ಕನಸುಗಳ ನನಸಾಗಿಸುತ್ತ - ೬ - ಎಲ್ಲಾರು ಮಾಡುವುದು ಹೊಟ್ಟೆಗಾಗಿ..

ಕನಸುಗಳ ನನಸಾಗಿಸುತ್ತ - ೬ - ಎಲ್ಲಾರು ಮಾಡುವುದು ಹೊಟ್ಟೆಗಾಗಿ..

ನಾನೇಕೆ ಕೆಲಸ ಮಾಡ್ತೇನೆ? ಓದಿದ್ದೇತಕ್ಕೆ? ಈಗ ಪರೀಕ್ಷೆ ಬರೆಯುತ್ತಿರೋದೇತಕ್ಕೆ? ಸರ್ಟಿಫಿಕೇಟ್ ಗಳು ನನ್ನಲ್ಲಿರಬೇಕು ಅಂದುಕೊಂಡಿದ್ದೇತಕ್ಕೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಮನ:ಪಠಲದ ಮುಂದೆ ಬಂದು ಕುಂತಾಗ ಎಲ್ಲೋ ಮುಂದೆ ನನ್ನ ಜೀವನವನ್ನು ಮುನ್ನೆಡೆಸುವ ದೂರ ದೃಷ್ಠಿ (ನನಗಿತ್ತಾ ಚಿಕ್ಕವನಿದ್ದಾಗ...), ನನ್ನ ಕಾಲಿನಲ್ಲೇ ನಿಂತು ಏನಾದರೂ ಮಾಡಬೇಕೆಂಬ ಬಯಕೆಯೋ, ಆಸೆಯೋ, ಸ್ವಾರ್ಥವೋ, ಕನಸೋ, ಇನ್ನೇನೋ ಇದ್ದಿರಬಹುದು ಅಂದುಕೊಳ್ತೇನೆ.

 ಕೆಲಸಕ್ಕೆಂದು ಅಡ್ಡಾಡಿದ ದಿನಗಳು ಸಾಮಾನ್ಯವಾಗಿ ಬಂದದ್ದಲ್ಲ. ಕೆಲಸ ಕನಸಿನಲ್ಲಿ ಸಿಕ್ಕಷ್ಟೇ ಸುಲಭವಾಗಿ ಸಿಕ್ಕಿದ್ದು ಅಂದು ಕೊಂಡರೂ, ಎಲ್ಲೋ ನಾನು ಕೈಗೆ ತೆಗೆದು ಕೊಂಡು ಮಾಡಿ ಮುಗಿಸಿದ ಕೆಲಸದ ಪ್ರತಿಫಲವಾಗಿ ಬಂದದ್ದಂತೂ ನಿಜ. ಮುಂದೆ, ನಾನೇ ಸ್ವಲ್ಪ ಹೆಚ್ಚಿನ ಕಾಸು ಸಿಕ್ಕರೆ, ಅದನ್ನು ಪುಸ್ತಕಕ್ಕೋ, ನನ್ನ ಸ್ಟುಡೆಂಟ್ ಲೋನ್ ತೀರಿಸಲಿಕ್ಕೋ ಉಪಯೋಗಿಸಿ ಕೊಳ್ಳಬಹುದೆಂಬ ಆಶಯ. ಅದಕ್ಕೆವಿಧ್ಯಾರ್ಥಿಯಾಗಿದ್ದಾಗಲೇ ಸಿಕ್ಕ ಕೆಲಸ, ಅದು ಮುಗಿದ ಮರು ಘಳಿಗೆ, ಹೊಸದಾಗಿ ಗೆಳೆಯರ ಮುಖೇನ ಸಿಕ್ಕ ಕೆಲ ಕೆಲಸಗಳನ್ನು ಮಾಡಿದ್ದು. ಪರಿಣಿತ ಗಣಕ ತಂತ್ರಜ್ಞನಂತೆ ಕೆಲವರಿಗೆ ತಂತ್ರಾಂಶಗಳನ್ನು ಮಾಡಿ ಕೊಟ್ಟಾಗ ಅವರಿಗಾದ ಖುಷಿಯೇ ನನಗೆ ತೃಪ್ತಿ ತಂದುಕೊಡುತ್ತಿತ್ತಾದರೂ, ನನಗೆ ಅದರಿಂದ ಜ್ಞಾನ ಹೆಚ್ಚಾದದ್ದೇ ಲಾಭ. ಮತ್ತು ಕೆಲವು ಕೆಲಸಗಳು ನಾನೆಂದೂ ಮಾಡದಂತಹವು, ಕೆಲವು ಸಣ್ಣವನಿಂದ ನಮ್ಮ ಜನರಲ್ ಸ್ಟೋರ್ನಲ್ಲಿಮಾಡ್ಬೇಕಾಗ್ತಿದ್ದಂತ ಸ್ಟೋರ್ ಬಾಯ್ ಕೆಲಸಗಳು, ಅಪ್ಪನ ಜೊತೆ ಅವರ ಏಜೆನ್ಸಿಗಾಗಿ ಮಾಡ್ತಾ ಇದ್ದಂತ ಡೆಲಿವರಿಬಾಯ್ ಕೆಲಸ ಇತ್ಯಾದಿ. ಆದ್ರೆ, ಇದೆಲ್ಲಾ ಕೆಲಸ ಅಂತ ಅನ್ನಿಸಿರಲೇ ಇಲ್ಲ. ಎನ್.ಐ.ಐ.ಟಿ ನಲ್ಲಿ ಸಿಕ್ಕ ಕೆಲಸದಿಂದ (ಮೇಲೆ ಹೇಳಿದ್ದ ಕನಸಿನ ಕೆಲಸ ಇದೇ) ಬರ್ತಿದ್ದ ಆ ಕೆಲ ನೂರು ರೂಪಾಯಿಗಳು (ಚೈಲ್ಡ್ ಲೇಬರ್ ಅನ್ಬೋದಿತ್ತು ಆಗ ನನ್ನ ನೋಡಿದ್ರೆ ;)) ನನಗೆ ಮೊದಲ ಕೆಲಸ ಸಿಕ್ಕಿದ್ದನ್ನ ನೆನಪಿಸಿತ್ತು. ಚಿಕ್ಕವನಿಂದ ಮಾಡಿದ್ದೆಲ್ಲಾ, ನನ್ನ ಹೆಗಲ ಮೇಲಿದ್ದ ಜವಾಬ್ದಾರಿಗಳಷ್ಟೇ. ಮಾಡಿ ಮುಗಿಸಬೇಕಾಗಿದ್ದು ನನ್ನ ಕರ್ತವ್ಯವಾಗಿತ್ತು. ಯಾಕೆ ಮಾಡ್ಲಿ, ಏನ್ಸಿಗುತ್ತೆ ಕೇಳೋ ಬುದ್ದಿಮಟ್ಟ ಕೂಡ ಇರಲಿಲ್ಲ ಅಥವಾ ನನ್ನಲ್ಲಿ ಬೆಳೆಯದಂತೆ ಬೆಳಸಿದ್ರು ಅಪ್ಪ ಅಮ್ಮ ಅನ್ನಬಹುದು. 

