ತಂದೆಯವರ ನೆನಪುಗಳು - ಕೊನೆಯ ಭಾಗ

ತಂದೆಯವರ ನೆನಪುಗಳು - ಕೊನೆಯ ಭಾಗ

http://www.sampada.net/blog/shamala/30/03/2009/18470 -ಭಾಗ - ೧

http://www.sampada.net/blog/shamala/02/04/2009/18600- ಭಾಗ - ೨

ಪದವಿ ಮುಗಿಸಿದಾಕ್ಷಣ, ನಾನು ನನ್ನ ಇಷ್ಟದಂತೆ ವಿವಾಹವಾದಾಗ ಕೂಡ ಅಪ್ಪ ನನ್ನನ್ನು ತೀವ್ರವಾಗಿ ಖಂಡಿಸಿರಲಿಲ್ಲ. ನಮ್ಮ ಜೀನವದ ಬಂಡಿ ಸರಿಯಾಗಿ ಉರುಳಲು, ಅವರೇ ನನ್ನೆಲ್ಲಾ ತಪ್ಪುಗಳನ್ನೂ ಮನ್ನಿಸಿ, ದೂರದ ಕಲ್ಕತ್ತಾದಲ್ಲಿ, ನನ್ನ ಯಜಮಾನರಿಗೆ ಕೆಲಸ ಕೊಡಿಸಿದ್ದರು. ನನ್ನ ಮಗಳಾಗಿ ಜೀವನದಲ್ಲಿ ಸೋಲಬಾರದು, ಬಾಳಿ, ಗೆದ್ದು ನೆಲೆ ನಿಲ್ಲು, ಎಂತಹುದೇ ಪರಿಸ್ಥಿತಿ ಬಂದರೂ ಕೂಡ ಹೆದರಿ, ಹೇಡಿಯಂತೆ, ಹಿಂದೆ ತಿರುಗಬೇಡ. ಮುನ್ನಡೆದರೇ ಜಯ, ಇಲ್ಲದಿದ್ದರೆ ನಿನ್ನ ಬಾಳೇ ಕೊನೆಗೊಳ್ಳಬಹುದು. ಬಾಳುತ್ತೇನೆಂದು ನನಗೆ ನಚನ ಕೊಟ್ಟು, ಹೊಸ ಜೀವನ ಆರಂಭಿಸು ಎಂದು ಹರಸಿ ಕಳುಹಿಸಿದರು.

ಅಪ್ಪ ನನಗೆ ತಪ್ಪದೇ ಕಾಗದಗಳನ್ನು ಬರೆಯುತ್ತಿದ್ದರು. ನಾನು ಇಂಗ್ಲೀಷ್ ನಲ್ಲಿ ಬರೆದ ಕಾಗದಗಳನ್ನು ತಿದ್ದಿ, ಜೊತೆಗೆ ತಾನೊಂದು ಕಾಗದ ಬರೆದಿಟ್ಟು, ಹೆಚ್ಚುವರಿ ಅಂಚೆ ಚೀಟಿ ಹಚ್ಚಿ ಕಳುಹಿಸುತ್ತಿದ್ದರು. ಇನ್ನು ಮೇಲೆ ಡೈರೆಕ್ಟ್ ಸ್ಪೀಚ್ ಬರೆಯುವುದು ಕಲಿ ಎಂದು, ಹೇಳಿಕೊಟ್ಟ ಅಪ್ಪನನ್ನು ನಾ ಹೇಗೆ ತಾನೆ ಮರೆಯಲಿ !!!

