ಕಣ್ಣು, ಮೂಗು, ಕಿವಿ, ಬಾಯಿ, ಕೈ, ಕಾಲುಗಳು ಇಲ್ಲದಿದ್ರೆ ಸಂವಹಿಸುವುದು ಹೇಗೆ?

ಕಣ್ಣು, ಮೂಗು, ಕಿವಿ, ಬಾಯಿ, ಕೈ, ಕಾಲುಗಳು ಇಲ್ಲದಿದ್ರೆ ಸಂವಹಿಸುವುದು ಹೇಗೆ?

ಹೇಳಿ ಕೇಳಿ ಬ್ಯಾಕ್ಟೀರಿಯಾಗಳು ಎಕ ಕೋಶ ಜೀವಿಗಳು. ಅವುಗಳಿಗೆ ಕಣ್ಣು, ಮೂಗು, ಕಿವಿ, ಬಾಯಿ, ಕೈ, ಕಾಲುಗಳು ಇಲ್ಲ. ಕೆಲವು ಬ್ಯಾಕ್ಟೀರಿಯಾಗಳಿಗೆ ಅತ್ಲಾಗ್ ಬಾಲವು ಅಲ್ಲದ ಇತ್ಲಾಗ್ ಕಾಲೂ ಅಲ್ಲದ ಬಾಲಕಾಲುಗಳಿರ್ತಾವೆ (flagella). ಪರಿಸ್ಥಿತಿ ಹೀಗಿರಬೇಕಾದ್ರೆ, ಬ್ಯಾಕ್ಟೀರಿಯಾಗಳು ತಮ್ಮಗಳ ನಡುವೆ ಸಂವಹಿಸುತ್ತಾವೆ ಅಂದ್ರೆ, ಅದು ಆಶ್ಚರ್ಯದ ಮಾತೇ ಸೈ. ಈ ಎರಿಯಾದಲ್ಲಿ ತಮ್ಮ ಸಂಖ್ಯೆ ಎಷ್ಟಿದೆ ಅಂತ ತಿಳ್ಕೊಕೆ, ಬ್ಯಾಕ್ಟೀರಿಯಾಗಳು ಒಂದು ವಿಶೇಷ ರಾಸಾಯನಿಕವನ್ನು (chemical compound) ಸುತ್ತಲಿನ ವಾತಾವರಣಕ್ಕೆ ಬಿಡುಗಡೆ ಮಾಡ್ತವೆ. ಹತ್ತಿರದಲ್ಲಿರುವ ಅದೇ ಪ್ರಭೇದದ ಬೇರೇ ಬ್ಯಾಕ್ಟೀರಿಯಾಗಳ ಮೇಲ್ಮೈಯಲ್ಲಿರುವ ಜೈವಿಕ ಬುಟ್ಟಿಗಳಿಗೆ (receptors) ಈ ವಿಶೇಷ ರಾಸಾಯನಿಕಗಳು ಅಂಟಿಕೊಂಡಾಗ, ಆ ಬ್ಯಾಕ್ಟೀರಿಯಾಗಳಿಗೆ ಅಕ್ಕಪಕ್ಕದಲ್ಲಿ ತಮ್ಮ ಮಂದಿ ಇದ್ದಾರೆ ಎನ್ನುವುದು ಅರಿವಿಗೆ ಬರುತ್ತದೆ. ಜಾಸ್ತಿ ರಾಸಾಯನಿಕಗಳು ಜೈವಿಕ ಬುಟ್ಟಿಗಳಿಗೆ ಅಂಟಿಕೊಂಡಂತೆಲ್ಲಾ ತಮ್ಮ ಸಂಖ್ಯೆ ಜಾಸ್ತಿ ಇದೆ ಅಂತ ಬ್ಯಾಕ್ಟೀರಿಯಾಗಳು ಅರ್ಥ ಮಾಡ್ಕೋತಾವೆ. ಇದನ್ನು bacterial quorum sensing ಎನ್ನುತ್ತಾರೆ.