 ಎನ್.ಐ.ಐ.ಟಿ ನಲ್ಲಿ ನಾನು ಕಲಿತದ್ದನ್ನ ಬೇರೆಯವರಿಗೆ ಹೇಳಿಕೊಡುವುದಷ್ಟೇ ನನ್ನ ಕೆಲಸ.. ಅದನ್ನ ಮುಂದುವರೆಸು ಅಂತ ನನಗೆ ೫೦೦ ರೂಪಾಯಿ ಸಂಬಳದ ಚೆಕ್ ಕೈಗಿಟ್ರು. ಅಲ್ಲಿಂದ ಮುಂದೆ ಆ ಚೆಕ್ ಪ್ರತಿ ತಿಂಗಳೂ ಬರ್ತಿತ್ತು. ಮುಂದೆ ನನ್ನ ಸೆಂಟರ್ನಲ್ಲಿದ್ದ ಹಳೆಯ ತರಬೇತುದಾರರೆಲ್ಲ ಬಿಟ್ಟು ಹೋಗೋದರ ಒಳಗೆ, ನಾನು "FACULTY" ಪಟ್ಟಕ್ಕೇರಲು ತಗೋಬೇಕಿದ್ದ ಪರೀಕ್ಷೆಗಳನ್ನು ತಗೊಂಡಿದ್ದಾಗಿತ್ತು. ಅದು ಕಷ್ಟ ಏನಾಗ್ಲಿಲ್ಲ.  ಯಾಕಂದ್ರೆ ಪ್ರಾಕ್ಟಿಕಲ್ಲಾಗಿ ನನ್ನ ಇಷ್ಟದ ವಿಷಯ ಕಂಪ್ಯೂಟರ್ ಮತ್ತು ಅದರ ತಂತ್ರಜ್ಞಾನ, ಇವು "ರೋಗಿಗೆ ಬೇಕಿದ್ದ ಡಾಕ್ಟರ್ ಪ್ರಿಸ್ಕ್ರೈಬ್ ಮಾಡಿದ ಹಾಲು ಅನ್ನದ" ತರ ನಾನು ಕಲೀತಿದ್ದದ್ದು, ನನ್ನ ಬಿಡುವಿನ ವೇಳೆ ಅಲ್ಲಿಗೆ ಹೋದಾಗ ಹೊಸ ಹುಡುಗರಿಗೆ ನನಗೆ ಗೊತ್ತಿದ್ದನ್ನು ಹೇಳಿಕೊಡುತ್ತಿದ್ದದ್ದನ್ನು, ಕ್ಲಾಸ್ನಲ್ಲಿ ಹೇಳ್ಬೇಕಿತ್ತಷ್ಟೇ. ಮಸಾಲೆ ಹಾಕಿ ಹೇಳ್ಲಿಕ್ಕೆ ನನ್ನಲ್ಲಿದ್ದ ಪ್ರಾಕ್ಟಿಕಲ್ ಎಕ್ಸ್ಪೀರಿಯನ್ಸ, ಎಕ್ಸಾಮ್ ಬರೆದು ಬರೆದು, ಸರ್ಟಿಫಿಕೇಟ್ ಗುಳುಂ ಮಾಡ್ಲಿಕ್ಕೆ ಶುರುಮಾಡಿದ್ದ ಹವ್ಯಾಸ faculty ಟೆಸ್ಟ್ಗೆ ಸಹಾಯ ಮಾಡ್ತು. ಅಲ್ಲಿ ಪ್ರಾರಂಭವಾದ ನನ್ನ ಪ್ರೊಫೆಷನಲ್ ಕರಿಯರ್ (professional career) ಇಂದು ಸ್ವತಂತ್ರ ತಂತ್ರಾಂಶವನ್ನು ಇತರರು ಬಳಸುವಂತೆ ಮಾಡ್ಲಿಕ್ಕೆ ಬೇಕಾದ ಸರ್ವೀಸ್ ಕೊಡುವ ಒಂದು ಸಣ್ಣ ಕಂಪನಿಯ ನಿರ್ವಾಹಕನ ಹುದ್ದೆಯವರೆಗೆ ನನ್ನನ್ನು ಕರೆತಂದು ನಿಲ್ಲಿಸಿದೆ. ಅದರ ಜೊತೆ ತನ್ನಂತಾನೇ ನನ್ನಲ್ಲಿರುವ ಈ ಎಲ್ಲ ಜ್ಞಾನವನ್ನು ಎಲ್ಲರೊಡನೆ ಹಂಚಿಕೊಳ್ಳೋದು ಹೇಗೆ ಅಂತ ಅನ್ಕೊಳ್ತಿದ್ದಾಗ ಕಂಡ ಸಂಪದದಲ್ಲಿ "ಲಿನಕ್ಸಾಯಣ" ಬರೆಯೋ ಕಾಯಕ. 