ಮದುವೆಯಾಗಿ ಐದು ವರ್ಷಗಳ ನಂತರ ನನ್ನ ಮಗ ಹುಟ್ಟಿದ ಮೇಲೆ, ಅಣ್ಣನ ಮದುವೆಗಾಗಿ, ೧ ತಿಂಗಳ ಮಗುವನ್ನು ಕರೆದುಕೊಂಡು ಊರಿಗೆ ಬಂದಿದ್ದೆ. ವಾಪಸ್ಸು ನೀವೇ ಕರೆದುಕೊಂಡು ಹೋಗಬೇಕೆಂದಾಗ, ಅಪ್ಪ ಎಲ್ಲಾ ಕಹಿ ಮರೆತು (ನನ್ನ ಮದುವೆಯಿಂದಾಗಿ ಅಪ್ಪ ಬಹಳ ಅವಮಾನಗಳನ್ನು ಎದುರಿಸಿದ್ದರು) ನಮ್ಮ ಮನೆಗೆ ಮೊದಲ ಬಾರಿಗೆ ಬಂದರು. ಅಮ್ಮ ಅಪ್ಪ ಇಬ್ಬರೂ ೧ - ೨ ವಾರವಿದ್ದು ವಾಪಸ್ಸು ಬಂದರು. ಬರುವ ಮೊದಲು ನನ್ನ ಮಗನನ್ನು ಡೇ ಕೇರ್ ಗೆ ಸೇರಿಸಲು, ಠೇವಣಿ ದುಡ್ಡು ಅಪ್ಪ ಕೊಟ್ಟರು. ನಿನ್ನ ಮಗುವಿಗಾಗಿ ಮಾಡುವ ಮೊದಲ ಖರ್ಚು, ನನ್ನದಾಗಿರಲಿ ಮತ್ತು ಅವನು ದೊಡ್ಡವನಾದ ಮೇಲೆ ನಿನ್ನ ಓದಿಗೆ ಮೊದಲು ದುಡ್ಡು ಕೊಟ್ಟವರು, ನಿನ್ನ ತಾತ, ಆದ್ದರಿಂದ ನೀನು ಚೆನ್ನಾಗಿ ಓದಬೇಕೆಂದು ಅವರ ಇಷ್ಟವಿತ್ತು ಎಂದು ಅವನಿಗೆ ಹೇಳು ಎಂದಿದ್ದರು. ಈ ಡೇ ಕೇರ್ ನಲ್ಲಿ ಸ್ಕೂಲ್ ಕೂಡ ಇತ್ತು. ಇಲ್ಲಿಗೆ ಬರುವ ಮಕ್ಕಳಿಗೆ, ಇಲ್ಲಿಯೇ ’ಓಂ’ ನಾಮ ತಿದ್ದಿಸುತ್ತಿದ್ದರು.

ಅಲ್ಲಿಂದ ಶುರುವಾಗಿತ್ತು ಅಪ್ಪನ ಸಂಪರ್ಕ ಸತತವಾಗಿ ಮತ್ತು ನಿರಂತರವಾಗಿ. ನಾನೇ ಮಗುವಾಗಿದ್ದೆ ಅವರಿಗೆ, ನನಗೊಬ್ಬ ಮಗನಿದ್ದಾನೆಂಬ ಮಾತು ಅಪ್ಪನಿಗೆ ಒಂಥರಾ ಥ್ರಿಲ್ ಕೊಟ್ಟಿತ್ತು. ಮಗನ ಒಂದು ವರ್ಷದ ಹುಟ್ಟು ಹಬ್ಬಕ್ಕೆ ಮೊದಲು ಮತ್ತೆ ಕಲ್ಕತ್ತಾಗೆ ಬಂದು, ಅಮ್ಮನನ್ನು ನನ್ನ ಬಳಿ ಬಿಟ್ಟು ಹೋಗಿದ್ದರು. ಮಗನಿಗೆ ಒಂದುಕಾಲು ವರ್ಷವಾದಾಗ, ನಾನು ಅವನನ್ನು ಅಪ್ಪ ಅಮ್ಮನ ಹತ್ತಿರವೇ ಬಿಟ್ಟು ಕಲ್ಕತ್ತಾಗೆ ಹೋಗಿದ್ದೆ. ೧ ವರ್ಷ ಅಲ್ಲೇ ಇದ್ದ, ಆಗಂತೂ ಅಪ್ಪ ಅವರ ಜೀವನದ ಅತ್ಯಂತ ಹರ್ಷದ ದಿನಗಳನ್ನು ಕಳೆದಿದ್ದರು. ಆರಡಿ ಎತ್ತರವಿದ್ದ ಅಪ್ಪ ಒಂದುವರೆ ಅಡಿಯ ಮೊಮ್ಮಗನ ಕೈ ಹಿಡಿದು ತರಕಾರಿ ತರಲು ಹೋಗುತ್ತಿದ್ದರೆ, ನೋಡುವುದೇ ಒಂದು ಸಂತಸ ತರುವ ದೃಶ್ಯವಾಗಿತ್ತು.