ಬ್ಯಾಕ್ಟೀರಿಯಾಗಳು ಅನೇಕ ಸಂದರ್ಭಗಳಲ್ಲಿ quorum sensingನ್ನು ಉಪಯೋಗಿಸುತ್ತವೆ. ಉದಾಹರಣೆಗೆ, ಜೀವಿಗೆ ರೋಗ ಉಂಟು ಮಾಡಲು ಬ್ಯಾಕ್ಟೀರಿಯಾಗಳು ಆ ಜೀವಿಯಲ್ಲಿ ಒಂದು ನಿರ್ಣಾಯಕ ಸಂಖ್ಯೆಯಲ್ಲಿರಬೇಕು. ಇಲ್ಲದಿದ್ದಲ್ಲಿ ಜೀವಿಯ ಜೈವಿಕ ಪ್ರತಿರೋಧ ವ್ಯವಸ್ಥೆ (immune system) ಬ್ಯಾಕ್ಟೀರಿಯಾಗಳನ್ನು ಯಶಸ್ವಿಯಾಗಿ ನಿರ್ಮೂಲನಗೊಳಿಸುತ್ತದೆ. ತಮ್ಮ ಪ್ರಯತ್ನ ವ್ಯರ್ಥವಾಗಬಾರದೆಂದು, ಬ್ಯಾಕ್ಟೀರಿಯಾಗಳು ತಮ್ಮ ಸಂಖ್ಯೆ ಒಂದು ನಿರ್ಣಾಯಕ ಘಟ್ಟಕ್ಕೆ ಬರೋ ತನಕ ಕಾಯ್ತಾವೆ . ಆ ಘಟ್ಟ ಸಮೀಪಿಸುತ್ತಿದ್ದಂತೆ (ಜಾಸ್ತಿ ರಾಸಾಯನಿಕಗಳು ಬ್ಯಾಕ್ಟೀರಿಯಾಗಳ ಜೈವಿಕ ಬುಟ್ಟಿಗಳಿಗೆ ಅಂಟಿಕೊಂಡಂತೆಲ್ಲಾ) , ಎಲ್ಲಾ ಬ್ಯಾಕ್ಟೀರಿಯಾಗಳು ಜೊತೆಯಾಗಿ ರೋಗವುಂಟು ಮಾಡುವ ಪ್ರೋಟಿನ್ಗಳನ್ನು ಉತ್ಪಾದಿಸುತ್ತವೆ. ಈ ಪ್ರೋಟಿನ್ಗಳು ಭಾರಿ ಪ್ರಮಾಣದಲ್ಲಿರುವುದರಿಂದ ಜೀವಿಯ ಜೈವಿಕ ಪ್ರತಿರೋಧ ವ್ಯವಸ್ಥೆ ಸೋಲೊಪ್ಪಿಕೊಳ್ಳುತ್ತದೆ.

ಬೊನ್ನಿ ಬಾಸ್ಲರ್ (Bonnie Bassler), ಇತ್ತೀಚೆಗೆ ಟೆಡ್ (TED) ಸಂಕಿರಣದಲ್ಲಿ, bacterial quorum sensing ಬಗ್ಗೆ ತುಂಬಾ ಸರಳವಾದ, ಆದರೆ ಅಷ್ಟೆ ಚೆನ್ನಾಗಿರುವ ಉಪನ್ಯಾಸ* ನೀಡಿದ್ದಾರೆ. ನಾನಿಲ್ಲಿ ಬರೆದಿದ್ದು ಆ ಉಪನ್ಯಾಸಕ್ಕೊಂದು ಚಿಕ್ಕ ಪರಿಚಯ. ಹೆಚ್ಚಿನ ವಿಜ್ಞಾನಿಗಳು "ನಿಮ್ಮ ಸಂಶೋಧನೆ ಎನು?" ಅಂತ ಯಾರಾದ್ರೂ ಕೇಳಿದ್ರೆ, ಸಾಮಾನ್ಯ ಜನರಿಗೆ ಅರ್ಥವಾಗುವಂಥ ರೀತಿಯಲ್ಲಿ ಉತ್ತರಿಸಲಿಕ್ಕಾಗದೆ ಒದ್ದಾಡುತ್ತಾರೆ. ಬೊನ್ನಿ ಬಾಸ್ಲರ್ ಅದಕ್ಕೊಂದು ಅಪವಾದ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ.

PS* ನಿಮಗೆ ಸಂವಹನ ಕೌಶಲಗಳಲ್ಲಿ (communication skills) ಆಸಕ್ತಿ ಇದ್ದರೆ, ಬೊನ್ನಿ ಮಾತನಾಡುವಾಗ ಅವರ ಕೈಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದನ್ನು ಗಮನಿಸಿ.

Rating
No votes yet

Comments