ಕಾರ್ಡ್‌ಬೋರ್ಡ್ ಪೆಟ್ಟಿಗೆ ಬಳಸಿ ಸೌರ ಒಲೆ

ಕಾರ್ಡ್‌ಬೋರ್ಡ್ ಪೆಟ್ಟಿಗೆ ಬಳಸಿ ಸೌರ ಒಲೆ

ಬರಹ

ಕಾರ್ಡ್‌ಬೋರ್ಡ್ ಪೆಟ್ಟಿಗೆ ಬಳಸಿ ಸೌರ ಒಲೆ


ಕಾರ್ಡ್‌ಬೋರ್ಡ್ ಪೆಟ್ಟಿಗೆ ಬಳಸಿ ಸೌರ ಒಲೆ
ಅಗ್ಗದ
ಸೌರ ಒಲೆಯನ್ನು ತಯಾರಿಸಲು ಬೇಕಾದುದು ಎರಡು ಕಾರ್ಡ್‌ಬೋರ್ಡ್ ಪೆಟ್ಟಿಗೆಗಳು
ಮಾತ್ರ.ಒಂದು ಪೆಟ್ಟಿಗೆ ಸಣ್ಣದು, ಇನ್ನೊಂದು ತುಸು ದೊಡ್ಡದು. ಸಣ್ಣ ಪೆಟ್ಟಿಗೆಯನ್ನು
ದೊಡ್ಡದರೊಳಗೆ ಇರಿಸಬೇಕು. ದೊಡ್ಡದರ ಒಳಮೈಗೆ ಕಪ್ಪು ಬಣ್ಣವನ್ನೂ, ಸಣ್ಣದರ ಹೊರಮೈಗೆ
ಅಲ್ಯುಮೀನಿಯಂ ಹಾಳೆಯನ್ನು ಅಂಟಿಸಿದರೆ ಚೆನ್ನ. ಇದನ್ನು ಗಾಜು ಮುಚ್ಚಿ ಬಿಸಿಲಿನಲ್ಲಿ
ಇರಿಸಬೇಕು-ಪಾತ್ರೆಯನ್ನು ಸಣ್ಣ ಪೆಟ್ಟಿಗೆಯ ಒಳಗೆ ಇರಿಸಲು ಮರೆಯದಿರಿ. ಸೂರ್ಯನ
ಕಿರಣಗಳು ಪೆಟ್ಟಿಗೆ ಪ್ರವೇಶಿಸಿ,ಅಲ್ಯುಮೀನಿಯಂ ಹಾಳೆಯ ಮೂಲಕ ಒಳಗೇ
ಪ್ರತಿಫಲಿತವಾಗುತ್ತದೆ.ಕಪ್ಪುಬಣ್ಣ ಈ ರಶ್ಮಿಯ ಶಾಖವನ್ನು ಹೀರಿಕೊಂಡು,ಪಾತ್ರೆಗೆ
ಬಿಟ್ಟುಕೊಡುವುದರ ಮೂಲಕ ಪಾತ್ರೆ ಕಾಯುತ್ತದೆ.ನೀರನ್ನು ಕುದಿಸಲೂ ಈ ವ್ಯವಸ್ಥೆ ಸಮರ್ಥ.
ದುಡ್ಡುಕೊಟ್ಟು ತೆಗೆದುಕೊಂಡರೂ, ಈ ಸೌರ ಒಲೆಯ ಬೆಲೆ ಇನ್ನೂರೈವತ್ತು ರುಪಾಯಿ
ದಾಟದು.ಜಾನ್ ಬೋಮರ್ ಎನ್ನುವಾತ ಈ ವಿನ್ಯಾಸ ಪ್ರದರ್ಶಿಸಿ ಸ್ಪರ್ಧೆಯೊಂದರಲ್ಲಿ
ಬಹುಮಾನಗಿಟ್ಟಿಸಿಕೊಂಡಿದ್ದಾನೆ.
-------------------------------------
ಜೈವಿಕ ಇಥೆನಾಲ್ ಬಳಕೆ,ನೀರಿಗೆ ಅಭಾವ?
