ಸಂಪದಿಗರ ಗಮನಕ್ಕೆ

ಸಂಪದಿಗರ ಗಮನಕ್ಕೆ

ಬರಹ

ಇತ್ತೀಚೆಗೆ "flame" ಹತ್ತಿಸುವ "ಜಾತಿ" ಸುತ್ತಲಿನ ಲೇಖನಗಳು ಸಂಪದಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಕಂಡುಬಂದಿದೆ. ದಯವಿಟ್ಟು ಇಂತಹ ಲೇಖನಗಳನ್ನು ಜನರ ಮುಂದಿಡಲು ಸಂಪದದಂತಹ ಸಮುದಾಯವನ್ನು ಬಳಸದಿರಿ. ಹೀಗೆ ಬಳಸಿದ್ದು ಕಂಡುಬಂದಲ್ಲಿ ಆಯಾ ಲೇಖನವನ್ನೂ, ಅದರೊಂದಿಗಿರುವ ಎಲ್ಲ ಪ್ರತಿಕ್ರಿಯೆಗಳನ್ನೂ ಮುಲಾಜಿಲ್ಲದೆ ಅಳಿಸಿಹಾಕಲಾಗುವುದು.

ಸಂಪದ ನಡೆಸಿಕೊಂಡು ಹೋಗುತ್ತಿರುವುದೇ ಸಾಹಸವಾಗಿರುವ ಈ ಸಮಯದಲ್ಲಿ ಇಂತಹ ಅನಿವಾರ್ಯವಿಲ್ಲದ ಕಪ್ಪು ಚುಕ್ಕೆಗಳು ಸಂಪದದ ನಿರ್ವಹಣೆಯಲ್ಲಿ ಬೇಡದ ತೊಂದರೆಗಳನ್ನು ತಂದೊಡ್ಡುತ್ತದೆ. ಈಗಿನಂತೆ ಸಂಪದದ ಸುತ್ತ ಇರುವ ಪುಟ್ಟ ವ್ಯವಸ್ಥೆಗೆ ಇಂತಹ ತೊಂದರೆಗಳನ್ನು ನಿಭಾಯಿಸಲು ಬೇಕಿರುವ ಸಂಪನ್ಮೂಲಗಳು ಇಲ್ಲದೇ ಇರುವುದರಿಂದ ಈ ರೀತಿಯ ಲೇಖನಗಳಿಗೆ, ಈ ರೀತಿಯ ಚರ್ಚೆಗಳಿಗೆ ಜಾಗ ನೀಡಲು 'ಸಂಪದ'ಕ್ಕೆ ಈಗಿನಂತೆ ಸಾಧ್ಯವಿಲ್ಲ. ಆ ಸಮಯದ ಉದ್ವೇಗದಲ್ಲಿ, ವಿಷಯ ಹರಿತದ ಮೊನಚು ಹತ್ತಿಸಿಕೊಂಡು ಬರೆಯುವವರಿಗೆ ಸಂಪದ ನಿರ್ವಹಣೆ ಉತ್ತರ ಕೊಡಲು ಸಾಧ್ಯವಿಲ್ಲ, ಬದಲಿಗೆ "ಒಂದು ರೀತಿಯ ಸ್ವ-ನಿಯಂತ್ರಣ ಕಂಡುಕೊಳ್ಳಿ" ಎಂದಷ್ಟೆ ಹೇಳಬಹುದು. ಈ ನಿಮ್ಮ ಸಂಪದ ಸಮುದಾಯ ಉಳಿಯಬೇಕು ಎಂದರೆ ಇದರ ಸದುಪಯೋಗ ಮಾಡಿಕೊಳ್ಳುವುದರ ಕಡೆ ಗಮನ ಕೊಡಿ. ದುರುಪಯೋಗ ಸಲ್ಲದು. ಒಂದೊಮ್ಮೆ ಹೆಚ್ಚಿನ ದುರುಪಯೋಗಗಳು ಕಂಡುಬಂದಲ್ಲಿ ಅಂತರ್ಜಾಲದ ಉಳಿದ ವೆಬ್ಸೈಟುಗಳಂತೆ ಸಂಪದದಲ್ಲಿ ಕೂಡ ಲೇಖನ, ಪ್ರತಿಕ್ರಿಯೆ ಎಲ್ಲವನ್ನೂ ಮಾಡರೇಟ್ ಮಾಡುವ ಸಹಜ ಸ್ಥಿತಿಗೆ ಮರಳಬೇಕಾಗಿ ಬರುವುದು ಅಥವ ಸಮುದಾಯಕ್ಕೇ ಇತಿಶ್ರೀ ಹಾಡಬೇಕಾಗಿ ಬರುವುದು.

