"ಹಾಳು ಜಾತಿಗಳು - ಪರಿಹಾರ ಏನು?" ಎಂಬ ಪ್ರಶ್ನೆ ಮತ್ತು ನನ್ನ ಕನಸು.

"ಹಾಳು ಜಾತಿಗಳು - ಪರಿಹಾರ ಏನು?" ಎಂಬ ಪ್ರಶ್ನೆ ಮತ್ತು ನನ್ನ ಕನಸು.

ಸಪ್ತಗಿರಿವಾಸಿಯವರ "ಮತಾಂತರ ಹೇಗೆ? ಏನು? ಏಕೆ? ಮತ್ತು ಅದಕ್ಕೆ ಪರಿಹಾರ" ಎಂಬ ಬ್ಲಾಗ್ನಲ್ಲಿ ಪ್ರತಿಕ್ರಿಯಿಸಬೇಕಿನಿಸಿದಾಗ, 'ಪರಿಹಾರ' ಎಂಬ ವಿಷಯವೇ ಒಂದು ಚರ್ಚೆಯ ವಿಷಯವಾಗಬಹುದು ಎನಿಸಿ ಈ ಬ್ಲಾಗ್ ಬರೆಯುತ್ತಿದ್ದೇನೆ.
ವಿಶ್ವಮಾನವ ಕುವೆಂಪುರವರ ಹೆಸರಿನಲ್ಲಿ ವಿದ್ಯಾರ್ಥಿ ಸಂಘವನ್ನು ಮೈಸೂರಿನಲ್ಲಿ ನಡೆಸುತ್ತಿದ್ದಾಗ ಒಳ ರಾಜಕೀಯಗಳಿಂದಾಗಿ ಕೆಲವರು ಕುವೆಂಪುರವರನ್ನೇ 'ತಮ್ಮ' ಜಾತಿಯವರೆಂದು ಬಿಂಬಿಸಿ ಸಂಘದ ಮೂಲ ಉದ್ದೇಶವನ್ನೇ ಹದಗೆಡಿಸಿದ್ದರು. ಅಲ್ಲಿ ಅನುಭವಿಸಿದ ನೋವನ್ನು ನೆನೆದರೆ ನಾನಿಲ್ಲಿ ಬರೆಯಹೊರಟಿರುವ ಬದಲಾವಣೆಗಳು ಎಂದಿಗೂ ಸಾಧ್ಯವಿಲ್ಲವೇನೊ ಅನ್ನಿಸುತ್ತೆ. ಆದರೂ ಒಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕಿನ್ನುವ ಇಚ್ಚೆಯಲ್ಲಿ ಬರೆಯುತ್ತಿದ್ದೇನೆ.

1.'ಜಾತಿ' ಎಂಬ ಪದದ ಬಳಕೆಯನ್ನು ಸಂಪೂರ್ಣವಾಗಿ ನಿಷೇದಿಸಬೇಕು. ಯಾವುದೇ ಅರ್ಜಿ, ಧಾಖಲೆಗಳಲ್ಲಿ ಜಾತಿಯ ಕಾಲಮ್ ಅನ್ನು ಉಪಯೋಗಿಸಬಾರದು.
2. ಸಾರ್ವಜನಿಕ ಜಾತಿ ಸಮಾವೇಶಗಳಿಗೆ ಅವಕಾಶವಿರಬಾರದು.
3. ಜಾತಿ ಆಧಾರದ ಮೀಸಲಾತಿಯನ್ನು ಸಂಪೂರ್ಣವಾಗಿ ನಿಲ್ಲಿಸಿ ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ವಿದ್ಯೆ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ವಿಶೇಷ ನೆರವು ನೀಡಬೇಕು (ನೆರವು - ಮೀಸಲಾತಿಯಲ್ಲ).
4. 'ಜಾತ್ಯಾತೀತವಾದ' ಪ್ರತಿ ಪ್ರಾಥಮಿಕ ಶಾಲೆಯ ಪಠ್ಯದ ಪ್ರಮುಖ ಭಾಗವಾಗಬೇಕು. ಹೀಗೆ ನಿಜವಾದ ಜಾತ್ಯಾತೀತತೆಯ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು.
5. ತಾವು ಉಡುವ ಬಟ್ಟೆ, ಮಾಡುವ ಊಟದಂತೆ ಧರ್ಮ ಕೂಡ ಪ್ರತಿಯೊಬ್ಬರ ವೈಯಕ್ತಿಕ ವಿಚಾರವಾಗಬೇಕು. ಯಾವುದೇ ಸಂಪ್ರದಾಯಗಳನ್ನು, ಅಂಧಶ್ರದ್ಧೆಗಳನ್ನು ಮತ್ತೊಬ್ಬರ ಮೇಲೆ ಹೇರುವಂತಿರಬಾರದು.

ಇಷ್ಟು ಮಾಡಿಬಿಡಬೇಕು, ಜಾತಿಹೋಗಲಾಡಿಸಿಬಿಡಬೇಕು ಎಂಬ ಸಿನಿಕತೆಯಿಂದ ನಾ ಹೀಗೆ ಬರೆದಿಲ್ಲ. ಇವು ವರ್ಷಗಳಿಂದ ನನ್ನನ್ನು ಕಾಡುತ್ತಿರುವ ಯೋಚನೆಗಳು.

"ಜಾತಿ ಸುಡೊ ಮಂತ್ರ ಕಿಡಿ ಪ್ರೀತಿ" ಎಂಬ ಅತ್ಯದ್ಭುತ ಮಂತ್ರ ಸಾರಿದ ವಿಶ್ವಮಾನವರನ್ನು ನೆನೆಯುತ್ತ...
ವಿನಯ್.

Rating
No votes yet