ಒಂದು
ಗ್ಯಾಲನ್ ಜೈವಿಕ ಇಥೆನಾಲ್ ತಯಾರಿಸಲು ಎರಡು ಸಾವಿರದ ನೂರು ಗ್ಯಾಲನ್ ನೀರು ಬೇಕಾಗಬಹುದು
ಎಂದು ಅಂದಾಜಿಸಲಾಗಿದೆ. ಮೆಕ್ಕೆಜೋಳದಿಂದ ಜೈವಿಕ ಇಥೆನಾಲ್ ತಯಾರಿಸುವಾಗ ಅದರ ಬೆಳೆಯಿಂದ
ತೊಡಗಿ, ಇಂಧನ ತಯಾರಿಯ ವಿವಿಧ ಹಂತಗಳಲ್ಲಿ ನೀರು ಬೇಕೇ ಬೇಕು. ಇದನ್ನೆಲ್ಲ ಲೆಕ್ಕ
ಹಾಕಿದರೆ, ಕೆಲವು ನೀರಾವರಿ ಹೊಲಗಳಲ್ಲಿ ಮೆಕ್ಕೆಜೋಳ ಬೆಳೆ ತೆಗೆಯಲು ಬಹಳ ನೀರು
ಬೇಕಾಗುತ್ತದೆ. ಒಣ ನೀರಾವರಿಯ ಪ್ರದೇಶಗಳಲ್ಲಿ ಇನೂರು ಗ್ಯಾಲನ್ ನೀರಿನಲ್ಲೇ ಇಂಧನ
ತಯಾರಾಗಬಹುದು. ಆದರೂ ಜೈವಿಕ ಇಥೆನಾಲ್ ಪರಿಸರ ಪ್ರಿಯ ಎನ್ನುವ ಬಿರುದು ಈ ಇಂಧನಕ್ಕೆ
ಸೂಕ್ತವೇ ಎನ್ನುವುದು ವಿಚಾರಕ್ಕೆ ಸೂಕ್ತವಾದ ವಿಷಯ. ನೀರಿನ ಅಭಾವದ ಈ
ದಿನಗಳಲ್ಲಿ,ಇಷ್ಟು ನೀರು ಬೇಡುವ ಬೆಳೆಯನ್ನು ಬಳಸಿ ಇಂಧನ ಪಡೆಯುವುದು ಎಷ್ಟು ಸಮಂಜಸ?
ಜತೆಗೆ ರಾಸಾಯಿನಿಕ ಗೊಬ್ಬರಗಳನ್ನು ಬೆಳೆಗೆ ಬಳಸಬೆಕಾಗುತ್ತದೆ-ಜತೆಗೆ ಕೀಟನಾಶಕಗಳನ್ನೂ
ಬಳಸುವುದು ಅನಿವಾರ್ಯ!
-------------------------------------
ಅಂತರ್ಜಾಲದ ಮೂಲಕ ವೈನ್ ರುಚಿ ಬಗ್ಗೆ ಟೀಕೆ
ಚಹಾ,ವೈನ್
ಇಂತಹ ಪಾನೀಯಗಳನ್ನು ವರ್ಗೀಕರಿಸಲು,ಅವುಗಳ ಸ್ವಾದವನ್ನು ಪರೀಕ್ಷಿಸಲು ಕಂಪೆನಿಗಳು
ವೃತ್ತಿಪರರನ್ನು ನೇಮಿಸಿಕೊಳ್ಳುತ್ತವೆ. ಇವರು ಕಂಪೆನಿಯ ಪಾನೀಯಗಳು ತಯಾರಾದೊಡನೆ ಅವುಗಳ
ರುಚಿ ನೋಡಿ,ಅವುಗಳನ್ನು ವರ್ಗೀಕರಿಸಲು ನೆರವಾಗುತ್ತಾರೆ. ಈಗಿನ ಆರ್ಥಿಕ ಹಿನ್ನಡೆಯ
ದಿನಗಳಲ್ಲಿ ಅಂತಹ ನೌಕರರನ್ನಿಟ್ಟು ಕೊಳ್ಳುವುದು ಕಂಪೆನಿಗಳಿಗೆ
ಕಷ್ಟವಾಗುತ್ತಿದೆ.ಅದರಲ್ಲೂ ಭಾರೀ ಹಿನ್ನಡೆ ಅನುಭವಿಸುತ್ತಿರುವ ವೈನ್ ಕಂಪೆನಿಗಳು
ಗತ್ಯಂತರವಿಲ್ಲದೆ. ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ, ಅಂತಹ ನೌಕರರ ಸೇವೆಯನ್ನು
ನಿಲ್ಲಿಸಲು ತೊಡಗಿವೆ.ಅಂತರ್ಜಾಲದ ಮೂಲಕ ವೈನ್ ರುಚಿ ನೋಡುವವರ ಟೀಕೆಗಳನ್ನು ಅರಿಯುವ
ವ್ಯವಸ್ಥೆಯನ್ನವು ಮಾಡಿಕೊಂಡಿವೆ.
ಈ ವ್ಯವಸ್ಥೆಯಲ್ಲಿ ವೈನ್ ಬಾಟಲಿಗಳನ್ನು ಆಯ್ದ
ವ್ಯಕ್ತಿಗಳಿಗೆ ಕಳುಹಿಸಲಾಗುತ್ತದೆ.ವೆಬ್‌ಕ್ಯಾಮ್ ಮೂಲಕ ಅಂತರ್ಜಾಲದಲ್ಲಿ ವಿಡಿಯೋ
ಕಾನ್ಫರೆನ್ಸ್ ಏರ್ಪಡಿಸಿ, ಕಂಪೆನಿಯು ಅವರ ಅನಿಸಿಕೆಗಳನ್ನು ಅರಿಯುತ್ತದೆ.