 ಅಬ್ಬಾ! ಎನೆಲ್ಲಾ ಕೆಲಸಗಳು, ಇವೆಲ್ಲಾ ಏಕೆ ಅಂದುಕೊಂಡ್ರೆ.. ಸಿಗುವ ಮೊದಲ ಉತ್ರ ಹೊಟ್ಟೆ ಪಾಡಿಗೆ, ನಂತರ ಮನಸ್ಸಿಗೆ ಸಂತೋಷ ಕೊಡುವ ಕೆಲಸ ಅಂತ್ಲೋ ಮಾಡಿದ್ದು ಮತ್ತು ಮಾಡ್ತಿರೋದು. ಮೇಲೆ ತಿಳಿಸಿದಂತಹ ಕೆಲವು ಘಟನೆಗಳನ್ನು ಬರಹದಲ್ಲಿಡಲು ಬರೆದದ್ದು "ಕನಸುಗಳ ನನಸಾಗಿಸುತ್ತ". ಇದನ್ನು ಅಪ್ಡೇಟ್ ಮಾಡ್ದೆ ತುಂಬಾ ದಿನ ಆಗಿತ್ತು. ಇದನ್ನು ಮತ್ತೆ ಬರೆಯಲಿಕ್ಕೆ ಪ್ರೇರೇಪಿಸಿದ್ದು ಎಷ್ಟೋ ದಿನಗಳಿಂದ ನನ್ನ ಅಲ್ಬಮ್ ಗಳಿಗೆ ಅಪ್ಲೋಡ್ ಆಗದೇ ಕುಳಿತಿದ್ದ, ಈ ಲೇಖನದ ಚಿತ್ರ ಮತ್ತು ಅದನ್ನು ಕಂಡ ತಕ್ಷಣ ನನ್ನ ನಾಲಿಗೆಯಲ್ಲಿ ಹೊರಳಿದ "ಎಲ್ಲಾರು ಮಾಡುವುದು ಹೊಟ್ಟೆಗಾಗಿ" ಪದ. 

