕಾಪಿ ರಾಗದ ’ಜಗದೋದ್ಧಾರನ’ ಹಾಗೂ ಸಿಂಧುಭೈರವಿ ರಾಗದ ’ವೆಂಕಟಾಚಲ ನಿಲಯಂ’ ಕೀರ್ತನೆಗಳು. ಇವುಗಳನ್ನು ಅವರು ಬಾನ್ಸುರಿಯಲ್ಲಿ(ಉದ್ದದ ಕೊಳಲು) ನುಡಿಸಿದರು. ಬಹುಶ: ಎರಡೂ ರಾಗಗಳು ಹಿಂದುಸ್ತಾನಿ ಸಂಗೀತದಿಂದ ಬಂದಿದ್ದರಿಂದ ಬಾನ್ಸುರಿ ಆಯ್ಕೆ ಮಾಡಿಕೊಂಡಿರಬೇಕು. ಪುರಂದರದಾಸರ ’ಭಾಗ್ಯದ ಲಕ್ಷ್ಮಿ ಬಾರಮ್ಮ’ ಕೀರ್ತನೆಯನ್ನು ಮಧ್ಯಮಾವತಿ ರಾಗದಲ್ಲಿ ನುಡಿಸಿದರು. ಸೌರಷ್ತ್ರ ರಾಗದ ತ್ಯಾಗರಾಜರ ’ಪವಮಾನ’ ಕೀರ್ತನೆಯೊಂದಿಗೆ ಕಚೇರಿ ಮುಕ್ತಾಯವಾಯಿತು. ಕೊನೆ ಎರಡು ಹಾಡುಗಳನ್ನು ಅವರು ಕೊಳಲಿನಲ್ಲಿ ನುಡಿಸಿದರು.

ಕಚೇರಿಯಿಂದ ಹೊರ ಬರುವಾಗ ಕೋಟೆ ಮೈದಾನದಲ್ಲಿ ಜಯಶ್ರೀ ಅವರು ರಂಜನಿ ರಾಗದಲ್ಲಿ ರಾಗ-ತಾನ-ಪಲ್ಲವಿ ಹಾಡುತ್ತಿದ್ದರು.

-------------------------------------------------------------------------------------------------------------------------------------------------------
ಏಪ್ರಿಲ್ ೫, ೨೦೦೯

ಇಂದು ಸಹ ಅನಿವಾರ್ಯ ಕಾರಣಗಳಿಂದಾಗಿ ತಡವಾಗಿ ಹೋದೆನು. ಕೋಟೆ ಮೈದಾನದಲ್ಲಿ ಪ್ರಸಿದ್ಧ ಗಾಯಕರಾದ ಡಾ.ಯೇಸುದಾಸ್ ಅವರ ಕಚೇರಿ. ಆದರೆ ನಾನು ಆರಿಸಿಕೊಂಡಿದ್ದು ಗಾಯನ ಸಮಾಜದಲ್ಲಿ ಏರ್ಪಾಡಾಗಿದ್ದ ತ್ರಿಶೂರ್ ರಾಮಚಂದ್ರನ್ ಅವರ ಕಚೇರಿಯನ್ನು. ಚಿತ್ರಗೀತೆಗಳಿಂದ ಯೇಸುದಾಸ್ ಅವರು ಪ್ರಸಿದ್ಧಿ ಪಡೆದಿರಬಹುದು ಆದರೆ ಶಾಸ್ತ್ರೀಯ ಗಾಯನದಲ್ಲಿ ರಾಮಚಂದ್ರನ್ ಅವರದ್ದು ಎತ್ತಿದ ಕೈ ಎಂಬುದು ನನ್ನ ಅನುಭವ.

ಗಾಯನ: ವಿದ್ವಾನ್ ತ್ರಿಶೂರ್ ರಾಮಚಂದ್ರನ್
ವಯೊಲಿನ್ ಸಹಕಾರ: ವಿದ್ವಾನ್ ಸಿ.ಎನ್.ಚಂದ್ರಶೇಖರನ್
ಮೃದಂಗ ಸಹಕಾರ: ವಿದ್ವಾನ್ ವೆಲ್ಲೂರ್ ರಾಮಭದ್ರನ್
ಕಂಜಿರ ಸಹಕಾರ: ವಿದ್ವಾನ್ ಬಿ.ಚಂದ್ರಮೌಳಿ