ಕ್ಯಾಲಿಫೊರ್ನಿಯಾದ ವೈನ್ ಕಂಪೆನಿಯೊಂದು ಇಂತಹ ಅಗ್ಗದ ವ್ಯವಸ್ಥೆಯೊಂದನ್ನು
ರೂಪಿಸಿಕೊಂಡು ಪ್ರಯೋಗ ನಡೆಸಿದೆ. ವೈನ್ ಬಾಟಲಿ ನೀಡಿ, ಪರಿಣತರ ಸೇವೆ ಪಡೆಯುವ ಈ ವಿಧಾನ
ಅಗ್ಗವಲ್ಲದೆ ಮತ್ತೇನು?
-----------------------------------------------------------------
ಮೊಬೈಲಿನಲ್ಲಿ ವೀಸಾ ಕ್ರೆಡಿಟ್ ಕಾರ್ಡ್
ಮಲೇಶ್ಯಾದ
ಬಳಕೆದಾರರಿಗೆ ವೀಸಾ ಕಂಪೆನಿ ಹೊಸ ಸೇವೆ ಆರಂಭಿಸಿದೆ.ಇದರಲ್ಲಿ, ಮೊಬೈಲ್ ಹ್ಯಾಂಡ್‌ಸೆಟ್
ಕ್ರೆಡಿಟ್ ಕಾರ್ಡಿನಂತೆ ಕೆಲಸ ಮಾಡುತ್ತದೆ.ನೋಕಿಯಾ 6212 ಹ್ಯಾಂಡ್‌ಸೆಟ್ ಹೊಂದಿದ್ದರೆ
ಈ ಸೇವೆ ಲಭ್ಯ. ಈ ಮೊಬೈಲ್ ಸೆಟ್ಟಿನಲ್ಲಿ ಒಂದು ವಿಶೇಷ ಚಿಪ್ ಅನ್ನು ಅಳವಡಿಸಲಾಗಿದೆ.
ಇದರಲ್ಲಿ ವೀಸಾದ ಕ್ರೆಡಿಟ್‌ಕಾರ್ಡ್‌ನ ಮಾಹಿತಿಯನ್ನು ದಾಸ್ತಾನು ಮಾಡಲಾಗುತ್ತದೆ.
ಅಂಗಡಿಯಲ್ಲಿ ಹಣ ಪಾವತಿಸಲು, ಸಾಧನವೊಂದರ ಬಳಿಗೆ ಈ ಸೆಟ್ ಅನ್ನು ಒಯ್ಯಬೇಕು. ಸೆಟ್‍ನ
ಚಿಪ್, ನಿಸ್ತಂತು ಸಂದೇಶ ರವಾನಿಸಿ, ಸಾಧನಕ್ಕೆ ತನ್ನ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು
ತಿಳಿಸುತ್ತದೆ. ಎಷ್ಟು ಹಣ ಪಾವತಿಯಾಗಬೇಕೆಂದು ಗ್ರಾಹಕ ಬಯಸುತ್ತನೋ ಅಷ್ಟು ಹಣ ಆತನ
ಖಾತೆಯಿಂದ ವಸೂಲಾಗುತ್ತದೆ. ಈ ಬಗ್ಗೆ ವಿವರಗಳು ಮೊಬೈಲಿಗೆ ಮಾಮೂಲಿ ಕಿರುಸಂದೇಶಗಳ
ಮೂಲಕವೇ ಬರುತ್ತದೆ.
ಮೊಬೈಲ್ ಸೆಟ್ ಕದ್ದು ಹೋದರೆ,ಕ್ರೆಡಿಟ್ ಕಾರ್ಡ್
ದುರುಪಯೋಗವಾಗುವ ಭೀತಿಯಿದೆಯಲ್ಲಾ ಎಂದಿರಾ? ಇದಕ್ಕೂ ಪರಿಹಾರ ರೂಪಿಸಲಾಗಿದೆ.
ಬೇಕೆಂದರೆ, ಗುಪ್ತಪದದ ಮೂಲಕ ಚಿಪ್ ಅನ್ನು ಸುಭದ್ರಗೊಳಿಸಬಹುದು. ಗುಪ್ತಪದ ನೀಡಿದರೆ
ಮಾತ್ರ ಮುಂದುವರಿಯುವಂತೆ ಮಾಡುವ ವ್ಯವಸ್ಥೆಯೂ ಇದೆ.