ಕೆಲಸ ಯಾವುದಾದರೂ ಆಗಬಹುದು, ಅದನ್ನು ನಿಷ್ಠೆಯಿಂದ ಮಾಡಿದಾಗ್ಲೇ ಸಿಗೋದು ತಕ್ಕ ಪ್ರತಿಫಲ. ನನಗೆ ಈ ಕೆಲಸ ಬೇಡ, ಆ ಕೆಲಸ ಬೇಡ ಅಂತ ತುಂಬಾ ಚ್ಯೂಸಿಯಾಗಿ ನಮ್ಮ ಅದೃಷ್ಟ ಲಕ್ಷ್ಮಿ ಬಾಗಿಲು ತಟ್ಟಿ ಕೊಟ್ಟ ಅವಕಾಶಗಳನ್ನು ಹೊರದೂಡಿದಾಗ ಆದ ನಷ್ಟಗಳನ್ನು ಲೆಕ್ಕ ಹಾಕ್ಲಿಕ್ಕೆ ಕೆಲವು ಸಲ ಕ್ಯಾಲುಕಲೇಟರ್ ತಗೊಂಡ್ರೂ ಕಷ್ಟ ಆಗಬಹುದು. ಜೀವನದಲ್ಲಿ ನಮ್ಮದೇ ಪ್ರಯಾರಿಟಿಗಳು ಇರುತ್ತವೆ, ಇಟ್ಟುಕೊಳ್ಳಬೇಕು. ಈಗ resession ಅಂತ ಸಿಕ್ಕ ಇರುವ ಕೆಲಸದ ಮೇಲೆ ಗಮನ ಕೊಡ್ಲಿಲ್ಲಾಂತಂದ್ರೆ, ಏನಾಗ್ಬಹುದು ಅನ್ನೋದನ್ನು ನಾನು ಮತ್ತೆ ಹೇಳ್ಬೇಕಿಲ್ಲ. ಕೈನಲ್ಲಿರುವ ಕೆಲಸ ಎಲ್ಲರಿಗೆ ತುತ್ತು ಅನ್ನವನ್ನು ನೀಡುತ್ತೆ. ಆ ಚಿತ್ರ ನೋಡಿ, ಅವರು ಸರಿಯಾಗಿ ಕೆಲಸ ಮಾಡ್ಲಿಲ್ಲಾ ಅಂತಂದ್ರೆ ಅವರು ಕಟ್ಟುತ್ತಿರುವ ಸೂರಿನ ಕೆಳಗೆ ವಾಸ ಮಾಡುವವರ ಗತಿ ದೇವರೇ ಬಲ್ಲ. ಆದ್ರೆ ಅವರು ಕೆಲಸ ಸರಿಯಾಗಿ ಮಾಡ್ಲಿಲ್ಲ ಅಂತಂದ್ರೆ ಅವರಿಗೂ ತಿಂದ ಅನ್ನ ಅರುಗೋದಿಲ್ಲ ಅನ್ನೋದು ಗೊತ್ತು. ಫಲ-ಪ್ರತಿಫಲಗಳ ಅಪೇಕ್ಷೆ "ಕೆಲಸ" ಅನ್ನೋ ವಿಷಯದಲ್ಲಿ ಎಲ್ಲರಲ್ಲೂ ಬರೋದು ಸಹಜ. ಅಪೇಕ್ಷೆ ಎಷ್ಟಿರಬೇಕು ಅನ್ನೋದು ತುತ್ತು ಅನ್ನಕ್ಕೆ, ತುಂಡು ಬಟ್ಟೆಗೆ ಅಮೇಲೆ ಮನುಷ್ಯನ ಇತರೆ ಆಸೆಗಳಿಗೆ ಹೀಗೆ ಲಿಸ್ಟ್ ಬೆಳೆಯುತ್ತಾ ಹೋಗುತ್ತೆ.

Resession ನ ಈ ಸಮಯದಲ್ಲಿ ಸಂಪದಿಗರ ಮನದಲ್ಲಿ ಏನಿದೆ? -  ಕೆಲಸದ ಬಗ್ಗೆ, ಐ.ಟಿ ಕಂಪೆನಿಗಳ ಬಗ್ಗೆ, ಫಲ-ಪ್ರತಿಫಲಗಳ ಬಗ್ಗೆ.. ಇತ್ಯಾದಿ ವಿಷಯಗಳನ್ನು ಹಂಚಿಕೊಳ್ತೀರಾ?

 ಕನಸುಗಳ ನನಸಾಗಿಸುತ್ತಾ... ಮುಂದುವರೆಯಲಿದೆ...

Rating
No votes yet

Comments