ನನ್ನ ಸರ್ವೇ....!!

ನನ್ನ ಸರ್ವೇ....!!

        ಮೊನ್ನೆ ಶುಕ್ರವಾರ ಮಧ್ಯಾಹ್ನ, ಗೆಳೆಯ ದಿವಾಕರ್(ದಿವು) ಮನೆಗೆ ರಕ್-ಸ್ಯಾಕ್ ತರಲು ಹೋಗಿದ್ದೆ. ಅಂದು ರಾತ್ರಿಯೇ ನಾವು "ಒಂಬತ್ತು ಗುಡ್ಡ"ಕ್ಕೆ ಟ್ರೆಕ್ ಹೊರಟಿದ್ದೆವು.(ಹೋಗಿ ಬಂದೆವು. ಇದರ ಬಗ್ಗೆ ಬರೀಬೇಕು). ಅವನು ತನ್ನ ಬೈಕ್ ರಿಪೇರಿಗೆ ಜೆ.ಸಿ ರೋಡಿಗೆ ಹೊಗಬೇಕಿತ್ತು. ಮೆಜೆಸ್ಟಿಕ್ ನಲ್ಲಿ ನನ್ನದು ಸ್ವಲ್ಪ ಕೆಲಸವಿತ್ತು. ಸರಿ, ಇಬ್ಬರೂ ಅವನ ಬೈಕಿನಲ್ಲೇ ಹೊರಟೆವು.

         ನನ್ನ ತರಲೆ ಪ್ರಶ್ನೆಗಳಿಗೆ/ಮಾತುಗಳಿಗೆ "ಹೌದು"-"ಇಲ್ಲಾ" ಅಂತ ಹೆಲ್ಮೆಟ್ಟೊಳಗಿನ ತನ್ನ ತಲೆಯನ್ನ ದಿವು  ಅಲ್ಲಾಡಿಸುತ್ತಿದ್ದರೆ, ನನಗೆ ತಮಾಶೆಯೆನಿಸುತಿತ್ತು. ಬನ್ನೇರುಘಟ್ಟ ರೋಡಿನ ಹತ್ತಿರವಿರುವ ಅವರ ಮನೆಯಿಂದ, ಹೆಚ್ಚೂ-ಕಡಿಮೆ ಶಾಪರ್ಸ್-ಸ್ಟಾಪ್ ತನಕ ಅದು-ಇದು ಯೋಚನೆ ಮಾಡುತ್ತ (ನಮ್ಮ ಪಾಡಿಗೆ) ನಿಧಾನವಾಗಿ ಹೊರಟಿದ್ದೆವು.

          ಒಬ್ಬ ಬೈಕಿನಲ್ಲಿ "ಜೊಯ್ಯೋ" ಅಂತ ನಮ್ಮನ್ನು ದಾಟಿ ಹೋದ. ಅವನ ಸ್ಪೀಡಿಗೆ ಹೆಲ್ಮೆಟ್ ಬೇರೆ ಹಾಕಿರಲಿಲ್ಲ. ಅದನ್ನೆ ನಾನು ದಿವಿಗೆ ಹೇಳಿದಾಗ, "ಲೋ, ಹೆಲ್ಮೆಟ್ಟು ಹಾಕಿರೋರಲ್ಲಿ, ಅದರ ಬೆಲ್ಟ್-ನ ಯಾರಾದ್ರೂ ಕಟ್ಟಿರ್ತಾರೆನೋ, ನೋಡು", ಅಂದ. ಯಾವಾಗಲೂ, ನನ್ನ ಪಾಡಿಗೆ ನಾನು ಬೈಕ್ ಓಡ್ಸೋ ನನಗೆ, ಅವತ್ತು ಪಿಲಿಯನ್ ಆಗಿದ್ರಿಂದ, ಒಳ್ಳೆ ಸರ್ವೇ ಕೆಲಸ ಸಿಕ್ತು.

           ಅಕ್ಕ-ಪಕ್ಕ ಪಾಸ್ ಆಗೋರನ್ನ ಯಕ್ಕ-ಮಕ್ಕಾ ಗುರಾಯಿಸಕೆ ಶುರು-ಮಾಡ್ದೆ. ಎಲ್ಲಾರೂ ಹೆಲ್ಮೆಟ್ ಹಾಕಿದಾರೆ. ಆದ್ರೆ ಬೆಲ್ಟ್, ಅವನು ಕಟ್ಟಿಲ್ಲ, ಇವನು ಕಟ್ಟಿಲ್ಲ. ಬಾಯ್-ಸೂ ಕಟ್ಟಿಲ್ಲ, ಗರ್ಲ್-ಸೂ ಕಟ್ಟಿಲ್ಲ. ಅಂಕಲ್ಲೂ ಕಟ್ಟಿಲ್ಲ, ಆಂಟಿನೂ ಕಟ್ಟಿಲ್ಲ.

          ಐವತ್ತಕ್ಕಿಂತ ಹೆಚ್ಚು ಟೂ-ವ್ಹೀಲರ್ ಓಡ್ಸೋರಲ್ಲಿ, ಹೆಚ್ಚೆಂದರೆ ಮೂರೇ-ಮೂರು ಜನ ಬೆಲ್ಟ್ ಕಟ್ಟಿಕೊಂಡಿದ್ದನ್ನ ನೋಡಿದೆ. ಹೆಲ್ಮೆಟ್ಟನ್ನ ಟ್ಯಾಂಕ್ ಮೇಲೆ ಇಟ್ಟುಕೊಂಡು ಪೂಜೆ ಮಾಡೋರು/ಕೈಯಲ್ಲಿ ತೂಗು ಹಾಕ್ಕಂಡು ನೇತಾಡ್ಸೋರು, ಒಂದ್-ಮೂರನಾಕು ಜನರಿದ್ದರು. 

ನನಗೆ ಆಶ್ಚರ್ಯದ ಜೊತೆಗೆ, ಶಾಕ್ ಆಯಿತು. ಅದರ ಜೊತೆಗೆ ದಿವು-ವಿನ ಅಬ್ಸರ್-ವೇಶನ್ ಮೆಚ್ಚಿದೆ.

Rating
No votes yet

Comments