ನನ್ನ ಮಗನನ್ನು ಡೇ ಕೇರ್ ನಿಂದ ೧ನೇ ಕ್ಲಾಸ್ ಗೆ ಸೇರಿಸಿದಾಗ ಕೂಡ ಅಪ್ಪ ಬಂದಿದ್ದರು. ಮೊದಲನೇ ದಿನ ಅವರೇ ಅವನನ್ನು ಸ್ಕೂಲಿನಿಂದ ಮನೆಗೆ ಕರೆದುಕೊಂಡು ಹೋಗಿ, ಬಿಸಿಯಾಗಿ ಅನ್ನ ಮಾಡಿ ಊಟ ಹಾಕಿದ್ದರು. ಅಲ್ಲಿಂದ ವರ್ಷದಲ್ಲೆರಡು ಬಾರಿ ಅವನನ್ನು ಊರಿಗೆ ಕರೆದುಕೊಂಡು ಹೋಗಲು ಅಥವಾ ವಾಪಸ್ಸು ಕಲ್ಕತಾಗೆ ಬಿಡಲು ಅಪ್ಪ ಖಂಡಿತಾ ಬರುತ್ತಿದ್ದರು. ಅವನಿಗೆ ಪುಟ್ಟ ಪುಟ್ಟ ಶ್ಲೋಕಗಳನ್ನೂ ಹೇಳಿ ಕೊಟ್ಟಿದ್ದರು. ಮೊಸರನ್ನ ಬೇಡವೆಂದರೆ, ಅದಕ್ಕೆ ಸಕ್ಕರೆ ಬೆರೆಸಿ ತಿನ್ನಿಸಿಬಿಡುತ್ತಿದ್ದರು ! ಹೀಗೆ ನನ್ನ ಮತ್ತು ಅಪ್ಪನ ಬಾಲ್ಯದ ಬಂಗಾರದ ನೆನಪುಗಳ ತರುವಾಯ, ನನ್ನ ಮಗನ ಮತ್ತು ನನ್ನ ಅಪ್ಪನ ವಜ್ರದ ನೆನಪುಗಳು ನಿರಂತರವಾಗಿ, ಅತ್ಯಂತ ಸಂತಸವಾಗಿ ಕೆಲವು ವರ್ಷಗಳು ಕಳೆದವು. ಅಪ್ಪನ ಆಸೆಯಂತೆ, ಈಗ ನನ್ನ ಮಗ ಬಿ ಯಿ ಮಾಡಿ, ಎಂ ಎಸ್ ಮಾಡುತ್ತಿದ್ದಾನೆ. ಇದಕ್ಕೆಲ್ಲಾ ಮೊದಲ ಕಾಣಿಕೆ ಕೊಟ್ಟು ಶುರುವಾತು ಬರೆದ ನನ್ನ ಪ್ರೀತಿಯ ಅಪ್ಪ, ಮೊಮ್ಮಗ ಇನ್ನೂ ೫ನೇ ಕ್ಲಾಸ್ ನಲ್ಲಿರುವಾಗಲೇ ನಮ್ಮನ್ನಗಲಿ ಬಿಟ್ಟರು.

