ಏತಕವತಾರವನೆತ್ತಿದೆಯೋ?

ಏತಕವತಾರವನೆತ್ತಿದೆಯೋ?

ಇವತ್ತು ಒಂದು ಒಳ್ಳೇ ಸಂಗೀತ ಕಚೇರಿಗೆ ಹೋಗಿದ್ದೆ. ಟಿ.ಎಮ್.ಕೃಷ್ಣ ಅವರ ಹಾಡುಗಾರಿಕೆ.ಪಕ್ಕವಾದ್ಯದಲ್ಲಿ ನಾಗೈ ಶ್ರೀರಾಮ್ ಮತ್ತು ಪ್ರೊ.ತಿರುಚಿ ಶಂಕರನ್. ಅಂದ್ಮೇಲೆ ಹೇಳಬೇಕಾದ್ದೇ ಇಲ್ಲ.

ವಿಸ್ತರಿಸಲು ಕೃಷ್ಣ ಮುಖಾರಿ ರಾಗವನ್ನು ತೆಗೆದುಕೊಂಡಿದ್ದರು. ಎಷ್ಟೋ ಜನ ಸ್ವಲ್ಪ ಸಂಗೀತದ ತಿಳಿವು ಇರುವವರೂ  ಮುಖಾರಿ ರಾಗ ಶೋಕರಸದ ರಾಗ ಅಂದುಕೊಂಡಿರ್ತಾರೆ. ಆದ್ರೆ ಅದು ಅಷ್ಟು ಸರಿ ಇಲ್ಲ. ಕೆಲವು ಸಂಚಾರಗಳಲ್ಲಿ ಶೋಕವನ್ನು ವ್ಯಕ್ತ ಪಡಿಸಬಹುದಾದರೂ, ಈ ರಾಗದ ಮುಖ್ಯ ರಸ ಅದ್ಭುತ ಅಥವಾ ಅಚ್ಚರಿ ಅನ್ನುವುದು ಸರಿ. 

ತ್ಯಾಗರಾಜರ ಮುಖಾರಿ ರಾಗದ ಹಲವು ರಚನೆಗಳನ್ನು ಗಮನಿಸಿದಾಗ, ಈ ವಿಷಯ ಸ್ಪಷ್ಟವಾಗುತ್ತೆ. ಉದಾಹರಣೆಗೆ ಇವತ್ತು ಕೃಷ್ಣ ಅವರು ಹಾಡಿದ ಏಲಾವತಾರಮೆತ್ತಿತಿವೋ? ಎನ್ನುವ ರಚನೆ. ಅದರಲ್ಲಿ ರಾಮಭಕ್ತ ತ್ಯಾಗರಾಜರು ಈ ರಾಮ ಎಂಬುವನು ಭೂಮಿಯ ಮೇಲೆ ಏಕೆ ಅವತಾರ ಎತ್ತಿರಬಹುದು ಅನ್ನುವ ಪ್ರಶ್ನೆಗೆ ತಮ್ಮ ಉತ್ತರವನ್ನು ಕಂಡುಕೊಳ್ಳಲು ಒಂದಷ್ಟು ಪ್ರಶ್ನೆಗಳನ್ನು ತಮಗೇ ಹಾಕಿಕೊಳ್ಳುತ್ತಾರೆ. 

ಅದೇ ಗುಂಗಿನಲ್ಲಿ ಮನೆಗೆ ಬಂದಮೇಲೆ, ಆ ರಚನೆಯನ್ನು ಕನ್ನಡಿಸಬೇಕೆನಿಸಿ, ಹೀಗೆ ಅನುವಾದಿಸಿದೆ:

ಏತಕವತಾರವನೆತ್ತಿದೆಯೋ?
ಏನದು ಕಾರಣವೋ? ರಾಮನೆಂ||ದೇತಕವತಾರವನೆತ್ತಿದೆಯೋ?||

ಕಾಳಗವನು ಮಾಡಲಿಕೋ?  ಅಯೋಧ್ಯಾ
ಪಾಲನವ ಮಾಡಲಿಕೋ? ರಾಘವ ನೀ || ನೇತಕವತಾರವನೆತ್ತಿದೆಯೋ?||

ಯೋಗಿಗಳಿಗೆ ಕಾಣಿಸಲಿಕೋ? ಭವ
ರೋಗಗಳ ದೂಡಲಿಕೋ? ಶತ
ರಾಗ ರತ್ನ ಮಾಲಿಕೆಯ ರಚಿಸಿದ ತ್ಯಾಗ
ರಾಜನಿಗೆ ವರವೀಯಲಿಕೋ ನೀ || ನೇತಕವತಾರವನೆತ್ತಿದೆಯೋ?||

ತ್ಯಾಗರಾಜರ ಮೂಲ ರಚನೆ ಹೀಗಿದೆ:

ಪ. ಏಲಾವತಾರಮೆತ್ತುಕೊಂಟಿವಿ
ಏಮಿ ಕಾರಣಮು ರಾಮುಡೈ

ಅ. ಆಲಮು ಸೇಯುಟಕಾ ಅಯೋಧ್ಯ
ಪಾಲನ ಸೇಯುಟಕಾ ಓ ರಾಘವ (ಏ)

ಚ. ಯೋಗುಲು ಜೂಚುಟಂದುಕಾ ಭವ
ರೋಗುಲ ಬ್ರೋಚುಟಂದುಕಾ ಶತ
ರಾಗ ರತ್ನ ಮಾಲಿಕಲು ರಚಿಂಚಿನ ತ್ಯಾಗ-
ರಾಜುಕು ವರಮೊಸಗುಟಂದುಕಾ (ಏ)

 

-ಹಂಸಾನಂದಿ

Rating
No votes yet

Comments