ಸಮುದಾಯ ನಡೆಸಿಕೊಂಡು ಹೋಗುವುದು ಸುಲಭವಲ್ಲ, ಇದರ ಹಿಂದಿರುವ ತಾಂತ್ರಿಕ ತೊಂದರೆಗಳೇ ನೂರೆಂಟು. ಅದರ ನಡುವೆ ನಿರ್ವಹಣೆಗೆ ಹೆಚ್ಚು ಕೆಲಸ ತಂದಿಡುವ ಸದಸ್ಯರು ದಯವಿಟ್ಟು ಇಷ್ಟವಿಲ್ಲದಿದ್ದರೆ ಸಂಪದ ಬಿಟ್ಟು ಹೊರನಡೆದು ತಮ್ಮ ತಮ್ಮ ಬ್ಲಾಗುಗಳಲ್ಲಿ ಬರೆದುಕೊಳ್ಳಬಹುದು. ಅದಕ್ಕೆ ಯಾವ ಅಡ್ಡಿಯೂ ಇಲ್ಲ. ದ್ವೇಷ, ಉನ್ಮಾದ ಹಬ್ಬಿಸುವವರಿಗೆ ಸಂಪದ ಜಾಗವಾಗಬೇಕಿಲ್ಲ. ಬೆಳೆದ ಮನಸ್ಸುಗಳಿಗೆ ಕೋಲು ಕಡ್ಡಿ ಹಿಡಿದು, ಪಾಲಿಸಿ ಗೈಡ್ಲೈನ್ ಇಟ್ಟುಕೊಂಡು ಪಾಠ ಹೇಳಿಕೊಡಬೇಕಿಲ್ಲ, ಸಮುದಾಯದಲ್ಲಿನ ಜವಾಬ್ದಾರಿಯರಿತು ನಡೆಯಲಾಗದವರು ಹೊರನಡೆಯಬಹುದು. ಸಂಪದ ನಿರ್ವಹಣೆಯ ನಿರ್ಧಾರಗಳು ಕಠಿಣವೆನಿಸಬಹುದಾದರೂ ಸಮುದಾಯ ಉಳಿಸಿ, ನಡೆಸಿಕೊಂಡು ಹೋಗಲೆಂದು ತಡೆದ ನಿರ್ಧಾರಗಳು ಎಂಬುದು ಸದಸ್ಯರ ಗಮನದಲ್ಲಿರಲಿ. ಸಮುದಾಯದ ಸದಸ್ಯರು ಜವಾಬ್ದಾರಿಯರಿತು ನಡೆಯದಿದ್ದಲ್ಲಿ ಸಮುದಾಯವೇ ಉಳಿಯಲಿಕ್ಕಿಲ್ಲ ಎಂಬುದು ಕೂಡ ಸದಸ್ಯರ ಗಮನದಲ್ಲಿರಲಿ.

'ಸಂಪದ'ದಲ್ಲಿ ಯಾವುದೇ ಚರ್ಚೆ, ಪ್ರತಿಕ್ರಿಯೆ ಹಾಗೂ ಪುಟಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ತೆಗೆಯುವ ಹಕ್ಕು ಸಮುದಾಯದ ನಿರ್ವಹಣೆಗೆ ಇದೆ.