ನಮ್ಮನ್ನು ಅಷ್ಟೊಂದು ಆಸೆ ಅಭಿಮಾನದಿಂದ ಬೆಳೆಸಿದ್ದ ಅಪ್ಪನನ್ನು ಕಳೆದು ಕೊಂಡಾಗ ಅತ್ಯಂತ ನೋವಾಗಿತ್ತು. ಕೊನೆಯ ಬಾರಿ ಅವರು ಕಲ್ಕತ್ತಾಗೆ ಮೊಮ್ಮಗನನ್ನು ಕರೆಕೊಯ್ಯಲು ಬಂದಾಗ, ರೈಲು ೧೨ ಘಂಟೆಗಳ ಕಾಲ ತಡವಾಗಿ ಹೊರಟಿತ್ತು. ನಿಲ್ದಾಣದಲ್ಲಿ ಕೂರಲಾಗದೇ ಅಪ್ಪ ಕಷ್ಟ ಪಟ್ಟಾಗ ಮಾತ್ರವೇ ನನ್ನ ಮನಸ್ಸು ಅಪಾಯವನ್ನು ಶಂಕಿಸಿತ್ತು. ಬಲವಂತದಿಂದ ಕೇಳಿದಾಗ ತನಗಾಗುತ್ತಿದ್ದ, ತೊಂದರೆಯನ್ನು ಅವರು ನನ್ನ ಹತ್ತಿರ ಹೇಳಿದ್ದರು. ಊರಿಗೆ ಬಂದು ಅವರು ವೈದ್ಯರ ಹತ್ತಿರ ಹೋಗಿ, ಆಪರೇಷನ್ನಿಗೆ ನಿರ್ಧರಿಸುವಷ್ಟರಲ್ಲಿ ತುಂಬಾನೇ ತಡವಾಗಿತ್ತು. ಅವರಿಗೆ ಅನ್ನ ನಾಳದಲ್ಲಿ ಗೆಡ್ಡೆಯಾಗಿತ್ತು. ಆಪರೇಷನ್ ಕೆಮೊಥೆರಪಿ ಯಾವುದೂ ನನ್ನ ಪ್ರೀತಿಯ ಅಪ್ಪನನ್ನು ಹೆಚ್ಚು ದಿನ ಉಳಿಯಗೊಡಲಿಲ್ಲ. ನಾನು ಅವರನ್ನು ಕಳೆದು ಕೊಳ್ಳುತ್ತೇನೆಂಬ ಭಾವನೆ ನನಗೆಂದೂ ಬಂದೇ ಇರಲಿಲ್ಲ. ಕೊನೆಗೂ ಆ ಘಳಿಗೆಯನ್ನು ನಾನು ಎದುರಿಸಲೇ ಬೇಕಾಯ್ತು. ನಾನು ಬೆಂಗಳೂರಿಗೆ ಬಂದು ತಲುಪುವಷ್ಟರಲ್ಲಿ, ನನ್ನ ಅಪ್ಪ ಈ ಲೋಕದ ಎಲ್ಲಾ ವ್ಯವಹಾರಗಳನ್ನೂ ತ್ಯಜಿಸಿಬಿಟ್ಟು, ಶಾಶ್ವತವಾಗಿ, ಬೇರೆಯ ಲೋಕಕ್ಕೆ ಹೊರಟೇ ಹೋಗಿದ್ದರು. ಯಾವಾಗ ಕಣ್ಮುಚ್ಚಿ ನಾನು ಅಪ್ಪನನ್ನು ಗ್ನಾಪಿಸಿಕೊಂಡರೂ, ನನಗವರು, ಇಲ್ಲೇ ಎಲ್ಲೋ ಇದ್ದಾರೆಂದೇ ಅನ್ನಿಸುತ್ತೆ.

ನಾನು ಈ ರೀತಿಯಲ್ಲಾದರೂ ನನ್ನ ಅಪ್ಪನ ನೆನಪುಗಳನ್ನು ನನ್ನ ಸಂಪದ ಬಳಗದ ಜೊತೆ ಹಂಚಿಕೊಂಡು, ಅಪ್ಪನಿಗೆ, ಅವರು ನನಗೆ ತೋರಿದ ಪ್ರೀತಿಗಾಗಿ, ಪಟ್ಟ ಕಷ್ಟಗಳಿಗಾಗಿ, ಹೃತ್ಪೂರ್ವಕ ನಮಸ್ಕಾರಗಳನ್ನು ಅರ್ಪಿಸಲು ವೇದಿಕೆ ಒದಗಿಸಿದ "ಸಂಪದ"ಕ್ಕೂ, ಧನ್ಯವಾದಗಳು.

ಓದಿದ ಮತ್ತು ಬರೆಯುವಂತೆ ನನ್ನನ್ನು ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಸಹ ನನ್ನ ಧನ್ಯವಾದಗಳು.

Rating
No votes yet

Comments