-----------------------------------------------------------
ಮೊಬೈಲ್ ಸೆಟ್‌ಗೆ ಅಗ್ನಿ ಪರೀಕ್ಷೆ
ಮೊಬೈಲ್
ಸೆಟ್‌ಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಗರೀಬರಿಂದ ಅಮೀರರವರೆಗೆ ಎಲ್ಲರೂ
ಮೊಬೈಲ್ ಬಳಸುತ್ತಾರೆ. ಹಾಗಾಗಿ ಅದು ವಿವಿಧ ಪರಿಸ್ಥಿತಿಗಳಲ್ಲಿ ಬಳಸಲ್ಪಡುತ್ತದೆ. ಜನರ
ದುರ್ಬಳಕೆಯನ್ನು ಸೆಟ್ ತಡೆದುಕೊಳ್ಳುತ್ತದೋ ಎನ್ನುವುದನ್ನು ಪರೀಕ್ಷಿಸಲು ವಿವಿಧ
ನಮೂನೆಯ ಪರೀಕ್ಷೆಗಳಿಗೆ ಅವನ್ನು ಒಡ್ಡಲಾಗುತ್ತದೆ. ಈಗ ನೋಕಿಯಾದಂತಹ ಕಂಪೆನಿಗಳು ತಮ್ಮ
ಪ್ರಯೋಗಾಲಯದಲ್ಲಿ ನಡೆಸುವ ಪರೀಕ್ಷೆಗಳನ್ನು ತೋರಿಸಲು ಮುಂದಾಗಿರುವುದರಿಂದ ಆ ಬಗ್ಗೆ
ವಿವರಗಳು ಲಭ್ಯವಿವೆ.
ಮೊಬೈಲ್ ಸೆಟ್‌ಗಳನ್ನು ಕಾಂಕ್ರೀಟಿನ ಮೇಲ್ಮೈ ಮೇಲೆ ಒಂದೂವರೆ
ಮೀಟರುಗಳ ಎತ್ತರದಿಂದ ಹಾಕಿ ಪರೀಕ್ಷಿಸುವುದು, ಫ್ರೀಜರ್-ಒವನ್ ಇವುಗಳಲ್ಲಿಟ್ಟು, ವಿವಿಧ
ತಾಪಮಾನಗಳಲ್ಲಿ ಅವುಗಳು ಕೆಡುತ್ತವೆಯೋ ಎಂದು ನೋಡುವಂತಹ ಮಾಮೂಲಿ ಪರೀಕ್ಷೆಗಳಿಗವನ್ನು
ಒಡ್ದಲಾಗುತ್ತದೆ. ಜತೆಗೆ ಸೆಟ್‌ಗಳನ್ನು ಪ್ಯಾಂಟ್ ಕಿಸೆಯಿಂದ ತೆಗೆಯುವಾಗ ಅವುಗಳಿಗೆ
ಹಾನಿ ಆಗುತ್ತದೆಯೋ ಎಂದು ನೋಡಲು ಸಾವಿರಾರು ಬಾರಿ ಅವನ್ನು ತೆಗೆದು ನೋಡಲು ಜನರನ್ನು
ನೇಮಿಸಿಕೊಳ್ಳಲಾಗುತ್ತದೆ. ಅದೇ ರೀತಿ ಚಾರ್ಜರ್‌ಗಳಿಗೆ ಅವನ್ನು ಸಿಕ್ಕಿಸುವಾಗ
ಅವುಗಳಿಗೆ ಹಾನಿಯಾಗುತ್ತದೆಯೋ ಎಂಬ ಪರೀಕ್ಷೆಯೂ ಇದೆ. ಇದನ್ನೆಲ್ಲಾ ಯಂತ್ರಗಳಿಂದ
ಮಾಡದೆ,ಇದಕ್ಕಾಗಿ ನೇಮಿಸಿಕೊಂಡ ಜನರಿಂದಲೇ ಮಾಡಿಸಲಾಗುತ್ತದೆ.ಜನರು ಪ್ರತಿ ಸಲ
ವಿಭಿನ್ನವಾಗಿ ಹ್ಯಾಂಡ್‌ಸೆಟ್‌ಗಲನ್ನು ಬಳಸುವಂತೆ ಯಂತ್ರಗಳು ಮಾಡಲಾರವು
ಎನ್ನುವುದಿದಕ್ಕೆ ಕಾರಣ.ನೀರಿನಲ್ಲಿ ಅದ್ದುವುದು, ಬೀಳುವ ನೀರ ಹನಿಗಳಿಗೆ ಅವನ್ನು
ಅದ್ದುವ ಪರೀಕ್ಷೆಗಳಿಗೂ ಅವನ್ನು ಒಡ್ಡಲಾಗುತ್ತದೆ.
udayavani
ashokworld
------------------------------------------------
ಅಶೋಕ್‌ಕುಮಾರ್ ಎ