ತಡವಾಗಿ ಹೋಗಿದ್ದರಿಂದ ಆಗಲೇ ಮೂರು ಪದ್ಯಗಳನ್ನು ಮುಗಿದಿರಬೇಕು. ನಾನು ಹೋಗುವಾಗ ವಯೊಲಿನ್ ಸಹಕಾರದವರು ಪೂರ್ವಿಕಲ್ಯಾಣಿ ರಾಗಾಲಾಪನೆ ನುಡಿಸುತ್ತಿದ್ದರು. ಈ ರಾಗದಲ್ಲಿ ಗಾಯಕರು ಆಯ್ದುಕೊಂಡ ಹಾಡು ರೂಪಕತಾಳದ ತ್ಯಾಗರಾಜರ ’ಜ್ಞಾನಮೊಸಗರಾದ’. ’ಪರಮಾತ್ಮುಡು ಜೀವಾತ್ಮುಡು’ ಸಾಲುಗಳಲ್ಲಿ ಸಣ್ಣಮಟ್ಟಿನ ನೆರವಲ್ ಹಾಗೂ ಸ್ವರ ಪ್ರಸ್ತಾರಗಳು. ನಂತರದ ಹಾಡು ಕಚೇರಿಯ ಪ್ರಮುಖ ಆಕರ್ಷಣೆಯಲ್ಲಿ ಒಂದು. ದರ್ಬಾರ್ ರಾಗದ ಸೊಗಸಾದ ಆಲಾಪನೆ. ಇದಕ್ಕೆ ರಸಿಕರ ದೀರ್ಘವಾದ ಚಪ್ಪಾಳೆ ಸಾಕ್ಷಿಯಾಯಿತು. ವಯೊಲಿನ್ ಆಲಾಪನೆ ಕೂಡ ಅದ್ಭುತವಾಗಿತ್ತು. ಈ ರಾಗಕ್ಕೆ ಅವರು ಆರಿಸಿಕೊಂಡಿದ್ದು ತ್ಯಾಗರಾಜರ ’ಮುಂದುವೇನಕ’ ಕೀರ್ತನೆ. ವಿಶೇಷವಾಗಿ ’ರಘುನಂದನ ವೇಗಮೆ ರಾ...’ ಎಂದು ಹಾಡುವಾಗ ಮತ್ತೆ ಮತ್ತೆ ಕೇಳಬೇಕೆನಿಸಿತು. ಪದಗಳಲ್ಲಿ ವರ್ಣಿಸಲಾಗದು, ಕೇಳಿಯೇ ಆನಂದಿಸಬೇಕು. ಮುಂದಿನ ಹಾಡು ವಸಂತ ರಾಗದಲ್ಲಿ ದೀಕ್ಷಿತರ ಕೀರ್ತನೆ ’ರಾಮಚಂದ್ರಮ್ ಭಾವಯಾಮಿ’. ರುದ್ರಪ್ರಿಯ (ಪೂರ್ಣಷಡ್ಜ) ರಾಗದ ತ್ಯಾಗರಾಜರ ಕೀರ್ತನೆ ’ಲಾವಣ್ಯ’ ಕೇಳಿಸಿದರು.

ದೀರ್ಘವಾದ ಆಲಾಪನೆಗೆ ಅವರು ಎತ್ತಿಕೊಂಡ ರಾಗ ’ಅಭೇರಿ’. ಅಮೋಘವಾದ ಆಲಾಪನೆ. ಈ ರಾಗಕ್ಕೆ ಅವರು ಆರಿಸಿಕೊಂಡಿದ್ದು ಮೈಸೂರು ವಾಸುದೇವಾಚಾರ್ಯರ ಕೀರ್ತನೆ ’ಭಜರೆ ರೆ ಮಾನಸ’. ಈ ಹಾಡಿಗೆ ಮತ್ತಷ್ಟು ಸೊಬಗನ್ನು ನೀಡಿದ್ದು ವೆಲ್ಲೂರ್ ರಾಮಭದ್ರನ್ ರವರ ರಿದ್ಮಿಕ್ ಬೀಟ್ಸ್. ರಾಮಚಂದ್ರನ್ ಅವರ ಮುಖದಲ್ಲಿ ಸಂತಸ ಇದಕ್ಕೆ ಸಾಕ್ಷಿಯಾಯಿತು. ’ಭಜರೆ ಮಾನಸ’ ಎಂಬಲ್ಲಿ ನೆರವಲ್ ಹಾಡಿದರು. ನಂತರ ದೀರ್ಘವಾದ ಸ್ವರ-ಪ್ರಸ್ತಾರ (ಸ್ವರಗಳ ಮಾಧುರ್ಯವನ್ನು ಅಥವಾ ಭೇದಗಳನ್ನು ವಿಶ್ಲೇಷಿಸಲು ನನಗೆ ಬಾರದು). ಈ ಹಾಡಿಗೆ ತನಿ ಬಿಟ್ಟರು. ನಿನ್ನೆ ಸಪ್ಪೆಯಾಗಿ ಕಂಡ ವೆಲ್ಲೂರ್ ರಾಮಭದ್ರನ್ ಮೃದಂಗ ಇಂದು ಬಹಳ ಮುದ ನೀಡಿತು. ಅವರಿಗೆ ಸಹಕರಿಸಿದ ಚಂದ್ರಮೌಳಿಯವರು ಉತ್ತಮ ಜೊತೆ ನೀಡಿದರು. ಸ್ವತಃ ರಾಮಭದ್ರನ್ ಅವರೇ ಕಂಜಿರ ವಾದಕರನ್ನು ಅಭಿನಂದಿಸಿದರು. ನಂತರದ ಕೀರ್ತನೆ ದೀಕ್ಷಿತರ ಮಣಿರಂಗು ರಾಗದ ’ಮಾಮವ ಪಟ್ಟಾಭಿರಾಮ’, ಈ ಕಚೇರಿಯ ಮತ್ತೊಂದು ಪ್ರಮುಖ ಆಕರ್ಷಣೆ. ರಾಮನ ಪಟ್ಟಾಭಿಷೇಕವಾದಂತೆ ಭಾಸವಾಗುತ್ತಿತ್ತು. ಅಂತಹ ಸುಮಧುರವಾದ ಗಾಯನ. ಕುಂತಲವರಾಳಿ ರಾಗದಲ್ಲಿ ’ನಿನ್ನು ಪೊಗಡ ತರಮಾ’ ಹಾಡಿದರು. ಇದರ ರಚನಕಾರರು ಯಾರೆಂದು ತಿಳಿಯಲಿಲ್ಲ. ಒಂದು ಶ್ಲೋಕದ ಬಳಿಕ ಪುರಂದರದಾಸರ ’ಕರುಣಿಸೋ ರಂಗ’ ಗಾಯನ. ಬಹುಶಃ ಇದು ಮಲಹರಿ ರಾಗದಲ್ಲಿದೆ. ಪಂಡಿತ್ ಭೀಮ್ಸೇನ್ ಜೋಷಿಯವರು ಕೂಡ ಇದೇ ರಾಗದಲ್ಲಿ ಇದನ್ನು ಹಾಡಿದ್ದಾರೆ. ಬಲ್ಲವರು ಈ ಗೀತೆಯ ನಿಖರವಾದ ರಾಗ ಹೇಳಿದರೆ ಸಹಾಯವಾಗುತ್ತದೆ. ನಂತರದ ಕೀರ್ತನೆ ಜೋನ್ಪುರಿ ರಾಗದ ’ಸಾಪಜೆ ಕೌಸಲ್ಯಾ’. ಇದರ ರಚನಕಾರರು ಕೂಡ ನನಗೆ ತಿಳಿದಿಲ್ಲ. ತ್ಯಾಗರಾಜರ ’ಪವಮಾನ’ ಕೀರ್ತನೆಯೊಂದಿಗೆ ಕಚೇರಿ ಮುಕ್ತಾಯವಾಯಿತು. ಈ ಹಾಡಿನ ’ಮಂಗಳಂ..’ ಪದ ಸುರುಟಿ ರಾಗದಲ್ಲಿ ಹಾಡಿದರು.

ರಾಮಚಂದ್ರನ್ ಕಚೇರಿ ಆರಿಸಿಕೊಂಡಿದ್ದಕ್ಕೆ ವಿಶೇಷ ಕಾರಣಗಳಿದ್ದವು. ಇದಕ್ಕೆ ಮೈಸೂರಿನಲ್ಲಿ ಅವರು ಹಾಡಿದ ನಠಭೈರವಿ ರಾಗ-ತಾನ-ಪಲ್ಲವಿ ಕೂಡ ಒಂದು ಕಾರಣ. ’ಈಶ್ವರೀ ಜಗದೀಶ್ವರಿ ನಠಭೈರವಿ..’ ಈ ಪಲ್ಲವಿಗೆ ಹಲವು ರಾಗಗಳನ್ನು ಜೋಡಿಸಿ ಹಾಡಿದ್ದರು. ಭೈರವಿ, ಆನಂದಭೈರವಿ, ಸಾಲಗಭೈರವಿ, ಸಿಂಧುಭೈರವಿ. ಆ ರಾಗಗಳಲ್ಲಿ ಹಾಡುವಾಗ ಪಲ್ಲವಿಯ ’ನಠಭೈರವಿ’ ಬದಲು ಆಯಾ ರಾಗಗಳ ಹೆಸರಿನಿಂದ ಬದಲಾಗುತ್ತಿತ್ತು. ಇನ್ನು ಮರೆತಿಲ್ಲ ಈ ರಾಗ-ತಾನ-ಪಲ್ಲವಿಯನ್ನು.

Rating
No votes yet

Comments